-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 74

ಸ್ಫೂರ್ತಿಯ ಮಾತುಗಳು : ಸಂಚಿಕೆ - 74

ಸ್ಫೂರ್ತಿಯ ಮಾತುಗಳು : ಸಂಚಿಕೆ - 74
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                           
      ರಸಾಸ್ವಾದನೆಯು ನಾಲಿಗೆ, ಮನಸ್ಸು ಮತ್ತು ಮಿದುಳಿಗೆ ಸಂಬಂಧಿಸುತ್ತದೆ. ರಸವನ್ನು ಆಸ್ವಾದನೆ ಮಾಡುವುದು ಎಂದರೆ ಸವಿ ಅಥವಾ ಸಂತಸವನ್ನು ಗ್ರಹಿಸುವುದು ಅಥವಾ ಅನುಭವಿಸುವುದು ಎಂದೇ ಅರ್ಥವಾಗುತ್ತದೆ. ಪಾಕವಾಗಲಿ, ಶಾಖವಾಗಲಿ, ಯಾವುದೇ ರಸವಾಗಲಿ ಅಥವಾ ನೋಟವಾಗಲಿ ಅವುಗಳನ್ನು ಆಸ್ವಾದಿಸಲು ನೈಪುಣ್ಯತೆಯಿರಬೇಕು. ರಸಾಸ್ವಾದನೆಯು ಕೇವಲ ನಾಲಿಗೆಗೆ ಸೀಮಿತವಲ್ಲ. ಇತರ ಇಂದ್ರಿಯಗಳೂ ರಸಾಸ್ವಾದನೆ ಮಾಡುತ್ತವೆ. ಹಿತ ಅಹಿತಗಳನ್ನು ವಿಂಗಡಿಸಬಲ್ಲ ಮತ್ತು ಅವುಗಳ ಪ್ರಮಾಣವನ್ನು ತುಲನೆ ಮಾಡಬಲ್ಲ ಗ್ರಹಣ ಸಾಮರ್ಥ್ಯ ಪಂಚೇಂದ್ರಿಯಗಳಿಗಿವೆ. 
       ನಾಲಿಗೆಯು ಷಡ್ರಸಗಳನ್ನು ಗುರುತಿಸುತ್ತದೆ. ಕಣ್ಣು ರೂಪ, ಕುರೂಪ, ಬಣ್ಣ, ಗಾತ್ರ ಮೊದಲಾದುವುಗಳನ್ನು ತಿಳಿಸುತ್ತದೆ. ಸಂಗೀತದ ಸ್ವಾದ ನಾಲಿಗೆಗೆ ಅರಿಯದು; ಅದಕ್ಕೆ ಕಿವಿಯೇ ಬೇಕು. ಪರಿಮಳ ಮೂಗಿಗೆ ಹೊರತು ಇತರ ಅಂಗಗಳ ಮೂಲಕ ಪತ್ತೆಯಾಗದು. ಸ್ಪರ್ಶ ಸುಖ ಚರ್ಮಕ್ಕೆ ಸೀಮಿತ. ಬಿಸಿ, ತಂಪು ಮತ್ತು ಬಿಸಿ ನಮಗೆ ತಿಳಿಯಲು ಚರ್ಮವೇ ಬೇಕು. ನಾಲಿಗೆಗೆ ಬಿಸಿ ತಿಳಿಯುತ್ತದೆ ಎಂದಾದರೆ ಅದು ಚರ್ಮದ ಕಾರಣದಿಂದಾಗಿಯೇ ಅಲ್ಲವೇ?
      ಆಸ್ವಾದನಾ ಕ್ರಿಯೆಯಲ್ಲಿ ಒಂದಕ್ಕಿಂದ ಹೆಚ್ಚು ಇಂದ್ರಿಯಗಳ ಹೊಂದಾಣಿಕೆ ಬೇಕಾಗುತ್ತದೆ. ಆಸ್ವಾದಿಸಿದುದನ್ನು ಹೇಳಲು ನಾಲಿಗೆ ಬೇಕು; ಕೇಳಲು ಕಿವಿ ಬೇಕು. ರಸಾಸ್ವಾದನೆಯೆಂದೊಡನೆ ನಮ್ಮ ಮನಸ್ಸಿನಲ್ಲಿ ಸುಳಿಯುವುದು ಸಿಹಿ ತಿಂಡಿಗಳು, ಹಣ್ಣಿನ ರಸಗಳು, ರುಚಿಕರವಾದ ಸಾರು ಸಾಂಬಾರು ಮುಂತಾದುವು; ಎಂದರೆ ನಾಲಿಗೆ ಚಪಲ ತಾನೇ? ನಾಲಿಗೆಗೆ ರಸವತ್ತಾದ ಭಕ್ಷ್ಯ ಭೋಜ್ಯಗಳು ಎಂದರೆ ಪಂಚಪ್ರಾಣ. ಕಹಿಯಾದ ಹಾಗಲದಿಂದಲೂ ಪಾಕ ತಜ್ಞರು ರಸವತ್ತಾದ ಸ್ವಾದಿಷ್ಟವಾದ ವ್ಯಂಜನವನ್ನು ತಯಾರಿಸಿ ನಾಲಿಗೆಗೆ ಹಿತವಾಗುವಂತೆ ಉಣಬಡಿಸಬಲ್ಲರು. 
     ರಸಾಸ್ವಾದನೆ ಪಂಚೇಂದ್ರಿಯಗಳಿಗಿಂತಲೂ ಮಿಗಿಲಾಗಿ ಮನಸ್ಸಿಗೆ ಹಿತ ಕೊಡುತ್ತದೆ. ಮನಸ್ಸು ಹಲವಾರು ಸಂಗತಿಗಳನ್ನು ಆಸ್ವಾದಿಸುತ್ತದೆ. ಕವನವೊಂದನ್ನು ಓದಿ ಅದರ ರಸವನ್ನು ಆಸ್ವಾದಿಸಲಾಗುತ್ತದೆ. ಕಥೆಯೊಂದನ್ನು ಆಲಿಸಿದಾಗ ಅಥವಾ ಓದಿದಾಗ ಕೈಯಲ್ಲಿ ರಸವತ್ತಾದ ಮಾವಿದ್ದರೂ ಅದು ಗೌಣವಾಗುತ್ತದೆ. ಕಥೆಯೇ ರಸವತ್ತಾಗುತ್ತದೆ. ಕಥೆ, ಕವನ, ಚಿತ್ರ, ಹಿತಕರವಾದ ಭಾಷಣ, ಸಂಗೀತ, ಹರಿಕಥೆ, ಯಕ್ಷಗಾನ ಇವೆಲ್ಲವೂ ಮನಸ್ಸನ್ನು ಪುಳಕಿಸುವ ರಸ ವಿಷಯಗಳು. ಬೇಲೂರಿನ ಶಿಲ್ಪವೈಭವನ್ನು ನೋಡಿ ಪ್ರತಿಯೊಬ್ಬರೂ ಮನಸ್ಸನ್ನು ತಣಿಸುತ್ತಾರೆ. ಶಿಲ್ಪದಲ್ಲಿ ಅಂತಹ ಕಲಾ ರಸವಿದೆ. ಆದುದರಿಂದ ರಸಾಸ್ವಾದನೆಗೆ ಸಾಹಿತ್ಯ, ಸಂಗೀತ, ಕಲೆಗಳನ್ನೂ ನಾವು ಬಳಸುತ್ತೇವೆ.
     ಜೀವನವು ರಸವತ್ತಾದರೆ ಫಲಪ್ರದ. ಜೀವನ ರಸವತ್ತಾಗಲು ರಸಾಸ್ವಾದನೆ ಮಾಡುವ ಮನೋಬಲ ಮತ್ತು ತಾಳ್ಮೆ ಅಗತ್ಯ. ನಮ್ಮ ಸಮಯವನ್ನು ಹೊರ ಸಂಚಾರ, ಸ್ನೇಹಿತರ ಒಡನಾಟ, ಸಾಹಿತ್ಯಗಳ ಓದು, ಪ್ರಕೃತಿಯಲ್ಲಿ ವಿಹಾರ ಹೀಗೆ ನಾನಾ ಹವ್ಯಾಸಗಳ ಮೂಲಕ ರಸವತ್ತಾಗಿಸಬಹುದು. ವೃತ್ತಿಯಲ್ಲಿ ಒತ್ತಡವಿರುತ್ತದೆ. ಹವ್ಯಾಸಗಳಿಂದ ಒತ್ತಡಗಳು ಅಳಿಯುತ್ತವೆ. ರಸಾಸ್ವಾದನೆ ಮಾಡಬಲ್ಲವನು ವಿಜಯಶಾಲಿಯಾಗುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. ಪುಟ್ಟ ಮಗುವು ತೊದಲು ತೊದಲಾಗಿ ಮಾತನಾಡುತ್ತದೆ. ಆ ಮಗುವಿನೊಡನೆ ಮಾತನಾಡಲು ಇಷ್ಟಪಡದವರೇ ಇಲ್ಲ. ಮಗುವಿನ ಮಾತುಗಳ ರಸಾಸ್ವಾದನೆಯಿಂದ ಮನವರಳುತ್ತದೆ, ಮುಖವರಳುತ್ತದೆ, ಆರೋಗ್ಯವರಳುತ್ತದೆ. ನಾವು ರಸಾಸ್ವಾದಿಗಳಾಗೋಣ. ರಸಾಸ್ವಾದನೆಯಲ್ಲೇ ಮಹದಾನಂದವನ್ನು ಅನುಭವಿಸೋಣ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** Ads on article

Advertise in articles 1

advertising articles 2

Advertise under the article