-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 71

ಸ್ಫೂರ್ತಿಯ ಮಾತುಗಳು : ಸಂಚಿಕೆ - 71

ಸ್ಫೂರ್ತಿಯ ಮಾತುಗಳು : ಸಂಚಿಕೆ - 71
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

            
          ಒಂದು ಭೂತ ಕನ್ನಡಿಯ ಮೂಲಕ ಕಾಗದದ ಮೇಲೆ ಸೂರ್ಯನ ಕಿರಣಗಳನ್ನು ಒಂದು ಬಿಂದುವಿನಲ್ಲಿ ಸೇರುವಂತೆ ಮಾಡಿದಾಗ ಕಾಗದ ಸುಡುವುದನ್ನು ಗಮನಿಸಿದ್ದೇವೆ. ಚದರಿದ ಕಿರಣಗಳು ಕೇಂದ್ರೀಕರಣಗೊಂಡಾಗ ಕಿರಣ ಶಕ್ತಿಯು ಎಷ್ಟೊಂದು ಪ್ರಖರ ಮತ್ತು ತೀಕ್ಷ್ಣವಾಗುತ್ತದೆ ಅಲ್ಲವೇ? ಕೇಂದ್ರೀಕರಣ ಎಂದರೆ ಏಕಾಗ್ರಗೊಳಿಸುವುದು, ಅವಧಾನ ಅಥವಾ ಗಮನವನ್ನು ಒಂದೇ ಕಡೆಗೆ ಸೇರಿಸುವುದೂ ಕೇಂದ್ರೀಕರಣವಾಗಿದೆ. ನಮ್ಮ ಮಿದುಳಿನಿಂದ ಯೋಚನೆಗಳು ನಿರಂತರವಾಗಿ ಹೊರಬರುತ್ತಲೇ ಇರುತ್ತವೆ. ನಿದ್ರೆಯಲ್ಲಿರುವಾಗಲೂ ಮನಸ್ಸು ಕೆಲಸ ಮಾಡುತ್ತಲೇ ಇರುತ್ತದೆ. ಅದರ ಪರಿಣಾಮವೇ ಕನಸುಗಳು. ಮನಸ್ಸಿನ ಮೂಲಕ ಹೊರ ಬರುವ ಯೋಚನೆಗಳನ್ನು ನಾವು ದಿನ ನಿತ್ಯ ನಮಗರಿವಿಲ್ಲದೆಯೇ ಒಂದೆಡೆಗೆ ಕೇಂದ್ರೀಕರಿಸುತ್ತಿರುತ್ತೇವೆ. 
        ನಮ್ಮ ದೈನಂದಿನ ಕೆಲಸಗಳನ್ನು ಯೋಚನೆ ಮಾಡೋಣ. ಮಲಗುವುದು, ಏಳುವುದು, ಕುಳಿತುಕೊಳ್ಳುವುದು, ಸ್ನಾನ ಮಾಡುವುದು, ಜಪ ಮಾಡುವುದು, ಪೂಜೆ ಮಾಡುವುದು, ಊಟಮಾಡುವುದು, ಓದುವುದು, ಆಡುವುದು, ಮಾತನಾಡುವುದು ಇವೆಲ್ಲವೂ ನಾವು ಮಾಡುವ ಕೆಲಸಗಳು. ನಾವು ಮಾಡುವ ಕೆಲಸಗಳ ಪಟ್ಟಿ ಉದ್ದವೇ ಇರುತ್ತದೆ. ಯಾವುದೇ ಕೆಲಸಗಳನ್ನು ಮಾಡುವಾಗಲೂ ನಮ್ಮ ಮನಸ್ಸು ಆ ಕೆಲಸದಲ್ಲಿಯೇ ಕೇಂದ್ರೀಕರಣ ಆಗಿರಬೇಕು. ಒಂದು ಕಾರ್ಯ ಮಾಡುತ್ತಿದ್ದಂತೆ ಇನ್ನೂ ಐದಾರು ಕೆಲಸಗಳತ್ತ ಗಮನ ಹೋದರೆ ಯೋಚನೆಯು ವಿಕೇಂದ್ರೀಕರಣವಾಗಿ ಯಾವ ಕೆಲಸವೂ ಆಗದು. ಕಬಡ್ಡಿ ಆಟಗಾರ ಆಟದಲ್ಲಿಯೇ ಮನಸ್ಸನ್ನು ಕೇಂದ್ರೀಕರಣಗೊಳಿಸದಿದ್ದರೆ ಏನಾಗಬಹುದು? ಆತನಿಂದಾಗಿ ತಂಡವೇ ಸೋಲಲೂ ಬಹುದು. ಮನಸ್ಸಿನ ಯೋಚನೆಗಳು ವಿಮುಖವಾದಾಗ ಗೊಂದಲವುಂಟಾಗಿ ಕೈಹಿಡಿದ ಕೆಲಸದಲ್ಲಿ ಯಶಸ್ಸು ಕನಸಾಗುತ್ತದೆ.
      ಎರಡು ದೋಣಿಯಲ್ಲಿ ಕಾಲಿಟ್ಟರೆ ಪ್ರಾಣವೇ ನೀರು ಪಾಲು ಆಗುವ ಸಾಧ್ಯತೆ ಇರುವಂತೆ ಎರಡು ಯಾ ಎರಡಕ್ಕಿಂತ ಹೆಚ್ಚಿನ ಯೋಚನೆಗಳೊಂದಿಗೆ ಸಾಗುವ ಯಾವುದೇ ಕೆಲಸವಾದರೂ ಸೋಲುತ್ತದೆ. ನಮಗೆ ನಮ್ಮ ಯೋಚನೆಗಳನ್ನು ಒಂದೆಡೆಗೆ ಕೇಂದ್ರೀಕರಣ ಮಾಡುವ ಸಾಮರ್ಥ್ಯ ಇದ್ದೇ ಇದೆ. ನಾವು ಕೇಂದ್ರೀಕರಿಸುವ ಮನಸ್ಸು ಮಾಡಬೇಕು ಅಷ್ಟೆ. ಸಿನಿಮಾ ವೀಕ್ಷಣೆ ಮಾಡುವಾಗ, ಕ್ರಿಕೇಟ್ ನೋಡುವಾಗ ನಮಗೆ ಪಕ್ಕದಲ್ಲಿ ಗುಂಡು ಬಿದ್ದರೂ ಗೊತ್ತಾಗದ ಸ್ಥಿತಿಯಲ್ಲಿ ನಾವಿರುವುದಿಲ್ಲವೇ? ನಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ನಮ್ಮ ಯೋಚನೆಯನ್ನು ಕೇಂದ್ರೀಕರಿಸಿ ಅವಧಾನ ಮಾಡಲು ಸಾಧ್ಯವಾಗುವುದಾದರೆ ಅದೇ ಸಾಧ್ಯತೆಯನ್ನು ಎಲ್ಲ ಕೆಲಸಗಳಿಗೂ ಅನ್ವಯಿಸಬಹುದಲ್ಲವೇ? ಇದಕ್ಕೆ ಪ್ರಯತ್ನ ಮತ್ತು ತಾಳ್ಮೆ ಬೇಕಾಗಿದೆ.
      ವಿದ್ಯಾರ್ಥಿಗಳಿಗೆ ಕೌಟುಂಬಿಕ ಸಾಮಾಜಿಕ ಆರ್ಥಿಕ ರಾಜಾಕೀಯ ಧಾರ್ಮಿಕ ಜವಾಬ್ದಾರಿಗಳನ್ನು ಸಾಮಾನ್ಯವಾಗಿ ಯಾರೂ ವಹಿಸುವುದಿಲ್ಲ. ಅವರಿಗೆ ಅವರ ವೈಯಕ್ತಿಕ ಕೆಲಸಗಳು, ಆಹಾರ ವಿಹಾರ ಮನರಂಜನೆ ಮುಂತಾದ ಸ್ವಹಿತದ ಜವಾಬ್ದಾರಿಗಳು ಮಾತ್ರವೇ ಇರುತ್ತದೆ. ಬಹಳ ಕಡಿಮೆ ಸಂದರ್ಭಗಳಲ್ಲಿ ಮನೆಯ ಚಿಕ್ಕ ಪುಟ್ಟ ಕೆಲಸಗಳು ಇರುವುದೂ ಇದೆ. ಹೆತ್ತವರು ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಉತ್ತೇಜನ ನೀಡುತ್ತಾರೆಯೇ ಹೊರತು ತಮಗಾಗಿ ಅವರನ್ನು ಯಾವ ಹೆತ್ತವರೂ ಬಳಸುವುದಿಲ್ಲ. ವಿದ್ಯಾರ್ಥಿಗಳ ದೈನಂದಿನ ಕಾರ್ಯ ಯೋಚನೆ ಮತ್ತು ಯೋಜನೆಗಳಲ್ಲಿ ಅಧ್ಯಯನ ಸಂಬಂಧಿ ವಿಷಯಗಳಿಗೆ ಹೆಚ್ಚು ಸಮಯವನ್ನು ಒದಗಿಸ ಬೇಕಾಗುತ್ತದೆ. ಅದರ ಮೇಲೆ ತಮ್ಮನ್ನು ಶತಾಯ ಗತಾಯ ಕೇಂದ್ರೀಕರಣಗೊಳಿಸಬೆಕಾಗುತ್ತದೆ. ಆಧ್ಯಯನ ವೇಳೆಯಲ್ಲಿ ಅದರ ಹೊರತಾದ ಯಾವುದೇ ಯೋಚನೆಗಳು ಮನಸ್ಸಿನೊಳಗೆ ನುಸುಳದಂತೆ ಮನಸ್ಸನ್ನು ಜಾಗೃತವಾಗಿರಿಸುವ ಪ್ರಯತ್ನ ಮಾಡಿದರೆ ಅಧ್ಯಯನದಲ್ಲಿ ಖಂಡಿತವಾಗಿಯೂ ಯಶಸ್ಸು ನಿಶ್ಚಿತ. ಮನಸ್ಸಿನ ಕೇಂದ್ರೀಕರಣಕ್ಕಾಗಿ ಮನಸ್ಸಿಗೆ ನಾವೇ ತರಬೇತು ಕೊಡಬೇಕೇ ವಿನಹ ಅದಕ್ಕಾಗಿ ಯಾವುದೇ ಚಿಕಿತ್ಸೆಗಳಿರುವುದಿಲ್ಲ. ಮನಸ್ಸು ಕೇಂದ್ರೀಕರಣಗೊಳಿಸಲಾಗದೇ ಇರುವುದು ಕಾಯಿಲೆಯಲ್ಲ, ಅದು ಮನಸ್ಸಿನಲ್ಲಿರುವ ಅಶಿಸ್ತು. ಈ ಅಶಿಸ್ತನ್ನು ನಾವೇ ತ್ಯಜಿಸಬೇಕು, ಮನಸ್ಸೂ ಶಿಸ್ತನ್ನು ಪಾಲಿಸಿ ಕೇಂದ್ರೀಕರಣಗೊಳ್ಳುವಂತಾಗಬೇಕು.
     ಉಸಿರಿಗೆ ಶ್ರದ್ಧೆ ಮತ್ತು ಗಮನ ನೀಡಿ ಮಾಡುವ ಧ್ಯಾನ ಮತ್ತು ಪ್ರಾಣಾಯಾಮದ ಮೂಲಕ ಮನಸ್ಸಿಗೆ ಶಿಸ್ತನ್ನು ನೀಡಿ ಸಫಲರಾದ ಸಾಧಕರನೇಕರಿದ್ದಾರೆ. ಶ್ರೀರಾಮಕೃಷ್ಣರು, ವಿವೇಕಾನಂದರು, ಶ್ರೀ ಶಂಕರರು, ಅಸಂಖ್ಯ ಮುನಿಶ್ರೇಷ್ಠರು ಧ್ಯಾನದ ಮೂಲಕವೇ ಸಿದ್ಧಿಯನ್ನು ಮಾಡಿದ್ದಾರೆ. ತಮ್ಮ ತಮ್ಮ ಕಾಯಕಗಳಲ್ಲಿ ಮನಸ್ಸನ್ನು ಕೇಂದ್ರೀಕರಣ ಮಾಡಿದ ಅವರೆಲ್ಲರೂ ನಮಗೆ ಆದರ್ಶ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article