ಓ ಮುದ್ದು ಮನಸೇ ...…...! ಸಂಚಿಕೆ - 32
Wednesday, July 5, 2023
Edit
ಲೇಖಕರು : ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190
ನನ್ನೂರು ತೀರಾ ಹಳ್ಳಿ. ಮೂರೂ ದಿಕ್ಕುಗಳಿಂದಲೂ ಸುತ್ತುವರಿದ ಗದ್ದೆ ಬಯಲು, ಹಳ್ಳ-ಕೊಳ್ಳಗಳು. ಯಾವುದೇ ವಾಹನ ಊರು ಪ್ರವೇಶಿಸಬೇಕೆಂದರೆ ಸುತ್ತಿ ಬಳಸಿ ಬರಬೇಕು. ನನ್ನ ಹಳ್ಳಿಯಿಂದ ಒಂದರ್ಧ ಕಿಲೋ ಮೀಟರ್ ದೂರದಲ್ಲೇ ಶಾಲೆಯಿದ್ದರೂ ಸೈಕಲ್ ನಲ್ಲಿ ಹೋಗಬೇಕೆಂದರೆ ಹೆಚ್ಚು ಕಮ್ಮಿ ನಾಲ್ಕೈದು ಕಿಲೋ ಮೀಟರ್ ಸಾಗಬೇಕು. ಹಾಗಂತ ಬೇರೆ ಮಾರ್ಗವಿಲ್ಲವೆಂದಲ್ಲ. ಅಲ್ಲಿ ವಾಹನ ಸಂಚಾರ ಅಸಾಧ್ಯವಷ್ಟೆ. ಪೇಟೆ ಮತ್ತು ನನ್ನೂರನ್ನು ಸಂಪರ್ಕಿಸುವ ಎರಡು ಪ್ರಮುಖ ಕಾಲುದಾರಿಗಳಿವೆ. ಅವು ಗದ್ದೆ ಬಯಲಿನಲ್ಲಿ ಹಾದು ಹಳ್ಳ-ಕೊಳ್ಳಗಳನ್ನು ಜಿಗಿದು ಮುಂದೆ ಸಾಗುತ್ತವೆ. ಈ ಕಾಲು ದಾರಿಗಳು ಅಂತಿಂತ ದಾರಿಗಳಲ್ಲ. ಒಂದಡಿ ಅಗಲದ ಹಾದಿಯುದ್ದಕ್ಕೂ ಅಲ್ಲಲ್ಲಿ ಸಣ್ಣ ತೋಡುಗಳು, ಅವುಗಳನ್ನು ದಾಟಲು ಹಾಕಿರುವ ಮರದ ದಿಮ್ಮಿಗಳ ಸಂಕ, ಬೇಲಿ, ಕಲ್ಲು ಚಪ್ಪಡಿ, ಮೇಲಿನ ಗದ್ದೆಗಳಿಂದ ತುಂಬಿ ಹರಿಯುವ ನೀರು ಕೆಸರಿನಿಂದ ತುಂಬಿರುತ್ತಿದ್ದ ಆ ಒಂದಡೀ ದಾರಿಯನ್ನೂ ಸೀಳಿ ಮುನ್ನುಗ್ಗುತ್ತಿತ್ತು. ಮಳೆಗಾಲದಲ್ಲಿ ಈ ಹಾದಿಯಲ್ಲಿ ನಡೆಯುವುದೇ ಒಂತರಾ ಮಜ. ಹಾಗಂತ ಈ ಮಜ ಅಷ್ಟು ಸುಲಭವಾಗಿ ದಕ್ಕುವಂತಹದ್ದಲ್ಲ. ಮನೆಯಿಂದ ಶಾಲೆಯವರೆಗೆ ಸಾಗುವ ಈ ಹಾದಿಯಲ್ಲಿ ಮಜಾದ ಜೊತೆ ಜೊತೆಗೆ ನಾವು ಎದುರಿಸುತ್ತಿದ್ದ ಸವಾಲುಗಳನ್ನು ನೆನಪಿಸಿಕೊಂಡರೆ ಇವತ್ತಿಗೂ ಮೈ - ಮನ ರೋಮಾಂಚನಗೊಳ್ಳುತ್ತದೆ.
ನಾನು ನನ್ನ ಬಾಲ್ಯದ ಬಹುಪಾಲನ್ನು ಕಳೆದದ್ದು ಇದೇ ಹಳ್ಳಿಯಲ್ಲಿ. ಮೊಬೈಲ್, ಟೀವಿ ಯಂತಹ ತಂತ್ರಜ್ಞಾನಗಳು ಆಗಷ್ಟೇ ತೆರೆದುಕೊಳ್ಳುತ್ತಿದ್ದ ದಿನಗಳವು. ಆಗ ನಮ್ಮ ಇಡೀ ಊರಿಗಿದ್ದದ್ದು ಒಂದೇ ಬ್ಲ್ಯಾಕ್ ಆಂಡ್ ವೈಟ್ ಟೀವಿ ಮತ್ತು ಟೆಲಿಫೋನ್..! ನಮ್ಮ ಆಟೋಟಗಳು ನಡೆಯುತ್ತಿದ್ದದ್ದು ಊರ ಮಧ್ಯದ ಬಯಲು, ಗದ್ದೆ, ತೋಟ, ಹಳ್ಳ-ಕೊಳ್ಳಗಳಲ್ಲಿ. ಬೇಸಿಗೆಯಲ್ಲಿ ಗ್ಯಾರೇಜ್ ಅಣ್ಣನ ಅಂಗಡಿಯಿಂದ ಬೇಡಿ ತಂದ ಬೈಕುಗಳ ತೂತು ಬಿದ್ದ ಹಳೇ ಟೈರ್, ತೆಂಗಿನ ಪೆಂಟೆ, ಮರದ ಗಾಲಿಗಳ ಎಳೆಬಂಡಿ, ಚಿಟ್ಟೆ, ಪಾತರಗಿತ್ತಿ ಇವು ನಮ್ಮ ಆಟದ ವಸ್ತುಗಳು. ಚಿಟ್ಟೆ ಬಾಲಕ್ಕೆ ಉದ್ದದ ದಾರ ಕಟ್ಟಿ ಹೆಲಿಕ್ಯಾಪ್ಟರ್ ಹಾರಿಸೋದೇ ಒಂದು ಆನಂದ. ಇನ್ನು ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಕಾಣ ಸಿಗುವ ಕಪ್ಪೆ, ಮೀನುಗಳೇ ನಮ್ಮ ಆಟದ ಸಾಮಾನುಗಳು. ಶಾಲೆಗೆ ಹೋಗುವಾಗ ಒಬ್ಬೊಬ್ಬರನ್ನೇ ಹೋಗೋದಕ್ಕೆ ಮನೆಯವರು ಬಿಡುತ್ತಿರಲಿಲ್ಲ. ಗುಂಪು ಗುಂಪಾಗಿ ಕೈಕೈ ಹಿಡಿದು ಹೋಗಬೇಕಿತ್ತು. ಜೋರಾಗಿ ಬಡಿಯುತ್ತಿದ್ದ ಮಳೆಗೆ ಛತ್ರಿಯ ತಡೆಗೋಡೆ ನಿರ್ಮಿಸಿ ರಭಸವಾಗಿ ಬೀಸುವ ಗಾಳಿಯನ್ನು ಛೇದಿಸಿ ಗದ್ದೆ ಬಯಲನ್ನು ದಾಟುವುದೇ ಒಂದು ಸಾಹಸ. ಸ್ವಲ್ಪ ಯಾಮಾರಿದರೂ ತಗ್ಗಿನ ಗದ್ದೆಯ ಕೆಸರಿನಲ್ಲಿ ಹೊರಳಾಡಬೇಕು. ಕೆಲವೊಮ್ಮೆ ಶಾಲೆಯಿಂದ ಮರಳುವಾಗ ಬೇಕಂತಲೇ ನೀರಲ್ಲಿ ಬಿದ್ದು ಎದ್ದು ಒದ್ದೆಯಾಗಿದ್ದೂ ಇದೆ.
ಶಾಲೆಯಿಂದ ಹಿಂದಿರುಗುವಾಗ ನೇರವಾಗಿ ಮನೆಗೆ ಬಂದದ್ದು ಅಪರೂಪ. ಗದ್ದೆ ಹಾಳಿಯ ಬುಡದ ಹೊರೆಗಳಲ್ಲಿ ಅವಿತು ಕೂತಿರುವ ಏಡಿಗಳನ್ನು ಉಪಾಯವಾಗಿ ಹಿಡಿಯೋದು. ರಾತ್ರಿ ಸುರಿದ ಮಳೆಗೆ ಮೊಟ್ಟೆ ಬಿಡೋದಕ್ಕೆ ಗದ್ದೆಗೆ ಬಂದಿರುವ ಮೀನುಗಳನ್ನು ಹುಡುಕೋದು. ಇವೆಲ್ಲ ಶಾಲೆಯಿಂದ ಹಿಂತಿರುಗುವಾಗ ನಾವು ಮಾಡುತ್ತಿದ್ದ ಕೆಲಸ. ಹಿಡಿದ ಏಡಿ ಮೀನುಗಳನ್ನು ನೀರಿನ ಬಾಟಲಿಯಲ್ಲಿ ಕೂಡಿ ಹಾಕಿ ಮನೆಯ ಸೂರಿನ ಮರದ ದಿಮ್ಮಿಗೆ ನೇತು ಹಾಕುತ್ತಿದ್ದೆವು. ಈ ಎಲ್ಲಾ ಸಾಹಸಗಳ ನಡುವೆ ಮನೆಗೆ ಬಂದು ತಲುಪುವಷ್ಟರಲ್ಲಿ ಗಾಳಿಗೆ ಸಿಕ್ಕ ಕೊಡೆ ನೀರಿಗೆ ಸಿಕ್ಕ ಶಾಲಾ ಸಮವಸ್ತ್ರ ಎರಡೂ ಕೆಸರಿನಲ್ಲಿ ಮಿಂದೆದ್ದಿರುತ್ತಿದ್ದವು. ಅದೆಷ್ಟೋ ಬಾರಿ ಪಾಚಿ ಮೇಲೆ ಕಾಲಿಟ್ಟು ದೊಪ್ಪ್... ಎಂದು ಜಾರಿ ಬಿದ್ದದ್ದೂ ಇದೆ. ಬೀಳುವ ಹೊಡೆತಕ್ಕೆ ಹತ್ತಡಿ ಮುಂದೆ ಹೋಗಿ ಮೇಲೇಳುತ್ತಿದ್ದ ನನ್ನ ಮೈಯ್ಯೆಲ್ಲಾ ಕೇಸರೋ ಕೆಸರು. ನಗುತ್ತಿದ್ದ ಗೆಳೆಯರ ಮುಂದೆ ನೋವಾದರೂ ತೋರಿಸಿಕೊಳ್ಳೋ ಹಾಗಿಲ್ಲ. ಈ ಅವತಾರದಲ್ಲಿ ಅಮ್ಮನನ್ನು ಎದುರಿಸುವುದೇ ಒಂದು ದೊಡ್ಡ ಸವಾಲು. ಅಮ್ಮನ ಬೈಗುಳದ ಹಿಂದೆ ಇದ್ದ ಮಗನ ಮೇಲಿನ ಕಾಳಜಿ, ಒದ್ದೆಯಾಗಿ ಬಂದ ಮೊಮ್ಮಗನಿಗೆ ಅಜ್ಜಿ ಮಾಡುತ್ತಿದ್ದ ಆರೈಕೆ ಆಹಾ ಒಮ್ಮೊಮ್ಮೆ ಮಳೆ ದಿನಗಳನ್ನು ನೆನಪಿಸಿಕೊಂಡರೆ ಇನ್ನೊಮ್ಮೆ ಕೆಸರಲ್ಲಿ ಬಿದ್ದು ಮನೆಗೆ ಹೋಗಬೇಕೆನಿಸುತ್ತದೆ.
ಮಳೆಗಾಲ ಆರಂಭವಾದಾಗಿಂದ ಮುಗಿಯೋ ತನಕ ಯಾರ ಮನೆಯಲ್ಲೂ ಬಚ್ಚಲ ಒಲೆಯ ಬೆಂಕಿ ಆರೋದೇ ಇಲ್ಲ. ಮಳೆಯಲ್ಲಿ ನೆಂದು ಚಳಿಯಲ್ಲಿ ನಡುಗುತ್ತಿದ್ದ ದೇಹಕ್ಕೆ ಬಿಸಿ-ಬಿಸಿ ನೀರನ್ನು ಎರೆದುಕೊಂಡಾಗ ಬಚ್ಚಲು ಮನೆಯಿಂದ ಹೊರಬರೋದಕ್ಕೆ ಮನಸ್ಸೆ ಆಗುತ್ತಿರಲಿಲ್ಲ. ಬಚ್ಚಲು ಒಲೆಯಲ್ಲಿ ಒಣ ಗೇರುಬೀಜ ಸುಟ್ಟು ಅವುಗಳ ಸಿಪ್ಪೆ ತೆಗೆದು ತಿನ್ನುವುದೇ ಒಂದು ಮಜಾ. ಪ್ರತಿದಿನ ಸಂಜೆ ಕೆಲಸದಿಂದ ಹಿಂದಿರುಗುತ್ತಿದ್ದ ಅಕ್ಕ-ಪಕ್ಕದ ಮನೆಯವರು ಹರಟೋದಕ್ಕೆ ನನ್ನ ಮನೆಗೆ ಬರುತ್ತಿದ್ದರು. ಕಂಬಳಿ ಒಣಗಿಸೋದಕ್ಕೆ ಹಾಕುತ್ತಿದ್ದ ಬೆಂಕಿ ಒಲೆಯ ಸುತ್ತ ಕೂತು ಹುರಿದ ಹಲಸಿನ ಬೀಜ ಮೆಲುಕುತ್ತ ಕುಳಿತರೆ ಯಾವ ಯುನಿವರ್ಸಿಟಿಯಲ್ಲೂ ನಡೆಯದ ವಿಚಾರ ಸಂಕೀರ್ಣ ಅಲ್ಲಿ ನಡೆಯುತ್ತಿತ್ತು. ಮಳೆಗಾಲದ ಆರಂಭದ ದಿನಗಳಲ್ಲಿ ಗದ್ದೆ ಬಯಲಿಗೆ ಹತ್ತಿ ಬರುವ ಮೀನು ಏಡಿಗಳನ್ನು ಹಿಡಿಯೋದೆಂದರೆ ಒಂದು ಸಂಭ್ರಮವಾಗಿರುತ್ತಿತ್ತು. ಅದಕ್ಕಾಗಿಯೇ ತಿಂಗಳು ಮುಂಚೆಯೇ ತಯಾರಿಯೂ ನಡೆಯುತ್ತಿತ್ತು. ಹೊಸ ಬ್ಯಾಟರಿ ಖರೀದಿಸೋದು, ಕುಡಗೋಲು ಹದಮಾಡೋದು, ಮೀನು ಚೀಲ ಹೊಲಿಯೋದು, ಇತ್ಯಾದಿ. ಗದ್ದೆಗಳಲ್ಲಿ ನೀರು ತುಂಬಿ ಹಳ್ಳಕ್ಕೆ ಹರಿಯುತ್ತಿದ್ದರೆ ಮೀನು ಹತ್ತೋದಕ್ಕೆ ಸಕಾಲ. ಆ ದಿನ ರಾತ್ರಿ ಗುಂಪು ಗುಂಪಾಗಿ ಊರ ಮಂದಿ ಗದ್ದೆ ಬಯಲಿಗೆ, ಹಳ್ಳ-ಕೊಳ್ಳಗಳ ಏರಿಗಳಿಗೆ ಮುಗಿ ಬೀಳುತ್ತಿದ್ದರು. ರಾತ್ರಿ ಹೊತ್ತು ಗದ್ದೆಬಯಲಿನ ಕಡೆ ಕಣ್ಣು ಹಾಯಿಸಿದರೆ ಎಲ್ಲೆಲ್ಲೂ ಬ್ಯಾಟರಿಗಳದ್ದೇ ದರ್ಬಾರಿರುತ್ತಿತ್ತು.
ಮಳೆಗಾಲದಲ್ಲಿ ಮನೆ ಮನೆಗೆ ಕರೆಂಟ್ ಕೊಡೋದೇ ಒಂದು ದೊಡ್ಡ ಸವಾಲಿನ ಕೆಲಸ. ಬಿರುಗಾಳಿ, ಮಳೆ ಸಿಡಿಲಿಗೆ ಮುರಿದು ಬೀಳುತ್ತಿದ್ದ ಬೃಹದಾಕಾರದ ಮರಗಳು ಹತ್ತಾರು ಕರೆಂಟ್ ಕಂಬಗಳನ್ನು ಪುಡಿಗಟ್ಟುತ್ತಿದ್ದವು. ಹಗಲು ರಾತ್ರಿಯೆನ್ನದೆ ಶ್ರಮಿಸುತ್ತಿದ್ದ ಪವರ್ ಮ್ಯಾನ್, ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಬಿರುಸಿನ ಮಳೆಗಾಲದಲ್ಲೂ ಸಮಯಕ್ಕೆ ಸರಿಯಾಗಿ ಬರುತ್ತಿದ್ದ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್, ಮಳೆಗಾಲದ ಅನಾರೋಗ್ಯಕ್ಕೆ ತಕ್ಷಣ ಸ್ಪಂದಿಸುತ್ತಿದ್ದ ಡಾಕ್ಟರ್ಸ್, ಕೆಲವೊಮ್ಮೆ ಭಾರೀ ಮಳೆಗೆ ಮಕ್ಕಳಿಗೆ ರಜೆಯಿದ್ದರೂ ತಾವು ಶಾಲೆಗೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದ ಟೀಚರ್ಸ್, ಜಡಿಮಳೆಯಲ್ಲೂ ಅವಶ್ಯಕತೆಯಿದ್ದಲ್ಲಿ ರಕ್ಷಣೆಗೆ ನಿಲ್ಲುತ್ತಿದ್ದ ಪೋಲೀಸ್, ಭೂ ಕುಸಿತ, ಪ್ರವಾಹ ಮತ್ಯಾವುದೇ ವಿಕೋಪಗಳು ಸಂಭವಿಸಿದರೂ ಟೊಂಕ ಕಟ್ಟಿ ರಕ್ಷಣೆಗೆ ಮುಂದೆ ನಿಲ್ಲುತ್ತಿದ್ದ ಅಗ್ನಿ ಶಾಮಕ ಸಿಬ್ಬಂದಿ ಇವರೆಲ್ಲಾ ಮಳೆಗಾಲದ ಹೀರೋಗಳು.
ಮುಂಗಾರಿನ ಜೊತೆ ಜೊತೆಗೆ ಕೃಷಿ ಚಟುವಟಿಕೆಯೂ ಆರಂಭವಾಗುತ್ತಿತ್ತು. ಗದ್ದೆ ಕೆಲಸದ ಅರ್ಧಭಾಗ ನನ್ನಪ್ಪನ ಹೆಗಲಿಗಿದ್ದರೆ ಇನ್ನರ್ಧ ನಮ್ಮ ಮನೆಯ ಜೋಡೆತ್ತುಗಳ ಹೆಗಲಿಗೆ. ಎಂತದ್ದೇ ಜಡಿಮಳೆಯಿದ್ದರೂ ಗದ್ದೆ ಉಳುಮೆ ಮಾಡಿ ನಾಟಿ ಮುಗಿಸೋತನಕ ಮಳೆ, ಮಣ್ಣು, ಹಸಿರು ಮತ್ತು ಜೋಡೆತ್ತುಗಳು ಇವೇ ನನ್ನಪ್ಪನ ಗೆಳೆಯರು. ಚಿಕ್ಕ ಕರುಗಳನ್ನು ತಂದು ಪ್ರೀತಿಯಿಂದ ಬೆಳೆಸಿದ್ದ ನನ್ನಪ್ಪನಿಗೆ ಆ ಎತ್ತುಗಳೆಂದರೆ ಪಂಚ ಪ್ರಾಣ. ಅವಕ್ಕೂ ಅಷ್ಟೇ ನನ್ನಪ್ಪನೇ ಸಂಗಾತಿ. ಇವರಿಬ್ಬರ ಸಾಂಗತ್ಯದ ಪ್ರತಿಫಲವೇ ನಮ್ಮ ಹೊಟ್ಟೆ ತುಂಬುವುದರ ಮೂಲ. ನನ್ನ ಬದುಕಿನಲ್ಲಂತೂ ಮಳೆಗಾಲ ಕೇವಲ ಮಳೆಗಾಲವಾಗಿ ಉಳಿದಿಲ್ಲ. ಅದೊಂದು ಅದ್ಭುತ ಅನುಭವ, ಜೀವನ ಪಾಠ. ಸಹಜೀವನದ ಮಹತ್ವವನ್ನು ಸಾರುವ ಇಂತಹ ಅನುಭವಗಳನ್ನು ಪಡೆದ ನಾನಂತೂ ಧನ್ಯ. ಎಲ್ಲರ ಜೀವನದಲ್ಲೂ ಇಂತಹದ್ದೊಂದು ಮಳೆಗಾಲ ಮತ್ತೆ-ಮತ್ತೆ ಜೊತೆಯಾಗಲಿ..!
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190
********************************************