ನಿಷ್ಪಾಪಿ ಸಸ್ಯಗಳು : ಸಂಚಿಕೆ - 08
Wednesday, July 26, 2023
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 08
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ , ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಹೇಗಿದ್ದೀರಿ...? ಪುಷ್ಯ ನಕ್ಷತ್ರದ ಮಳೆ 'ಧೋ' ಎಂದು ಸುರಿಯುತ್ತಿದೆ. ಆಗಾಗ ಗಾಳಿ ಸುಂಯೆಂದು ಹರಿಹಾಯ್ತಿದೆ ಅಲ್ಲವೇ..? ನಮ್ಮ ಹಿರಿಯರ ಕಾಲದಲ್ಲೂ ಪುಷ್ಯದ ಮಳೆ ಹೀಗೇ ಅಥವಾ ಇದಕ್ಕಿಂತಲೂ ಹೆಚ್ಚೇ ಇತ್ತಂತೆ.
ಈ ಮಳೆಗೆ ಮನುಷ್ಯರ ಆರೋಗ್ಯ ಕೆಡುವುದು ಅಪರೂಪವೇನಲ್ಲ. ಹಿಂದೆ ಈ ಆಟಿ ತಿಂಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲೆಂದೇ ಸಪ್ತವರ್ಣಿ ಯ ಕಷಾಯದಿಂದ ಹಿಡಿದು ಹಲವಾರು ವಿಶೇಷ ಸಸ್ಯಗಳ ಬಳಕೆ ಮಾಡುತ್ತಿದ್ದರು. ಈಗಲೂ ಕೊರೊನಾ ದಂತಹ ರೋಗಗಳು ಬಾಧಿಸಿದಾಗ ಹಲವಾರು ಗಿಡಮೂಲಿಕೆಗಳ ಸೇವನೆಯಿಂದ ಆರೋಗ್ಯದ ಮಟ್ಟವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನಿಸಿದೆವು. ಇಂತಹ ಹೊತ್ತಲ್ಲಿ ನಮಗೆ ಬಹಳ ಸಹಾಯಕವಾಗಿ ಕಂಡ ಸಸ್ಯಗಳಲ್ಲಿ ತುಳಸಿಯೂ ಒಂದು. ತುಳಸಿಯ ಔಷಧೀಯ ಗುಣಗಳನ್ನು ಹಾಗೂ ಲಾಲಿತ್ಯವನ್ನು ಕಂಡ ಹಿರಿಯರು ಪ್ರಕೃತಿಗೆ ಶರಣಾಗಿ ಅದನ್ನು ಪೂಜೆಯೇ ಮಾಡ ತೊಡಗಿದರು. ಅಂಗಳದಲ್ಲೇ ಸ್ಥಾನ ನೀಡಿ ದೈವತ್ವಕ್ಕೇರಿಸಿದರು. ಬಳಕೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಂಡರು.
ಹೌದು... ತುಳಸಿ ಒಂದು ಗಿಡಮೂಲಿಕೆ. ಇದು ಪೊದರು ಸಸ್ಯ. ಒಂದರಿಂದ ಐದು ಅಡಿಗಳ ವರೆಗೂ ಬೆಳೆಯುತ್ತದೆ. ಎಲೆಗಳು ಮಧುರವಾದ ಸುವಾಸನೆ ಹೊಂದಿದ್ದು ಎಲೆಗಳು ಹಸಿರಾಗಿ ಸಾಮಾನ್ಯವಾಗಿ ಅಂಡಾಕಾರವಾಗಿರುತ್ತದೆ. ಮಧ್ಯ ಆಫ್ರಿಕಾದಿಂದ ಏಷ್ಯಾದವರೆಗೂ, ಸಮಶೀತೋಷ್ಣ ಪ್ರದೇಶಗಳಲ್ಲೂ ಇದು ಸ್ಥಳೀಯ ಸಸ್ಯವಾಗಿದೆ. ಸಾಮಾನ್ಯವಾಗಿ ವಾರ್ಷಿಕವಾಗಿಯೂ ಬಹುವಾರ್ಷಿಕವಾಗಿಯೂ ಈ ಸಸ್ಯ ಬೆಳೆಯುತ್ತದೆ.
ಕಪ್ಪು ತುಳಸಿ ಅಥವಾ ಕೃಷ್ಣ ತುಳಸಿಯ ಹೂ ದಳಗಳು, ಎಲೆಗಳು ತಿಳಿ ನೇರಳೆ ಬಣ್ಣವನ್ನು ಹೊಂದಿದ್ದರೆ ಬಿಳಿ ತುಳಸಿ ಅಥವಾ ರಾಮ ತುಳಸಿಯು ಹಸುರಾದ ಎಲೆ ಮತ್ತು ಬಿಳಿ ಹೂಗಳನ್ನು ನೀಡುತ್ತದೆ. ಸ್ವಲ್ಪ ಗಟ್ಟಿಯಾಗಿರುವ ಕಾಂಡ ಹೊಂದಿರುವ ತುಳಸಿಯಲ್ಲಿ ಸಸ್ಯದ ಮೇಲಿನ ಕಾಂಡದ ತುದಿಗಳಲ್ಲಿ ಹೂವುಗಳು ಹೊರಹೊಮ್ಮುತ್ತವೆ. ತಳಿಗನುಗುಣವಾಗಿ ಪರಿಮಳದಲ್ಲೂ ವ್ಯತ್ಯಾಸಗಳಿವೆ. ಉಳಿದಂತೆ ಕಾಡು ತುಳಸಿ, ನಾಯಿ ತುಳಸಿ ಪ್ರಭೇದಗಳಿದ್ದರೂ ಅವುಗಳನ್ನು ಬಳಕೆ ಮಾಡಲಾಗದು.
ಒಸಿಮಮ್ ಗ್ರಾಟಿಸ್ಸಿಮಮ್ (Ocimum gratissimum) ಎಂಬ ವೈಜ್ಞಾನಿಕ ಹೆಸರಿನ ತುಳಸಿ ಲ್ಯಾಮಿಯಾಸಿಯ (Lamiaceae) ಕುಟುಂಬಕ್ಕೆ ಸೇರಿದೆ. ತುಳಸಿಯು ವಿಟಮಿನ್ ಎ, ಸಿ ಹಾಗೂ ಕ್ಯಾಲ್ಸಿಯಂ, ಜಿಂಕ್, ಕಬ್ಬಿಣಾಂಶವನ್ನು ಅಧಿಕ ಪ್ರಮಾಣದಲ್ಲಿ ಹೊಂದಿದೆ. ವೈರಸ್, ಬ್ಯಾಕ್ಟೀರಿಯಾ ಗಳ ವಿರೋಧಿ. ಕ್ರಿಮಿನಾಶಕ ಗುಣವನ್ನೂ ಹೊಂದಿದ್ದು ನರಗಳಿಗೆ ಉತ್ತಮ ಟಾನಿಕ್ ಆಗಿಯೂ ಕಾರ್ಯನಿರ್ವಹಿಸುತ್ತದೆ.
ಧಾರ್ಮಿಕ ಆಚರಣೆಗಳಿಗಾಗಿ ಪ್ರಾಮುಖ್ಯತೆ ಪಡೆದಿರುವ ಈ ಸಸ್ಯ ಔಷಧೀಯ ಗುಣಗಳ ಆಗರ. ಆಯುರ್ವೇದ ದಲ್ಲಿ ಅಮೂಲ್ಯ ಸಸ್ಯ. ಶುದ್ಧಗಾಳಿಗಾಗಿ ಇದನ್ನು ಮನೆಯ ಸುತ್ತಲೂ ನೆಡುವವರಿದ್ದಾರೆ. ಇದರ ಕೃಷಿಯಿಂದಾಗಿ ಜಾಗತೀಕರಣಗೊಂಡು ಆರ್ಥಿಕ ಲಾಭ ಪಡೆಯುವುದಷ್ಟೇ ಅಲ್ಲದೆ ಎಲೆ, ತೊಗಟೆ, ಬೇರುಗಳಿಂದ ವಿವಿಧ ಕಾಯಿಲೆಗಳನ್ನು ಗುಣಡಿಸಲು ಸಾಧ್ಯವಾಗಿದೆ.
ಮಲೇರಿಯಾ, ಜ್ವರ, ಕೆಮ್ಮು, ಶೀತ, ಗಂಟಲು ನೋವು, ಮೂತ್ರ ಪಿಂಡದ ಕಲ್ಲು, ಕೊಲೆಸ್ಟರಾಲ್, ಚರ್ಮದ ತೊಂದರೆ, ತಲೆನೋವು, ಕಣ್ಣಿನ ಸಮಸ್ಯೆ ಗೆ, ಚರ್ಮದ ತಾಜಾತನ, ಹೊಟ್ಟೆಹುಣ್ಣು, ಸಕ್ಕರೆ ಕಾಯಿಲೆ ಮಾತ್ರವಲ್ಲದೆ ಏಡ್ಸ್ ನಂತಹ ಗಂಭೀರ ಕಾಯಿಲೆಗೂ ಇದರ ಬಳಕೆ ಮಾಡಲಾಗುತ್ತದೆ. ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆಗೆ ಹಾಗೂ ಅದನ್ನು ತಡೆಗಟ್ಟಲು, ರೇಡಿಯೇಶನ್ ನಿಂದಾಗುವ ಅಡ್ಡ ಪರಿಣಾಮಗಳನ್ನು ನಿವಾರಿಸಲೂ ತುಳಸಿಯನ್ನು ಬಳಸುತ್ತಾರೆ.
ಬಿಸಿಲು ಚೆನ್ನಾಗಿದ್ದರೆ ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯಬಲ್ಲ ಈ ಸಸ್ಯವನ್ನು ರಾಯಲ್ ಫರ್ಪ್ಯೂಮ್ ನ ಉತ್ಪಾದನೆಯಲ್ಲೂ ಬಳಸುತ್ತಾರೆನ್ನಲಾಗಿದೆ. ವಿಶ್ವದಾದ್ಯಂತ ಪಾಕಪದ್ದತಿಯಲ್ಲಿ ತುಳಸಿಯನ್ನು ಬಳಸಲಾಗುತ್ತದೆ. ನಿಷ್ಪಾಪಿ ಸಸ್ಯವಾದ ಈ ತುಳಸಿ ಸಸ್ಯದ ಎಲೆಗಳ ಪ್ರತಿ ದಿನದ ಸೇವನೆ ಜ್ಞಾಪಕ ಶಕ್ತಿ ವೃದ್ಧಿಸಲು ಹಾಗೂ ಒತ್ತಡ ನಿವಾರಿಸಲೂ ಸಹಾಯಕವಾಗಿದೆ. ಮೃದು ಮಧುರವೂ, ಸುಂದರವೂ ಆಗಿರುವ ಈ ಸಸ್ಯವನ್ನು ಬೆಳೆಸುವುದು ಬಹಳ ಸುಲಭ. ಹೆಚ್ಚೇನೂ ಆರೈಕೆ ಬೇಡದೆ ಅಲ್ಪ ಸ್ವಲ್ಪ ಎರೆಹುಳು ಗೊಬ್ಬರ, ಸಾವಯವ ಗೊಬ್ಬರಕ್ಕೇ ಹುಲುಸಾಗಿ ಬೆಳೆಯುತ್ತದೆ. ನಮ್ಮ ಸುತ್ತಮುತ್ತಲೂ ತುಲಸಿಯನ್ನು ಬೆಳೆಸುವ ಮೂಲಕ "ನಮ್ಮ ಆರೋಗ್ಯ ನಮ್ಮ ಕೈಯಲ್ಲಿ" ಎಂಬ ಹಿರಿಯರ ಮಾತಿಗೆ ಬೆಲೆ ಕೊಡೋಣ ಆಗದೇ...?
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಮತ್ತೆ ಭೇಟಿಯಾಗೋಣ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************