-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 69

ಸ್ಫೂರ್ತಿಯ ಮಾತುಗಳು : ಸಂಚಿಕೆ - 69

ಸ್ಫೂರ್ತಿಯ ಮಾತುಗಳು : ಸಂಚಿಕೆ - 69
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                   
      ನಾವು ‘ಸತ್ಯ' ದ ಬಗ್ಗೆ ಬಹಳ ಒಲವನ್ನು ಹೊಂದಿದವರು. ಈ ಪ್ರಪಂಚದಲ್ಲಿ ಶಾಶ್ವತವಾದ ಸತ್ಯಗಳು ಸೂರ್ಯ, ಚಂದ್ರ, ನಕ್ಷತ್ರ, ಸಾಗರಗಳು, ನದಿಗಳು, ಪರ್ವತಗಳು, ಕಾನನ, ನೀರು, ಗಾಳಿ, ಈ ಭೂಮಿ ಎಲ್ಲವೂ ಶಾಶ್ವತವಾದ ಸತ್ಯಗಳು. ಇವನ್ನು ಸೃಷ್ಟಿಸಿದವರು ಮತ್ತು ಪೋಷಿಸಿದವರು ಯಾರು ಎಂಬುದಕ್ಕೂ ಯಾವುದೋ ಒಂದು ಸತ್ಯವಿದೆ. ಇದು ನಮಗರಿವಿರದ ಸತ್ಯ. ಅರಿವಿರದ ಸತ್ಯದ ಬಗ್ಗೆ ಮಾತಾನಾಡಿದರೆ ಅದು ಮಿಥ್ಯವಾಗುವ ಸಂದರ್ಭಗಳೇ ಅಧಿಕ. ನಕ್ಷತ್ರಗಳಿಗೆ ಸಂಖ್ಯೆಯಿದೆ. ಊಹನೆಯ ಸಂಖ್ಯೆ ಹೇಳಿದರೆ ಅದು ಮಿಥ್ಯ. ಭಗವಂತನಲ್ಲಿ ಗುಣಗಳಿವೆ. ಆದರೆ ಅದೇ ಸತ್ಯವೂ ಅಲ್ಲ. ಆತನಲ್ಲಿ ದೋಷಗಳೂ ಇವೆ. ಕಾನನವು ಮರಗಳಿರುವ ಭೂಪ್ರದೇಶ ಎಂಬುದು ಸತ್ಯವಾದರೂ ಅದು ಅರ್ಧ ಸತ್ಯ. ಕಾನನದೊಳಗೆ ಹೊಳೆ, ಕೆರೆ, ಪ್ರಾಣಿ ಪಕ್ಷಿ, ಏರು ತಗ್ಗು, ಕಲ್ಲು ಬಂಡೆ ಎಲ್ಲವೂ ಇವೆಯೆಂಬುದೂ ಸತ್ಯ. 
       ಭಾರತ ಶಾಂತಿ ಪ್ರಿಯರ ದೇಶ ಎಂದರೂ ಅರ್ಧ ಸತ್ಯವಾಗುತ್ತದೆ. ಇಲ್ಲಿ ದರೋಡೆ, ಕೊಲೆ, ಕಳವು, ಅಧಿಕಾರಕ್ಕಾಗಿ ಜಗಳ, ಆಸ್ತಿಗಾಗಿ ಕಾಳಗ, ಮಾನಭಂಗ, ವರ್ಣ ಜಾತಿ ಸಂಘರ್ಷ...... ಇತ್ಯಾದಿಗಳೆಲ್ಲವೂ ನೆಲೆಯಾಗಿರುವುದೂ ಸತ್ಯ. ತುಳಸಿ, ಬಿಲ್ವ, ರುದ್ರಾಕ್ಷಿ. ಶಂಖ ಇತ್ಯಾದಿಗಳ ಗುಣಗಳಿಗೆ ಬೆಲೆ ಕಟ್ಟಲಾಗದು ಎನ್ನುತ್ತೇವೆಯಾದರೂ ಅವುಗಳನ್ನು ಪಡೆಯಲು ಬೆಲೆ ತೆರುತ್ತೇವೆ. ಸತ್ಯದ ಬೇರು ನಂಬಿಕೆಯೇ ಹೊರತು ಬೇರೇನೂ ಅಲ್ಲ. 
      ಲೋಪಗಳು, ಬಿರುಕುಗಳು ಸಮಾಜದಲ್ಲಿ ಸಹಜ. ಮನೆಯಲ್ಲಿ ಇಲಿಗಳ ಕಾಟವಿದೆಯೆಂದು ಮನೆಗೆ ಬೆಂಕಿ ಹಚ್ಚಲಾಗದು, ದೋಷಗಳನ್ನು ಕೀಳುವ ನೆಪದಲ್ಲಿ ಅಡಿಪಾಯ ಭಂಗಗೊಳ್ಳಬಾರದು. ನಾವು ದೋಷಗಳನ್ನೇ ಗಮನಿಸಿದರೆ ಒಳಿತುಗಳನ್ನು ನೋಡಲು ನಮಗೆ ಸಮಯವಿರದೆಂಬುದು ಸತ್ಯ. ದೇಹದೊಳಗೆ ಮಲ ಮೂತ್ರಗಳಿವೆ, ಅದೇ ರೀತಿ ಮನಸ್ಸು, ಭಾವನೆ, ಬುದ್ಧಿ, ಹೃದಯ ಇವೆಯಲ್ಲವೇ? ಮಲಮೂತ್ರಗಳ ಬಗ್ಗೆಯೇ ಚಿಂತೆ ಅಥವಾ ಚಿಂತನೆ ಹೇಗೆ ಸಲ್ಲದೋ ಅದೇ ರೀತಿ ವ್ಯಕ್ತಿಯ ಅಥವಾ ಶಕ್ತಿಯ ದೋಷಗಳದೇ ಚಿಂತನೆ ಸಲ್ಲದು. ಭಗವಂತನಲ್ಲಿ ಅಗಣಿತ ಗುಣಗಳಿವೆಯೆಂದಾದರೆ ಆತನಲ್ಲಿರುವ ಪುಟ್ಟ ದೋಷಗಳು ನಗಣ್ಯವಾಗಬೇಕಾದುದು ಸತ್ಯ. ದೀಪದಡಿ ಬೆಳಕು ಮತ್ತು ಕತ್ತಲು ಎರಡೂ ಇವೆ.
     ಗಂಗೆಯ ಸ್ನಾನ ಪರಮ ಪಾವನ, ಗಂಗೆ ಪಾಪ ಕಳೆವಳು ಎಂಬುದು ನಮ್ಮ ನಂಬಿಕೆ. ಗಂಗೆ ಎಷ್ಟೇ ಮಲಿನಳಾಗಿರುವಾಗಲೂ ಅದರಲ್ಲಿ ಮಿಂದವರು ರೋಗಕ್ಕೆ ಬಲಿಯಾಗಲಿಲ್ಲ ಎಂಬ ಸತ್ಯದ ಮುಂದೆ ಆಕೆಯ ಮಲಿನತೆ ಗೌಣವಾಗುತ್ತದೆ. ಸತ್ಯದ ಬೇರು ನಂಬಿಕೆಯೆಂಬುದು ಖಚಿತ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಆದರೆ ಇದು ನಂಬಿಕೆಯೇ ಹೊರತು ಸತ್ಯವಲ್ಲ. ವೇದ ಎಂದೂ ಸುಳ್ಳಾಗದು ಎಂಬ ಸತ್ಯ ನಮ್ಮೊಳಗೆ ಸ್ಥಿರವಾಗಿಯೇ ಇದೆ. ಬುದ್ಧ, ಶಂಕರ, ರಾಮಾನುಜ, ಬಸವಣ್ಣ, ವಿವೇಕಾನಂದ, ರಾಮಕೃಷ್ಣ ಪರಮಹಂಸರು ಹೇಳಿದ ಮಾತುಗಳೆಂದು ಅನೇಕ ವಿಚಾರಗಳನ್ನು ಉಲ್ಲೇಖಿಸುತ್ತೇವೆ. ಆದರೆ ಆ ಮಾತುಗಳೆಲ್ಲವೂ ವೇದಗಳಲ್ಲೂ ಇವೆಯೆಂಬುದೂ ಸತ್ಯ. ಶಂಕರರರು ಹೇಳಿದ ಸಿದ್ಧಾಂತಗಳು ವೇದಗಳಲ್ಲೂ ಎಂಬುವುದು ಸತ್ಯವಾದರೂ ಶಂಕರರು ಹೇಳಿದರೆಂದರೆಂಬುವುದೂ ತಪ್ಪಲ್ಲವಲ್ಲ. ಶಂಕರರು ಹೇಳಿದರು ಎಂಬುದೂ ಸತ್ಯ. ವೇದದಷ್ಟೇ ಸತ್ಯ ಎನ್ನುವ ಪ್ರಮಾಣ ಮಾತಿದೆ. ಭಗವದ್ಗೀತೆಯ ಮೇಲೆ ಆಣೆ ಮಾಡಿ ಸತ್ಯವನ್ನೇ ಹೇಳುತ್ತೇನೆ ಎನ್ನುತ್ತೇವೆ. ವೇದವು ಸತ್ಯ, ಗೀತೆ ನಂಬಿಕೆ.
     |ಆನೋ ಭದ್ರಾಃ ಕ್ರತವೋಯಂತು ವಿಶ್ವತಃ| 
ಸಂಸ್ಕೃತ ಪರಿಣತರಿಗೆ ಅರ್ಥವಾಗುವ ಹೇಳಿಕೆಯಿದು. ಉನ್ನತ ಭಾವಗಳು ಎಲ್ಲೆಡೆಯಿಂದಲೂ ಬರಲಿ ಎಂದೇ ಅರ್ಥ. ನಮಗೆ ಸಿಗುವ ಮಾತುಗಳು ಅಥವಾ ಭಾವನೆಗಳು ಎಲ್ಲೆಡೆಯಿಂದಲೂ ಬರಲಿ, ಅವುಗಳು ಸತ್ಯವೆಂಬ ನಂಬಿಕೆಗೆ ಪಾತ್ರವಾಗುವಂತಿರಲಿ. ಸತ್ಯಮೂಲವಾಗಿರಲಿ ಎಂದೇ ತಾತ್ಪರ್ಯ. (ಮೂಲ ಎಂದರೆ ಬೇರು)
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article