-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 68

ಸ್ಫೂರ್ತಿಯ ಮಾತುಗಳು : ಸಂಚಿಕೆ - 68

ಸ್ಫೂರ್ತಿಯ ಮಾತುಗಳು : ಸಂಚಿಕೆ - 68
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                           
      ಮರದ ಸ್ಥಿರತೆ ಅದರ ತಾಯಿ ಬೇರಿನಲ್ಲಿದೆ. ತಾಯಿ ಬೇರು ಬಲಗೊಂಡಂತೆ ಮರದ ಆಯುಷ್ಯವರ್ಧನೆಯಾಗುತ್ತದೆ. ತಾಯಿ ಬೇರಿಗೆ ಇತರೆ ಬೇರುಗಳೂ ಬೆಂಬಲವಾಗಿರುತ್ತವೆ. ಕುಟುಂಬವು ಮರದಂತೆ ರೆಂಬೆ ಕೊಂಬೆ ಬೇರುಗಳು ಎಲ್ಲವನ್ನೂ ಹೊಂದಿರುತ್ತವೆ. ಕುಟುಂಬದ ಸದಸ್ಯರೆಲ್ಲರೂ ಸೇರಿದಾಗ ಕುಟುಂಬ ವೃಕ್ಷ ಆಗಲು ಸಾಧ್ಯ. ಕುಟುಂಬದ ಹಿರಿಯರು ತಾಯಿ ಬೇರಿನಂತೆ ಕುಟುಂಬದ ಬೆಳಗುವಿಕೆಗೆ ಆಧಾರ ಸ್ಥಂಭ. ಹಿರಿಯರ ಅನುಭವದ ಮಾತುಗಳೇ ಕುಟುಂಬಕ್ಕೆ ಸರಿಯಾದ ಪಥವನ್ನು ಕೊಡುತ್ತವೆ. ಹೊಸ ವೈದ್ಯನಿಗಿಂತ ಹಳೆಯ ಕಂಪೌಂಡರ್ ಲೇಸು ಎನ್ನುವುದೂ ಅನುಭವದ ಮಹತ್ವವನ್ನು ಒಪ್ಪುತ್ತದೆ. 
       ಒಂದೂ ಹೆರದವಳು ಬಾಣಂತನ ಹೇಗೆ ಮಾಡಲು ಸಾಧ್ಯ ಎನ್ನುವುದಿಲ್ಲವೇ? ಬಾಣಂತನ ಹೇಗೆ ಮಾಡುವರು ಎಂಬುದು ಸ್ವ-ಅನುಭವವಾದಾಗ ಬಾಣಂತನ ಸಲೀಸು ಮತ್ತು ಫಲಕಾರಿ. ಹಿಂದೆ ಹೆರಿಗೆಯನ್ನು ಸೂಲಗಿತ್ತಿಯರು ನಡೆಸುತ್ತಿದ್ದರು. ನಾನು ತಿಳಿದ ಕೆಲವು ಸೂಲಗಿತ್ತಿಯರು ನೂರಾರು ಹೆರಿಗೆಗಳನ್ನು ಸುಸೂತ್ರವಾಗಿ ನಿರ್ವಹಿಸಿದವರಿದ್ದಾರೆ. ಇಂದು ವೈದ್ಯಕೀಯ ಯುಗ. ಸೂಲಗಿತ್ತಿಯರೂ ಇಲ್ಲ, ಶಸ್ತ್ರಕ್ರಿಯೆ ಹೊರಾತಾದ ಸುಖ ಪ್ರಸವಗಳೂ ಇಲ್ಲ. ಗುರುಕುಲಗಳಲ್ಲಿ ಮಕ್ಕಳು ಕಲಿಯುತ್ತಿದ್ದ ಆ ಕಾಲ ನಮಗೆ ಪುರಾತನ. ಅಲ್ಲಿ ಬೋಧನೆ ಮಾಡುತ್ತಿದ್ದ ಆಚಾರ್ಯರು ಯಾವುದೇ ಮೀಸಲಾತಿಯಿಲ್ಲದೆ ಅನುಭವದ ಮೂಲಕ ಆ ಸ್ಥಾನಕ್ಕೆ ಬರುತ್ತಿದ್ದರು. ಗುರುಕುಲಗಳಲ್ಲಿ ಜೀವನ ಶಿಕ್ಷಣವು ವಿದ್ಯಾರ್ಥಿಗಳಿಗೆ ಪೂರ್ಣಶಃ ದೊರೆಯುತ್ತಿತ್ತು. ಆದರೆ ಇಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಾಗಲು ಅನುಭವಕ್ಕಿಂತ ಭಿನ್ನವಾದ ಮಾನದಂಡವಿದೆ, ಜೊತೆಗೆ ಅನುಭವದ ಹಂತ ತಲುಪಿದಾಗ ವಯೋ ನಿವೃತಿಯೂ ಬರುತ್ತದೆ. ಶಿಕ್ಷಣದಲ್ಲಿಯೂ ಅನುಭವದ ಬೇರುಗಳ ಒಳಗೊಳಿಸುವಿಕೆಯಾದರೆ ದೇಶಕ್ಕೆ ಹಿತವಾಗಬಹುದು.
      ಹಳ್ಳಿಯ ರೈತ ತನ್ನ ಬೆಳೆಗೆ ಯಾವಾಗ ಯಾವ ಗೊಬ್ಬರ ಹಾಕಬೇಕು, ಯಾವ ಯಾವ ತಳಿಗಳು ಆರೋಗ್ಯದಾಯಕ ಮತ್ತು ಸಮೃದ್ಧ ಬೆಳೆ ನೀಡಬಲ್ಲುದು, ಗಿಡಗಳಿಗೆ ತಗಲುವ ರೋಗಗಳೇನು ಮತ್ತು ಅವುಗಳ ನಿಯಂತ್ರಣ ಹೇಗೆ ಸಾಧ್ಯ? ಗಿಡಗಳಿಗೆ ನೀರು ಹಾಯಿಸ ಬೇಕಾದ ವಿಧಾನ ಮತ್ತು ಪರಿಮಾಣ, ಗಿಡಗಳಿಗೆ ಯೋಗ್ಯವಾದ ಗೊಬ್ಬರದ ವಿಧ ಮತ್ತು ಅಳತೆ ಇವೆಲ್ಲವನ್ನೂ ನಿಖರವಾಗಿ ಹೇಳ ಬಲ್ಲ. ಅವನು ಸ್ವಾನುಭವದ ಮೂಲಕ ಹೇಳುತ್ತಾನೆಯೇ ಹೊರತು ಎಲ್ಲೋ ಓದಿದುದನ್ನು ಕೇಳಿಸಿಕೊಂಡುದನ್ನು ಹೇಳುವುದಿಲ್ಲ. ಕೃಷಿಯಲ್ಲಿ ಅನುಭವದ ಬೇರು ಪ್ರಮುಖ ಪಾತ್ರವಹಿಸುತ್ತದೆ. ಅನುಭವ ಅನ್ನುವುದು ನೂರಾರು ಪ್ರಯತ್ನಗಳ ಪ್ರತಿಫಲ. ಪ್ರಯತ್ನಗಳನ್ನು ಮಾಡುತ್ತಾ ಇರುವಾಗ ಗೆಲುವೇ ಬರುತ್ತದೆ ಎನ್ನಲಾಗದು. ಹತ್ತಾರು ಸೋಲುಗಳೂ ಬಂದೇ ಬರುತ್ತವೆ. ಈ ಸೋಲುಗಳೇ ಅನುಭವಗಳಾಗುತ್ತವೆ. ಸೋಲುಗಳ ತಳಹದಿಯಿಂದ ಪಡೆದ ಅನುಭವದ ಬೇರು ಬಹಳ ಆಳ ಮತ್ತು ಹರವುಗಳನ್ನು ಹೊಂದಿರುತ್ತದೆ. ಪರಿಪಕ್ವ ಅನುಭವ ಎಂಬುದು ದಿಢೀರನೆ ಬರದು, ತಾಳ್ಮೆ ಮತ್ತು ಪುನರಪಿ ಯತ್ನಗಳು ಜಯವನ್ನು ತರುವುದರೊಂದಿಗೆ ಅನುಭವವನ್ನು ದೃಢ ಮತ್ತು ಬಲಗೊಳಿಸುತ್ತವೆ.
       ಕಾರು, ಲಾರಿ, ಬಸ್ ಮುಂತಾದ ವಾಹನಗಳಲ್ಲಿ ಕ್ಲೀನರ್ ಆಗಿ ಸೇರಿದವರು ನಂತರ ಚಾಲಕರಿಗೆ ಸಹಾಯಕರಾಗುತ್ತಾರೆ. ಬಿಡುವಿನ ವೇಳೆಯಲ್ಲಿ ಇಂತಹವರಿಗೆ ಚಾಲಕರು ಅಲ್ಲಲ್ಲಿ ವಾಹನ ತಿರುಗಿಸಲು, ಹಿಂದೆ ಮುಂದೆ ಒಯ್ಯಲು ಹೇಳುತ್ತಿದ್ದರು. ಕ್ರಮೇಣ ಅವರೇ ನುರಿತ ಚಾಲಕರಾಗಿ ಪರಿವರ್ತನೆಯಾಗುತ್ತಾರೆ. ಹೀಗೆ ಅನುಭವ ಪಡೆದ ಚಾಲಕರು ಗುರಿಯನ್ನು ಅಪಘಾತರಹಿತವಾಗಿ ತಲುಪುತ್ತಾರೆ. ಚಾಲಕ, ಮೆಕ್ಯಾನಿಕ್, ಕೃಷಿಕ, ಚಿಕಿತ್ಸಕ, ಶಿಕ್ಷಕ, ನಿರ್ವಾಹಕ.... ಹೀಗೆ ಪ್ರತಿಯೊಬ್ಬರೂ ಅನುಭವಿಗಳ ಕೈಕೆಳಗೆ ದುಡಿದು ಬೆಳೆಯುತ್ತಾರೆ. ತರಗತಿ ಪಡೆದು ಪರೀಕ್ಷೆ ಬರೆದು ಪ್ರಮಾಣ ಪತ್ರ ಪಡೆದೊಡನೆ ವೃತ್ತಿ ಕುಶಲತೆ ಬಾರದು. ಅವರು ಅನುಭವದ ಬೇರುಗಳೊಂದಿಗೆ ಜೊತೆಯಾಗಿ ಅನುಭವಿಗಳಾಗಬೇಕಾಗುತ್ತದೆ. ಅನುಭವ ಪಡೆಯದ ವ್ಯಾಪಾರಿಯ ಮಗ ವ್ಯಾಪಾರದಲ್ಲಿ ಜಯಿಸುತ್ತಾನೆ ಎನ್ನುವಂತಿಲ್ಲ. ವ್ಯಾಪಾರಿಯ ಕೈ ಕೆಳಗೆ ದುಡಿದ ಕಾರ್ಮಿಕನೂ ಉತ್ತಮ ವ್ಯಾಪಾರಿಯಾಗಲು ಸಾಧ್ಯವಿದೆ. ಆದ್ದರಿಂದಲೇ ಅನುಭವವು ಬದುಕನ್ನು ಕಟ್ಟಿಕೊಡುತ್ತದೆ ಎನ್ನುತ್ತೇವೆ. ನಾವು ಅನುಭವಶಾಲಿಗಳಾದರೆ ಮಾತ್ರವೇ ನಾವು ಕೈಗೆತ್ತಿಕೊಳ್ಲುವ ಕೆಲಸಗಳೂ ಯಶಸ್ವಿಯಾಗುವುವು. ಅನುಭವವೇ ಹಿರಿತನ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** Ads on article

Advertise in articles 1

advertising articles 2

Advertise under the article