-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 02

ನಿಷ್ಪಾಪಿ ಸಸ್ಯಗಳು : ಸಂಚಿಕೆ - 02

ನಿಷ್ಪಾಪಿ ಸಸ್ಯಗಳು : ಸಂಚಿಕೆ - 02
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


      ನಮ್ಮ ಸುತ್ತಮುತ್ತ ಪರಿಸರದಲ್ಲಿ ಇದ್ದ ಅದೆಷ್ಟೋ ಗಿಡ ಮರಗಳು ಇಂದು ಅಳಿವಿನಂಚಿನಲ್ಲಿದೆ. ಬಹು ಬಗೆಯ ಸಸ್ಯ ಸಂಪತ್ತುಗಳು ನಮಗೆ ಪರಿಚಯವಿಲ್ಲದೆ ಮೂಲೆಗುಂಪಾಗುತ್ತಿದೆ. ಇದ್ದ ಗಿಡ-ಮರಗಳ ನೋಡಿ ಅನುಭವಿಸಿ 'ನಿಷ್ಪಾಪಿ ಸಸ್ಯ' ಗಳ ಲೇಖನ ಸರಣಿಯಲ್ಲಿ ನಿಮ್ಮ ಜೊತೆ ಹಂಚಿಕೊಳ್ಳುವ ಆಶಯ ನನ್ನದು.... ವಿಜಯಾ ಬಿ ಶೆಟ್ಟಿ ಸಾಲೆತ್ತೂರು

                             ತುಂಬೆ ಗಿಡ
    ಪ್ರೀತಿಯ ಮಕ್ಕಳೇ..... ಹೇಗಿದ್ದೀರಿ...?ಮಳೆರಾಯ ಕಾಲಿರಿಸಿ ಕೆಲವು ದಿನಗಳು ಕಳೆಯುವುದರೊಳಗೆ ನಮ್ಮ ಕಣ್ಣಳತೆಯ ಭೂಪದರದ ಮೇಲೆಲ್ಲಾ ಹಲವಾರು ವಿನ್ಯಾಸ, ಗಾತ್ರದ ಸಣ್ಣ ಪುಟ್ಟ ಸಸ್ಯಗಳ ಉದಯವನ್ನು ಕಾಣುತ್ತಿದ್ದೇವೆ.
      ಗೆಡ್ಡೆ - ಗೆಣಸು, ಬೇರು - ನಾರು, ತೊಗಟೆ - ಎಲೆ, ಹಣ್ಣು - ಕಾಯಿ, ಬೀಜ - ಕಾಳು, ಹುಲ್ಲು ಎಲ್ಲವುಗಳು ಸಮೃದ್ಧವಾಗಿ ಬೆಳೆಯುವ ಪ್ರಕೃತಿಯಲ್ಲಿ ಉತ್ಕರ್ಷದ ಸಮಯವಿದು
       ಇಂತಹ ವೇಳೆ ಮನೆಯ ಸುತ್ತಮುತ್ತ, ಮಾರ್ಗದ ಇಕ್ಕೆಲಗಳಲ್ಲಿ, ಗದ್ದೆಗಳ ಬದುಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಕಾಣಸಿಗುವ ಕಳೆಗಿಡ ಎಂದು ಕರೆಯಲ್ಪಡುವ ಒಂದು ಸುಂದರವಾದ ಪುಟ್ಟ ಸಸ್ಯ ಈ ತುಂಬೆ ಗಿಡ. ಇದನ್ನು ದ್ರೋಣ ಪುಷ್ಪವೆಂದೂ, ರುದ್ರ ಪುಷ್ಪವೆಂದೂ ಕರೆಯುತ್ತಾರೆ. ಇದನ್ನು ಶಿವನ ಪೂಜೆಯಲ್ಲಿ ವಿಶೇಷವಾಗಿ ಬಳಸುತ್ತಾರೆ. ಸಾಧಾರಣವಾಗಿ ಇದರ ಹೂಗಳ ಬಣ್ಣ ಅಚ್ಚ ಬಿಳಿಯದಾಗಿದೆ. ಇಂಥದ್ದೇ ಆಕಾರದ ಹೂಗಳನ್ನು ಬೇರೆ ಬಣ್ಣದಲ್ಲಿ ಕಾಣಬಲ್ಲೆವಾದರೂ ಗಿಡದ ಸ್ವರೂಪ ಬೇರೆಯಾಗಿದೆ.
        ತುಂಬೆ ಗಿಡದ ಹೂ ಮತ್ತು ಎಲೆಗಳು ಸುವಾಸನಾಭರಿತವಾಗಿರುತ್ತವೆ. ಎಲೆಗಳು ನೀಳವಾಗಿದ್ದು ಮೃದುವಾಗಿರುತ್ತವೆ. ತುಳುನಾಡಿನಲ್ಲಿ ಮನೆತುಂಬಿಸುವ ಸಾಂಪ್ರದಾಯಿಕ ಆಚರಣೆಯಲ್ಲಿ, ಹೊಸ ಅಕ್ಕಿ ಊಟದ ಸಂಭ್ರಮ ದಲ್ಲಿ ಬೆಳ್ತಿಗೆ ಅಕ್ಕಿಯ ಜೊತೆ ತುಂಬೆಯ ಹೂವನ್ನು ಸೇರಿಸಿ ದೇವರ ಕೋಣೆಯಲಿರಿಸಿದ ಸುವಸ್ತುಗಳಿಗೆ ಹಾಕಿ ನಮಸ್ಕರಿಸುವ ಕ್ರಮ ಇಂದಿಗೂ ಇದೆ. ನೆರೆಯ ಕೇರಳದ ಓಣಮ್ ಹಬ್ಬದಲ್ಲೂ ಇದರ ವ್ಯಾಪಕ ಬಳಕೆಯಿದೆ.
        ಏಕವಾರ್ಷಿಕ ಸಸ್ಯವಾದ ಇದರ ವೈಜ್ಞಾನಿಕ ಹೆಸರು ಲ್ಯೂಕಾಸ್ ಆಸ್ಪೆರ (Leucas aspera ), ಸಸ್ಯದ ಕುಟುಂಬ ಲ್ಯಾಮಿಯೇಸಿ (Lamiaceae) ಆಗಿದ್ದು ಜ್ವರ, ಉಸಿರಾಟದ ಸಮಸ್ಯೆ ಸೋರಿಯಾಸಿಸ್ ನಂತಹ ರೋಗಗಳಿಗೂ ಉಪಶಮನಕಾರಿ ಸಸ್ಯವಾಗಿದೆ.
          ಬಾಲ್ಯದಲ್ಲಿ ಏಕದಳ ಹೊಂದಿದ ಈ ಕೊಂಡಾಟದ ಹೂವನ್ನು ಕೊಯ್ದು ಅದರ ಹಿಂಬದಿಯ ಮಕರಂದ ಸವಿದು ಅವುಗಳನ್ನು ಒಂದಕ್ಕೊಂದು ಚುಚ್ಚುತ್ತಾ ಸಾಗಿ ಚಕ್ಕುಲಿಯ ಆಕಾರದ ಮಾಲೆ ಮಾಡುವುದೇ ಆಟವಾಗಿತ್ತು.
         ಮಕ್ಕಳೇ, ಇಂದು ಮಾನವನ ಅತಿಕ್ರಮಣಗಳಿಗೆ ಈ ತುಂಬೆ ಗಿಡವೂ ನೆಲೆ ಕಳೆದುಕೊಳ್ಳುತ್ತಿದೆ. ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದ ಈ ಸುಂದರವಾದ ಸಸ್ಯವನ್ನು ಇಂದು ಚಿತ್ರಗಳಲ್ಲಷ್ಟೇ ಕಾಣುವಂತಾಗಿದೆ. ನಮ್ಮ ಆಸುಪಾಸಿನಲ್ಲೆಲ್ಲಾದರೂ ಈ ಗಿಡಗಳಿದ್ದರೆ ಅವನ್ನು ಉಳಿಸೋಣ.. ಬೆಳೆಸೋಣ ಅಲ್ಲವೇ..
          ಮುಂದಿನ ವಾರ ಮತ್ತೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗೋಣ. ಏನಂತೀರಾ..
............ ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************



Ads on article

Advertise in articles 1

advertising articles 2

Advertise under the article