-->
ಬದಲಾಗೋಣವೇ ಪ್ಲೀಸ್ - 95

ಬದಲಾಗೋಣವೇ ಪ್ಲೀಸ್ - 95

ಬದಲಾಗೋಣವೇ ಪ್ಲೀಸ್ - 95
ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
       
           ಮೈಸೂರು ಸರ್ಕಲ್ ತಿಪ್ಪೇಸ್ವಾಮಿಯ ಚಹಾ ಸ್ಟಾಲ್ ಗೆ ನಾನು ಮತ್ತು ತರುಣ್ ಹೊರಟೆವು . "ಬದುಕೊಂದು ಚಹಾದಂತೆ ಅಣ್ಣಾ .... ಅತಿಬಿಸಿಯಾದರೂ... ತಣ್ಣಾಗಾದರೂ... ಕುಡಿಯುವುದಕ್ಕೆ ಆಗೋದಿಲ್ಲ. ಹದಭರಿತವಾದರೆ ಮಾತ್ರ ಕುಡಿಯುವುದಕ್ಕೆ ರುಚಿಕರ" ಎಂದು ಅಲ್ಲೇ ಚಹಾ ಕುಡಿಯುತ್ತಿದ್ದ 70ರ ಹರೆಯದ ಅಜ್ಜ ಹೇಳಿದ.
      "ಅರೇ ಅದು ಹೇಗೆ ಅಜ್ಜ.... ಚಹಾವನ್ನು ಬದುಕಿಗೆ ಹೋಲಿಸುತ್ತೀಯಾ" ಎಂದೆ. "ಹೌದು ಮಗಾ. ನೀನೊಮ್ಮೆ ಚಹಾ ಮಾಡೋ ಹಂತಗಳನ್ನು ನೋಡು. ಚಹಾ ತಯಾರಿ ಒಂದು ಅದ್ಭುತ ಪಾಠ.. ಅರೆ.... ಎಷ್ಟೊಂದು ಹಂತಗಳು. ಪ್ರತಿ ಹಂತಗಳಲ್ಲೂ ಬದುಕಿನ ಕನ್ನಡಿ ಇದೆ. 
      ಚಹಾ ತಯಾರಿಸಲು ಪಾತ್ರೆಯೊಳಗೆ ನೀರನ್ನು ಇಟ್ಟು ಕಾಯಿಸಬೇಕು. ನೀರು ಬಿಸಿಯಾದ ನಂತರ ಅದಕ್ಕೆ ಚಹಾ ಪುಡಿ ಹಾಕಬೇಕು. ಚಹಾ ಪುಡಿ ಕುದಿದ ನಂತರ ತನ್ನೊಳಗಿನ ಸತ್ತ್ವವನ್ನು ನೀರೊಳಗೆ ಸೇರಿಸುತ್ತದೆ. ತದ ನಂತರ ಅದಕ್ಕೆ ಹಾಲು ಹಾಗೂ ಸಕ್ಕರೆಯನ್ನು ಸೇರಿಸುತ್ತಾರೆ. ಒಟ್ಟು ಮಿಶ್ರಣವನ್ನು ಜರಡಿ ಮೂಲಕ ಸೋಸಿ ಉಪಯುಕ್ತವಾದ ಚಹಾವನ್ನು ಸಂಗ್ರಹಿಸಿ - ಅನುಪಯುಕ್ತ ಚೆರಟವನ್ನು ಬಿಸಾಡುತ್ತಾರೆ. ಇನ್ನು ಈ ಚಹಾದೊಂದಿಗೆ ಶುಂಠಿ, ಏಲಕ್ಕಿ, ಪುದಿನಾ, ಲಿಂಬೆ... ಹೀಗೆ ಬೇರೆ ಬೇರೆ ವಸ್ತುಗಳನ್ನು ಸೇರಿಸಿ ಅದನ್ನು ಇನ್ನಷ್ಟೂ ವೈವಿಧ್ಯಮಯವನ್ನಾಗಿ ಮಾಡುತ್ತಾರೆ. ನಾವು ಇಷ್ಟ ಪಟ್ಟು ಮಾಡಿದರೆ ಅದರ ರುಚಿ ಇಮ್ಮಡಿಯಾಗುತ್ತದೆ.
     ಬದುಕು ಕೂಡಾ ಹೀಗೆ ತಾನೆ. ಲೋಕದ ಪಾತ್ರೆಯೊಳಗೆ ನಾವು ವಿವಿಧ ರೀತಿಯಲ್ಲಿ ಪರೀಕ್ಷೆಗೊಳಗಾಗುತ್ತೇವೆ. (ಕಾಯಿಸಲ್ಪಡುತ್ತೇವೆ). ಕುದಿಯುವ ಹಂತದಲ್ಲಿ ನಮ್ಮೊಳಗಿರುವ 'ಅಹಂ' (Ego) ನ್ನು ಆವಿಯಾಗಬೇಕು. ನಂತರ ನಮ್ಮೊಳಗಿರುವ ಬದುಕಿನ ಸತ್ತ್ವವನ್ನು ಲೋಕಕ್ಕೆ ಅಥವಾ ಲೋಕದ ಸತ್ತ್ವವನ್ನು ನಮ್ಮೊಳಗೆ ಬಿಡಬೇಕು. ಸಕ್ಕರೆಯಂಥ ಸಿಹಿ ಜನರ ಸಂಗ ಮಾಡಬೇಕು. ಹಾಲಿನಂಥ ಸಮತೋಲಿತ ಮನದ ಅಮೃತ ಸಮಾನ ವ್ಯಕ್ತಿತ್ವದವರ ಜತೆ ಬೆರೆಯಬೇಕು. ಆಗ ಬದುಕಿನ ರುಚಿ (ನೆಮ್ಮದಿ) ಇಮ್ಮಡಿಯಾಗುತ್ತದೆ. ನಮ್ಮೆಲ್ಲ ತಪ್ಪುಗಳನ್ನು - ನೋವು, ಹತಾಶೆ, ದುಃಖ, ನಿರಾಶೆಗಳನ್ನು ಸಂತೃಪ್ತ - ವಿಶಾಲ ಮನದ ಜರಡಿಯ ಮೂಲಕ ಸೋಸಿ ಹೊರ ಹಾಕಬೇಕು. ಆಗ ಖುಷಿ ಹಾಗೂ ನೆಮ್ಮದಿ ಎಂಬ ರುಚಿಕರವೂ ಸತ್ತ್ವಭರಿತವೂ ಆಗಿರುವ ಚಹಾ (ವ್ಯಕ್ತಿತ್ವ) ಸಂಗ್ರಹವಾಗಿ ಎಲ್ಲರ ಮನ ಸೂರೆಗೊಳ್ಳುತ್ತದೆ. ಬದುಕನ್ನು ಇನ್ನಷ್ಟೂ ಖುಷಿಯಾಗಿ ಸಂಭ್ರಮಿಸಲು ವೈವಿಧ್ಯಮಯ ಗೊಳಿಸಲು ವಿವಿಧ ಜೀವನ ಕಲೆಗಳನ್ನು ತನ್ನೊಳಗೆ ಸೇರಿಸಬೇಕು ಎಂದರು. ನಂಗೆ ಬದುಕೆಂಬ ಚಹಾದ ಪರಿಚಯವಾಯಿತು.
    ನೆಮ್ಮದಿಯ ರುಚಿ ಕೊಡುವ ಚಹಾದ ಪರಿಚಯ ಮಾಡುತ್ತಾ ಬದಲಾಗೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್...! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article