-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 58

ಸ್ಫೂರ್ತಿಯ ಮಾತುಗಳು : ಸಂಚಿಕೆ - 58

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com                    
             ಇತ್ತೀಚೆಗೆ ಒಂದು ಕಠಿಣ ಸವಾಲಿಗೆ ನಾನು ಉತ್ತರಿಸಬೇಕಾಯಿತು. ಇವತ್ತಿನ ಮಕ್ಕಳಿಗೆ ಮೌಲ್ಯ ಬೋಧನೆ ಮಾಡಲು ಇರುವ ಆತಂಕಗಳು ಏನು? ಎಂಬುದೇ ಆ ಸವಾಲು. ಆತಂಕವನ್ನು ತೊಡಕೆಂದೇ ತಿಳಿಯೋಣ. ಮಕ್ಕಳಿಗೆ ಮೌಲ್ಯ ಬೋಧನೆ ಮಾಡುವುದು ಇಂದು ದೊಡ್ಡ ಆತಂಕ ಎಂಬುದು ಎಲ್ಲರ ಅನುಭವ. ದಶಕಗಾಳಚೆಗೆ ಮೌಲ್ಯ ಬೋಧನೆ ಎಂಬುದು ಶಿಕ್ಷಣದ ಅವಿಭಾಜ್ಯ ಅಂಗ. ಶಿಕ್ಷಣ ನೀಡುವುದೆಂದರೆ ಜೀವನ ಮೌಲ್ಯಗಳನ್ನು ತುಂಬಿಸುವುದೆಂಬ ಸತ್ಯ ಬಲವಾಗಿ ಬೇರೂರಿದ್ದ ಕಾಲವದು. ಇಂದು ಎಲ್ಲರ ಮನೋಸ್ಥಿತಿ ಬದಲಾಗಿದೆ. 
      ಮೌಲ್ಯ ಬೋಧನೆ ಮಾಡಲು ಪುರಾಣ ಕಥೆಗಳನ್ನು ಪಠ್ಯದಲ್ಲಿ ಜೋಡಿಸಲಾಗುತ್ತಿತ್ತು. ಆ ಕಥೆಗಳು ಮಕ್ಕಳಲ್ಲಿ ಯಾಧೃಚ್ಛಿಕವಾಗಿ ಮೌಲ್ಯಗಳ ಬೇರನ್ನಿಳಿಸುತ್ತಿದ್ದುವು. ಮೌಲ್ಯಗಳು ಹೃದಯವನ್ನು ಮುಟ್ಟಬೇಕಾದ ಸಂಗತಿಗಳು. ಇಂದು ಮೌಲ್ಯಗಳು ಕಿವಿಯನ್ನು ಮಾತ್ರ ಮುಟ್ಟುವ ಸರಕುಗಳಾಗಿವೆ. ಮೌಲ್ಯದ ಅನುಭವಗಳನ್ನು ನೀಡುವ ಘಟನಾವಳಿಗಳ ಬಳಕೆಯೂ ದೂರವಾಗುತ್ತಿದೆ. ಗೋವಿನ ಹಾಡು, ರಾಜಾ ಹರಿಶ್ಚಂದ್ರ, ರಾಜಾ ಶಿಬಿ, ಭಕ್ತ ಪ್ರಹ್ಲಾದ, ಪುರಂದರ ದಾಸರು, ಕನಕದಾಸರು, ಸಂತ ಕಬೀರದಾಸರು, ಶೀಶುನಾಳ ಶರೀಫರು, ಏಸು ಕ್ರಿಸ್ತ ಮೊದಲಾದವರ ಕಥೆಗಳು ಜಾತಿ ಮತ್ತು ಧರ್ಮದ ನೆಪದಲ್ಲಿ ಪಠ್ಯದಿಂದ ನೇಪಥ್ಯಕ್ಕೆ ಸೇರುತ್ತಿವೆ. 
      ಇಂದಿನ ಬೇಡಿಕೆ ಬೌದ್ಧಿಕತೆಯನ್ನು ಮಾತ್ರವೇ ಬಲಗೊಳಿಸುವ ಮಾಹಿತಿ ಶಿಕ್ಷಣ. ಸಮಗ್ರ ಶಿಕ್ಷಣವೆನ್ನುವುದು ಕಾಗದ ಅಥವಾ ದಾಖಲೆಗಳಿಗೆ ಮಾತ್ರವೇ ಸೀಮಿತ. ದೇಶ, ದೇಹ ಮತ್ತು ದೇವರ ಬಗ್ಗೆ ಮಕ್ಕಳಿಗೆ ಸಮರ್ಪಕ ಜ್ಞಾನ ಬೇಡವೇ? ಎಲ್ಲ ವಿಷಯಗಳಲ್ಲಿ ಶೇಕಡಾ ನೂರು ಅಂಕಗಳ ಸಾಧನೆ ಬಯಸುವ ಪಾಲಕರು ಮೌಲ್ಯಗಳಲ್ಲೂ ಶೇಕಡಾ ನೂರು ಅಂಕ ಪಡೆಯುವ ಬಗ್ಗೆ ಪ್ರತಿಪಾದಿಸುವುದಿಲ್ಲ ಏಕೆ?. ಮೌಲ್ಯವೆಂದರೆ ಬೆಲೆ ಎಂದರ್ಥ. ಬದುಕಿನಲ್ಲಿ ಮೌಲ್ಯಗಳು ಎರಕವಾದರೆ ಆ ಬದುಕು ಸಾರ್ಥಕ. ಮಕ್ಕಳಿಗೆ ಮೌಲ್ಯಗಳನ್ನು ಕಲಿಸಲು ಮನೆಯೆ ಮಾದರಿಯಾಗಬೇಕು. ಹಿಂದೆ ಅಜ್ಜ, ಅಜ್ಜಿಯರು ಮೊಮ್ಮಕ್ಕಳಲ್ಲಿ ಮೌಲ್ಯ ತುಂಬುವ ಮುಖ್ಯ ಸ್ಥಂಭಗಳಾಗಿದ್ದರು. ಇಂದು ಬಹಳ ಮನೆಗಳಲ್ಲಿ ಕಾರಣಾಂತರಗಳಿಂದ ಅಜ್ಜ ಅಜ್ಜಿಯರ ಜೊತೆಗೆ ಮೊಮ್ಮಕ್ಕಳಿರುವುದಿಲ್ಲ. ಹೆತ್ತವರಿಗಾದರೋ ಅವರ ವೇಳಾಪಟ್ಟಿಯಲ್ಲಿ ಸಮಯವೇ ಸಿಗುವುದಿಲ್ಲ. ತರಗತಿಗಳ ಸಾಪ್ತಾಹಿಕ ವೇಳಾ ಪಟ್ಟಿಯಲ್ಲಿ ನೀತಿ ಅವಧಿಗಳು ಹೆಸರಿಗೆ ಮಾತ್ರವಾಗಿದ್ದು ಆ ಅವಧಿಗೆ ‘ಸಿಲಬಸ್ ‘ ಪ್ರವೇಶಿಸುತ್ತದೆ. ಇರುವ ಒಂದು ಅಥವಾ ಎರಡು ಅವಧಿ ಮಕ್ಕಳ ಮನಸನ್ನು ಬೆಳೆಸಲು ಬಳಕೆಯಾಗದೆ ಬುದ್ಧಿಯನ್ನು ಮಾತ್ರ ಬೆಳೆಸಲು ಬಳಕೆಯಾಗುತ್ತಿರುವುದು ದುರ್ದೈವ. ಮೌಲ್ಯಗಳನ್ನು ಸೂಕ್ತ ರೀತಿಯಲ್ಲಿ ವಿವರಿಸೋಣ ಎಂದರೆ ಶಿಕ್ಷಕರಿಗೂ ಕೆಲಸದ ವಿಪರೀತ ಹೊರೆ ಇದೆ. ಜ್ಞಾನ ವಿಷಯದಲ್ಲಿ ಸಾಮರ್ಥ್ಯ ತುಂಬಲೇ ಬೇಕಾದ ಅನಿವಾರ್ಯತೆಯ ನಡುವೆ ಮೌಲ್ಯ ಸಾಮರ್ಥ್ಯ ತುಂಬುವ ಕರ್ತವ್ಯ ಅನುದ್ದೇಶಿತವಾಗಿಯೇ ಗೌಣವಾಗುತ್ತದೆ. 
ಹೆತ್ತವರ ಆಶಯವು ಸಾಮಾಜಿಕ ಕಳಕಳಿಗಿಂತ ಭಿನ್ನವಾಗಿ ಆರ್ಥಿಕ ಉತ್ಪಾದನೆಯತ್ತ ಸಾಗುತ್ತಿವೆ. ರಾಜಕೀಯ ಮೇಲಾಟದಲ್ಲಿ ಸುಳ್ಳುಗಳು, ಆರೋಪಗಳು, ಅಸಹಿಷ್ಣುತೆ, ಹಣ ಸಂಗ್ರಹ ಮುಂತಾದ ವಿಚಾರಗಳು ಮಹತ್ವ ಪಡೆಯುತ್ತಿವೆ. ತತ್ವ ಸಿದ್ಧಾಂತಗಳು ಮೂಲೆ ಪಾಲಾಗುತ್ತಿವೆ. ಮಕ್ಕಳಿಗೆ ಇವುಗಳೇ ಆದರ್ಶವಾಗುವುದು ಮಕ್ಕಳ ತಪ್ಪಲ್ಲ. ಸಾಮಾಜಿಕ ಜಾಲ ತಾಣಗಳ ಬಹಳಷ್ಟು ಪ್ರಸರಣಗಳು ಮತ್ತು ಪ್ರಕರಣಗಳು ಮೌಲ್ಯಗಳನ್ನು ದಾರಿ ತಪ್ಪಿಸುತ್ತಿವೆ
ಎಳವೆಯಿಂದಲೇ ವೈದ್ಯನಾಗಿ, ಇಂಜಿನಿಯರನಾಗಿ, ಮಂತ್ರಿಯಾಗಿ, ವ್ಯಾಪಾರಿಯಾಗಿ ಶ್ರೀಮಂತರಾದವರನ್ನೇ ತೋರಿಸಿ ಹಾಗೆಯೇ ಆಗು ಎಂದು ತಾಕೀತು ಮಾಡುವ ಪಾಲಕರು ಬದಲಾಗಬೇಕು. ನ್ಯಾಯದ ದುಡಿಮೆ, ಪ್ರಾಮಾಣಿಕ ಸಂಪಾದನೆ ಮಾಡುವ ಬಡವನ ಜೀವನಕ್ರಮವನ್ನು ವಿಜೃಂಬಿಸುವ ಕೆಲಸಗಳು ಆಗಬೇಕು. ಸಿರಿತನ, ಅಧಿಕಾರ, ಐಷಾರಾಮಿ ಜೀವನವನ್ನು ಮಾತ್ರ ವಿಜೃಂಭಿಸುವುದು ಶೂನ್ಯವಾಗಬೇಕು. ಭಿಕ್ಷಕುಕನಲ್ಲಿರುವ ಆದರ್ಶಗಳನ್ನು ನೋಡುವಲ್ಲಿ ಕುರುಡತನವಿರಬಾರದು. ಜಾತಿ, ವರ್ಗಗಳನ್ನು ಮೀರಿದ ಸಮಾನತೆಯ ದೃಷ್ಟಿ ಎಲ್ಲರದಾದರೆ ಬಹಳ ಸೊಗಸು. ಮೌಲ್ಯಗಳ ಮೇಲೆ ಅತಿಕ್ರಮಣಗಳು ವಿಜೃಂಭಿಸಬಾರದು. ಶಿಕ್ಷೆಯ ಮೂಲಕ ಶಿಕ್ಷಣ ಪಡೆದ ಕಾಲ ಅಂದು, ಮಕ್ಕಳಿಗೆ ಹೆದರಿಯೇ ಬದುಕುವ ಹೆತ್ತವರ ಮತ್ತು ಬೋಧಕರ ಪಾಡು ಕಾಣುವ ಕಾಲ ಇಂದು. ಮನೋಭಾವ ಬದಲಿದಂತೆ ಮೌಲ್ಯಗಳು ಬದಲಾಗುವುದು ಯೋಗ್ಯವಲ್ಲ. ರಸಪ್ರಶ್ನೆಯಲ್ಲಿ ಗೆದ್ದವರಿಗೆ, ನಾಲಗೆಯಲ್ಲಿ ಚಮಚ ಇಟ್ಟು ಓಡುವ ಸ್ಪರ್ಧೆಯ ಮೊದಲ ಸ್ಥಾನಿಗಳಿಗೆ ಪುರಸ್ಕಾರ ಮಾಡುವ ನಾವು ಸತ್ಯ ಹೇಳಿದವರಿಗೆ, ಕರುಣೆ ತೋರಿದವರಿಗೆ, ಸಹಾಯ ಮಾಡಿದವರಿಗೂ ಪುರಸ್ಕಾರ ನೀಡಬೇಕು. ಬಿದ್ದು ಸಿಕ್ಕಿದ ಹಣವನ್ನು ಆ ಹಣದ ವಾರಸುದಾರರು ಸಿಗದೇ ಇದ್ದಾಗ ದೇವರ ಹುಂಡಿಗೋ, ಬಡವನಿಗೋ, ಕೊಡುವುದು ಮೌಲ್ಯವಾಗುತ್ತದೆ. ಪುರಸ್ಕಾರಕ್ಕೆ ಮೌಲ್ಯಗಳೂ ಮಾನದಂಡವಾಗಲಿ.
ಗ್ರಂಥಾಲಯಗಳ ಕೊರತೆಯೂ ಮೌಲ್ಯವರ್ಧನೆಯಲ್ಲಿ ತೊಡಕು. ಇಂದು ಮೊಬೈಲ್ ವಾಚಕರು ಅಧಿಕ. ಪುಸ್ತಕವಾಚಕರದು ಅತ್ಯಲ್ಪ ಸಂಖ್ಯೆ. ಮೊಬೈಲ್ ಬೆಲೆಬಾಳುವುದನ್ನು ಖರೀದಿಸುವರು. ಜುಜುಬಿ ಬೆಲೆಯ ಮೌಲ್ಯ ವರ್ಧಕ ಪುಸ್ತಕಗಳತ್ತ ಕಣ್ಣು ಹಾಯಿಸುವವರು ವಿರಳ. ಪುಸ್ತಕ ಖರೀದಿಸಿದುದರಲ್ಲಿ ಶೇಕಡಾ ಐವತ್ತು ಮಂದಿ ಓದುವರು, ಉಳಿದವರು ಕಪಾಟಿನಲ್ಲಿ ಇಡುವರು. ಪುಸ್ತಕ ಪ್ರೀತಿ ಮೌಲ್ಯವರ್ಧನೆಯಲ್ಲಿ ಮಹಾ ಪಾತ್ರ ವಹಿಸುತ್ತದೆ. ಅದಕ್ಕಾಗಿ ಮನೆ, ಶಾಲೆ, ಊರು ಗ್ರಂಥಾಲಯ ಹೊಂದಿರಲೇ ಬೇಕು.
     ಭಾವ, ರಸ ಮತ್ತು ತತ್ವಗಳನ್ನು ಬಿಂಬಿಸುವ ಚಟುವಟಿಕೆಗಳು ಮರೆಯಾಗುತ್ತಿವೆ. ಮಾತೆಯ ಕೈಯಿಂದ ಎಳೆಯ ಮಗು “ಆಯಾ” ಳ ಕೈಸೇರುವುದೂ ಮೌಲ್ಯದ ಬೆಳವಣಿಗೆಗೆ ಮಾರಕ. ಅಪ್ಪನ ಅಧಿಕಾರ, ಅಮ್ಮನ ಮಮಕಾರ ಶೂನ್ಯವಾಗುತ್ತಿದೆ. ನಮಗೊಂದೇ ಸಾಕು ಎಂಬ ಸಿದ್ದಾಂತ ಒಡಹುಟ್ಟಿನ ಪ್ರೀತಿಗೂ ಸಂಚಕಾರ ತಂದಿದೆ. ಮೌಲ್ಯ ಮತ್ತು ಸಂಸ್ಕಾರ ಹಿರಿಯರ ಮೂಲಕ ಹರಿದುಬರಬೇಕು. ಮೌಲ್ಯಗಳು ಅನುಕರಣೆಯ ವಸ್ತುವೇ ಹೊರತು ಆಲಿಸುವ ವಸ್ತುವಲ್ಲ. ಆದರ್ಶ ಅದೃಶ್ಯವಾಗುತ್ತಿದೆಯಲ್ಲವೇ? ಅನುಕರಣೆಯಿಂದ ಮೌಲ್ಯ ಬಲವಾಗುತ್ತದೆ. ಆಲಿಸಿದ ಮೌಲ್ಯಗಳು ಪಾಲನೆಯಾಗಲು ಸಾಧ್ಯವಿಲ್ಲ. ಮೌಲ್ಯ ಜಾಗರಣೆಯಿರಲಿ. ನಮಸ್ಕಾರ
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article