-->
ಅಕ್ಕನ ಪತ್ರ - 48 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 48 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 48 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1ಅಕ್ಕನ ಪತ್ರ 48ಕ್ಕೆ ಶಿಶಿರನ ಉತ್ತರ
      ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ಪ್ರೀತಿ ಮತ್ತು ಗೌರವದ ನಮಸ್ಕಾರಗಳು. ನಾನು ಕ್ಷೇಮವಾಗಿರುವೆನು. ನೀವು ಕ್ಷೇಮವಾಗಿರುವಿರಿ ಎಂದು ಭಾವಿಸುತ್ತೇನೆ. ನಿಮ್ಮ ಪತ್ರವನ್ನು ಮೋಡಗಳು ಓದಿದವೋ ಏನೋ! ಈ ವಾರದಲ್ಲಿ ಮೊದಲ ಮಳೆ ಹನಿಗಳನ್ನು ಕಂಡೆ. ಮುಗಿಲಿನಿಂದ ಇಳೆಗೆ ಇಳಿದ ಮಳೆ ಹನಿಗಳು ನಮಗೆ, ಪ್ರಾಣಿ ಪಕ್ಷಿಗಳಿಗೆ, ಗಿಡ ಮರಗಳಿಗೆ ನವ ಚೈತನ್ಯ ಮೂಡಿಸಿತು.
       ನಮ್ಮದೇ ಊರಿನ ಛಲಗಾರ ಸೃಜನ್ ರವರು 24ಅಡಿ‌ ಆಳದ ಬಾವಿಯನ್ನು ಒಬ್ಬಂಟಿಯಾಗಿ ಅಗೆದ ಸುದ್ದಿಯನ್ನು ಕೇಳಿದಾಗ ನನಗೆ ಆಶ್ಚರ್ಯದ ಜೊತೆಗೆ ಅವರ ಮೇಲೆ ಗೌರವದ ಭಾವನೆಗಳು ಹುಟ್ಟಿದವು. ಅವರು ನೀರಿಗಾಗಿ ಪಟ್ಟ ಪರದಾಟ, ಅವರ ದೃಢ ಸಂಕಲ್ಪ ಹಾಗೂ ಒಬ್ಬಂಟಿಯಾಗಿ ಬಾವಿಯನ್ನು ಅಗೆದ ಬಗೆ ನನಗಂತೂ ಊಹಿಸಲೂ ಸಾಧ್ಯವಿಲ್ಲ. ಅವರ ಪರಿಶ್ರಮಕ್ಕೆ ತಕ್ಕ ಫಲ ನೀಡಿದ ಪ್ರಕೃತಿ ಮಾತೆಗೆ ನನ್ನ ವಂದನೆಗಳು. ನೀವು ಪತ್ರದಲ್ಲಿ ಬರೆದ ಸೃಜನ್ ರವರ ಸಾಧನೆ ಓದುತ್ತಿರುವಾಗ ತಟ್ಟನೆ ನನಗೆ ಕಾಮೇಗೌಡರ ನೆನಪಾಯಿತು.
    ಭಗೀರಥರೆಂದೇ ಪ್ರಸಿದ್ಧರಾದ ಮಂಡ್ಯ ಜಿಲ್ಲೆಯ ದಾಸನದೊಡಿ ಗ್ರಾಮದ ಕಾಮೇಗೌಡರು ನಿಜಕ್ಕೂ ಪ್ರಾಣಿ ಪಕ್ಷಿಗಳಿಗೆ ಭಗೀರಥರೇ..... ಯಾವುದೇ ಸ್ವಾರ್ಥವಿಲ್ಲದೆ ಪ್ರಾಣಿ ಪಕ್ಷಿಗಳಿಗಾಗಿ ಕುಂದನಿ ಬೆಟ್ಟದಲ್ಲಿ 16 ಕೆರೆ - ಕಟ್ಟೆಗಳನ್ನು ಒಬ್ಬರೇ ಕಟ್ಟಿ ಜನರ ನಡುವೆ ಮಿನುಗಿದ ಅಪರೂಪದ ವ್ಯಕ್ತಿ.
    ಶಾಲೆಯ ಮೆಟ್ಟಿಲನ್ನೇ ಹತ್ತದ ಕಾಮೇಗೌಡರು ಬಾಲ್ಯದಲ್ಲೇ ಕುರಿ ಕಾಯುವ ಕೆಲಸವನ್ನು ಕುಂದನಿ ಬೆಟ್ಟದಲ್ಲಿ ಮಾಡುತ್ತಿದ್ದರು. ಬೇಸಿಗೆ ಕಾಲದಲ್ಲಿ ಕುಂದನಿ ಬೆಟ್ಟದಲ್ಲಿ ಕುಡಿಯುವ ನೀರಿಗಾಗಿ ಪ್ರಾಣಿ ಪಕ್ಷಿಗಳ ಪರದಾಟವನ್ನು ಕಂಡು ಏನನ್ನಾದರೂ ಮಾಡಬೇಕಲ್ಲ ಎಂದು ಯೋಚಿಸಿ ಮೊದಲಿಗೆ ಸಣ್ಣ ಸಣ್ಣ ಗುಂಡಿ ತೋಡಲು ಆರಂಭಿಸಿದರು. ಮಳೆ ಬಂದಾಗ ಗುಂಡಿಗಳಲ್ಲಿ ನೀರು ತುಂಬೀ ಪ್ರಾಣಿ ಪಕ್ಷಿಗಳು ಗುಂಡಿಗಳ ಮೂಲಕ ನೀರು ಕುಡಿಯುವುದನ್ನು ಕಂಡು ಸಂಭ್ರಮಿಸಿದರು. ಅನಂತರ 12ನೇ ವಯಸ್ಸಿನಲ್ಲಿ ಕೆಲವು ಕುರಿಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಕೆರೆ - ಕಟ್ಟೆ ಕಟ್ಟುವ ಕಾರ್ಯವನ್ನು ಆರಂಭಿಸಿದರು. ಪ್ರಾರಂಭದಲ್ಲಿ ಕೆಲವರು ಗುಂಡಿಗಳನ್ನು ಮುಚ್ಚುತ್ತಿದ್ದರು ಮತ್ತೆ ಕೆಲವರು ಅರಣ್ಯಾಧಿಕಾರಿಗಳಿಗೆ ದೂರು ಕೊಟ್ಟರು. ಅಧಿಕಾರಿಗಳು ಬಂದು ಗುಂಡಿ ತೋಡದಂತೆ ಎಚ್ಚರಿಕೆ ನೀಡಿದರು. ಆದರೆ ಅವರು ಇವುಗಳಿಗೆ ಹೆದರದೆ ತಮ್ಮ ಕೆರೆ ಕಟ್ಟುವ ಕೆಲಸವನ್ನು ಮುಂದುವರಿಸಿದರು.
     86 ವರ್ಷಗಳ ಜೀವನಾವಧಿಯಲ್ಲಿ 16ಕಟ್ಟೆಗಳನ್ನು ಕಟ್ಟಿ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದರೂ ಪ್ರಶಸ್ತಿಗಳ ಮೂಲಕ ಬಂದ ಹಣವನ್ನು ಎಂದೂ ತಮ್ಮ ಸ್ವಂತಕ್ಕೆ ಬಳಸಿಕೊಳ್ಳಲಿಲ್ಲ.
   ಕಾಮೇಗೌಡರ ತರಹ ನಮಗೆ ಕಟ್ಟೆಗಳನ್ನು ಕಟ್ಟಲು ಸಾಧ್ಯವಿಲ್ಲದಿದ್ದರೂ ಮನೆಯ ಪಕ್ಕ ಸಣ್ಣ ಗುಂಡಿಗಳನ್ನು ತೋಡಿ ಅಥವಾ ಸಣ್ಣ ತಟ್ಟೆಗಳಿಗೆ ನೀರನ್ನು ಹಾಕುವ ಮೂಲಕ ಪ್ರಾಣಿ ಪಕ್ಷಿಗಳ ಬಾಯಾರಿಕೆಯನ್ನು ನೀಗಿಸುವ ಸಣ್ಣ ಪ್ರಯತ್ನವನ್ನಾದರೂ ಮಾಡೋಣ ಎಂದು ಹೇಳುತ್ತಾ ನನ್ನ ಪತ್ರವನ್ನು ಕೊನೆಗಳಿಸುತ್ತೇನೆ. ಧನ್ಯವಾದಗಳು ಅಕ್ಕ.
.................................................. ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
   


     ನಮಸ್ತೆ ಅಕ್ಕ ನಾನು ನಿಭಾ.... ನಿಮ್ಮ ಪತ್ರ ಓದಿ ಸಂತೋಷವಾಯಿತು. ಹೌದು ಈಗ ರಜೆ. ಅಜ್ಜಿ ಮನೆಗೆ ಹೋಗಿದ್ದೆ. ಈಗ ಬಂದ ತಕ್ಷಣ ನಿಮ್ಮ ಪತ್ರ ಓದಿ ತುಂಬಾ ಸಂತೋಷವಾಯಿತು. ಈ ಬಿಸಿಲಿಗೆ ಎಷ್ಟು ನೀರು ಕುಡಿದರೂ ಸಾಲುತ್ತಿಲ್ಲ. ನೀವು ಹೇಳಿದಂತೆ ಕೆಲವೊಂದು ವಿಷಯಗಳು ನಮಗೆ ಗೊತ್ತಿದ್ದರೂ ನಮ್ಮ ಮನೆಯವರು ಆ ಕೆಲಸವನ್ನು ಮಾಡಲು ಬಿಡುವುದಿಲ್ಲ. ನಾವಿನ್ನು ಮಕ್ಕಳು ಎಂದು ಹೇಳುತ್ತಾರೆ. ನಮ್ಮ ಮನೆಯಲ್ಲಿ ಇದೇ ಕಥೆ. ಆದರೆ ಈಗ ರಜೆಯಲ್ಲಿ ತುಂಬಾ ಕೆಲಸಗಳ ಅಭ್ಯಾಸವಾಗಿದೆ. ಈ ರಜೆಯಲ್ಲಿ ಎಲ್ಲಾ ಅಂಗಡಿಗಳಲ್ಲೂ ಶಾಲಾ ಕಾಲೇಜು ಮಕ್ಕಳೇ ಕಂಡುಬರುತ್ತಾರೆ. ಅಡಿಕೆ ಸುಲಿಯುವ ಕೆಲಸ ತೆಂಗು ಸುಲಿಯುವ ಕೆಲಸ ಹೀಗೆ ತುಂಬಾ ಕೆಲಸಗಳಲ್ಲಿ ಮಕ್ಕಳೇ ಕಂಡು ಬರುತ್ತಾರೆ. ಈ ರಜೆಯಲ್ಲಿ ದುಡಿಯೋ ಮಕ್ಕಳೇ ಜಾಸ್ತಿ. ನಮ್ಮ ಮನೆಯಲ್ಲಿ ಮಲ್ಲಿಗೆ ಕೃಷಿ ಮಾಡಿದ್ದಾರೆ. ಈ ರಜೆಯಲ್ಲಿ ನಾನು ಆ ಮಲ್ಲಿಗೆಗಳನ್ನು ಕೊಯ್ದು ಕಟ್ಟಿ ಮಾರುತ್ತೇನೆ ಹಾಗೆಯೇ ಹಣ ಸಂಪಾದಿಸುತ್ತೇನೆ. ಹೀಗೆ ಮಾಡಿ ಬಂದ ಹಣದಿಂದ ನನ್ನ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುತ್ತೇನೆ. ಇನ್ನೂ ಒಂದು ತಿಂಗಳು ಇದೇ ರೀತಿ ನಡೆಯುತ್ತದೆ. ನಂತರ ಮತ್ತೆ ಶಾಲೆ ಪ್ರಾರಂಭವಾಗುತ್ತದೆ. ನಾನು ಈ ಕೆಲಸ ಮಾಡುತ್ತಾ ತುಂಬಾ ಸಂತೋಷದಿಂದಿದ್ದೇನೆ. ಹಾಗೆ ನೀವು ಕೂಡ ತುಂಬಾ ಸಂತೋಷದಿಂದ ಇದ್ದೀರಿ ಎಂದು ಹೇಳುತ್ತೇನೆ. ಧನ್ಯವಾದಗಳು ಅಕ್ಕಾ
...................................................... ನಿಭಾ
9ನೇ ತರಗತಿ
ಸ ಪ ಪೂ ಕಾಲೇಜು ಕೊಂಬೆಟ್ಟು
ಪ್ರೌಢ ಶಾಲಾ ವಿಭಾಗ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************     ಪ್ರೀತಿಯ ಅಕ್ಕನಿಗೆ ಸಾನ್ವಿ ಮಾಡುವ ವಂದನೆಗಳು. ನಾನು ಕ್ಷೇಮವಾಗಿದ್ದೇನೆ. ನಿಮ್ಮ ಪತ್ರ ತಲುಪಿತು. 'ಸಾಧಿಸಿದರೆ ಸಬಳವನ್ನೂ ನುಂಗಬಹುದು' ಎಂಬಂತೆ ನಮಗೆ ಪ್ರಯತ್ನಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು. ಉತ್ಸಾಹವಂತರಿಗೆ ಅಸಾಧ್ಯ ಎಂಬುದು ಯಾವುದೂ ಇಲ್ಲ. ಆ ಸಾಧನೆಯಲ್ಲಿ ಅವರ ಪರಿಶ್ರಮದ ಬೆವರು ಇರುತ್ತದೆ. ಆದ್ದರಿಂದ ಅವರು ನಮ್ಮ ಹಿರಿಯರೇ ಆಗಿರಲಿ ಕಿರಿಯರೇ ಆಗಿರಲಿ, ಅವರು ಮಾಡಿದ ಸಾಧನೆಯನ್ನು ನೋಡಿ ಕಲಿಯುವುದು ಸಾಕಷ್ಟಿದೆ. ನಮ್ಮಿಂದ (ಮಾನವನಿಂದ) ಆಗದ ಕೆಲಸ ಯಾವುದೂ ಇಲ್ಲ. ನಾನು ಅಡಿಗೆ ಮಾಡುವುದು, ಕರಕುಶಲ ವಸ್ತುಗಳನ್ನು ತಯಾರಿಸುವುದು, ಗುಡಿಸುವುದು, ನೆಲ ಒರೆಸುವುದು ಮುಂತಾದ ಕೆಲಸಗಳನ್ನು ಹಿರಿಯರ ಪ್ರೇರಣೆಯಿಂದಾಗಿ ಮಾಡುತ್ತೇನೆ. ಇದರಿಂದ ನಮಗೂ ಕಲಿತಂತೆ ಆಗುತ್ತದೆ, ಹಿರಿಯರಿಗೂ ಉಪಕಾರವಾಗುತ್ತದೆ. ಈ ಮಾಹಿತಿಗಾಗಿ ಧನ್ಯವಾದಗಳು ಅಕ್ಕಾ, ಮುಂದಿನ ನಮ್ಮ ಭೇಟಿ ಮುಂದಿನ ಪತ್ರದಲ್ಲಿ.......
.......................................ಸಾನ್ವಿ ಸಿ ಎಸ್ 
6ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
******************************************     ಎಲ್ಲರಿಗೂ ನಮಸ್ಕಾರಗಳು. ನಾನು ಪ್ರಣಮ್ಯ.ಜಿ. ಈ ವಾರ ಅಕ್ಕ ನಮಗಾಗಿ ಬರೆದ ಪತ್ರವನ್ನು ಓದಿದೆ. ತುಂಬಾನೇ ಚೆನ್ನಾಗಿತ್ತು. ನೀರು ಎಲ್ಲಾ ಜೀವರಾಶಿಗಳಿಗೂ ಅತೀ ಅಗತ್ಯವಾದ ದೇವವಿತ್ತ ವರದಾನವಾಗಿದೆ. ನಮಗೆ ಕುಡಿಯಲು ಹಾಗೂ ನಿತ್ಯ ಬಳಕೆಗೆ ಬೇಕಾದ ನೀರು ಸರಿಯಾದ ಪ್ರಮಾಣದಲ್ಲಿ ಈಗಲೂ ದೊರೆಯುತ್ತಿರುವುದರಿಂದ ನೀರಿನ ಮೌಲ್ಯವೇನು ಎಂಬುವುದು ನಮಗಿನ್ನೂ ಮನದಟ್ಟಾಗಿಲ್ಲ. ಯಾಕೆಂದರೆ ಅಗತ್ಯ ಮೀರಿ ನೀರನ್ನು ಪೋಲು ಮಾಡುತ್ತಿರುವ ನಾವು ಬಹುಶಃ, ಬೇರೆ -ಬೇರೆ ಊರುಗಳಲ್ಲಿ ನೀರಿಗಾಗಿ ಪರದಾಡುವ ಜನರ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳದಿರುವುದು ನೋವಿನ ವಿಚಾರವಾಗಿದೆ. ಮಳೆ ಹೀಗೆಯೇ ದೂರ - ದೂರವಾದರೆ ಬರಗಾಲದ ದಾಹ ನಮ್ಮನ್ನು ಕಾಡದೇ ಸುಮ್ಮನೆ ಬಿಡಲಾರದು. ಆದ್ದರಿಂದ ನೀರನ್ನು ಮಿತವಾಗಿ ಬಳಸುತ್ತಾ, ಅದರ ಮೌಲ್ಯವನ್ನು ತಿಳಿದು ನಡೆಯುವುದು ನಮ್ಮೆಲ್ಲರ ಧರ್ಮವಾಗಿದೆ.
       ಅಕ್ಕ ಹೇಳಿದಂತೆಯೇ ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ, ಶಕ್ತಿ, ಉತ್ಸಾಹ ಇರುತ್ತದೆ. ಬೇರೆಯವರ ಕೊಂಕು ಮಾತುಗಳಿಗೆ ಕಿವಿ ಕೊಡದೆ ನಮ್ಮಲ್ಲಿರುವ ಕಲೆಯನ್ನು ಹೊರ ಚಿಮ್ಮಿಸುವಂತಹ ಪ್ರಯತ್ನವನ್ನು ನಾವು ಮಾಡಬೇಕು. "ನುಡಿದು ತೋರಿಸುವುದಕ್ಕಿಂತ, ನಡೆದು ತೋರಿಸಿದರೆ ನಮ್ಮಲ್ಲಿರುವ ಶಕ್ತಿ ಎಲ್ಲರಿಗೂ ತಿಳಿಯುತ್ತದೆ." ಬಿಡುವಿನ ವೇಳೆ ಸಿಕ್ಕಾಗೆಲ್ಲಾ ಕರಕುಶಲ ಕಲೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಒಳ್ಳೆಯ ಹವ್ಯಾಸವಾಗಿದೆ. ಬೇಸಿಗೆಯ ರಜೆಯನ್ನು ಸುಮ್ಮನೆ ಸವೆಸದೆ ಒಳ್ಳೆಯ ರೀತಿಯಲ್ಲಿ ಸವಿಯಬೇಕೆಂದಿದ್ದೇನೆ. ಅಕ್ಕನ ಮುಂದಿನ ಪತ್ರಕ್ಕಾಗಿ ಕಾಯತ್ತಿರುವ .................
.............................................. ಪ್ರಣಮ್ಯ.ಜಿ .
10 ನೇ ತರಗತಿ
ಸಂತ ಜಾರ್ಜ್ ಆಂಗ್ಲಮಾಧ್ಯಮ 
ಪ್ರೌಢ ಶಾಲೆ ನೆಲ್ಯಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************     ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. ಬೇಸಿಗೆ ರಜೆಯಲ್ಲಿ ಮಕ್ಕಳು ಶಿಬಿರಗಳಲ್ಲಿ ಅಥವಾ ಇನ್ನು ಯಾವುದೇ ಉತ್ತಮ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಅವರಲ್ಲಿ ಹುದುಗಿರುವ ಪ್ರತಿಭೆಗಳು ಅನಾವರಣಗೊಳ್ಳಲು ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತವೆ. ಹೀಗೆ ನಾನು ಪಾಲ್ಗೊಂಡ ಶಿಬಿರದ ಬಗ್ಗೆ ಒಂದೆರಡು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಎಪ್ರಿಲ್ ಎರಡನೇ ವಾರದಲ್ಲಿ ನಾನು ಉಪ್ಪಳ ಕೊಂಡೆವೂರಿನಲ್ಲಿ ನಡೆದ ಸನಿವಾಸ ಸಂಸ್ಕೃತ ಶಿಬಿರದಲ್ಲಿ ಭಾಗವಹಿಸಿದ್ದೆನು , ಮತ್ತು ದಿ:- 26-4-23 ರಂದು ಚಿಲಿಪಿಲಿ ಮಂಚಿಯಲ್ಲಿ..... ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಕೂಡ ಭಾಗವಹಿಸಿದ್ದೆನು. ಈ ಶಿಬಿರದಲ್ಲಿ ನಾನು ಯೋಗ ಧ್ಯಾನ ಪ್ರಾಣಾಯಾಮ, ವರ್ಲಿ ಚಿತ್ರಕಲೆ, ವರ್ಣ ಚಿತ್ರಕಲೆ ಮತ್ತು ಇನ್ನೂ ಹಲವಾರು ಚಟುವಟಿಕೆಗಳನ್ನು ನಾನು ಕಲಿತೆನು. ಇಂತಹ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಂಡಾಗ ಸಮಯದ ಸದುಪಯೋಗವಾಗುತ್ತದೆ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ. ಧನ್ಯವಾದಗಳೊಂದಿಗೆ......
........................................... ವೈಷ್ಣವಿ ಕಾಮತ್
6ನೇ ತರಗತಿ 
ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************


ಮಕ್ಕಳ ಜಗಲಿ..... ಅಕ್ಕನ ಪತ್ರ..48
     ಪ್ರೀತಿಯ ಅಕ್ಕನಿಗೆ ನಿಮ್ಮ ಪ್ರೀತಿಯ ಲಹರಿಯು ಮಾಡುವ ನಮಸ್ಕಾರಗಳು. ಅಕ್ಕ ಈಗೀಗ ತುಂಬಾ ಬಿಸಿಲು. ಮತ್ತು ತುಂಬಾ ಸೆಖೆ. ಒಂದು ಕಡೆ ಕುಳಿತುಕೊಳ್ಳಲು ಕಷ್ಟ ಎನಿಸುತ್ತಿದೆ. ಕಾಡು ಕಡಿದು ನಾಡು ಮಾಡಲು ಹೊರಟ ಮನುಷ್ಯ ಮುಂದೊಂದು ದಿನ ಈ ಬಿಸಿಲಿನ ತಾಪಕ್ಕೆ ಗುರಿಯಾಗುವನೇನೋ ಅನಿಸುತ್ತಿದೆ..!! ಹೌದು ಅಕ್ಕ... ಸೃಜನ್ ಅವರು ಒಬ್ಬರೇ ತಮ್ಮ ಜಾಗದಲ್ಲಿ ಬಾವಿಯನ್ನು ತೋಡಿದ ಸುದ್ದಿಯನ್ನು ನಾನು ಓದಿದ್ದೇನೆ. ನನಗೆ ತುಂಬಾ ಆಶ್ಚರ್ಯವಾಯಿತು ಮತ್ತು ಅವರ ಕಾರ್ಯ ಸಾಧನೆ ಯ ಬಗ್ಗೆ ಹೆಮ್ಮೆಯೂ ಅನಿಸ್ತು.. ನಮಗೆಲ್ಲರಿಗೂ ಅವರ ಕೆಲಸವು ಮಾರ್ಗದರ್ಶಿಯಾಗಿದೆ. ಗ್ರಾಮ ಪಂಚಾಯತಿಯ ನೀರು ನಮಗೆ ತುಂಬಾ ಚೆನ್ನಾಗಿ ಬರುತ್ತಿದೆ... ಹಾಗಾಗಿ ನೀರಿನ ಸಮಸ್ಯೆ ನಮ್ಮಲ್ಲಿ ಇಲ್ಲ. ನಾನು ದಿನಾಲು ಗಿಡಗಳಿಗೆ ನೀರು ಹಾಕುತ್ತೇನೆ ಹಾಗು ಹಕ್ಕಿಗಳಿಗೂ ನೀರನ್ನು ಅಲ್ಲಲ್ಲಿ ಇಟ್ಟಿರುತ್ತೇನೆ. ನಾನು ರಜೆಯಲ್ಲಿ ಪುಸ್ತಕಗಳನ್ನು ಓದುತ್ತೇನೆ... ನನ್ನ ಅಜ್ಜಿಗೆ ಕೆಲಸದಲ್ಲಿ ಸಣ್ಣ ಪುಟ್ಟ ಸಹಾಯವನ್ನು ಮಾಡುತ್ತಿರುತ್ತೇನೆ. ಅಕ್ಕ ನಿಮ್ಮ ಮುಂದಿನ ಪತ್ರಕ್ಕೆ ನಾನು ಕಾಯುತ್ತಿರುತ್ತೇನೆ. ಇಂತಿ ನಿಮ್ಮ ಪ್ರೀತಿಯ ಲಹರಿ.
................................................. ಲಹರಿ ಜಿ.ಕೆ.
8ನೇ ತರಗತಿ
ತುಂಬೆ ಆಂಗ್ಲ ಮಾಧ್ಯಮ ಶಾಲೆ ತುಂಬೆ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************     ನಮಸ್ತೆ ಅಕ್ಕ ನಾನು ಸಿಂಚನಾ ಶೆಟ್ಟಿ. ನಾನು ತುಂಬಾ ಚೆನ್ನಾಗಿದ್ದೇನೆ ನೀವು ಕೂಡಾ ಕ್ಷೇಮವಾಗಿರುವಿರಿ ಎಂದು ಭಾವಿಸುತ್ತೇನೆ. ನಾನು ನನ್ನ ಅಣ್ಣ ತಮ್ಮಂದಿರು ಎಲ್ಲರೂ ಕೂಡಿ ಬೇಸಿಗೆ ರಜೆಯನ್ನು ಸಂಭ್ರಮಿಸುತ್ತಿದ್ದೇವೆ. ಎಲ್ಲಾ ಆಕ್ಟಿವಿಟೀಸ್ ಅನ್ನು ಜೊತೆ ಸೇರಿ ಮಾಡುತ್ತಿದ್ದೇವೆ. ಬೇಸಿಗೆ ರಜೆಯಲ್ಲಿ ನೀರು ಕಡಿಮೆ ಇದ್ದುದರಿಂದ ನಮಗೆ ಗಿಡ ಬೆಳೆಯಲು ತುಂಬಾ ಕಷ್ಟವಾಗುತ್ತಿದೆ. ನಿಮ್ಮ ಊರಿನಲ್ಲಿ ಬೇಸಿಗೆ ಹೇಗಿದೆ.... ಈ ಅವಕಾಶವನ್ನು ಮಾಡಿಕೊಟ್ಟ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.
............................................ ಸಿಂಚನಾ ಶೆಟ್ಟಿ 
5ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇಡಿಗುಳಿ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************ಪ್ರೀತಿಯ ಅಕ್ಕನಿಗೆ ಜನನಿ ಮಾಡುವ ನಮಸ್ಕಾರಗಳು..... ನಾನು ಚೆನ್ನಾಗಿದ್ದೇನೆ. ನೀವು ಚೆನ್ನಾಗಿದ್ದೀರಾ. ಬೇಸಿಗೆ ರಜೆಯಲ್ಲಿ ನಾನು ನೀರಿನ ಬೆಲೆಯನ್ನು ಕಂಡೆನು. ಪ್ರಾಣಿ, ಪಕ್ಷಿಗಳು, ಮನುಷ್ಯರು, ಸಕಲ ಜೀವರಾಶಿಗಳು ನೀರಿಗಾಗಿ ಪರದಾಟ ಮಾಡುತ್ತಿರುವುದನ್ನು ನೋಡಿದೆನು. ನಮ್ಮ ಮನೆಯಲ್ಲಿ ನಾವು ಪ್ರತಿದಿನ ಪಕ್ಷಿಗಳಿಗೆ ನೀರು, ಬಾಳೆಹಣ್ಣಿನ ಗೊನೆ ಹಾಗೂ ಅನ್ನವನ್ನು ಇಡುತ್ತೇವೆ. ಇದನ್ನು ಪಕ್ಷಿಗಳು ಪ್ರತಿದಿನ ಬಂದು ತಿಂದು ಹೋಗುತ್ತವೆ. ನಮ್ಮಮನೆಯಲ್ಲಿ ನಾನು ಅಪ್ಪ, ಅಮ್ಮ ಹೇಳಿದ ಸಣ್ಣಪುಟ್ಟ ಕೆಲಸವನ್ನು ಮಾಡುತ್ತೇನೆ. ನಮಗೆ ಸಾಧ್ಯವಿಲ್ಲ ಎಂದು ಕುಳಿತರೆ ನಾವು ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ. ಹಟ, ಛಲ, ಸಾಧನೆ ಒಂದಿದ್ದರೆ ನಾವು ಯಾವುದನ್ನೂ ಸಾಧಿಸಬಹುದು. ಊಟ ಆದ ಕೂಡಲೇ ಊಟ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸುತ್ತೇನೆ. ರಜೆಯಲ್ಲಿ ನಾನು ಚಿತ್ರ ಮಾಡಲು, ಕ್ರಾಫ್ಟ್ ಮಾಡಲು, ಸೈಕಲ್ ತುಳಿಯುವುದು, ಕುಣಿತ ಭಜನೆ ಕಲಿತೆನು, ನೃತ್ಯಾಭ್ಯಾಸ ಮಾಡುತ್ತೇವೆ, ಮೆಹಂದಿ ಇಡಲು ಕಲಿತೆನು, ಕರಕುಶಲ ಕಲೆಗಳನ್ನು ತಿಳಿದುಕೊಳ್ಳುವುದು, ಅಡಿಕೆ ಸುಲಿಯುವುದು, ಹೀಗೆ ಹೊಸತನವನ್ನು ಕಲಿತೆನು.
................................................. ಜನನಿ .ಪಿ
7ನೇ ತರಗತಿ 
ದ. ಕ. ಜಿ. ಪಂ. ಉ. ಹಿ. ಪ್ರಾ. ಶಾಲೆ 
ಕೊಯಿಲ, ಕೆ.ಸಿ.ಫಾರ್ಮ 
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
     ನಮಸ್ತೆ ಅಕ್ಕಾ.... ನಾನು ಜೆನಿಶಾ.... ನಿಮ್ಮ ಪತ್ರವನ್ನು ಓದಿ ತುಂಬಾ ಖುಷಿಯಾಯಿತು. ನಾನೂ ಈ ಬೇಸಿಗೆ ರಜೆಯಲ್ಲಿ ಹಲವು ವಿಷಯಗಳನ್ನು ಕಲಿತಿದ್ದೇನೆ. ಅದರಲ್ಲಿ ಪ್ರಮುಖವಾಗಿ ವ್ಯಾಪಾರ ಮಾಡುವುದನ್ನು ತುಂಬಾ ಚೆನ್ನಾಗಿ ಕಲಿತಿದ್ದೇನೆ. ಅಂಗಡಿಯಲ್ಲಿ ಯಾರ ಸಹಾಯವೂ ಇಲ್ಲದೆ ನಾನೊಬ್ಬಳೇ ಈಗ ವ್ಯಾಪಾರ ಮಾಡುತ್ತೇನೆ. ನಮ್ಮ ಮನೆಯ ಸುತ್ತಮುತ್ತ ಅನೇಕ ಗಿಡಮರಗಳಿವೆ. ನಮಗೆ ಸದ್ಯಕ್ಕೆ ನೀರಿನ ಸಮಸ್ಯೆ ಅಷ್ಟೇನಿಲ್ಲ. ಆದರೆ ಆಕಾಶದಲ್ಲಿ ಹಾಡುತ್ತ, ಹಾರಾಡುತ್ತ ಇರುವ ಹಕ್ಕಿಗಳಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಹಾಗಾಗಿ ನಾನು ಚಿಕ್ಕಪುಟ್ಟ ಡಬ್ಬಿಗಳನ್ನು ಗಿಡ ಮರಗಳ ಕೊಂಬೆಗಳಲ್ಲಿಟ್ಟು ಅದರಲ್ಲಿ ನೀರನ್ನು ಇಡುತ್ತೇನೆ. ಇದರಿಂದಾಗಿ ಹಲವು ಪಕ್ಷಿಗಳು ನಮ್ಮ ಮನೆಯ ಸುತ್ತಮುತ್ತಲಿನ ಗಿಡ ಮರಗಳಲ್ಲಿ ಕೂತು ನೀರು ಕುಡಿದು ದಾಹ ನೀಗಿಸಿಕೊಳ್ಳುತ್ತವೆ. ಧನ್ಯವಾದಗಳು ಅಕ್ಕಾ..... ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ....
......................................... ಜೆನಿಶಾ ಪಿರೇರಾ 
8ನೇ ತರಗತಿ 
ಸರಕಾರಿಪ್ರೌಢಶಾಲೆ ಗುರುವಾಯನಕೆರೆ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************Ads on article

Advertise in articles 1

advertising articles 2

Advertise under the article