ನಾ ಮಾಡಿದ ಗಾಡಿಯ ಅನುಭವ.... ಲೇಖನ : ವಿಭವ್ ಎಸ್ , 3ನೇ ತರಗತಿ
Friday, April 7, 2023
Edit
ಲೇಖನ : ವಿಭವ್ ಎಸ್
ಮೂರನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿವಗಂಗೆ
ನೆಲಮಂಗಲ ತಾಲ್ಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
ನಾನು ಈ ವರ್ಷ ಅಂದರೆ 2022 - 23ನೇ ಸಾಲಿನಲ್ಲಿ ಮೂರನೇ ತರಗತಿಗೆ ಶಾಲೆಯ ಪ್ರಾರಂಭೋತ್ಸವದ ದಿನ ಶಾಲೆಗೆ ಬಂದೊಡನೆ ಆಶ್ಚರ್ಯ, ಸಂತೋಷ, ಕುತೂಹಲ ಎಲ್ಲವೂ ಒಟ್ಟಾಗಿ ನನ್ನ ಮನಸ್ಸಿಗೆ ಬಂದವು. ಕಾರಣ ನನ್ನ ತರಗತಿ ಕೋಣೆಯ ಚಿತ್ರಣವೇ ಬದಲಾಗಿತ್ತು. ನಾನು ಒಂದನೇ ತರಗತಿಗೆ ಸೇರಿದಾಗ ಕೋರೋನ ದಿಂದ ಇಡಿ ವರ್ಷ ಶಾಲೆ ತೆರೆಯದೆ ಶಾಲೆಯಲ್ಲಿ ಕಲಿಯಲು ಆಗಲಿಲ್ಲ. ಎರಡನೇ ತರಗತಿಗೆ ಮತ್ತೆ ಅದೇ ಕೋರೋನ ಮುಂದುವರೆದು ನವೆಂಬರ್ ತಿಂಗಳಿಂದ ಐದು ತಿಂಗಳು ಮಾತ್ರ ಶಾಲೆಯಲ್ಲಿ ಕಲಿತೆ. ಆಗ ನಮ್ಮ ಶಿಕ್ಷಕರು ಹಲವು ವಿಭಿನ್ನ ಚಟುವಟಿಕೆ ಮೂಲಕ ನನಗೆ ಪಾಠ ಹೇಳಿ ಕೊಟ್ಟರು. ನಾನು ಚೆನ್ನಾಗಿ ಕಲಿತೆ. ಆಗ ನಾ ನೋಡಿದ ತರಗತಿ ಕೋಣೆಯ ವಾತಾವರಣಕ್ಕೂ ಮೂರನೇ ತರಗತಿಗೆ ಕಾಲಿಟ್ಟು ಶಾಲೆಗೆ ಬಂದಾಗ ನನಗಾದ ಅನುಭವವೇ ಬೇರೆ.
ಏನೋ ಒಂದು ಹೊಸತನ ಕಾಣಿಸಿತು. ತರಗತಿ ಕೋಣೆಯಲ್ಲಿ ಎಂಟು ಕಲಿಕೆಯ ಮೂಲೆಗಳನ್ನು ಜೋಡಿಸಿದ್ದರು. ಅದರ ಮೇಲೆ ಓದುವ/ತರಗತಿ ಗ್ರಂಥಾಲಯ ಮೂಲೆ, ಗಣಿತ ಮೂಲೆ, ಬಿಲ್ಡಿಂಗ್ ಬ್ಲಾಕ್ಸ್ ಮೂಲೆ, ಕಲೆಗೊಂದು ನೆಲೆ/ಕರಕುಶಲ ಮೂಲೆ, ಆಟಿಕೆ ಮೂಲೆ/ಮಾಡಿ ಕಲಿ ಮೂಲೆ, ಗೊಂಬೆಯ ಮೂಲೆ, ಅನ್ವೇಷಣಾ ವಿಜ್ಞಾನ ಮೂಲೆ, ಬರೆಯುವ ಮೂಲೆ ಎಂದು ಬರೆದು ಟೇಬಲ್ ಮೇಲೆ ವಿವಿಧ ಸಾಮಗ್ರಿ ಜೋಡಿಸಿದ್ದರು. ನನಗೆ ಗೊಂಬೆಮೂಲೆ, ಆಟಿಕೆ ಮೂಲೆ, ಬಿಲ್ಡಿಂಗ್ ಬ್ಲಾಕ್ಸ್ ಮೂಲೆ ನೋಡಿದೊಡನೆ ಬಹಳ ಖುಷಿಯಾಯಿತು. ನಮ್ಮ ನಲಿ ಕಲಿ ಶಿಕ್ಷಕರಾದ ಸುಜಾತ ಟೀಚರ್ ರವರನ್ನು ಕೇಳಿದೆ. ಏನು ಟೀಚರ್ ಈ ರೀತಿ ಎಂಟು ಟೇಬಲ್ ಗಳಲ್ಲಿ ಹೀಗೆ ಜೋಡಿಸಿದ್ದೀರಿ ಏಕೆ ? ಎಂದು ಪ್ರಶ್ನಿಸಿದೆ. ಆಗ ನಮ್ಮ ಟೀಚರ್, "ಹೇಳುತ್ತೇನೆ ಮಕ್ಕಳೇ ಮೊದಲು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಮುಗಿಯಲಿ ನಂತರ ಪರಿಚಯ ಮಾಡುತ್ತೇನೆ" ಎನ್ನುತ್ತಾ ಪ್ರಾರಂಭೋತ್ಸವ ಮುಗಿಸಿದರು. ನಂತರ ನನಗೂ ನನ್ನ ನಲಿ ಕಲಿ ಎಲ್ಲಾ ಸ್ನೇಹಿತರಿಗೂ ನಿಧಾನವಾಗಿ ಅರ್ಥವಾಗುವಂತೆ ಪರಿಚಯಿಸಿದರು. "ನೋಡಿ ಮಕ್ಕಳೇ ಈ ಶೈಕ್ಷಣಿಕ ವರ್ಷದಲ್ಲಿ ಒಂದರಿಂದ ಮೂರನೇ ತರಗತಿಗೆ ನಮ್ಮ ಶಿಕ್ಷಣ ಇಲಾಖೆಯು ವಿದ್ಯಾ ಪ್ರವೇಶ ಎಂಬ ವಿನೂತನ ಕಲಿಕೆ ಕಾರ್ಯಕ್ರಮ ಜಾರಿಗೆ ತಂದಿದೆ. ವಿದ್ಯಾ ಪ್ರವೇಶ ಕಲಿಕೆ ಮೂರು ತಿಂಗಳ ಕಾಲ ನಡೆಯುತ್ತದೆ. 72 ದಿನಗಳ ಚಟುವಟಿಕೆಯಾಗಿರುತ್ತದೆ. ಪ್ರತಿದಿನ 8 ಅವಧಿಗಳು ಇರುತ್ತದೆ. ಅದರಲ್ಲಿ ಒಂದು ಅವಧಿ ಈ ಎಂಟು ಕಲಿಕಾ ಮೂಲೆಗಳಲ್ಲಿ ಚಟುವಟಿಕೆಗಳನ್ನು ಮಾಡುತ್ತೀರಿ....." ಎಂದು ಪ್ರತಿ ಕಲಿಕಾ ಮೂಲೆಯಲ್ಲಿ ಮಾಡುವ ಚಟುವಟಿಕೆಯ ಬಗ್ಗೆ ವಿವರಿಸಿದರು. ನನಗೆ ನಮ್ಮ ಟೀಚರ್ ಕಲೆಗೊಂದು ನೆಲೆ , ಕರಕುಶಲ ಮೂಲೆಯಲ್ಲಿ ಮಣ್ಣಿನಿಂದ ಮಾಡಿಟ್ಟಿದ್ದ ಎತ್ತಿನ ಗಾಡಿ ನೋಡಿದ ತಕ್ಷಣ ನಾನು ಈ ರೀತಿ ಗಾಡಿ ಮಾಡಬೇಕು ಎನಿಸಿತು. ತಕ್ಷಣ ನಮ್ಮ ಟೀಚರ್ ಕೇಳಿದೆ, "ನಾನು ನಾಳೆ ಈ ರೀತಿ ಗಾಡಿ ಮಾಡಿ ತರುವೆ" ಎಂದು. ಆಗ ನಮ್ಮ ಟೀಚರ್, "ಬಹಳ ಸಂತೋಷ ನಿನಗೆ ಆ ಸಾಮರ್ಥ್ಯವಿದೆ ವಿಭವ್ ಖಂಡಿತ ಮಾಡು. ವಿಭಿನ್ನ ರೀತಿಯಲ್ಲಿ ಯೋಚನೆ ಮಾಡಿ ಗಾಡಿ ತಯಾರಿಸು ನಿಮ್ಮ ಪೋಷಕರ ಸಹಕಾರ ತೆಗೆದುಕೋ" ಎಂದು ಪ್ರೋತ್ಸಾಹಿಸಿದರು.
ನಾನು ಶಾಲೆಯಿಂದ ಆ ದಿನ ಇದೇ ಯೋಚನೆಯಲ್ಲಿ ಮನೆಗೆ ಹೋದ ತಕ್ಷಣ ನನ್ನ ಕಣ್ಣಿಗೆ ಬಿದ್ದದ್ದು ನಾನು ಜಾತ್ರೆಯಲ್ಲಿ ಆಟವಾಡಲು ತೆಗೆದುಕೊಂಡಿದ್ದ ಮುರಿದ ಕಾರು. ಆಗ ನನಗನ್ನಿಸಿದ್ದು ಇದರ ಚಕ್ರ ಬಳಸಿ ಗಾಡಿ ಮಾಡೋಣ ಎಂದು. ನನ್ನ ತಂದೆಯ ಸಹಾಯ ಪಡೆದು ರಟ್ಟು, ಬಣ್ಣದ ಪೇಪರ್, ಗಮ್ ಬಳಸಿ ಒಂದು ಎತ್ತಿನ ಗಾಡಿ ತಯಾರಿಸಿದೆ. ನನಗೆ ಖುಷಿಯೋ ಖುಷಿ, ಬೆಳಗ್ಗೆ ಶಾಲೆಗೆ ಬಂದು ನಮ್ಮ ಟೀಚರ್ ಗೆ ಅದನ್ನು ತೋರಿಸಿದೆ. ಅವರು ಅದನ್ನು ನೋಡಿ ತುಂಬಾ ಖುಷಿ ಪಟ್ಟರು. ಜಾಣ ಎನ್ನುತ್ತಾ ತಬ್ಬಿಕೊಂಡು ಬೆನ್ನು ತಟ್ಟಿದರು. ಆಗ ನನಗಾದ ಆನಂದಕ್ಕೆ ಪಾರವೇ ಇಲ್ಲ...... ನನ್ನನ್ನು ನಿಲ್ಲಿಸಿ, "ಈ ಗಾಡಿಯನ್ನು ಯಾವ ರೀತಿ ಮಾಡಿದೆ? ಏಕೆ ಮಾಡಿದೆ ಎಂದು ನಿನ್ನ ಮಾತುಗಳಲ್ಲಿ ಹೇಳು ಪುಟ್ಟ" ಎಂದು ಹೇಳಿದರು.
ನಾನು ನನ್ನ ಅನಿಸಿಕೆಯನ್ನು ಎಲ್ಲ ಸ್ನೇಹಿತರ ಮುಂದೆ ಹಂಚಿಕೊಂಡೆ. ಜೊತೆಗೆ ನಮ್ಮ ಶಿಕ್ಷಕರು ಒಂದನೇ ತರಗತಿಗೆ ಆ ದಿನ ದಾಖಲಾಗಿದ್ದ ನನ್ನ ಪುಟ್ಟ ತಂಗಿಯರಂತಿದ್ದ ಮಕ್ಕಳಿಗೆ ನನ್ನ ಗಾಡಿಯನ್ನು ತೋರಿಸುತ್ತಾ , "ವಿಭವ್ ಅಣ್ಣ ನಿಮಗೆ ಆಟವಾಡಲು ಈ ಗಾಡಿ ಮಾಡಿ ತಂದಿದ್ದಾನೆ." ಎಂದು ಹೇಳುತ್ತಾ ಆ ಗಾಡಿಯನ್ನು ಅವರ ಕೈಗೆ ಕೊಡಿಸಿದರು. ಅವರು, "ಹೌದಾ ಅಣ್ಣ! ನಾವು ಇದರಲ್ಲಿ ಆಟವಾಡುತ್ತೇವೆ. ನಾವು ಸಹ ಇಂತಹ ಗಾಡಿ ಮಾಡುತ್ತೇವೆ ಗೊತ್ತಾ" ಎಂದರು. ನಾನು ಎತ್ತಿನಗಾಡಿಯನ್ನು ತಯಾರಿಸಿ ನನಗಾದ ಅನುಭವದ ಖುಷಿಯನ್ನು ನಾನು ಎಂದೂ ಮರೆಯಲು ಸಾಧ್ಯವೇ ಇಲ್ಲ. ಈ ನನ್ನ ಪ್ರೇರಣೆಗೆ ನಮ್ಮ ಶಿಕ್ಷಕರೇ ಕಾರಣ ಅವರಿಗೆ ನನ್ನದೊಂದು ನಮನ...
ಮೂರನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿವಗಂಗೆ
ನೆಲಮಂಗಲ ತಾಲ್ಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
*******************************************