ಓ ಮುದ್ದು ಮನಸೇ ...…...! ಸಂಚಿಕೆ - 29
Tuesday, March 14, 2023
Edit
ಲೇಖಕರು : ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು ,
ದಕ್ಷಿಣ ಕನ್ನಡ ಜಿಲ್ಲೆ
mob : 63610 07190
ಮಕ್ಕಳಿಗೆ ಒಂದೊಳ್ಳೆ ಭವಿಷ್ಯತ್ತನ್ನು ಕಟ್ಟಿಕೊಡಲು ತೆರೆಮರೆಯಲ್ಲಿ ಪಾಲಕರು ಮತ್ತು ಶಿಕ್ಷಕರು ತೋರುತ್ತಿರುವ ಬದ್ಧತೆ ಮತ್ತು ಶ್ರಮವನ್ನು ಯಾರಿಂದಲೂ ಅಳೆಯಲು ಸಾಧ್ಯವಿಲ್ಲ. ಮಕ್ಕಳ ಮಾನಸಿಕ, ದೈಹಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಾಮರ್ಥ್ಯವನ್ನು ಹೆಚ್ಚಿಸಲು ಬೇಕಾದ ಎಲ್ಲಾ ಅವಕಾಶಗಳನ್ನು ಕಟ್ಟಿ ಕೊಡುತ್ತಾ ನಿರಂತರವಾಗಿ ಅವರ ಹಿಂದೆ ನಿಂತು ಪ್ರೋತ್ಸಾಹಿಸುವ ತಂದೆ-ತಾಯಿ ಮತ್ತು ಶಿಕ್ಷಕರು ಮಕ್ಕಳ ನಾಳೆಗಳ ಅಡಿಪಾಯವಾಗಿ ಗಟ್ಟಿಗೊಂಡಿದ್ದಾರೆ.
ಹೀಗೆ ಕಟ್ಟಿಕೊಟ್ಟ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಜ್ಞಾನಾನುಭವಗಳ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಲು ಮಕ್ಕಳ ದಿನನಿತ್ಯದ ಜೀವನದಲ್ಲಿ ಕ್ರಿಯಾತ್ಮಕ ಬಾಗವಹಿಸುವಿಕೆಗೆ ಅವರ ಮಾನಸಿಕ ಆರೋಗ್ಯ ಮತ್ತು ವರ್ತನೆಯು ಅತ್ಯಂತ ಪ್ರಮುಖವಾಗಿದೆ. ಆದರೆ ಇಷ್ಟೆಲ್ಲಾ ಪ್ರಯತ್ನಗಳ ನಡುವೆಯೂ ಬದಲಾದ ಜೀವನ ಶೈಲಿ, ಮಾಧ್ಯಮಗಳ ಪ್ರಭಾವ, ಮತ್ತು ಮೊಬೈಲ್ ಫೋನಿನ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯ ಮಕ್ಕಳಲ್ಲಿ ಮಾನಸಿಕ, ಭಾವನಾತ್ಮಕ ಮತ್ತು ವರ್ತನೆಯ ಸಮಸ್ಯೆಯು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮಕ್ಕಳನ್ನು ಇಂತಹ ಸಮಸ್ಯೆಗಳಿಂದ ಹೊರತರುವ ಪ್ರಯತ್ನದ ಭಾಗವಾದ ಮಕ್ಕಳೊಂದಿಗಿನ ಒಡನಾಟದ ಮೂಲಕ ನಾನು ಗುರುತಿಸಿದ ಅವರ ಸಮಸ್ಯೆಗಳನ್ನು ಪೋಷಕರಾದ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ನಾನು ಈ ಮೂಲಕ ಹಂಚಿಕೊಳ್ಳುತ್ತಿರುವ ಮಾಹಿತಿಗಳು ಮಕ್ಕಳೊಂದಿಗಿನ ಆಪ್ತಸಮಾಲೋಚನೆಯಲ್ಲಿ ಕಂಡುಕೊಂಡ ವಿಚಾರಗಳಾಗಿವೆ. ಇವು ಯಾವುದೇ ವ್ಯಕ್ತಿಗೆ ಸಂಬಂದಿಸಿದ್ದಲ್ಲ ಮತ್ತು ಯಾರಿಗೂ ನೋವುಂಟು ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ. ಮಕ್ಕಳನ್ನು ಇಂತಹ ಸವಾಲುಗಳಿಂದ ಹೊರತಂದು ಅವರನ್ನು ಆರೋಗ್ಯಕರ ಕಲಿಕೆಯ ಮೂಲಕ ಸರ್ವತೋಮುಖ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪ್ರೋತ್ಸಾಹಿಸುವಲ್ಲಿ ಪಾಲಕರು ಮತ್ತು ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪ್ರಸ್ತುತತೆಗೆ ತಕ್ಕಂತೆ ಮಕ್ಕಳನ್ನು ಇನ್ನಷ್ಟು ಅರಿಯುವ ಅನಿವಾರ್ಯತೆಯಿರುವುದರಿಂದ ಈ ವಿಚಾರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ.
ಅತಿಯಾದ ಮೊಬೈಲ್-ಫೋನ್ ಬಳಕೆ, ಆಹಾರ ಸೇವನೆಯಲ್ಲಿನ ವ್ಯತ್ಯಾಸ, ಕೌಟುಂಬಿಕ ವಾತಾವರಣ ಮತ್ತು ಕೋವಿಡ್ ಸಂದರ್ಭದಲ್ಲಿ ಬದಲಾದ ಜೀವನ ಶೈಲಿಯಿಂದಾಗಿ ಬಹುತೇಕ ಮಕ್ಕಳು ಇನ್ಸೋಮ್ನಿಯಾ ಅಂದರೆ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇಷ್ಟೇ ಅಲ್ಲದೆ ಸಿಟ್ಟು, ಮುಂಗೋಪದಂತಹ ಸಮಸ್ಯೆಯೂ ಅವರನ್ನು ಕಾಡುತ್ತಿದೆ. ಮುಖ್ಯವಾಗಿ ಅವರು ತಮ್ಮ ದಿನನಿತ್ಯದ ಬದುಕಿನಲ್ಲಿ ಅಂದರೆ ಕಲಿಕಾ ಸಂದರ್ಭದಲ್ಲಿ, ಶಿಕ್ಷಕರು, ಕುಟುಂಬಸ್ಥರು ಮತ್ತು ಗೆಳೆಯರೊಂದಿಗಿನ ಅಥವಾ ಇತರರೊಂದಿಗೆ ಒಡನಾಟ ಮಾಡುವಾಗ ಸಿಡುಕಿನಿಂದ ವರ್ತಿಸುತ್ತಿದ್ದಾರೆ.
ಬಹು ಸಂಖೆಯ ವಿದ್ಯಾರ್ಥಿಗಳು ಓದು ಮತ್ತು ಇತರ ಚಟುವಟಿಕೆಗಳಲ್ಲಿ ಏಕಾಗ್ರತೆಯ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಓದಿನಲ್ಲಿ ಅವರ ಮನಸ್ಸು ವಿಚಲಿತಗೊಳ್ಳುತ್ತಿದ್ದು ತರಗತಿಯ ಕಲಿಕೆ, ಓದುವುದು ಮತ್ತು ಪರೀಕ್ಷೆಯಲ್ಲಿ ಅವರಿಗೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ. ಭಿನ್ನ ವಿಭಿನ್ನ ಆಲೋಚನೆಗಳು ಅವರ ಮನಸ್ಸನ್ನು ವಿಚಲಿತಗೊಳಿಸುತ್ತಿವೆ. ಇನ್ನು ಪಾಲಕರು ಮತ್ತು ಶಿಕ್ಷಕರ ಮಾರ್ಗದರ್ಶನವನ್ನು ತಿರಸ್ಕರಿಸುವ ವರ್ತನೆಯನ್ನು ಪ್ರಮುಖವಾಗಿ ಮಕ್ಕಳು ರೂಢಿಸಿಕೊಂಡಿದ್ದಾರೆ. ಇದರ ಜೊತೆ-ಜೊತೆಗೆ ಶಿಕ್ಷಕರು, ಪಾಲಕರು, ಒಡಹುಟ್ಟಿದವರು ಮತ್ತು ಗೆಳೆಯರನ್ನು ದ್ವೇಷಿಸುವಂತಹ ಮನೋಭಾವವನ್ನೂ ಮಕ್ಕಳು ಕೋವಿಡ್ ಕಾರಣದಿಂದ ಬೆಳೆಸಿಕೊಂಡಿದ್ದಾರೆ. ಶಿಕ್ಷಕರು ಅಥವಾ ಅವರು ಕಲಿಸುವ ವಿಷಯಗಳ ಮೇಲೂ ಅವರು ನಕಾರಾತ್ಮಕ ಮನಸ್ಥಿತಿಯನ್ನು ಹೊಂದುತ್ತಾ ಓದಿನಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವುದು ಆಘಾತಕಾರಿ ವಿಷಯವಾಗಿದೆ.
ಪ್ರಮುಖವಾಗಿ ಕೋವಿಡ್ ನಂತರ ಹೆಚ್ಚಿನ ವಿದ್ಯಾರ್ಥಿಗಳನ್ನು ಆತಂಕದ ಸಮಸ್ಯೆಯು ಕಾಡುತ್ತಿದೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಮುಖ್ಯವಾಗಿ ಆಳವಾದ ಭಯ, ಹೆಚ್ಚಾದ ಕೋಪ, ಎದೆಯಲ್ಲಿ ನೋವು, ನಡುಕ ಮತ್ತು ಬೆವರು, ಹಾಗೂ ಪೋಭಿಯಾದಂತಹ ರೋಗಲಕ್ಷಣಗನ್ನು ಹೊಂದಿದ್ದಾರೆ. ಇನ್ನು ಕೆಲವು ಮಕ್ಕಳು ಆಳವಾದ ಖಿನ್ನತೆಗೂ ಒಳಗಾಗುತ್ತಿದ್ದು ಆತ್ಮಹತ್ಯೆಯ ಯೋಚನೆ ಮತ್ತು ಪ್ರಯತ್ನಗಳು, ತಮ್ಮನ್ನು ತಾವೇ ಘಾಸಿಗೊಳಿಸಿಕೊಳ್ಳುವುದು, ಏಕಾಂತದಲ್ಲಿ ಅಳುವುದು, ಸಾಮಾಜಿಕ ಸಂಪರ್ಕದಿಂದ ದೂರ ಸರಿಯುವುದು, ನಂಬಿಕೆಯನ್ನು ಕಳೆದುಕೊಳ್ಳುವುದು, ನಿಸ್ಸಹಾಯಕ ಮತ್ತು ನಿಸ್ಪ್ರಯೋಜಕ ಪರಿಸ್ಥಿತಿ, ನಿದ್ರಾ ಹೀನತೆ, ದೈನಂದಿನ ಚಟುವಟಿಕೆಗಳಲ್ಲಿ ಕಳೆದುಕೊಂಡ ಆಸಕ್ತಿ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಒತ್ತಡವು ಇತ್ತೀಚಿನ ದಿನಗಳಲ್ಲಿ ಬಹುತೇಕ ಮಕ್ಕಳನ್ನು ಕಾಡುವ ಒಂದು ಸಾಮಾನ್ಯ ಸಮಸ್ಯೆಯಾಗಿ ರೂಪುಗೊಂಡಿದೆ. ಕೋವಿಡ್ ನಂತರದ ದಿನಗಳಲ್ಲಿ ಇದು ಉಲ್ಬಣಗೊಂಡಿರುವುದು ಆತಂಕಕಾರಿ ಸಂಗತಿ. ತಮ್ಮ ದೈನಂದಿನ ಚಟುವಟಿಕೆಗಳನ್ನು ಮತ್ತು ಸವಾಲುಗಳನ್ನು ನಿಭಾಯಿಸುವಲ್ಲಿ ಅಸಮರ್ಥರಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಕಡಿಮೆ ಅಂಕ ಗಳಿಸುವ, ಪಾಲಕರ ಮತ್ತು ಶಿಕ್ಷಕರ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗುವ ಭಯ, ಗೆಳೆಯರಿಂದ ತಿರಸ್ಕೃತರಾಗುವ, ಅಪಹಾಸ್ಯಕ್ಕೊಳಗಾಗುವ ಆತಂಕ ಅವರಲ್ಲಿ ಪ್ರಮುಖವಾಗಿ ಒತ್ತಡವನ್ನು ಉಂಟುಮಾಡುತ್ತಿದೆ. ಇವುಗಳ ಜೊತೆ ಜೊತೆಗೆ ಸಾಮಾಜಿಕ ಜಾಲತಾಣಗಳು, ಚಲನ ಚಿತ್ರಗಳು, ಅಶ್ಲೀಲ ಚಿತ್ರಗಳ ಸುಲಭ ಲಭ್ಯತೆ, ಮತ್ತು ಗೆಳೆಯರ ಪ್ರಭಾವದಿಂದ ಮಕ್ಕಳು ಅನಾರೋಗ್ಯಕರ ಲೈಂಗಿಕ ಆಸಕ್ತಿಯನ್ನೂ ಬೆಳೆಸಿಕೊಳ್ಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಅಂದರೆ ಸ್ವಂತ ಅಣ್ಣ ತಂಗಿಯರೊಟ್ಟಿಗೆ, ಸುತ್ತಲಿನ ಗೆಳೆಯರೊಟ್ಟಿಗೆ, ಸಹಪಾಠಿಗಳೊಟ್ಟಿಗೆ ಅಥವಾ ದಾಯಾದಿಗಳೊಟ್ಟಿಗೆ ದೈಹಿಕ ಸಂಪರ್ಕ ಸಾಧಿಸುವಸ್ಟು ಉತ್ತೇಜನಗೊಂಡಿದ್ದಾರೆ. ಲೈಂಗಿಕತೆಗೆ ಸಂಬಂಧಿಸಿದಂತೆ ಸಂದೇಶಗಳನ್ನು, ಬೆತ್ತಲೆ ಚಿತ್ರಗಳು ಮತ್ತು ವಿಡಿಯೋಗಳನ್ನು ವಿನಿಮಯ ಮಾಡಿಕೊಳ್ಳುವುದು ಅಥವಾ ಬೆತ್ತಲೆ ವಿಡಿಯೋ ಕರೆಗಳನ್ನು ಮಾಡುವಂತಹ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಡಿರುವುದು ಆಘಾತಕಾರಿ ವಿಷಯವಲ್ಲದೆ ಇನ್ನೇನು...? ಹೆಚ್ಚಾಗಿ 13ರರಿಂದ 18 ವಯೋಮಾನದ ಮಕ್ಕಳಲ್ಲಿ ಇಂತಹ ವರ್ತನೆಗಳು ಕಂಡುಬಂದಿದ್ದು ಅವರಲ್ಲಿ ಕೆಲವರು ಶಿಕ್ಷಕರ ಮೇಲಿನ ತಮ್ಮ ನೋಟವನ್ನೂ ಬದಲಾಯಿಸಿಕೊಳ್ಳುತ್ತಿರುವುದು ಚಿಂತನಾಶೀಲ ವಿಚಾರವಾಗಿದೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಅತಿಹೆಚ್ಚು ಕಂಡುಬರುವ ಸಮಸ್ಯೆಗಳಲ್ಲಿ ಪ್ರೀತಿ ಮತ್ತು ಪ್ರಣಯ ಸಂಬಂಧದಲ್ಲಿನ ಆಸಕ್ತಿಯೂ ಒಂದಾಗಿದೆ. 11 ರಿಂದ 18 ವಯೋಮಾನದ ವಿದ್ಯಾರ್ಥಿಗಳು ಗೆಳೆಯರು, ಸಾಮಾಜಿಕ ಜಾಲತಾಣ, ಚಲನ ಚಿತ್ರ, ನೆರೆಮನೆಯ ವಾತಾವರಣ, ಕುಟುಂಬದ ಸದಸ್ಯರ ಪ್ರಭಾವದಿಂದ ಪ್ರೀತಿ ಅಥವಾ ಪ್ರಣಯ ಸಂಬಂಧದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದರ ಜೊತೆ ಜೊತೆಗೆ ಗೆಳೆಯರ ನಡುವೆ ಕಾದಾಟವೂ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಅಥವಾ ಇನ್ನಿತರೇ ಮಾಧ್ಯಮಗಳ ಮೂಲಕವೂ ನಡೆಯುವ ಈ ಕಾದಾಟವು ಇನ್ನೊಬ್ಬರ ಮೇಲೆ ಒತ್ತಡ ಹೇರುವುದು, ದೈಹಿಕ ಗುದ್ದಾಟ, ಕೀಟಲೆ, ಗುಂಪುಗಾರಿಕೆ, ಕೆಟ್ಟ ಪದಗಳ ಬಳಕೆ, ಸಂಬಂಧ ಕಲ್ಪಿಸುವುದು, ದೂರುವುದು ಮುಂತಾದ ರೀತಿಯ ವರ್ತನೆಗಲ್ಲಿ ನಡೆಯುತ್ತಿದೆ.
ಬಹಳಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ದೇಹಾಕಾರದ ಮೇಲಿನ ಚೇಷ್ಟೆಯಿಂದಾಗಿ ಮಾನಸಿಕ ನೋವನ್ನು ಅನುಭವಿಸುತ್ತಿದ್ದಾರೆ. ಬಿಳಿ ಕೂದಲು, ದೇಹದ ಬಣ್ಣ, ಎತ್ತರ, ಆಕಾರದ ಆಧಾರದಲ್ಲಿ ಅವಮಾನಿಸುವುದು, ನಿರುತ್ತೇಜನ ಗೊಳಿಸುವುದು ಇದರ ಭಾಗವಾಗಿದೆ. ಇದು ಹೆಚ್ಚಿನ ಮಕ್ಕಳನ್ನು ಖಿನ್ನತೆಗೆ ನೂಕುತ್ತಿದೆ. ಇಂತಹ ಖಿನ್ನತೆಗೆ ಒಳಗಾದ ಮಕ್ಕಳು ಆತ್ಮ ಗೌರವದ ಕೊರತೆಯಿಂದ ನಲುಗುತ್ತಿದ್ದಾರೆ. ಓದಿನಲ್ಲಿ ನಿಸ್ಸಹಾಯಕತೆ, ಸ್ವಯಂ ಆಪಾದಿಸಿಕೊಳ್ಳುವ ಮನಸ್ಥಿತಿ, ನಕಾರಾತ್ಮಕ ಆಲೋಚನೆಯಂತಹ ಸಮಸ್ಯೆಗಳು ಅವರನ್ನು ಕಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಮಕ್ಕಳು ಅಕ್ರಮ ಜಾಲತಾಣಗಳಲ್ಲಿಯೂ ಸಕ್ರಿಯರಾಗುತ್ತಿರುವುದು ಅಘಾತಕಾರಿ ಸಂಗತಿ. ಅಕ್ರಮ ಮಾಧ್ಯಮಗಳನ್ನು ಬಳಸುವುದು, ನಿರ್ಬಂಧಿತ ಆನ್-ಲೈನ್ ಆಟಗಳನ್ನು ಆಡುವುದು, ಸಾಮಾಜಿಕ ಜಾಲತಾಣಗಳ ಮೂಲಕ ಅಪರಿಚಿತರೊಂದಿಗೆ ಸಂಪರ್ಕ ಸಾಧಿಸುವುದು, ವಯಕ್ತಿಕ ಅಥವಾ ಇತರರ ಫೊಟೋಗಳನ್ನು ಹಂಚಿಕೊಳ್ಳುವುದು, ಜಾಲತಾಣಗಳ ಮೂಲಕ ಇತರರೊಂದಿಗೆ ಕಾದಾಡುವುದು, ಸಂಬಂದ ಹೊಂದುವುದು, ಜಾಲತಾಣಗಳ ಮೂಲಕ ನಡೆಯುವ ಮೋಸ ಮತ್ತು ವಂಚನೆಗಳಲ್ಲಿ ಭಾಗಿಯಾಗುವಂತಹ ಚಟುವಟಿಗೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇಂತಹ ಕಾರಣಗಳಿಂದ ಬಹುತೇಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತಿಲ್ಲ. ಓದಿನಲ್ಲಿ ಆಸಕ್ತಿಯನ್ನು ಕಳೆದುಕೊಂಡಿರುವ ಅವರು ಮನಸ್ಸನ್ನು ಅಭ್ಯಾಸದಲ್ಲಿ ಕೇಂದ್ರೀಕರಿಸಲಾಗದೆ ಒತ್ತಡಕ್ಕೊಳಗಾಗುತ್ತಿದ್ದಾರೆ. ಇವುಗಳ ಜೊತೆ ಜೊತೆಗೆ ಕೋವಿಡ್ ಕಾರಣದಿಂದ ಹೆಚ್ಚಿನ ಮಕ್ಕಳು ಮೊಬೈಲ್ ಫೋನಿನ ದಾಸರಾಗಿದ್ದರೆ ಇನ್ನೂ ಕೆಲವರು ದೂಮಪಾನ, ಕುಡಿತ ಅಥವಾ ಮಾದಕ ವ್ಯಸನಕ್ಕೂ ಒಳಗಾಗಿರುವುದು ಖೇದಕರ.
ಪ್ರಮುಖವಾಗಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಕೌಟುಂಬಿಕ ವಾತಾವರಣ ಮಕ್ಕಳ ಮಾನಸಿಕ, ಭಾವನಾತ್ಮಕ ಮತ್ತು ಶೈಕ್ಷಣಿಕ ಪ್ರಗತಿಯ ಮೇಲೆ ಅತ್ಯಂತ ಕೆಟ್ಟ ಪ್ರಭಾವ ಬೀರುತ್ತಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ತಂದೆ ತಾಯಿಯ ನಡುವಿನ ಕಲಹ, ವಿಚ್ಚೇದನ, ವಿವಾಹೇತರ ಸಂಬಂಧಗಳು ಮಕ್ಕಳ ಮಾನಸಿಕ, ಭಾವನಾತ್ಮಕ ಮತ್ತು ವರ್ತನೆಯ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಪಾಲಕರ ಅಲಭ್ಯತೆ, ಅಪ್ಪ ಅಮ್ಮ ಇಬ್ಬರೂ ದುಡಿಮೆಯಲ್ಲಿರುವುದು, ಮಕ್ಕಳ ಅತಿಯಾದ ರಕ್ಷಣೆ ಅಥವಾ ಸ್ವಾತಂತ್ರ್ಯ ಕೂಡಾ ಮಕ್ಕಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತಿವೆ.
ಮಕ್ಕಳು ಬೆಳೆಯುವ ಕುಟುಂಬದಲ್ಲಿನ ಕಲಹ, ಇತರರೊಂದಿಗೆ ಮಕ್ಕಳನ್ನು ಹೋಲಿಕೆ ಮಾಡುವುದು, ಕುಟುಂಬಸ್ಥರಿಂದ ಮಕ್ಕಳ ಮೇಲೆ ದೈಹಿಕ ಮತ್ತು ಮಾನಸಿಕ ಕಿರುಕುಳದಂತಹ ಸಮಸ್ಯೆಗಳೂ ಕೂಡ ಮಕ್ಕಳನ್ನು ಒತ್ತಡಕ್ಕೆ ನೂಕಿವೆ. ಅಣ್ಣ ತಮ್ಮಂದಿರು, ದಾಯಾದಿಗಳು, ಇತರ ಕುಟುಂಬಸ್ಥರಿಂದ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದಂತಹ ವರ್ತನೆಯು ನಡೆಯುತ್ತಿರುವುದು ಅವರಲ್ಲಿ ಸೂಕ್ಷ್ಮ ಮಾನಸಿಕ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿರುವುದು ಒಂದುಕಡೆಯಾದರೆ ಮತ್ತೊಂದುಕಡೆ ಮಕ್ಕಳಿಗೆ ಮನೆಯಲ್ಲಿ ಲಭ್ಯವಿರುವ ಏಕಾಂತತೆ, ಅತಿಯಾದ ಸ್ವಾತಂತ್ರ್ಯ ಮತ್ತು ಸವಲತ್ತೂ ಕೂಡ ಅವರು ತಪ್ಪುಗಳನ್ನು ಎಸಗಲು ಉತ್ತೇಜಿಸುತ್ತಿದೆ. ಮಕ್ಕಳ ಭಾವನೆ, ಆಸಕ್ತಿ ಮತ್ತು ಸಾಮರ್ಥ್ಯವನ್ನು ಅರಿಯದೆ ಅತಿಯಾದ ನೀರಿಕ್ಷೆಯೊಂದಿಗೆ ಶೈಕ್ಷಣಿಕ ಒತ್ತಡವನ್ನು ಹೇರುತ್ತಿರುವುದರಿಂದ ಮಕ್ಕಳು ಮಾನಸಿಕ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ.
ವಸತಿ ಸಮುಚ್ಚಯಗಳು ಅಥವಾ ಸಂಪೂರ್ಣ ನಿರ್ಬಂಧಿತ ಮನೆಗಳಂತಹ ಆಧುನಿಕ ವಸತಿ ವ್ಯವಸ್ಥೆಯಲ್ಲಿ ಬೆಳೆಯುತ್ತಿರುವ ಬಹುತೇಕ ಮಕ್ಕಳು ಸಾಮಾಜಿಕ ಜ್ಞಾನವನ್ನು ಬೆಳೆಸಿಕೊಳ್ಳುವಲ್ಲಿ ವಂಚಿತರಾಗುತ್ತಿದ್ದಾರೆ. ಹೀಗೆ ಬೆಳೆಯುವ ಮಕ್ಕಳು ಹೊಂದಾಣಿಕೆಯ ಸಮಸ್ಯೆ, ಕನಿಕರದ ಕೊರತೆ, ಇನ್ನೊಬ್ಬರ ಭಾವನೆಗಳನ್ನು ಅರಿಯುವಲ್ಲಿ ವಿಫಲತೆ, ಹಣ, ವಸ್ತುಗಳು, ವ್ಯಕ್ತಿಗಳು, ಸಮಯ, ಶಿಕ್ಷಣದ ಮೌಲ್ಯವನ್ನು ಅರಿಯುವಲ್ಲಿ ವಿಫಲರಾಗುತ್ತಿದ್ದಾರೆ. ಇದರ ಜೊತೆ ಜೊತೆಗೆ ಮಕ್ಕಳ ಮೇಲೆ ಪ್ರಭಾವ ಬೀರಬಲ್ಲವರಲ್ಲಿ ಗೆಳೆಯರು ಅತ್ಯಂತ ಪ್ರಮುಖರಾಗಿದ್ದು ಬಹುತೇಕ ಮಕ್ಕಳಲ್ಲಿನ ವರ್ತನೆಯ ಮತ್ತು ಭಾವನಾತ್ಮಕ ಸಮಸ್ಯೆಗೆ ಇವರು ಕಾರಣರಾಗಿದ್ದಾರೆ. ಇನ್ನು ಬಾಲ್ಯದಲ್ಲಿ ಕೆಟ್ಟ ಘಟನೆಗಳನ್ನು ಅನುಭವಿಸಿರುವ ಮಕ್ಕಳು ಒತ್ತಡ, ಖಿನ್ನತೆ, ವ್ಯಕ್ತಿತ್ವದ ಸಮಸ್ಯೆ, ವರ್ತನೆಯ ಸಮಸ್ಯೆಗಳಿಗೆ ಗುರಿಯಾಗಿದ್ದಾರೆ. ಹೆಣ್ಣುಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯವೂ ಅವರ ಮನಸ್ಸಿನ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ.
ಕೆಲಸದ ಒತ್ತಡದಿಂದ ಹೆಚ್ಚು ಸಮಯವನ್ನು ಮನೆಯಿಂದ ಹೊರಗೆ ಕಳೆಯುವ ತಂದೆಯ ಅಲಭ್ಯತೆಯಲ್ಲಿ ಬೆಳೆಯುವ ಮಕ್ಕಳು ಕಡಿಮೆ ಆತ್ಮಸ್ಥೈರ್ಯ, ಹಿಂಜರಿಕೆ, ಒಂಟಿತನ, ಭಾವನಾತ್ಮಕ ಸಮಸ್ಯೆಗಳು ಅಥವಾ ಆಕ್ರಮಣಕಾರಿ ಮನಸ್ಥಿತಿಯಂತಹ ಸಮಸ್ಯೆಗಳನ್ನು ಹೊಂದಿದ್ದಾರೆ. ಬಹುತೇಕ ಮಕ್ಕಳು ಪಾಲಕರಿಂದ ಹೋಲಿಕೆಗೆ ಒಳಪಟ್ಟಿರುವುದೂ ಕೂಡ ಇಂತಹ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಮಕ್ಕಳು ಮತ್ತು ಪಾಲಕರ ನಡುವೆ ಆರೋಗ್ಯಕರ ಸಂವಹನದ ಕೊರತೆಯಿಂದ ಮಕ್ಕಳು ತಮ್ಮ ಭಾವನೆಗಳನ್ನು ಪಾಲಕರಲ್ಲಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದನ್ನೂ ಗುರುತಿಸಲಾಗಿದೆ.
ಮಕ್ಕಳೊಟ್ಟಿಗೆ ಬೆರೆಯಲು ಪಾಲಕರು ತಮ್ಮ ಸಮಯವನ್ನು ಮೀಸಲಿಡುವುದರಿಂದ ಅವರು ನಿಮ್ಮನ್ನು ಮತ್ತು ನೀವು ಅವರನ್ನು ಅರಿಯಲು ಸಹಾಯವಾಗುತ್ತದೆ. ನಿರಂತರ ಮತ್ತು ಆರೋಗ್ಯಕರ ಸಂವಹನವನ್ನು ನಿಮ್ಮ ಮಕ್ಕಳೊಂದಿಗೆ ಮಾಡಿ. ನಿಮ್ಮ ಮೇಲಿನ ಭಯ ಬಿಟ್ಟು ನಿಮ್ಮೊಂದಿಗೆ ಅವರ ಭಾವನೆಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿ. ಮಕ್ಕಳಿಗೆ ನಡತೆ ಮತ್ತು ಭಾಷೆಯನ್ನು ಕಲಿಸುವಲ್ಲಿ ಪಾಲಕರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ನೀವು ದಿನನಿತ್ಯ ಮಾತನಾಡುವ ಭಾಷೆಯನ್ನೇ ಮಕ್ಕಳೂ ಕಲಿಯುವುದರಿಂದ ಅವರ ಮುಂದೆ ಮಾತನಾಡುವಾಗ ಉತ್ತಮ ಶಬ್ದಗಳನ್ನಷ್ಟೇ ಬಳಸಿ. ಅತಿಯಾದ ಕೆಲಸ, ಪ್ರಯಾಣ ಮತ್ತು ಇನ್ನಿತರ ಜವಾಬ್ದಾರಿಗಳನ್ನು ಏಕಕಾಲದಲ್ಲಿ ನಿರ್ವಹಿಸಬೇಡಿ. ಹೀಗೆ ಮಾಡುವುದರಿಂದ ಅದು ನಿಮ್ಮಲ್ಲಿ ಒತ್ತಡ ನಿರ್ಮಿಸಿ ಅದರಿಂದಾಗಿ ಕೌಟುಂಬಿಕ ಜೀವನ ಹದಗೆಡುತ್ತದೆ. ಉದ್ಯೋಗ ಮತ್ತು ಹಣ ಮಾತ್ರ ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಅವಶ್ಯಕತೆಗಳನ್ನು ಪೂರೈಸಲಾರವು. ಕೇವಲ ಗಳಿಕೆಗೆ ಪ್ರಾಮುಖ್ಯತೆ ಕೊಡುವ ಬದಲು ಕುಟುಂಬ, ಹೆಂಡತಿ, ಗಂಡ ಮತ್ತು ಮಕ್ಕಳೊಟ್ಟಿಗೆ ಬೆರೆಯಲು ನಿಮ್ಮ ಸಮಯ ವ್ಯಯಿಸಿ. ಜೀವನದ ಮತ್ತು ಸಮಾಜದ ವಿವಿಧ ಹಂತಗಳ ಪರಿಚಯವನ್ನೂ ನಿಮ್ಮ ಮಕ್ಕಳಿಗೆ ಮಾಡಿಕೊಡಿ. ಬದುಕಿನ ಸವಾಲುಗಳನ್ನು ಅವರಿಗೆ ಮನವರಿಕೆ ಮಾಡಲು ಅವರನ್ನು ಅನಾಥಾಶ್ರಮ, ವೃದ್ದಾಶ್ರಮ, ನಿಮ್ಮ ಕೆಲಸದ ಸ್ಥಳ, ಮತ್ತು ನೀವು ಓದಿ ಬೆಳೆದ ಶಾಲೆಗೆ ಕರೆದುಕೊಂಡು ಹೋಗಿ.
ಅಣ್ಣ ತಂಗಿಯಂದಿರು, ಸುತ್ತಲಿನ ಮಕ್ಕಳು, ಶಾಲೆಯ ಸಹಪಾಠಿಗಳೊಂದಿಗೆ ನಿಮ್ಮ ಮಗುವನ್ನು ಹೋಲಿಕೆ ಮಾಡಬೇಡಿ. ವಿದ್ವಾಂಸರು ಕಂಡುಕೊಂಡಂತೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದೈಹಿಕ ಮತ್ತು ಮಾನಸಿಕ ಗುಣಲಕ್ಷಣಗಳಲ್ಲಿ ವಿಶಿಷ್ಠನಾಗಿರುತ್ತಾನೆ. ನಿಮ್ಮ ಮಗುವಿನ ವಿಶಿಷ್ಠ ಸಾಮರ್ಥ್ಯ, ಗುಣಗಳನ್ನು ಗುರುತಿಸಿ ಪ್ರೋತ್ಸಾಹಿಸಿ. ಇದರ ಜೊತೆ-ಜೊತೆಗೆ ಅವರಲ್ಲಿರುವ ನ್ಯೂನ್ಯತೆಗಳನ್ನೂ ಸಮಾನವಾಗಿ ಒಪ್ಪಿಕೊಳ್ಳಿ. ಮಕ್ಕಳಿಗೆ ತಮ್ಮ ಶೈಕ್ಷಣಿಕ ಅಥವಾ ಇತರ ಚಟುವಟಿಕೆಗಳಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯತ್ನಿಸಲು ನಿಮ್ಮ ಪ್ರೋತ್ಸಾಹದ ಅವಶ್ಯಕತೆಯಿದೆ. ಅವರ ಸಾಮರ್ಥ್ಯವನ್ನೂ ಮೀರಿದ ನೀರೀಕ್ಷೆಯನ್ನು ಮಾಡಿ ಅವರನ್ನು ಒತ್ತಡಕ್ಕೆ ತಳ್ಳಬೇಡಿ. ಅವರ ಆಸಕ್ತಿಯ ಮತ್ತು ಸಾಮರ್ಥ್ಯವಿರುವ ಕ್ಷೇತ್ರ ಯಾವುದಿದ್ದರೂ ಅದಕ್ಕೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿ.
ಮಕ್ಕಳಿಗಲ್ಲದ ಕೆಟ್ಟದ್ದು ಒಳ್ಳೆಯದನ್ನೆಲ್ಲವನ್ನೂ ತನ್ನೊಳಗಿಟ್ಟುಕೊಂಡು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಮೊಬೈಲ್ ಫೋನನ್ನು ಅವರಿಗೆ ಕೊಡಬೇಡಿ. ಕ್ರೀಡೆ, ನಾಟಕ, ಸಂಗೀತ, ಚಿತ್ರಕಲೆ, ಹಾಡುಗಾರಿಕೆ, ಹೋದೋಟ ನಿರ್ಮಾಣದಂತಹ ಚಟುವಟಿಕೆಗಳತ್ತ ಅವರನ್ನು ಪ್ರೋತ್ಸಾಹಿಸಿ. ಅತಿಯಾದ ಮುಕ್ತ ಸ್ವಾತಂತ್ರವೂ ಮಕ್ಕಳಿಗೆ ಒಳ್ಳೆಯದಲ್ಲ. ನಿಮ್ಮ ಮಕ್ಕಳು ತಮ್ಮ ಆಟದ ಗೆಳೆಯರು, ಸಹಪಾಠಿಗಳು, ಮನೆಯ ಸುತ್ತಲಿನ ಗೆಳೆಯರು, ಮೊಬೈಲ್ ಗೆಳೆಯರೊಂದಿಗೆ ಸೇರುವ ಸ್ಥಳ, ಮಾಡುವ ಕೆಲಸ, ಮಾತನಾಡುವ ವಿಷಯಗಳ ಕಡೆ ಗಮನ ಹರಿಸಿ. ನಿಮ್ಮ ಮಕ್ಕಳು ನಿಮ್ಮ ಮನೆಯ ದಿನನಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ. ತರಕಾರಿ ಹಚ್ಚುವುದು, ಅಂಗಡಿಯಿಂದ ಸಾಮಗ್ರಿ ತರುವುದು, ಖರ್ಚು ವೆಚ್ಚದ ಲೆಕ್ಕಾಚಾರ ಮಾಡುವಂತಹ ಸಣ್ಣ-ಪುಟ್ಟ ಜವಬ್ದಾರಿಗಳನ್ನು ಅವರಿಗೆ ವಹಿಸಿ. ಅವರ ಕೆಲಸಗಳಿಗೆ ಇನ್ನೊಬ್ಬರನ್ನು ಅವಲಂಬಿಸುವುದನ್ನು ತಪ್ಪಿಸಿ. ಅವರು ನಿರ್ವಹಿಸುವ ಕೆಲಸಕ್ಕೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿ, ತಪ್ಪಾದಲ್ಲಿ ದೂಷಿಸಬೇಡಿ. ಶಾಲೆಯಲ್ಲಿ ಪಾಲಕರಿಗಾಗಿ ಆಯೋಜಿಸುವ ಪ್ರತಿಯೊಂದೂ ಕಾರ್ಯಕ್ರಮಗಳಲ್ಲಿ ತಪ್ಪದೇ ಪಾಲ್ಗೊಳ್ಳಿ. ಆ ಮೂಲಕ ನಿಮ್ಮ ಮಗುವನ್ನು ಹಾಗೂ ಶಿಕ್ಷಕರನ್ನು ಪ್ರೋತ್ಸಾಹಿಸಿ.
ಮಕ್ಕಳಿರುವಾಗ ಮೊಬೈಲ್ ಫೋನಿನ ಬಳಕೆ, ದೂಮಪಾನ, ಮಧ್ಯಪಾನದಂತಹ ಇನ್ನಿತರ ದುಶ್ಚಟಗಳನ್ನು ಮಾಡಬೇಡಿ. ಪುಸ್ತಕ ಓದುವುದು, ಹಾಡುವುದು, ಸಂಗೀತ ನುಡಿಸುವುದು, ಆಟ ಆಡುವುದು, ಸಾಕು ಪ್ರಾಣಿಗಳನ್ನು ಸಲಹುವುದು, ಅಥವಾ ಗಿಡಗಳನ್ನು ಬೆಳೆಸುವಂತಹ ಉತ್ತಮ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಿ. ನಿಮ್ಮ ಪಾಲಕರಿಗೆ ಗೌರವ ಕೊಡುವ ಮೂಲಕ ಮಕ್ಕಳನ್ನೂ ಪ್ರೋತ್ಸಾಹಿಸಿ. ನೀವೂ ಕೂಡ ದಾನ-ದರ್ಮ, ಕಷ್ಟದಲ್ಲಿರುವವರಿಗೆ ಸಹಾಯ, ಅಥವಾ ಇನ್ನಿತರ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಮತ್ತು ಮಕ್ಕಳನ್ನೂ ಜೊತೆಯಾಗಿಸಿಕೊಳ್ಳಿ. ನೀವು ಮತ್ತು ನಿಮ್ಮ ಹೆಂಡತಿ ಅಥವಾ ಗಂಡ ಇಡೀ ಕುಟುಂಬದ ಸಂತೋಷ, ಸಂಭ್ರಮ, ಮತ್ತು ಗೌರವದ ಮೂಲವಾಗಿದ್ದೀರಿ. ನೀವು ನಿಮ್ಮ ವಯಕ್ತಿಕ ಜೀವನವನ್ನು ಸುಂದರವಾಗಿಟ್ಟು ಕೊಂಡಷ್ಟೂ ನಿಮ್ಮ ಮಕ್ಕಳ ಬದುಕು ಸುಂದರವಾಗುತ್ತದೆ. ಒಳ್ಳೆಯ ಜೀವನ ಶೈಲಿ, ಸಂಬಂಧಗಳ ಮೌಲ್ಯ, ಗೌರವ, ಪ್ರೀತಿ, ಇತರರ ಭಾವನೆಗಳನ್ನು ಅರ್ಥೈಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಮಕ್ಕಳು ಬೆಳೆಸಿಕೊಳ್ಳುವಲ್ಲಿ ನಿಮ್ಮ ಜೀವನ ಶೈಲಿಯ ಪಾತ್ರ ಪ್ರಮುಖವಾಗಿದೆ. ನಿಮ್ಮ ಸಂಗಾತಿಯೊಂದಿಗಿನ ಜಗಳ, ತಪ್ಪು ಕಲ್ಪನೆ, ಮಾನಸಿಕ, ಭಾವನಾತ್ಮಕ ಅಥವಾ ದೈಹಿಕ ಹಲ್ಲೆ ಮತ್ತು ನಿಂದನೆಯನ್ನು ನಿಲ್ಲಿಸಿ. ನಿಮ್ಮ ಸಂಗಾತಿಯೊಂದಿಗೆ ಸಮಯ ವ್ಯಯಿಸಿ, ಮಾತನಾಡಿ ಮತ್ತು ಮುನಿಸುಗಳಿದ್ದರೆ ಹಿರಿಯರ ಸಹಾಯ ಪಡೆದು ಬಗೆಹರಿಸಿಕೊಳ್ಳಿ. ಒಬ್ಬರಿಗೊಬ್ಬರು ನಿಮ್ಮ ವಿಚಾರ ಮತ್ತು ಭಾವನೆಗಳನ್ನು ಗೌರವಿಸಿಕೊಂಡು ಇಬ್ಬರಲ್ಲೂ ಸಹಜವಾಗಿ ಇರಬಹುದಾದ ನ್ಯೂನ್ಯತೆಗಳನ್ನು ಒಪ್ಪಿಕೊಂಡು ಬದುಕಿ. ಯಾವಾಗಲೂ ಜೊತೆಯಾಗಿರಿ ನಿಮ್ಮ ಮಕ್ಕಳಿಗೆ ನಿಮ್ಮಿಬ್ಬರ ಅವಶ್ಯಕತೆಯಿದೆ.
ನಿರಂತರವಾಗಿ ಇಂತಹ ಪ್ರಯತ್ನಗಳನ್ನು ಮಾಡುವ ಮೂಲಕ ನಮ್ಮ ಮುದ್ದು ಮಕ್ಕಳನ್ನು ಸಮಾಜಕ್ಕೊಂದು ಒಳ್ಳೆಯ ಕೊಡುಗೆಯನ್ನಾಗಿ ರೂಪಿಸುವಲ್ಲಿ ಪ್ರಯತ್ನಿಸೋಣವೇ?
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190
********************************************