-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
            
                 ನಾನು ಗಣಿತದ ಅಧ್ಯಾಪಕನಲ್ಲ. ಆದರೂ ಗಣಿತವೆಂದರೆ ಉತ್ಸಾಹ ಪುಟಿಯುತ್ತದೆ. ಭಾಷೆ, ಗಣಿತ ಮಾತ್ರವಲ್ಲದೆ ಎಲ್ಲ ಜ್ಞಾನ ವಿಭಾಗದಲ್ಲೂ ‘ಕಳೆ’ ಇದೆ. ಆದರೆ ಸಂದರ್ಭಾನುಸಾರ ತನ್ನ ಅರ್ಥವನ್ನು ಬದಲಿಸುತ್ತಾ ಹೋಗುವುದು ‘ಕಳೆ’ ಯ ‘ಕಲೆ’ ಇರಬೇಕು. ಕಳೆ ಎಂದರೆ ಸಾಮಾನ್ಯವಾದ ಅರ್ಥ ಕಡಿಮೆಗೊಳಿಸುವುದು ಎಂದಾದರೂ ‘ಕಳೆ’ಗಿರುವ ‘ಕಳೆ’ ಅದ್ಭುತ.
        ನಾನು ಮಿತ್ರನೊಬ್ಬನನ್ನು ಕಳೆದೆ ಎಂದಾಗ ನನ್ನ ಮಿತ್ರರಲ್ಲಿ ಒಬ್ಬರ ಸಂಖ್ಯೆ ಇಳಿಕೆಯಾಯಿತು ಎಂದೇ ಅರ್ಥ. ನನಗೂ ಮಿತ್ರನ ಕಳೆ ಒದಗಲಿ ಎಂಬಲ್ಲಿ ಮಿತ್ರನಿಗಿರುವ ತೇಜಸ್ಸು ನನಗೂ ಬರಲಿ ಎಂಬ ಹಾರೈಕೆ ಇದೆ. ‘ಕಳೆ’ಗೆ ಗಣಿತದಲ್ಲಿ ಕಡಿಮೆಗೊಳಿಸು ಎಂಬ ಭಾವವಾದರೆ ಭಾಷಾ ಪ್ರಯೋಗದಲ್ಲಿ ಅನ್ಯ ಅರ್ಥವೇ ಇದೆ. ಹಾಗೆಯೇ ಕಳೆಗುಂದು ಎಂದಾಗ ಕಾಂತಿ ಮಾಸಿದೆ ಎಂದಂತಾಗುತ್ತದೆ. ಕೆಲವೊಮ್ಮೆ ಕಳೆಯೇರು ಎಂದೂ ಹೇಳುವಿರಲ್ಲವೇ? ಆಹಾ! ಕೆಂಪು ಬಣ್ಣ ಹಚ್ಚಿದ ಕೂಡಲೇ ಚಿತ್ರದ ಕಳೇಯೇರಿತು! ಗಣಿತದಲ್ಲಿ ಏರಿಕೆ ಬೇಕಾದರೆ ಕೂಡಬೇಕು ಯಾ ಗುಣಿಸಬೇಕು, ಕಳೆಯೇರಿದರೆ ಆಗದು. ಅಲ್ಲವೇ?
      ಭಾರತದಲ್ಲಿ ದೆವ್ವ, ಪಿಶಾಚಿ, ಯಕ್ಷಿಣಿಯರ ಅಸ್ಮಿತೆಯನ್ನು ನಂಬಲಾಗುತ್ತದೆ. ಜನರ ನಡೆ ನುಡಿಗಳಲ್ಲಿ ಏನಾದರೂ abnormal ಅಂಶಗಳು ಕಂಡು ಬಂದರೆ ಅವನಿಗೆ ದೆವ್ವ ಬಡಿದಿದೆಯೆಂದೋ, ಪಿಶಾಚಿ ದೃಷ್ಟಿ ಬಿದ್ದಿದೆ ಎಂದೋ ಚರ್ಚೆಯಾಗುತ್ತದೆ. ಮಂತ್ರವಾದಿಯೊಬ್ಬನನ್ನು ಕರೆಸಿ ಅವನ ಮೈಗೆ ಸೋಂಕು ತಂದ ಪಿಶಾಚಿಯನ್ನೋ ದೆವ್ವವನ್ನೂ ‘ಕಳೆ’ಯುವರು. ದೇಹವನ್ನು ಸೇರಿರುವ ಕೆಟ್ಟ ದೃಷ್ಟಿಗಳನ್ನು “ಇಲ್ಲ”ಗೊಳಿಸುವುದೇ “ಕಳೆ”ಗೆ ಇರುವ ಸಂದರ್ಭೋಚಿತ ಅರ್ಥವಾಗಿದೆ.  ರೈತರು ತರಕಾರಿ ಸಾಲಿನಲ್ಲಿ ‘ಕಳೆ” ತುಂಬಿದೆ ಎನ್ನುವುದಿದೆ. ರೈತರು ಹೇಳುವ ‘ಕಳೆ’ ಅನಪೇಕ್ಷಿತ ಮತ್ತು ತರಕಾರಿಯನ್ನು ನಾಶ ಗೊಳಿಸುವ ನಿರುಪಯುಕ್ತ ಗಿಡಗಳು. ಅವುಗಳು ಮಣ್ಣಿನ ಫಲವತ್ತೆಯನ್ನು ತಾವೇ ಬಳಸಿ ಬೆಳೆಯುತ್ತವೆ. ಇದರಿಂದಾಗಿ ನೆಟ್ಟ ಗಿಡಗಳಲ್ಲಿ ಇಳುವರಿಯಾಗುವುದಿಲ್ಲ. ಕಳೆಗಳು ಬೆಳೆ ನಾಶಕಗಳು. ಅವುಗಳನ್ನು ಕಿತ್ತರೆ ತರಕಾರಿ ಗಿಡಗಳು ಹುಲುಸಾಗುತ್ತವೆ. ನಿರೀಕ್ಷಿತ ಫಸಲು ದೊರೆಯುತ್ತದೆ. ಕಳೆಗಳು ಫಸಲನ್ನು ಕಳೆಯುತ್ತವೆ ಅರ್ಥಾತ್ ನಾಶಗೊಳಿಸುತ್ತವೆ.  ಮನುಷ್ಯರಲ್ಲೂ ‘ಕಳೆ’ ಗಳಿವೆ. ಕಳೆಗಳಿರಲೇಬೇಕು. ಕಳೆ ಎಂದರೆ ಕಾಂತಿ, ತೇಜಸ್ಸು ಅಥವಾ ಓಜಸ್ಸು ಎಂದರ್ಥ. ಸೂರ್ಯನಿಗೆ ಕಳೆಯಿದೆ. ಅವನು ಪ್ರಕಾಶಿಸುತ್ತಾನೆ. ಕಳೆಯಿದ್ದವರಿಗೆ ಪ್ರಕಾಶವಿರುತ್ತದೆ. ಅದು ಬೆಳಕಿನ ಪ್ರಕಾಶವಲ್ಲ. ಕೀರ್ತಿಯ ಪ್ರಕಾಶ. ಮನುಷ್ಯನ ಕಳೆಯೇರಲು ಅವನೇನೂ ಮಾಡಬೇಕಾಗಿಲ್ಲ. ತನ್ನ ದಿನಚರಿಯನ್ನು ಶ್ರದ್ಧೆ, ಪ್ರಾಮಾಣಿಕತೆ, ಸತ್ಯನಿಷ್ಠೆ ಮತ್ತು ಪರಹಿತದ ಉದ್ದೇಶದಿಂದ ಮಾಡಿದರೆ ಸಾಕು. ಸ್ವಹಿತ ಮಾತ್ರವೇ ಇದ್ದವರಿಗೆ ಸ್ವಾರ್ಥಿ ಎನ್ನುವರು. ಸೋಮಾರಿಯಾದವನಿಗೆ ಕಳೆ ಬಾರದು, ಬದಲಾಗಿ ‘ಕಲೆ’ ಬರುತ್ತದೆ. ಈ ಕಲೆಯನ್ನು ಅಪಕೀರ್ತಿ ಎನ್ನುವರು. ನಮ್ಮ ಭಾವನೆಗಳು ನಮಗೆ ಕಲೆ ಅಥವಾ ಕಳೆಯ ಕಾರಕಗಳು. ಕಳೆಸಸ್ಯದಂತೆ ಭಾವನೆಗಳಲ್ಲಿ ಕ್ಷುದ್ರತೆಯಿದ್ದರೆ ‘ಕಲೆ’ ಅಥವಾ ಅಪಕೀರ್ತಿ ಬರುತ್ತದೆ. ಕಲೆಯಾಗದಂತೆ ರಕ್ಷಿಸುವ ಹೊಣೆ ನಮಗಿರಲಿ.
        ಒಂದು ಕಥೆ ಹೀಗಿದೆ. ಅವನು ಭಾರೀ ಶ್ರೀಮಂತ. ಮನೆಯನ್ನು ಕಾಯುವ ಕಾವಲುಗಾರನನ್ನೇ ನೆಮಿಸಿದ್ದ. ಒಂದು ದಿನ ಶ್ರೀಮಂತನಿಗೆ ದೂರದ ಊರಿಗೆ ರೈಲು ಪ್ರಯಾಣ ಮಾಡಬೇಕಾಯಿತು. ಮುಂಜಾನೆ ನಾಲ್ಕರ ಸುಮಾರಿಗೆ ಅವನಿಗೆ ರೈಲು ನಿಲ್ದಾಣ ಸೇರಬೇಕಿತ್ತು. ರಾತ್ರಿ ಪಾಳಿಯ ಕಾವಲುಗಾರನಿಗೆ ಬೆಳಗ್ಗೆ ಮೂರು ಘಂಟೆಗೆ ಎಚ್ಚರಿಸಲು ತಿಳಿಸಿ ಮಲಗಿದನು. ಸರಿಯಾದ ಸಮಯಕ್ಕೆ ಧನಿಕನನ್ನು ಎಚ್ಚರಗೊಳಿಸಿದ ಕಾವಲುಗಾರನು, ”ಬುದ್ದಿ, ನನಗೆ ರಾತ್ರಿ ಕನಸು ಬಿತ್ತು; ನೀವು ಹೋಗುವ ರೈಲು ಅಪಘಾತಗೊಂಡ ಕನಸದು, ನೀವು ಇಂದಿನ ಪ್ರಯಾಣ ರದ್ದು ಮಾಡಿ” ಎಂದನು. ಕಾವಲುಗಾರನ ವಿನಂತಿಯಂತೆ ಶ್ರೀಮಂತ ಪ್ರಯಾಣ ರದ್ದುಗೊಳಿಸಿದನು. ಬೆಳಗ್ಗಿನ ಸುದ್ದಿಯಲ್ಲಿ ಶ್ರೀಮಂತ ಹೋಗಲಿದ್ದ ರೈಲು ಅಪಘಾತಗೊಂಡು ಜನರು ಸಾವಿಗೀಡಾಗಿದ್ದರು. ತನ್ನ ಪ್ರಾಣ ಉಳಿಸಿದ ಕಾವಲುಗಾರನಿಗೆ ಶ್ರೀಮಂತನು ಒಂದು ಲಕ್ಷ ರೂಪಾಯಿಗಳನ್ನು ಬಹುಮಾನ ನೀಡಿ ನೀನಿನ್ನು ನಮ್ಮಲ್ಲಿ ಕೆಲಸಕ್ಕೆ ಬೇಡ ಎಂದು ಹೇಳಿ ಮನೆಗೆ ಕಳುಹಿಸಿದನು.
          ಇದೊಂದು ಒಗಟೇ ಹೌದು. ಪ್ರಾಣ ಉಳಿಸಿದ ಕಾವಲುಗಾರನಿಗೆ ಬಹುಮಾನ ನೀಡಿದ್ದು ಒಳ್ಳೆಯಕೆಲಸ. ಆದರೆ ಕೆಲಸದಿಂದ ವಜಾ ಮಾಡಿದ್ದು ಅನ್ಯಾಯ ಅಲ್ಲವೇ? ಈ ಸಂದೇಹ ಸಹಜ. ಆದರೆ ಶ್ರೀಮಂತ ಅನ್ಯಾಯವನ್ನೇನೂ ಮಾಡಿಲ್ಲ. ಕಾವಲುಗಾರನು ತನ್ನ ಪ್ರಾಣ ಉಳಿಸಿದ್ದರೂ, ಕಾವಲುಗಾರ ಅಪ್ರಾಮಾಣಿಕ ಮತ್ತು ಬದ್ಧತೆಯಿಲ್ಲದವನೆಂದು ಶ್ರೀಮಂತನು ಗಮನಿಸಿದನು. ರಾತ್ರಿಯ ಕಾವಲುಗಾರ ಕಾವಲಿರದೆ ನಿದ್ದೆ ಮಾಡಿದ್ದರಿಂದಲ್ಲವೇ ಅವನಿಗೆ ಕನಸು ಬಿದ್ದಿರುವುದು? ಅವನು ಅಪರಾಧಿಯಲ್ಲವೇ? ಅಪರಾಧಗಳಿಂದ ಕಳೇಯೇರದು.
       “ಅಪ್ರಾಮಾಣಿಕತೆ ನಮ್ಮ ‘ಕಳೆ’ಗೆ ಕುತ್ತು” ನಮ್ಮಲ್ಲಿ ಪ್ರಾಮಾಣಿಕತೆಯಿಲ್ಲದಿರುವುದು ನಮ್ಮ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂದು ಅರ್ಥೈಸಿದ್ದೀರಲ್ವೇ? ಮಕ್ಕಳೇ ನಮಸ್ಕಾರ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************

Ads on article

Advertise in articles 1

advertising articles 2

Advertise under the article