-->
ಅಕ್ಕನ ಪತ್ರ - 41ಕ್ಕೆಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 41ಕ್ಕೆಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 41ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1



    ನಮಸ್ತೆ ಅಕ್ಕ, ನಾವು ಚೆನ್ನಾಗಿದ್ದೇವೆ. 
ಹೊಸ ವರುಷ  ಹೊಸ ಯೋಜನೆ, ಹಬ್ಬ-ಹರಿದಿನಗಳೊಂದಿಗೆ ಅದ್ದೂರಿಯಾಗಿ ಆರಂಭವಾಗಿದೆ. ಪ್ರತೀ ವರ್ಷ ಏನೇನೋ ಘಟನೆಗಳು ನಡೆದು ಹೋಗುತ್ತದೆ. ಕೊನೆಗೆ  ಕೆಲ ಘಟನೆಗಳು ಇತಿಹಾಸವಾಗಿ ಉಳಿದು ಬಿಡುತ್ತದೆ. ಮುಂದೆ ಬದುಕಿಗೊಂದು ಮೌಲ್ಯ ಸಾರುತ್ತದೆ. ನೀವು ನಮ್ಮೊಂದಿಗೆ ಹಂಚಿಕೊಂಡ ರಾಜನ ಕತೆಯೂ ಉತ್ತಮ ಸಾರ ಬಿಂಬಿಸುತ್ತದೆ. ಕೊಟ್ಟ ಮಾತಿಗೆ ಬದ್ಧವಾಗಿರುವುದು ಸುಲಭದ ಮಾತಲ್ಲ. ಸತ್ಯದ ಹಾದಿ ಯಾವಾಗಲೂ ಕಠಿಣ ಹಾಗೂ ಸವಾಲುಗಳಿಂದ ಕೂಡಿರುತ್ತದೆ. ದೃಢಚಿತ್ತ, ಏಕಾಗ್ರತೆ, ತಾಳ್ಮೆ ಮತ್ತು ಎಲ್ಲವನ್ನು ಸ್ವೀಕರಿಸುವ ಮನಸ್ಸು ಇದ್ದಾಗ ಮಾತ್ರ ಆ ಹಾದಿಯ ಪ್ರಯಾಣ ಸುಖಕರ. ಕತೆಯಲ್ಲಿ ರಾಜನಿಗಿದ್ದ ಒಳ್ಳೆಯ ಮನಸ್ಸು, ಅವನ ತ್ಯಾಗ ಕೊನೆಗೆ ಎಲ್ಲವನ್ನು ಹಿಂತಿರುಗಿಸಿತು. ರಾಜನೆಂದು ದರ್ಪದಿಂದ ಮೆರೆಯದೆ ಪ್ರಜಾಪ್ರಭುತ್ವಕ್ಕೆ ಗೌರವ ಕೊಟ್ಟ ರಾಜ ಶ್ರೇಷ್ಠ ಎನಿಸಿಕೊಳ್ಳುತ್ತಾನೆ.
     ನಾವು ಪ್ರಜಾಪ್ರಭುತ್ವ ನಾಡಲ್ಲಿ ಜನ್ಮ ಪಡೆದಿದ್ದೇವೆ. ನಮ್ಮ ಆಲೋಚನೆ, ನಮ್ಮ ಆಯ್ಕೆ, ನಮ್ಮ ಮಾತು, ನಮ್ಮ ಚಿಂತನೆಗಳನ್ನು ವ್ಯಕ್ತ ಪಡಿಸುವ ಅವಕಾಶ ನಮ್ಮ ಸಂವಿಧಾನ ನಮಗೆ ನೀಡಿದೆ. ಜೊತೆಗೆ ಕೆಲ ಹಕ್ಕು - ಕರ್ತವ್ಯಗಳನ್ನೂ ನೀಡಿದೆ. ನಮಗಾಗಿ ಇಷ್ಟೆಲ್ಲಾ ಕೊಟ್ಟ ದೇಶಕ್ಕೆ, ನಾವು ಏಳಿಗೆ ಬಯಸೋಣ. ಸುಂದರ ದೇಶದ ಉತ್ತಮ ಪ್ರಜೆಗಳಾಗೋಣ. ಬದುಕಿನಲ್ಲಿ ಸಂಭವಿಸುವ ಕೆಲ ಸಂಗತಿಗಳು ನಮ್ಮ ಸ್ವಾಭಿಮಾನ, ನಮ್ಮದೇ ಆದ ಕೆಲ ಧ್ಯೇಯ, ನಿಯಮಗಳ ಪ್ರತಿಫಲ. ಫಲಾಪೇಕ್ಷೆ ಬಯಸದೆ ಕಾರ್ಯಪ್ರವೃತರಾದಾಗ ತಡವಾಗಿಯಾದರೂ ಒಳಿತೇ ಸಂಭವಿಸುತ್ತದೆ. ಸಂಕ್ರಾಂತಿ ಹಬ್ಬವು ಎಳ್ಳುಬೆಲ್ಲ ತಿಂದು ಒಳ್ಳೆ ಮಾತಾಡಿ ಎನ್ನುವ ಸಂದೇಶದೊಂದಿಗೆ ವರುಷದ ಮುನ್ನುಡಿ ಬರೆಯುತ್ತದೆ. ಉತ್ತಮ ವಿಚಾರಗಳನ್ನು ಆಯ್ಕೆ ಮಾಡಿ ಕೆಡುಕೆನಿಸಿದನ್ನು ಹಿಂದಕ್ಕೆಬಿಟ್ಟು.. ಬದುಕಿಗೆ ಬೇಕಾದ ಮೌಲ್ಯಗಳನ್ನು ಹೊತ್ತು ಮುಂದೆ ಸಾಗೋಣ. ಧನ್ಯವಾದಗಳು
..................................................... ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾಕೇಂದ್ರ ,ಕಲ್ಲಡ್ಕ. 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************



     ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು.  ನನಗೆ ಈ ಕಥೆಯನ್ನು ಓದಿ ತುಂಬಾ ಖುಷಿಯಾಯಿತು. ಸತ್ಯವಿದ್ದರೆ ಎಲ್ಲವೂ ಇರುತ್ತದೆ ಎಂಬುದು ಸ್ಪಷ್ಟವಾಯಿತು. ನಾವೆಲ್ಲರೂ ಸತ್ಯದ ಹಾದಿಯಲ್ಲಿ ನಡೆಯಬೇಕು ಎಂಬುದು ಮನದಟ್ಟಾಯಿತು. ಸತ್ಯದ ಜೊತೆಯಲ್ಲಿ ಸ್ವಾಭಿಮಾನವು ಇರಬೇಕು ಎಂಬುದು ನನ್ನ ಅಭಿಪ್ರಾಯ. ''ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಜಯವಿಲ್ಲ'' ಎಂಬ ಮಾತು ಅಕ್ಷರಶ: ಸತ್ಯ. ನಾವು ನಮ್ಮ ಜೀವನದಲ್ಲಿ ಸ್ವಾಮಿ ವಿವೇಕಾನಂದರ ಸುವಿಚಾರಗಳನ್ನು ಅಳವಡಿಸಿಕೊಂಡರೆ ಆಗಲೇ ನಮ್ಮ ಬದುಕು ಅರ್ಥಪೂರ್ಣವಾಗುವುದು. ಧನ್ಯವಾದಗಳೊದಿಗೆ
........................................  ವೈಷ್ಣವಿ ಕಾಮತ್
6ನೇ ತರಗತಿ 
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************



ಅಕ್ಕನ ಪತ್ರ 41 ಕ್ಕೆ  ಶಿಶಿರನ ಉತ್ತರ              
    ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ಪ್ರೀತಿ ಹಾಗೂ ಗೌರವದ  ನಮಸ್ಕಾರಗಳು.  ನಾನು ಕ್ಷೇಮವಾಗಿರುವೆ. ಬೇರೆ ಬೇರೆ ಭಾಷೆಯನ್ನಾಡುವ, ನಾನಾ ಸಂಸ್ಕ್ರತಿಯನ್ನು, ಆಚಾರ ವಿಚಾರಗಳನ್ನು ಆಚರಿಸುವ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಹುಟ್ಟಿರುವುದು ನಮ್ಮ ಭಾಗ್ಯ.  ಸ್ವಾಮಿ ವಿವೇಕಾನಂದರಂತಹ ಮಹಾನ್ ಪುರುಷರು ಹುಟ್ಟಿರುವ ಈ ನಾಡಿನಲ್ಲಿ ನಾವು ಜನಿಸಿರುವುದು ನಮ್ಮ ಪುಣ್ಯ. ಭಾರತದಲ್ಲಿ ಅನೇಕ ಆದರ್ಶ ವ್ಯಕ್ತಿಗಳು ಜನಿಸಿದ್ದಾರೆ. ಅವರ ಆದರ್ಶಗಳನ್ನು ಸ್ವಲ್ಪ ಮಟ್ಟಿಗಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಪ್ರಜೆಗಳಾಗಬಹುದು. ನಾವಿರುವ ಪರಿಸರದಲ್ಲಿ ನೀರು , ವಿದ್ಯುತ್ತನ್ನು ಮಿತವಾಗಿ ಬಳಸಿ, ಎಲ್ಲೆಂದರಲ್ಲಿ ಕಸವನ್ನು ಬಿಸಾಡದೇ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಪ್ರೀತಿಯಿಂದ ಜೀವನವನ್ನು ನಡೆಸಿದರೆ ಅದೇ ನಾವು ಮಾಡುವ ದೇಶ ಸೇವೆ ಎಂಬುವುದು ನನ್ನ ಅಭಿಪ್ರಾಯ. ಸತ್ಯದ ಮಹತ್ವದ ಬಗ್ಗೆ ಉತ್ತಮವಾದ ಕತೆಯನ್ನು ಬರೆದಿದ್ದೀರಿ. ನಿಮಗೆ ಕೃತಜ್ಞತೆಗಳು ಇಲ್ಲಿಗೆ ನನ್ನ ಪತ್ರ ಕೊನೆಗೊಳಿಸುತ್ತೇನೆ. ಮುಂದಿನ ಪತ್ರದಲ್ಲಿ ಭೇಟಿಯಾಗೋಣ.
.............................................. ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ  ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
*******************************************



     ಮಕ್ಕಳ ಜಗಲಿಯ ಎಲ್ಲಾ ಪ್ರೀತಿ ಪಾತ್ರರಿಗೂ ಆತ್ಮೀಯ ಶುಭ ನಮನಗಳು... ನಾನು ಪ್ರಿಯ...
ವಿವೇಕಾನಂದರ ಜನ್ಮ ದಿನದ ಸವಿ ನೆನಪಿನ ಮಧುರ ಕ್ಷಣಗಳು..... ಎಳ್ಳು - ಬೆಲ್ಲದೊಂದಿಗೆ  ಸಂಕ್ರಾಂತಿ ಹಬ್ಬದ ಸಿಹಿ ಕ್ಷಣಗಳನ್ನು ಮುಗಿಸಿ ಗಣರಾಜ್ಯೋತ್ಸವ ಆಚರಣೆಯ ತರಾತುರಿ ಯಲ್ಲಿದ್ದೇವೆ......! 
     ಅಕ್ಕಾ ನನಗೆ, ನಿಮ್ಮ ಪತ್ರದಲ್ಲಿ ನೀವು ಪ್ರಸ್ತಾಪಿಸಿರುವ ಕಥೆಯು ತುಂಬಾ ಇಷ್ಟ ಆಯ್ತು. ಇಂದಿನ ಸಮಾಜ ಹೇಗಿದೆ ಎಂದರೆ ಶ್ರೀಮಂತಿಕೆ ಹಾಗೂ ಹಣ ಇದ್ದಾಗ ಮಾತ್ರ ಸತ್ಯಕ್ಕೆ ಬೆಲೆ...!  ಇಲ್ಲದಿದ್ದರೆ ಅದು ಬರೀ ಎರಡು ಪದ ಮಾತ್ರ...!!  ನಮ್ಮಲ್ಲಿನ ಅತ್ಯಧಿಕ ಪ್ರಮಾಣದ  ಸಂಪತ್ತನ್ನು  ನಾವು ಮಾತ್ರ ಸುಖಿಸದೆ... ಅದನ್ನು ಇತರರಿಗೆ ಹಂಚಿ ಅವರ ಏಳ್ಗೆಯಲ್ಲಿ ಸಂಭ್ರಮಿಸಬೇಕು. ನಮ್ಮಲ್ಲಿ ಎಲ್ಲಾ ಇದ್ದು ಸತ್ಯವಂತಿಕೆ ಇಲ್ಲದಿದ್ದರೆ ಇದ್ದ ಎಲ್ಲವೂ ವ್ಯರ್ಥ ಎಂಬ ಒಳ್ಳೆಯ ಸಂದೇಶವನ್ನು ಸಾರುವ ಕಥೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಅಕ್ಕ.... ನಮ್ಮ ನಿಮ್ಮೊಂದಿಗೆ ಪತ್ರ ಬರಹ ಸದಾ ಅರಳುತ್ತಿರಲಿ........
...................................................... ಪ್ರಿಯ.
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ (ತಾ), ದಕ್ಷಿಣ ಕನ್ನಡ ( ಜಿ).
*******************************************



        ನಮಸ್ತೆ  ಅಕ್ಕ. ನಾನು ನಿಮ್ಮ  ಗೀತಾಲಕ್ಷ್ಮಿ .   ನೀವು ಬರೆದ  ಕಥೆಯಲ್ಲಿ ನನಗೆ ಇಷ್ಟವಾದ ಅಂಶವೆಂದರೆ ಪ್ರಜೆಗಳೆಲ್ಲರೂ  ಶ್ರೀಮಂತರಾಗಿರಬೇಕೆಂಬ  ರಾಜನ  ಬಯಕೆ, ಹಾಗೂ ರಾಜನ ಒಳ್ಳೆಯ ಮನಸ್ಸು ನನಗೆ  ಇಷ್ಟವಾಯಿತು. ಹಾಗೂ ರಾಜನು ಸತ್ಯಕ್ಕೆ ನೀಡಿದ  ಬೆಲೆ ನನಗೆ ಇಷ್ಟವಾಯಿತು. ನಾವು  ಸಮಾಜದಲ್ಲಿ  ಒಳ್ಳೆಯ  ಜೀವನ ನಡೆಸಬೇಕಾದರೆ, ಹಾಗೂ  ಸ್ವಾಭಿಮಾನದಿಂದ ಬಾಳಬೇಕಾದರೆ, ನಾವು ಮೊದಲು  ಸತ್ಯವಂತರಾಗಿರಬೇಕು. ನಾವು ಯಾವತ್ತೂ, ಸತ್ಯವನ್ನೇ ಮಾತಾಡಿದರೆ,  ಸತ್ಯದ ಕಡೆಗೆ ಇದ್ದರೆ, ನಾವು  ಸ್ವಾಭಿಮಾನದಿಂದ ಬಾಳಬಹುದು ಹಾಗೂ ಯಶಸ್ಸನ್ನು ಗಳಿಸಬಹುದು ಎಂದು ನನ್ನ ಅಭಿಪ್ರಾಯ. ನಾವು ನಮ್ಮ ಜೀವನದಲ್ಲಿ ಸತ್ಯವಂತರಾಗಿರೋಣ.                  ಧನ್ಯವಾದಗಳು.
.................................................. ಗೀತಾಲಕ್ಷ್ಮಿ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮುರುವ ಮಾಣಿಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


ಎಲ್ಲರಿಗೂ ನಮಸ್ಕಾರಗಳು. ನಾನು ಪ್ರಣಮ್ಯ.ಜಿ.  ಹೊಸ ಹೊಸತರದ ಸಂದೇಶಗಳೊಂದಿಗೆ, ಮಾಹಿತಿಗಳ ಹೊತ್ತು ತರುತ್ತಿರುವ ಅಕ್ಕನ  ಪತ್ರ ನಿಜಕ್ಕೂ ಅಭಿನಂದನೀಯವಾದದ್ದು. ಬೆಳೆಯುತ್ತಿರುವ ನಮ್ಮಂತಹ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ಮೌಲ್ಯಯುತ ಸಮಾಚಾರಗಳನ್ನು ಸಾದರಪಡಿಸುತ್ತಿರುವ ನಿಮಗೆ ನಾವೆಂದಿಗೂ ತಲೆಬಾಗಲೇಬೇಕು. ಪಾಠಪುಸ್ತಕದಿಂದ ಮಾತ್ರ ಕಲಿತರೆ ಅದು ಪರಿಪೂರ್ಣ ವಿದ್ಯೆಯಲ್ಲ. ಅದರ ಜೊತೆ -ಜೊತೆಗೆ ನಮ್ಮ ದಿನಚರಿಗಳು, ಸುದ್ದಿ - ಸಮಾಚಾರಗಳು, ಸಮಾಜದ ಆಗು-ಹೋಗುಗಳು ನಮಗೆ ಅನುಭವದ ಜೊತೆಗೆ ಜೀವನ ಪಾಠವನ್ನು ಕಲಿಸಿ ಕೊಡುತ್ತವೆ. ಇಂತಹ ನೀತಿ ಪಾಠಗಳನ್ನು ನಮ್ಮ ಬದುಕಿನ ಹಾದಿಯ ರೂಪಿಸುವ ಉತ್ತಮವಾದ ಮಾರ್ಗದರ್ಶಕವನ್ನಾಗಿ ಆಯ್ಕೆ ಮಾಡಿಕೊಳ್ಳುವುದು ಜಾಣನಾದವನ ಕರ್ತವ್ಯವೆಂದೇ ಹೇಳಬೇಕು. ಜಗಲಿಯೊಂದಿಗೆ ಇನ್ನಷ್ಟೂ ವಿಚಾರಗಳನ್ನು ಹಂಚಿಕೊಳ್ಳುವ ಅಭಿಲಾಷೆಯಿದ್ದರೂ, ಪೂರ್ವ ಸಿದ್ಧತಾ ಪರೀಕ್ಷೆಗಳ ತಯಾರಿಯ ಸಂದರ್ಭವಾದ್ದರಿಂದ ಬರವಣಿಗೆಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲವೆಂಬ ಬೇಸರವಿದೆ. ಮಕ್ಕಳ ಜಗಲಿ ಎಂಬ ಉತ್ತಮವಾದ ವೇದಿಕೆಗೆ ನಾನೂ ಒಬ್ಬ ಸದಸ್ಯೆಯಾಗಿ ಸೇರಿಕೊಂಡಿರುವುದಕ್ಕೆ ನನಗೆ ತುಂಬಾನೇ ಹೆಮ್ಮೆ ಇದೆ. ಅನಿರೀಕ್ಷಿತವಾಗಿ ನನಗೆ ಜಗಲಿಯ ಕಡೆಯಿಂದ ಕವನ ರಚನೆಗೆ ಒದಗಿಸಿದ್ದ  ಒಂದು ಒಳ್ಳೆಯ ಅವಕಾಶವನ್ನು ನಾನೆಂದೂ ಮರೆಯುವುದಿಲ್ಲ. ಜಗಲಿಯ ಎಲ್ಲಾ ಪ್ರೋತ್ಸಾಹಕ ಮಾಗದರ್ಶಕರಿಗೂ ನನ್ನ ಅನಂತ ಧನ್ಯವಾದಗಳು. ಅಕ್ಕನ ಮುಂದಿನ ವಾರದ ಪತ್ರದ ನಿರೀಕ್ಷೆಯೊಂದಿಗೆ .........
............................................... ಪ್ರಣಮ್ಯ ಜಿ 
10 ನೇ ತರಗತಿ
ಸಂತ ಜಾರ್ಜ್ ಆಂಗ್ಲಮಾಧ್ಯಮ 
ಪ್ರೌಢಶಾಲೆ ನೆಲ್ಯಾಡಿ
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


      ಹರಿ ಓಂ...  ನಮಸ್ತೆ ...... ನಾನು ಸ್ರಾನ್ವಿ ಶೆಟ್ಟಿ.  ಅಕ್ಕ ಹೇಗಿದ್ದೀರ....  ನಿಮ್ಮ ಪತ್ರದಲ್ಲಿರುವ ಕಥೆ ಓದಿದೆ ಅಕ್ಕ ನಿಜವಾಗಿಯೂ ಅರ್ಥಪೂರ್ಣವಾಗಿತ್ತು. ನಿಜ ಅಕ್ಕ ನಾವು  ಸತ್ಯ ಮಾತಾಡಿದರೇನೆ  ನಮಗೆದುರಾಗಿ ಮರ್ಯಾದೆ, ಇಲ್ಲಂದರೆ ಕೆಲವರು ಹೇಳುತ್ತಾರೆ, ಅವರ ಹತ್ರ ಏನು ಮಾತು...  ಅವರು ಮಾತನಾಡುವುದೇ  ಸುಳ್ಳು ಅಂತಾರೆ. ಹೌದು ಅಕ್ಕ ನಮ್ಮ ದೇಶವನ್ನು ಶ್ರೀಮಂತಗೊಳಿಸುವಳ್ಳಿ ನಮ್ಮಂತ  ಯುವಜನರ ಪಾತ್ರ ಬಹಳನೇ ಮುಖ್ಯ. ನಾವು ಕೆಲವರ ನಾಟಕೀಯ ಮಾತುಗಳಿಗೆ ಸುಳ್ಳು ಆಶ್ವಾಸನೆ ಗಳಿಗೆ ಕಿವಿಗೊಡದೆ ಯುವಜನರು ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ  ಎಂಬ ಮಾತಿನಂತೆ ನಮ್ಮ ಒಳ್ಳೆಯ ನಡತೆಯಿಂದ ನಮ್ಮ ಕಲಿಕೆಯನ್ನು ಗುರಿಯಾಗಿಸಿ ದೇಶಕ್ಕೆ ಒಳ್ಳೆಯ ಪ್ರಜೆ ಅನ್ನಿಸಬೇಕು. 
................................................. ಸ್ರಾನ್ವಿ ಶೆಟ್ಟಿ   
9ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article