-->
ಜೀವನ ಸಂಭ್ರಮ : ಸಂಚಿಕೆ - 63

ಜೀವನ ಸಂಭ್ರಮ : ಸಂಚಿಕೆ - 63

ಜೀವನ ಸಂಭ್ರಮ : ಸಂಚಿಕೆ - 63
                                                    
               ಮಕ್ಕಳೇ, ಒಂದು ಸುಂದರ ಕಥೆ ಓದಿ.
ಒಂದು ಊರಿನಲ್ಲಿ ಒಬ್ಬ ವ್ಯಕ್ತಿ ಇದ್ದ. ಬಲಿಷ್ಠನಾಗಿದ್ದ ಆದರೆ ಸೋಮಾರಿಯಾಗಿದ್ದನು. ಅವನು ಊಟದ ಸಮಯಕ್ಕೆ ಬೇರೆಯವರ ಹತ್ತಿರ ಭಿಕ್ಷುಕನಂತೆ ಬೇಡುತ್ತಿದ್ದ. ಹೀಗಿರಬೇಕಾದರೆ ಒಮ್ಮೆ ಒಬ್ಬ ಸಂತನ ಬಳಿ ಬಂದು ಹೇಳಿದ, "ನಾನು ಬಡವ. ನನ್ನ ಹತ್ತಿರ ಏನೂ ಇಲ್ಲ. ತಾವೇ ಏನಾದರೂ ದಾರಿ ತೋರಿ" ಎಂದನು. ಅದಕ್ಕೆ ಸಂತ ಹೇಳಿದ, "ನೀನು ಬಡವನಲ್ಲ. ನೀನು ದೊಡ್ಡ ಶ್ರೀಮಂತ" ಎಂದು. ಬಡವ ಕೇಳಿದ, "ಅದೇಗೆ ನಾನು ಶ್ರೀಮಂತ?." ಅದಕ್ಕೆ ಸಂತ ಹೇಳಿದ. "ನಿನ್ನಲ್ಲಿರುವ ವಸ್ತು ನನಗೆ ನೀಡಿದರೆ, ನಿನಗೆ ನಾನು ಹಣ ನೀಡುತ್ತೇನೆ." ತರುಣ ಸಂತೋಷದಿಂದ ಹೇಳಿದ, "ಆಯಿತು". ಸಂತ ಹೇಳಿದ, "ನಿನ್ನ ಒಂದು ಕಣ್ಣು ಕೊಡು, ಒಂದು ಲಕ್ಷ ನೀಡುತ್ತೇನೆ". ಅದಕ್ಕೆ ತರುಣ ಹೇಳಿದ, "ಬೇಡ ಅದು ನನಗೆ ಇರಲಿ. ಸಂತ ಹೇಳಿದ, "ನಿನ್ನ ಒಂದು ಕಿಡ್ನಿ ಕೊಡು, ಐದು ಲಕ್ಷ ನೀಡುತ್ತೇನೆ". ತರುಣ ಹೇಳಿದ, "ಬೇಡ ಅದು ನನಗೆ ಇರಲಿ." ಸಂತ ಹೇಳಿದ , "ನಿನ್ನ ದೇಹದಲ್ಲಿರುವ 10 ಲೀಟರ್ ರಕ್ತ ನೀಡು, 10,000 ನೀಡುತ್ತೇನೆ". ಅದಕ್ಕೆ ತರುಣ ಹೇಳಿದ, "ಇಲ್ಲ" ಎಂದು. ಆಗ ಸಂತ ಹೇಳಿದ, "ನಿನ್ನ ಒಂದು ಕಣ್ಣಿನ ಬೆಲೆ ಒಂದು ಲಕ್ಷ, ಒಂದು ಕಿಡ್ನಿಯ ಬೆಲೆ 5 ಲಕ್ಷ, ನಿನ್ನ ರಕ್ತದ ಬೆಲೆ ರೂ.10,000. ಕೇವಲ ಈ ಮೂರು ವಸ್ತುಗಳ ಬೆಲೆ 6,10,000, ಇನ್ನು ಉಳಿದ ಅಂಗಗಳ ಬೆಲೆ ಎಷ್ಟು?. ಹೇಳು, ನೀನು ಹೇಗೆ ಬಡವ. ನಿನ್ನ ತಂದೆ ತಾಯಿ ನಿನಗೆ ಸುಂದರ ದೇಹ ನೀಡಿದ್ದಾರೆ. ಆ ದೇಹದ ಅಂಗಗಳನ್ನು ಚೆನ್ನಾಗಿ ಬಳಸಿ, ದುಡಿದರೆ, ನೀನು ಕೋಟ್ಯಾಧಿಪತಿಯಾಗುತ್ತಿಯೆ?. ನಿನ್ನ ಕೈ, ಕಾಲು, ಮನಸ್ಸು ಮತ್ತು ಬುದ್ಧಿ ಬಳಸಿ ಸುಂದರ ಕೆಲಸ ಮಾಡು. ನೀನು ಶ್ರೀಮಂತ ಆಗುತ್ತೀಯ. ಆದರೆ ನಿನ್ನ ಅಂಗಗಳನ್ನು ಮನಸ್ಸು ನಿಯಂತ್ರಿಸುತ್ತದೆ. ಅದನ್ನು ಜಾಗೃತಗೊಳಿಸು ಎಂದು ಹೇಳಿದ.
     ಆ ತರುಣ ದೇಹದ ಸುಖಕ್ಕಾಗಿ ಭಿಕ್ಷಾಟನೆ ಪ್ರಾರಂಭ ಮಾಡಿದ್ದನು. ಇಂದು ನಾವೆಲ್ಲ ಏನು ಗಳಿಸಿದ್ದೇವೆಯೋ?. ಆ ಗಳಿಸಿರುವ ಸಂಪತ್ತಿರುವುದು, ಸುಖಕ್ಕಾಗಿ. ಸುಖವನ್ನೇ ಸಂತೃಪ್ತಿ ಎಂದು ಭಾವಿಸಿದ್ದೇವೆ. ಅದು ತಪ್ಪು. ಸಂತೃಪ್ತಿ ಎಂದರೆ ಇರುವುದನ್ನೇ ಬಳಸಿ ಆನಂದ ಪಡುವುದು. ಅಂದರೆ ಇರುವುದನ್ನು ಸುಂದರವಾಗಿ ಬಳಸಿ ಆನಂದ ಪಡುವುದೇ ಸಂತೃಪ್ತಿ. ಇಲ್ಲದರ ಕಡೆ ಗಮನಹರಿಸದಿರುವುದೇ ಸಂತೃಪ್ತಿ. ಹೋಲಿಸದಿರುವುದೇ ಸಂತೃಪ್ತಿ. ಇರೋದರಲ್ಲಿ ಏನು ಸುಂದರವಾಗಿದೆಯೋ, ಅದ್ಭುತವಾಗಿದೆಯೋ ಅದನ್ನು ನೋಡಿ ಆನಂದ ಪಡುವುದು ಸಂತೃಪ್ತಿ. ಇರೋದರಲ್ಲಿ ಸುಂದರವಾಗಿರುವುದನ್ನು ನೋಡುವುದನ್ನು ಕಲಿತರೆ ಅದೇ ಸಂತೃಪ್ತಿ. ನಮಗೆ ಏನು ದೊರೆತಿದೆ ಅದನ್ನು ಬಳಸಿ ಸಂತೋಷ ಪಡುವುದೇ ಸಂತೃಪ್ತಿ. ನಿಸರ್ಗ ನಮಗೆ ಏನು ಅಳವಡಿಸಿದೆ ಅದನ್ನು ಬಳಸಿ ಸಂತೋಷ ಪಡುವುದೇ ಸಂತೃಪ್ತಿ. ನಮಗೆ ರಾಗ ಹಾಡಲು ಬರುವುದಿಲ್ಲ. ಆದರೆ ನಿಸರ್ಗ ಕಿವಿ ನೀಡಿದೆ. ಕಿವಿ ಬಳಸಿ, ಕೇಳಿ ಆನಂದ ಪಡೋದು. ನಮಗೆ ಆರ್ಥಿಕ ಶಕ್ತಿ ಕಡಿಮೆ. ಬೇರೆಯವರು ಸುಂದರ ಮನೆ ನಿರ್ಮಿಸಿದ್ದರೆ, ನಮಗೆ ನಿಸರ್ಗ ಕಣ್ಣು ನೀಡಿದೆ, ಈ ಕಣ್ಣನ್ನು ಬಳಸಿ ನೋಡಿ ಆನಂದ ಪಡೋದು. ನಿಸರ್ಗ ನಮಗೆಲ್ಲರಿಗೂ ಒಂದೊಂದು ವಿಶೇಷ ಸಾಮರ್ಥ್ಯ ನೀಡಿದೆ, ನೃತ್ಯ, ನಟನೆ, ಗಾಯನ, ಚಿತ್ರಕಲೆ, ಶಿಲ್ಪಕಲೆ, ಕ್ರೀಡೆ ಹೀಗೆ ಅದನ್ನು ಬಳಸಿ ಸಂತೋಷಪಡಬೇಕು. ಉಳಿದಿದ್ದು ಕೊರತೆಯಾಗದಿರಲಿ ಎಂದು ನಿಸರ್ಗ ಅಂಗಗಳನ್ನು ನೀಡಿದೆ. ಆ ಅಂಗಗಳನ್ನು ಬಳಸಿ ಆನಂದ ಪಡುವುದನ್ನು ಕಲಿಯಬೇಕು. ಈ ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತು, ಜೀವಿ ಮತ್ತು ಅಂಗಗಳು ಚಲನಾ ಶೀಲ. ಸದಾ ಬದಲಾವಣೆಗೆ ಒಳಪಡುತ್ತವೆ. ಈ ಬದಲಾವಣೆಯನ್ನು ಒಪ್ಪಿಕೊಂಡು. ಆ ಕ್ಷಣದಲ್ಲಿ ನಮ್ಮಲ್ಲಿ ಮತ್ತು ನಿಸರ್ಗದಲ್ಲಿ ಏನು ಇದಿಯೋ?. ನಮ್ಮ ದೇಹದಲ್ಲಿ ಏನಿದೆಯೋ?. ನಮ್ಮ ಬಳಿ ಏನಿದೆಯೋ?. ಅದನ್ನು ಪ್ರೀತಿಸಿ, ಬಳಸಿ, ಅನುಭವಿಸಿ, ಆನಂದಿಸುವುದೇ ಸಂತ್ರಪ್ತಿ. ಸಂತೃಪ್ತಿ ಎನ್ನುವುದು ವಸ್ತು ಮತ್ತು ಸಂಪತ್ತಿನಲ್ಲಿ ಇರುವುದಿಲ್ಲ. ಹಾಗಾಗಿ ಸಂತೃಪ್ತಿ ಬೇರೆ, ಸುಖ ಬೇರೆ.
       ನಾನು ಶಾಲೆಗಳಿಗೆ ಭೇಟಿ ನೀಡಿದಾಗ, ಪೋಷಕರು ಮಕ್ಕಳ ಮೇಲೆ ವಹಿಸುವ ಕಾಳಜಿಯನ್ನು ನೋಡಿದಾಗ ವ್ಯಥೆ ಆಗುತ್ತದೆ. ಕೆಲವು ಬಾರಿ ಪೋಷಕರು ಹೇಳುವುದೇನೆಂದರೆ, "ನಾವು ಎಷ್ಟು ಕಷ್ಟ ಪಡುತ್ತಿದ್ದೇವೆ ಗೊತ್ತಾ". ನಮ್ಮ ಮಕ್ಕಳು ಹೀಗೆ ಕಷ್ಟಪಡಬಾರದು ಎಂದು ಹೇಳಿದಾಗ, ನನಗೆ ಕಾಡುವ ಪ್ರಶ್ನೆ ,ಜಗತ್ತು ಯಾವ ದಿಕ್ಕಿಗೆ ಹೋಗುತ್ತಿದೆ?. ಇದರ ಪರಿಣಾಮ ಎಷ್ಟು ಭಯಾನಕ?. ಅನಿಸುತ್ತದೆ. ಆ ಮಕ್ಕಳು ಹೇಗೆ ಸಂತೃಪ್ತ ಜೀವನ ಸಾಗಿಸುತ್ತಾರೆ?. ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಅವರ ಅಂಗಾಂಗಗಳ ಬಳಸುವ ತರಬೇತಿ ನೀಡಬೇಕು. ಅದಕ್ಕಿಂತ ಮುಖ್ಯವಾದ ವಿವೇಕ ಎಂಬ ಸಂಪತ್ತನ್ನು ನೀಡಬೇಕು. ಉದಾಹರಣೆಗೆ ವಿವೇಕವಿಲ್ಲದ ವ್ಯಕ್ತಿಯಲ್ಲಿ ಯೌವ್ವನ, ಸಂಪತ್ತು ಮತ್ತು ಅಧಿಕಾರಿ ಇದ್ದರೆ ಎಷ್ಟು ಭಯಂಕರ ಎನ್ನುವುದನ್ನು ನೋಡಬೇಕಾಗುತ್ತದೆ. ವಿವೇಕವಿಲ್ಲದ ಯೌವನ, ಕೇವಲ ಯಾರಿಗಾದರೂ ತೊಂದರೆ ಮಾಡಬಹುದು. ಹೊಡೆಯಬಹುದು, ಗಲಾಟೆ ಮಾಡಿ, ಉಪದ್ರವ ನೀಡಬಹುದು. ವಿವೇಕವಿಲ್ಲದ ಕೇವಲ ಸಂಪತ್ತು ,ಅನೇಕ ದುಷ್ಟಚಟಗಳಿಗೆ ಕಾರಣವಾಗಬಹುದು .ಅದೇ ರೀತಿ ವಿವೇಕವಿಲ್ಲದ ಕೇವಲ ಅಧಿಕಾರ, ಜನರಲ್ಲಿ ಭಯ ಹುಟ್ಟಿಸಿ ,ಅನಾಹುತ ಮಾಡಬಹುದು. ವಿವೇಕವಿಲ್ಲದ ಒಬ್ಬ ವ್ಯಕ್ತಿಯಲ್ಲಿ ಯೌವ್ವನ, ಸಂಪತ್ತು ಮತ್ತು ಅಧಿಕಾರವಿದ್ದರೆ ,ಅದರ ಪರಿಣಾಮ ಭಯಾನಕ. ಅದರ ಬದಲು ವಿವೇಕ ಇರುವವನಲ್ಲಿ ಯೌವ್ವನ, ಸಂಪತ್ತು ಮತ್ತು ಅಧಿಕಾರವಿದ್ದರೆ ,ತನಗೂ ಮತ್ತು ಸಮಾಜಕ್ಕೂ ಲಾಭವಾಗುತ್ತದೆ. ಮಕ್ಕಳೇ ಇಂದಿನ ಲೇಖನದಲ್ಲಿ ವಿವೇಕದ ಮಹತ್ವ ,ಸಂತೃಪ್ತ ಜೀವನದ ಬಗ್ಗೆ ತಿಳಿದುಕೊಂಡಿದ್ದೇವೆ. ಸಂತೃಪ್ತ ಜೀವನವೇ ಶ್ರೀಮಂತ ಜೀವನ. ಏಕೆಂದರೆ ಆನಂದದಂತ ಬೆಳೆಬಾಳುವ ವಸ್ತು ಇನ್ನೊಂದಿಲ್ಲ. ಸಂತೃಪ್ತ ಜೀವನ ಸಂತೋಷದ ಜೀವನ ಅಲ್ಲವೇ ಮಕ್ಕಳೇ.
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************



Ads on article

Advertise in articles 1

advertising articles 2

Advertise under the article