ಬದಲಾಗೋಣವೇ ಪ್ಲೀಸ್.....! ಸಂಚಿಕೆ - 72
Wednesday, November 16, 2022
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಹಳ್ಳಿಯೊಂದರ ಸುಂದರ ಹಿರಿದಾದ ಆಲದ ಮರ. ತುಂಬಾ ಜನರಿಗೆ ಅನೋನ್ಯವಾಗಿ ಭಾವನೆ ಹಂಚಲು ಇದ್ದ ಪ್ರೀತಿಯ ಮರ. ಬೇಸಿಗೆ ಕಾಲದಲ್ಲಂತೂ ಅದಕ್ಕೆ ಕಟ್ಟಿರುವ ಕಟ್ಟೆ ಹಾಗೂ ನೆರಳ ತಂಪಿನಲ್ಲಿ ಕುಳಿತು ವಿಶ್ರಾಂತಿಗಾಗಿ ಎಲ್ಲರೂ ಹಂಬಲಿಸುತ್ತಿದ್ದ ಮರ. ಎಲ್ಲರೂ ಅದರ ಗುಣಗಳನ್ನು ಹೊಗಳಿ ಹಾಡುತ್ತಿದ್ದ ಮರ. ಅದರ ತಂಪಿನಡಿಯಲ್ಲಿ ಸುಖವಾಗಿ ನಿದ್ದೆ ಮಾಡಿದವರು, ಅದರೊಳಗೆ ತನ್ನ ಜೀವನದ ಚಿಂತೆಗಳನ್ನು ಮರೆತು ನೆಮ್ಮದಿ ಕಂಡವರು ನೂರಾರು ಜನ. ಬೇಸಿಗೆಯ ಸೆಖೆ ತಾಳಲಾರದೆ ಓಡೋಡಿ ಬಂದು ತಂಪಿನಾಶ್ರಯ ಪಡೆದವರು, ಅದರ ಆಶ್ರಯ ಪಡೆದು ಬದುಕಿದ್ದ ಕೀಟ-ಪಕ್ಷಿಗಳಿಗೆ ಲೆಕ್ಕವಿಲ್ಲ. ಹೀಗೆ ನೆಮ್ಮದಿಯ ತಾಣವಾದ ಆಲದ ಮರವು ಸಿಡಿಲ ಬಡಿತಕ್ಕೆ ಒಳಗಾಗಿ ಬೆಂಕಿಗಾಹುತಿಯಾಗಿ ಸಂಕಷ್ಟಕ್ಕೊಳಗಾಗಿತ್ತು. ಅಷ್ಟರವರೆಗೆ ಕಂಡು ಬಾರದ ಕಷ್ಟವನ್ನು ಆ ಮರ ಹೊಂದಿತು. ಬೆಂಕಿಯ ನೋವಿನಿಂದ ನರಳುತ್ತಿದ್ದ ಆ ಮರವನ್ನು "ಛೇ ...ಪಾಪಾ.. ಇದೆಂಥಾ ಪರಿಸ್ಥಿತಿ ಮರಕ್ಕೆ ಬಂತು. ಬೆಂಕಿಯಿಂದ ಇದನ್ನು ಸರಿಪಡಿಸುವವರು ಯಾರು ?" ಎಂದು ಎಲ್ಲರೂ ದೂರದಲ್ಲಿ ನಿಂತು ತಮ್ಮೊಳಗೆ ಪರಸ್ಪರ ಚರ್ಚೆ - ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ ಹೊರತು ಯಾರೂ ಕೂಡಾ ಆ ನೋವಿಗೆ ಜತೆಯಾಗಿ ಹೆಜ್ಜೆಯಿಡುವ ಮನಸ್ಸು ಮಾಡುತ್ತಿರಲಿಲ್ಲ. ಆ ಮರದ ಬಿಳಲಿನಡಿಯಲ್ಲಿ ದಿನಾಲೂ ಆಟವಾಡಿ ಖುಷಿ ಪಡುತ್ತಿದ್ದ ಸಣ್ಣ ಬಾಲಕ ಮಾತ್ರ ಒಂದು ತಂಬಿಗೆ ನೀರು ತಂದು ಮರದ ಮೇಲೆ ಚೆಲ್ಲುತ್ತಾ "ಅಯ್ಯೋ... ಎಲ್ಲೋ ದೂರದಲ್ಲಿ ನಿಂತು ನಿಮ್ಮ ನಿಮ್ಮೊಳಗೆ ಮಾತಾಡುವ ಬದಲು ನಿಮ್ಮಿಂದಾಗುವಷ್ಟು ನೀರನ್ನು ತಂದು ಮರಕ್ಕೆ ಚೆಲ್ಲಿ. ಮರವು ಸಂಪೂರ್ಣ ಸುಡುವ ಬದಲು ಉಳಿದ ಭಾಗವನ್ನಾದರೂ ರಕ್ಷಿಸೋಣ. ಕಾಲವಿನ್ನೂ ಮಿಂಚಿಲ್ಲ. ಬನ್ನಿ ಈ ಮೂಲಕ ನಾಳೆ ನನ್ನಂಥ ಮಕ್ಕಳು ಖುಷಿ ಪಡುವ ಆಟಕ್ಕಾದರೂ ಮರ ಸಿಗಬಹುದು. ಇಲ್ಲದಿದ್ದರೆ ಅದೂ ನಾಶವಾಗುತ್ತದೆ. ನಾವು ಆಟದ ಖುಷಿಯನ್ನು ಕಳೆದುಕೊಳ್ಳುತ್ತೇವೆ" ಎಂದನು. ಅಲ್ಲಿದ್ದ ಹೆಚ್ಚಿನವರಿಗೆ ಅದು ಅರ್ಥವಾಯಿತು. ಕೂಡಲೇ ತಮ್ಮಿಂದಾಗುವ ಕೊಡಪಾನ, ಬಾಲ್ಡಿ ಇತ್ಯಾದಿ ವಿವಿಧ ಪಾತ್ರೆಗಳಲ್ಲಿ ನೀರನ್ನು ತರುತ್ತಾರೆ. ಮರದ ಉಳಿದ ಭಾಗವನ್ನು ಬೆಂಕಿಯಿಂದ ರಕ್ಷಿಸುತ್ತಾರೆ.
ಹೌದಲ್ಲವೇ.... ನಮಗೆ ಆಧಾರ ಸ್ತಂಭವಾಗಿ ಜೀವನಾಡಿಯಾಗಿ, ಸ್ಫೂರ್ತಿಯ ಸೆಲೆಯಾಗಿ ಆಲದ ಮರದಂತೆ ಎಲ್ಲರಿಗೂ ಬೇರೆ ಬೇರೆ ರೀತಿಯಲ್ಲಿ ಅವರವರ ಅಗತ್ಯತೆಗಳನ್ನು ನೀಗಿಸುತ್ತಿದ್ದ ಹಲವಾರು ಆಚಾರ ವಿಚಾರಗಳು ವಿವಿಧ ಕಾರಣಗಳಿಂದ ನಮ್ಮಿಂದ ನಾಶವಾಗುತ್ತಿದೆ. ಮಾನವೀಯ ಸಂಬಂಧಗಳು, ಕೌಟುಂಬಿಕ ಸಂಬಂಧಗಳು, ಹಿರಿಯ - ಕಿರಿಯ ತೃಪ್ತಭಾವಗಳು, ಮಾನವ- ಪ್ರಕೃತಿ ಸಂಬಂಧಗಳು, ಗುರು- ಶಿಷ್ಯ ಮತ್ತು ಮಗು- ಹೆತ್ತವರ ಪ್ರೀತಿಯ ಸಂಬಂಧ.... ಹೀಗೆ ಎಲ್ಲವೂ ವ್ಯಾಪರೀಕರಣವಾಗಿ ನೈಜತೆ ಕಳೆದುಕೊಳ್ಳುತ್ತಿದೆ. ಎಲ್ಲರೂ ದೂರದಲ್ಲಿ ನಿಂತು "ಛೇ.. ಆ ಕಾಲದಲ್ಲಿ ಹಾಗಿತ್ತು. ಈಗ ಹೀಗಾಗುತ್ತಿದೆ. ಕಾಲ ಕೆಟ್ಟುಹೋಗಿದೆ" ಎಂದು ಬಾಯಲ್ಲಿ ಹೇಳುತ್ತಾರೆ ಹೊರತು ಸರಿಪಡಿಸಲು ಹೋಗುತ್ತಿಲ್ಲ. ಬಾಲಕ ಮರ ಉಳಿಸಲು ಕಾರಣನಾದಂತೆ ಈ ಬಗೆ ಯಾರಾದರೊಬ್ಬರು ಕಾರಣರಾಗಬೇಕಾಗಿದೆ. ಬನ್ನಿ ನಾವೇ ಕಾರಣರಾಗೋಣ. ನಾನೇ ಕಾರಣವಾಗೋಣ. ನಮ್ಮಿಂದಾಗುವ ಪ್ರಯತ್ನ ಪಡೋಣ. ಹನಿಹನಿಗೂಡಿ ಹಳ್ಳವಾದಂತೆ - ಅಕ್ಷರಗಳು ಸೇರಿ ಪುಸ್ತಕವಾದಂತೆ ಆಗಿರುವ ಲೋಪವನ್ನು ಸರಿಪಡಿಸಲು ಜತೆಯಾಗೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?.
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************