-->
ಹಕ್ಕಿ ಕಥೆ : ಸಂಚಿಕೆ - 67

ಹಕ್ಕಿ ಕಥೆ : ಸಂಚಿಕೆ - 67

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

                            ಮಕ್ಕಳೇ ನಮಸ್ತೇ. ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ನಾನಿದ್ದ ಹಳೆಯ ಶಾಲೆ ಸಂಸೆಗೆ ಮೊನ್ನೆ ತಾನೇ ಹೋಗಿ ಬಂದೆ. ಶಾಲೆಯ ಅಂಗಳದಲ್ಲಿ ನಿಂತಾಗ ಹಳೆಯ ನೆನಪುಗಳೆಲ್ಲ ಮರುಕಳಿಸಿತು. ಶಾಲೆಯ ಮಕ್ಕಳ ಜೊತೆ ಶಾಲೆಯ ಆವರಣದಲ್ಲಿ ಕಾಣುತ್ತಿದ್ದ ಹಕ್ಕಿಗಳೆಲ್ಲ ಮತ್ತೆ ನೆನಪಾದವು. ವಾಚನಾಲಯ ಕೊಠಡಿಯ ಹಿಂದೆ ಹೋದಾಗ ಮತ್ತೆ ಆ ಹಕ್ಕಿಯ ನೆನಪಾಯಿತು. ಏಕೆ ಅದೇ ಹಕ್ಕಿ ಎಂದು ನೀವು ಕೇಳಬಹುದು. ಏಕೆಂದರೆ ನಮ್ಮ ಪಕ್ಷಿ ವೀಕ್ಷಕರ ಬಳಗದಲ್ಲೇ ಆ ಹಕ್ಕಿ ಗೂಡು ಕಟ್ಟುವುದನ್ನು ಮೊದಲು ನೋಡುವ ದಾಖಲಿಸುವ ಅವಕಾಶ ನನಗೆ ಸಿಕ್ಕಿತ್ತು. ನಮ್ಮ ಶಾಲೆಯ ವಾಚನಾಲಯದಲ್ಲಿ ಮಧ್ಯಾಹ್ನದ ಮೊದಲ ಅವಧಿಯಲ್ಲಿ ಬಿಡುವು ಇದ್ದಾಗ ಕುಳಿತು ಏನಾದರೂ ಓದುವುದು ನನ್ನ ಅಭ್ಯಾಸ. ಜೊತೆಗೆ ಇರಲಿ ಅಂತ ಪಕ್ಕದಲ್ಲಿ ಕ್ಯಾಮರಾ ಅಥವಾ ಬೈನಾಕುಲರ್‌ ಇದ್ದೇ ಇರುತ್ತಿತ್ತು. ಒಂದು ದಿನ ಓದುತ್ತ ಕುಳಿತಿದ್ದಾಗ ಹೂ.. ಕು ಕು ಕು ಕೂ.. ಎಂದು ಯಾರೋ ಕರೆದಂತಾಯಿತು. ಕಿಟಕಿಯಿಂದ ಹೊರಗೆ ಗುಡ್ಡದ ಇಳಿಜಾರಿನ ಪೊದೆಗಳಲ್ಲಿ ಏನೋ ಓಡಾಡಿದ ಹಾಗೆ ಕಾಣಿಸಿತು. ಮಧ್ಯಾಹ್ನ ಮಕ್ಕಳ ಓಡಾಟ ಇಲ್ಲದೇ ಇದ್ದುದರಿಂದ ತುಸು ಧೈರ್ಯವಾಗಿ ಪೊದೆಗಳ ಬಳಿಯ ತೆರೆದ ಕೊಂಬೆಯ ಮೇಲೆ ಹಕ್ಕಿಯೊಂದು ಬಂದು ಕುಳಿತುಕೊಂಡಿತು.
       ಬೂದು ಮಿಶ್ರಿತ ಕಂದುಬಣ್ಣದ ಶರೀರ, ಬಿಳೀ ಬಣ್ಣದ ಹುಬ್ಬು, ತಿಳಿ ಹಳದಿ ಬಣ್ಣದ ಕೊಕ್ಕು, ಕುತ್ತಿಗೆಯಿಂದ ಎದೆಯವರೆಗೂ ಬಿಳೀ ಬಣ್ಣದ ಗಡ್ಡ, ಸಪೂರ ಕಡ್ಡಿಯಂತಹ ಎರಡು ಸಣಕಲು ಕಾಲುಗಳು. ಹಕ್ಕಿಯನ್ನು ನೋಡಿದ ತಕ್ಷಣ ತೇಜಸ್ವಿಯವರ ಹಕ್ಕಿ ಪುಕ್ಕ ಪುಸ್ತಕದ ಮುಖಪುಟದಲ್ಲಿ ನೋಡಿದ ಹಕ್ಕಿ ಇದೇ ಅಂತ ಖಾತ್ರಿ ಆಯ್ತು. ಸ್ವಲ್ಪವೂ ಮಿಸುಕಾಡದೇ ಹಕ್ಕಿಯನ್ನೇ ನೋಡುತ್ತಿದ್ದೆ. ಹಕ್ಕಿ ಇನ್ನೊಮ್ಮೆ ಹೂ.. ಕು ಕು ಕು ಕೂ.. ಎಂದು ಕೂಗಿತು. ಅಷ್ಟರಲ್ಲಿ ಗುಡ್ಡದ ಇಳಿಜಾರಿನ ಪೊದೆಗಳ ನಡುವಿನ ಕತ್ತಲಿನಿಂದ ಇನ್ನೊಂದು ಹಕ್ಕಿ ಕುಪ್ಪಳಿಸುತ್ತ ಹೊರಬಂದು ಹಾರಿತು. ಮೊದಲೇ ಬಂದು ಕಾದಿದ್ದ ಹಕ್ಕಿ ಪೊದೆಯ ಒಳಗೆ ಹೋಯಿತು. 
ನಿಧಾನವಾಗಿ ನನ್ನ ಬೈನಾಕುಲರ್‌ ತೆಗೆದು ಪೊದೆಗಳ ಒಳಗೆ ಏನಿದೆ ಎಂದು ನೋಡಲು ಪ್ರಯತ್ನಿಸಿದೆ. ಪೊದೆಗಳ ಒಳಗೆ ನೆಲದ ಇಳಿಜಾರಿನಲ್ಲಿ ತರಗೆಲೆ ಮತ್ತು ಕಡ್ಡಿಗಳನ್ನು ಸೇರಿಸಿದ ಗೂಡೊಂದು ಇತ್ತು. ಅದರೊಳಗೆ ಬಿಳೀಬಣ್ಣದ ಮೊಟ್ಟೆಗಳು ಕಂಡವು. ಹಕ್ಕಿ ಕಪ್ಪಾದರೂ ಮೊಟ್ಟೆ ಕಪ್ಪು ಅಲ್ಲವಲ್ಲ ಎಂದು ಆಶ್ಚರ್ಯವಾಯಿತು. ಕಣ್ಣಳತೆಯಲ್ಲೇ ಗೂಡು ಇದ್ದರೂ ಹತ್ತಿರ ಹೋಗಿ ನೋಡುವ ಅಧಿಕ ಪ್ರಸಂಗ ಮಾಡದೇ ದಿನವೂ ಕಿಟಕಿಯ ಒಳಗಿನಿಂದ ಬೈನಾಕುಲರ್‌ ಮೂಲಕವೇ ನೋಡುತ್ತಿದ್ದೆ. ನೋಡಲು ಗಂಡು ಮತ್ತು ಹೆಣ್ಣು ಎರಡೂ ಒಂದೇ ರೀತಿ ಇದ್ದವು. ನಾನು ನೋಡುತ್ತಿದ್ದೇನೆ ಎಂಬುದು ಎರಡೂ ಹಕ್ಕಿಗಳಿಗೂ ತಿಳಿದಿತ್ತು. ಹಾಗಾಗಿ ಬಹಳ ಎಚ್ಚರಿಕೆಯಿಂದ ಕಾವು ಕೊಟ್ಟು ಮರಿ ಮಾಡುತ್ತಿದ್ದವು. ಮಧ್ಯೆ ನಾಲ್ಕಾರು ದಿನ ರಜೆ ಬಂದುದರಿಂದ ಗಮನಿಸಲು ಆಗಲಿಲ್ಲ. ತಿರುಗಿ ಬಂದ ದಿನ ಗಮನಿಸಿದರೆ ಹಕ್ಕಿಗಳ ಸುಳಿವೇ ಇರಲಿಲ್ಲ. ಮರಿಗಳಿಗೆ ಏನಾದರೂ ಆಯಿತೋ ಅಥವಾ ರೆಕ್ಕೆ ಬಲಿತು ಹಾರಿದವೋ ತಿಳಿಯಲಿಲ್ಲ. ಆ ಹಕ್ಕಿ ಈಗಲೂ ಪ್ರತಿವರ್ಷ ಗೂಡು ಮಾಡುತ್ತದೆ ಎಂದು ಮೊನ್ನೆ ಲೋಕೇಶ್‌ ಸರ್‌ ಹೇಳಿದಾಗ ಬಹಳ ಸಂತೋಷವಾಯಿತು.       
         ಹರಟೆಮಲ್ಲ ಜಾತಿಗೆ ಸೇರಿದ, ಕುಡುಗೋಲಿನಂತೆ ಬಾಗಿದ ಕೊಕ್ಕಿನಿಂದಾಗಿ ಇದರ ಹೆಸರು ಕುಡುಗೊಕ್ಕು ಹರಟೆ ಮಲ್ಲ ಎಂದಾಗಿರಬೇಕು. ದಕ್ಷಿಣ ಭಾರತದ ಪಶ್ಚಿಮ ಮತ್ತು ಪೂರ್ವಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಈ ಹಕ್ಕಿ ನಿಮ್ಮ ಆಸುಪಾಸಿನಲ್ಲೂ ಸಿಗಬಹುದು.  
ಕನ್ನಡದ ಹೆಸರು: ಕುಡುಗೊಕ್ಕು ಹರಟೆ ಮಲ್ಲ 
ಇಂಗ್ಲೀಷ್‌ ಹೆಸರು: Indian Scimitar Babbler
ವೈಜ್ಞಾನಿಕ ಹೆಸರು: Pomatorhinus horsfieldii 
ಚಿತ್ರ ಕೃಪೆ: ಕ್ಲೀಮೆಂಟ್‌ ಫ್ರಾನ್ಸಿಸ್
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article