ಬದಲಾಗೋಣವೇ ಪ್ಲೀಸ್.....! ಸಂಚಿಕೆ - 67
Wednesday, October 12, 2022
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಇತ್ತೀಚೆಗೆ ದೂರದೂರಿನ ಪಯಣದ ಸಂದರ್ಭದಲ್ಲಿ ಭೀಕರ ಅಪಘಾತವೊಂದನ್ನು ಕಂಡೆವು. ಆ ಸ್ಥಳದಲ್ಲಿ 4 ರೀತಿಯ ಜನರ ಗುಂಪನ್ನು ಗುರುತಿಸಿದೆ. ಕೆಲವರು ತಮ್ಮ ತಮ್ಮ ವಾಹನಗಳನ್ನು ದೂರದಲ್ಲಿ ನಿಲ್ಲಿಸಿ ಅಲ್ಲಿಂದಲೆ ಅಪಘಾತದ ಛಾಯಾಚಿತ್ರ ತೆಗೆದು ವಿಡಿಯೋ ಚಿತ್ರೀಕರಣ ಮಾಡುತ್ತಾ ಬ್ಯುಸಿಯಾಗಿದ್ದು ಅಲ್ಲಿಂದಲೆ ಹೊರಟು ಹೋಗುತ್ತಿದ್ದರು. ಕೆಲವರು ಅನಾಥವಾಗಿ ಬಿದ್ದಿರುವ ಅಪಘಾತದ ಗಾಯಾಳುಗಳನ್ನು ಇಣುಕಿ ಮೌಖಿಕ ಪ್ರತಿಕ್ರಿಯೆ (ಛೇ...ಅಯ್ಯೋ ಹೀಗಾಗಬಾರದಿತ್ತು....ಅವನದ್ದು ತಪ್ಪು... ಇವನದ್ದು ತಪ್ಪು.... ಇತ್ಯಾದಿ) ನೀಡಿ ತನ್ನ ಪಾಡಿಗೆ ಹೋಗುತ್ತಿದ್ದರು. ಅವರಿಗೆ ಅಲ್ಲಿನ ಅನಿವಾರ್ಯತೆಗೆ ಸ್ಪಂದಿಸಿ ಸಹಾಯ ಮಾಡುವುದರ ಆಲೋಚನೆ ಇದ್ದಂತೆ ಕಾಣಿಸಲಿಲ್ಲ. ಇನ್ನು ಕೆಲವರು ಅಲ್ಲಿನ ಪರಿಸ್ಥಿತಿಯ ಲಾಭಕ್ಕಾಗಿ ಹುಡುಕಾಡುತ್ತಿದ್ದಂತೆ ಕಾಣಿಸುತ್ತಿದ್ದರು. ಅಪಘಾತ ಸಂದರ್ಭದಲ್ಲಿ ಸಹಾಯ ಮಾಡುವ ನೆಪದಲ್ಲಿ ಹಾಗೂ ನಟನೆಯಲ್ಲಿ ಅಲ್ಲಿ ಚೆಲ್ಲಾಪಿಲ್ಲಿಯಾಗಿರುವ ಹಣ, ಚಿನ್ನ , ಮೊಬೈಲ್ ಇತರೇ ಸಾಮಾಗ್ರಿಗಳ ಹುಡುಕಾಟವೇ ಅವರ ಗುರಿಯಾಗಿತ್ತೇ ಹೊರತು ನೈಜ ಸ್ಪಂದನೆ ಅವರ ಗುರಿಯಾಗಿರಲಿಲ್ಲ. ಆದರೆ ಕೆಲವರು ಮಾತ್ರ ತಮ್ಮ ವೈಯಕ್ತಿಕ ವಿಚಾರಗಳನ್ನು ಮರೆತು ಆ ಸಂದರ್ಭಕ್ಕೆ ಅಗತ್ಯವಿರುವ ಅತೀ ತುರ್ತು ಸಹಾಯಗಳನ್ನು ಮಾಡುತ್ತಿದ್ದರು. ಅವರು ಗಾಯಾಳುಗಳಿಗೆ ಅಗತ್ಯವಿರುವ ಸಹಾಯಗಳನ್ನು ಮಾಡುತ್ತಿದ್ದರು. ನಮ್ಮಿಂದ ಸಾಧ್ಯವಿರುವ ಅಗತ್ಯ ಸಹಾಯಗಳನ್ನು ಅಲ್ಲಿ ಮಾಡಿ ಪಯಣ ಮುಂದುವರೆಸಿದೆವು.
ಈ ಘಟನೆಯು ನಮ್ಮ ಬದುಕಿನಲ್ಲಿ ಬರುವ ಗೋಚರ - ಅಗೋಚರ ಹಾಗೂ ನಿರೀಕ್ಷಿತ - ಅನಿರೀಕ್ಷಿತ ಕಠಿಣ ಸಂದರ್ಭದಲ್ಲಿ ಎದುರಾಗುವ 4 ರೀತಿಯ ಜನರ ಪರಿಚಯ ಮಾಡಿತು. ಕೆಲವರು ನಮ್ಮ ಕಷ್ಟಗಳನ್ನು ಅಥವಾ ಕಠಿಣ ಪರಿಸ್ಥಿತಿಗಳನ್ನು ದೂರದಿಂದಲೇ ಗಮನಿಸಿ ಅಲ್ಲಿಂದಲೇ ಕಾಲ್ಕಿತ್ತುಕೊಳ್ಳುವವರು ಕಂಡು ಬರುತ್ತಾರೆ. ಕೆಲವರು ನಮ್ಮ ಕಷ್ಟಗಳನ್ನು ಗಮನಿಸಿ ಕೇವಲ ಮೌಖಿಕವಾಗಿ ಧನಾತ್ಮಕವಾಗಿಯೂ ಋಣಾತ್ಮಕವಾಗಿಯೂ ಪ್ರತಿಕ್ರಿಯಿಸುತ್ತಾರೆಯೇ ಹೊರತು ಸ್ಪಂದಿಸುವುದಿಲ್ಲ. ಇವರು ಕೂಡಾ ಕ್ಷಣಮಾತ್ರದಲ್ಲಿಯೇ ದೂರ - ದೂರ ಸಾಗಿ ಮರೆಯಾಗುತ್ತಾರೆ. ಕಷ್ಟಕ್ಕೆ ಸಹಾಯ ಮಾಡದೆ ಅಲ್ಲಿಂದಲೇ ಹೊರಟು ಹೋಗುತ್ತಾರೆ. ಕೆಲವರು ನಮ್ಮ ಕಷ್ಟ ಕಾಲದ ಪರಿಸ್ಥಿತಿಯಲ್ಲಿ ಸ್ವಾರ್ಥ ಭಾವದಿಂದ ತಮಗಾಗುವ ಲಾಭವನ್ನು ಮಾತ್ರ ಗಮನಿಸಿ ಸಹಾಯದ ನೆಪದಲ್ಲಿ ಬರುತ್ತಾರೆಯೇ ಹೊರತು ಕಷ್ಟದಲ್ಲಿರುವ ನಮಗೆ ನಿಜವಾದ ಸಹಾಯವನ್ನು ಮಾಡುವತ್ತ ಗಮನಿಸುವುದಿಲ್ಲ. ಇವರು ಒಂಥರಾ ನೀರನ್ನು ಹೀರುವ ಸ್ಪಾಂಜ್ ನಂತೆ. ಕೊನೆಯ ವರ್ಗದವರು ನಿಜವಾದ ಸಹಾಯಕರು. ನಮ್ಮ ಕಷ್ಟಗಳನ್ನು ತನ್ನ ಕಷ್ಟವೆಂದು ಭಾವಿಸಿ ಭಾವನಾತ್ಮಕ - ಮಾನಸಿಕ - ಸಾಮಾಜಿಕ - ಆರ್ಥಿಕ ಹೀಗೆ ಅವಶ್ಯವಿರುವ ಸಹಾಯಕ್ಕೆ ಸ್ಪಂದಿಸಿ ನಮಗೆ ಹೆಗಲಿಗೆ ಹೆಗಲಾಗಿ ಇರುವವರು. ಕಷ್ಟದ ಸಂದರ್ಭದಲ್ಲಿ 'ನಾ ನಿನಗಿದ್ದೇನೆ. ಧೈರ್ಯದಿಂದಿರು" ಎಂದು ಸ್ಫೂರ್ತಿ ತುಂಬುತ್ತಾರೆ. ಗಾಳಿ ಇಲ್ಲದ ಬಲೂನಿಗೆ ಗಾಳಿ ತುಂಬಿ ಜೀವ ಕೊಡುವಂತೆ ಇವರು ನಮಗೆ ಹೊಸ ಜೀವನ ದಾರಿಯನ್ನು ತೋರಿಸಿಕೊಡುತ್ತಾರೆ. ಆದುದರಿಂದ ಈ 4 ಜನರನ್ನು ಗುರುತಿಸಿ ಬದುಕಲು ಕಲಿಯಬೇಕಾಗಿದೆ. ಈ ಕಲಿಕೆಯನ್ನು ಕಲಿಯದವರು ಕಲಿಯುವತ್ತ ಬದಲಾಗಬೇಕಾಗಿದೆ. ಸಹಜ ಬದುಕಿನ ಸರಳ ಸೂತ್ರವನ್ನು ಅರಿತು ಬದಲಾಗೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?.
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************