ಅಕ್ಕನ ಪತ್ರ - 34 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1
Saturday, October 15, 2022
Edit
ಅಕ್ಕನ ಪತ್ರ - 34 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1
ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........
ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ನಮಸ್ಕಾರಗಳು. ನಾನು ಕ್ಷೇಮವಾಗಿರುವೆ. ನಿಮ್ಮ ಪತ್ರ ಓದಿ ಸಂತೋಷವಾಯಿತು. ನೀವು ನಮ್ಮ ಅಲೋಚನೆಗಳ ಮೇಲೆ ಪ್ರಭಾವ ಬೀರಿದ ಅನುಭವ, ಆಚರಣೆಯ ಬಗ್ಗೆ ಬರೆಯಲು ತಿಳಿಸಿದ್ದೀರಿ. ನಿಮ್ಮ ಪತ್ರ ಓದುವಾಗ ಕಳೆದ ವಾರದ 'ಸುಧಾ' ವಾರ ಪತ್ರಿಕೆಯಲ್ಲಿ ಪ್ರಕಟವಾದ ಸಹನಾ ಕಾಂತಬೈಲು ಅವರ ಲೇಖನ 'ಉಪ್ಪಾಡ್ ಪಚ್ಚಿಲ್ ಪಾಡುನೆ' ನೆನಪಾಯಿತು. ಆ ಲೇಖನದಲ್ಲಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಲಾಕ್ ಡೌನ್ ಕಾಲದಲ್ಲಿ ಪ್ರಾರಂಭವಾದ ವಿಶಿಷ್ಟವಾದ ಆಚರಣೆಯ ಬಗ್ಗೆ ಬರೆದಿದ್ದರು. ಅದೇನೆಂದರೆ ಈ ದೈವಸ್ಥಾನದಲ್ಲಿ ಪ್ರತಿ ಸಂಕ್ರಮಣದ ದಿನ ವಿಶೇಷ ಪೂಜೆ ಹಾಗೂ ಬಂದವರಿಗೆಲ್ಲರಿಗೂ ಊಟದ ವ್ಯವಸ್ಥೆ ಇರುತ್ತದೆ. ಈಗ ಘಟ್ಟದಿಂದ ಬರುವ ತರಕಾರಿಗಳು ವಿಷಮಯವಾಗಿರುವುದರಿಂದ ಕರಾವಳಿಯಲ್ಲಿ ಯಥೇಚ್ಛವಾಗಿ ಬೆಳೆಯುವ ಪೌಷ್ಟಿಕಾಂಶಗಳ ಆಗರವಾಗಿರುವ ಹಲಸಿನ ಒಂದು ಬಗೆಯ ಅಡುಗೆ ಮಾಡುವುದೆಂದು ದೈವಸ್ಥಾನದ ಆಡಳಿತ ಮಂಡಳಿಯವರು ತೀರ್ಮಾನಿಸುತ್ತಾರೆ. ಹಾಗಾಗಿ ಊರಿನ ಬೇರೆ ಬೇರೆ ವೃತ್ತಿಗಳಿಗೆ ಸೇರಿದ ಜನರು ಯಾವುದೇ ಭೇದಭಾವವಿಲ್ಲದೆ 'ಉಪ್ಪಾಡ್ ಪಚ್ಚಿಲ್ ಪಾಡುನೆ' ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಹಲಸಿನಕಾಯಿಗಳನ್ನು ಕತ್ತರಿಸಿ ಸೊಳೆಗೆ ಉಪ್ಪು ಹಾಕಿ ಶೇಖರಿಸಿ ಮೂರ್ನಾಲ್ಕು ದೊಡ್ಡ ಡ್ರಮ್ ಗಳಲ್ಲಿ ಹಾಕಿಡುತ್ತಾರೆ. ಪ್ರತಿ ಸಂಕ್ರಮಣದ ದಿನ ಉಪ್ಪಿಗೆ ಹಾಕಿದ ಸೊಳೆಗೆ ಕಡ್ಲೆ ಸೇರಿಸಿ ಪಲ್ಯ ಮಾಡುವ ಒಳ್ಳೆಯ ಪದ್ಧತಿಯನ್ನು ಮಾಡಿರುತ್ತಾರೆ. ಅನೇಕ ಸಂದರ್ಭಗಳಲ್ಲಿ ಮರದಲ್ಲೇ ಹಣ್ಣಾಗಿ, ಕೊಳೆತು ಬಿದ್ದು ಮಣ್ಣು ಸೇರುವ ಹಲಸಿಕಾಯಿಯನ್ನು 'ಉಪ್ಪಾಡ್ ಪಚ್ಚಿಲ್ ಪಾಡುನೆ' ಯಂತಹ ವಿಶಿಷ್ಟ ಆಚರಣೆಯ ಮೂಲಕ ಸಾರ್ವಜನಿಕರ ಕೂಡುವಿಕೆಯಲ್ಲಿ ಹಲಸನ್ನು ಮೌಲ್ಯಯುತವಾಗಿ ಬಳಸುತ್ತಿರುವ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಮಂಡಳಿಯ ಕಾರ್ಯ ನನಗೆ ತುಂಬಾ ಇಷ್ಟವಾಯಿತು. ಈ ಆಚರಣೆಯು ವಿಷಮುಕ್ತ ಆಹಾರ ಉಪಯೋಗದ ಕಾಳಜಿ ಯನ್ನು ತೋರಿಸಿಕೊಟ್ಟಿರುವುದು ತುಂಬಾ ಸಂತೋಷ. ಆಚರಣೆಯ ಬಗ್ಗೆ ಬರೆಯಲು ಅವಕಾಶವಿತ್ತ ನಿಮಗೆ ಧನ್ಯವಾದಗಳು ಹೇಳುತ್ತಾ ನನ್ನ ಪತ್ರವನ್ನು ಕೊನೆಗೊಳಿಸುತ್ತೇನೆ.
10ನೇ ತರಗತಿ
ಎಸ್.ಎಲ್. ಎನ್. ಪಿ. ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ನಮಸ್ತೆ ಅಕ್ಕ. ನಾನು ಶ್ರಾವ್ಯ. ನಾವು ಆರೋಗ್ಯವಾಗಿದ್ದೇವೆ. ನೀವು ಹೇಗಿದ್ದೀರಿ...? ಹೌದಕ್ಕ ರಜೆ ತುಂಬಾನೆ ಖುಷಿ ನೀಡಿತ್ತು. ಹುಲಿ ವೇಷ, ತಾಸೆಯ ಸದ್ದು, ಶಾರದಾ ಮಾತೆಯ ದರ್ಶನ ಇದೆಲ್ಲಾ ತುಂಬಾನೆ ಸಂತಸ ನೀಡಿತ್ತು. ಇದೆಲ್ಲದರ ನಡುವೆ ಬಿಡುಗಡೆಯಾದ "ಕಾಂತಾರ " ಸಿನಿಮಾ ನಮ್ಮ ರಜೆಯನ್ನು ಇನ್ನಷ್ಟು ಮಜವಾಗಿಸಿತ್ತು. ಮೊದಲೇ ಸಿನಿಮಾ ಪ್ರಿಯರಾದ ನಾವು ಈ ಸಿನಿಮಾ ಖಂಡಿತಾ ನೋಡಿದ್ದೇವೆ. ದಕ್ಷಿಣಕನ್ನಡ ಬಿಡಿ ದೇಶದಾದ್ಯಂತ ಹೆಚ್ಚು ಸುದ್ದಿ ಮಾಡಿದೆ. ಸಿನಿಮಾದಲ್ಲಿ ತೋರಿಸಿರುವ ಆಚರಣೆ ಭಾಷೆಯ ಬಳಕೆ, ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಂಬಳ ಇವೆಲ್ಲ ನಮ್ಮನ್ನು ಹೆಚ್ಚು ಆಕರ್ಷಿಸಿದೆ. ಹಳ್ಳಿಯ ಮುಗ್ದ ಜನರನ್ನು ನಂಬಿಸಿ ಮೋಸ ಮಾಡುವ ಧಣಿಗಳು, ಇವೆಲ್ಲದರ ನಡುವೆ ಜನರ ನಂಬಿಕೆ, ನಂಬಿದ ಸತ್ಯ, ಅವರು ಆರಾಧಿಸುವ ದೈವ ಅವರ ರಕ್ಷಣೆಗೆ ಮುಂದಾಗುವುದು ನಮ್ಮನ್ನು ರೋಮಾಂಚನಗೊಳಿಸಿತ್ತು. ಮನುಷ್ಯ ಆವಿಷ್ಕಾರ, ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ಕೆಲ ಆಚರಣೆ, ಸಂಪ್ರದಾಯ ದೈವಾರಾಧನೆ ತನ್ನದೇ ಆದ ಶಕ್ತಿಯ ಮೂಲಕ ಎಲ್ಲವನ್ನು ತಲೆಕೆಳಗಾಗಿಸುವ ಸಾಮರ್ಥ್ಯ ಹೊಂದಿದೆ ಎನ್ನುವುದು ಸತ್ಯ. ತುಳುನಾಡಿನಲ್ಲಿ ಹೆಚ್ಚು ಕಾಣಸಿಗುವ ಇಂತಹ ಸಂಪ್ರದಾಯ ಸಂಸ್ಕೃತಿ ನಮ್ಮ ಹೆಮ್ಮೆ. ನಮಗೂ ನಮ್ಮ ನಮ್ಮ ಮನೆಗಳಲ್ಲಿ ಕುಟುಂಬಗಳಲ್ಲಿ ಇದ್ದಂತದ ಹಿಂದಿನ ಸಂಪ್ರದಾಯ ಆಚರಣೆಗಳನ್ನು ಮೆಲುಕು ಹಾಕುವಂತೆ ಮಾಡಿದ ನಿಮಗೆ ಧನ್ಯವಾದ.
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ನಮಸ್ತೆ ಅಕ್ಕಾ..... ನಾನು ಧೀರಜ್.ಕೆ.ಆರ್.
ನಾನು ಸಹ ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದೇನೆ. ಈ ಸಿನಿಮಾವನ್ನು ನೋಡಿ ನನಗೆ ತುಂಬಾ ಖುಷಿಯಾಯಿತು. ನಾನು ನಮ್ಮ ಮನೆಯವರ ಜೊತೆಗೆ ಕಾಂತಾರ ನೋಡಲು ಚಿತ್ರಮಂದಿರಕ್ಕೆ ತೆರಳಿದೆ. ಎದ್ದು ನಿಂತು ಕೈ ಮುಗಿಯುವಷ್ಟರ ಮಟ್ಟಿಗೆ ಈ ಸಿನಿಮಾವು ಯಶಸ್ವಿಯಾಗಿದೆ. ನಮ್ಮ ತುಳುನಾಡಿನ ದೈವದ ಕಾರಣಿಕ, ಆಚಾರ-ವಿಚಾರ, ಧಾರ್ಮಿಕತೆಯ ಬಗ್ಗೆ ನಂಬಿಕೆ ಹುಟ್ಟುವಂತೆ ಕಾಂತಾರ ಸಿನಿಮಾ ಮಾಡಿದೆ. ನಮ್ಮ ಮನೆ ಕೊಡೆಂಕೀರಿ. ನಮ್ಮದು ದೈವ ಸ್ಥಾನವಿರುವಂತಹ ತರವಾಡು ಮನೆ. ನಮ್ಮ ಮನೆಯಲ್ಲಿ 5 ವರ್ಷಕ್ಕೊಮ್ಮೆ ಧರ್ಮ ನಡಾವಳಿ ನಡೆಯುತ್ತದೆ. ನಾವು ಕಷ್ಟದಲ್ಲಿರುವಾಗ ನಾವು ದೈವ ದೇವರ ಮೊರೆ ಹೋಗಿ ಬೇಡಿಕೊಂಡದ್ದು ಉಂಟು. ಆಗ ದೈವ ದೇವರು ನಮಗೆ ಅನುಗ್ರಹಿಸಿ ನಮ್ಮ ಕಷ್ಟಗಳನ್ನು ದೂರ ಮಾಡಿದ ಅದೆಷ್ಟೋ ಅನುಭವಗಳಿವೆ. ಆದ್ದರಿಂದ ನಾವು ದೈವ ದೇವರನ್ನು ಯಾವತ್ತೂ ನಿಂದನೆ, ಅಪಹಾಸ್ಯ ಮಾಡಬಾರದು. ಕಷ್ಟದ ಸಮಯದಲ್ಲಿ ಯಾರು ಬೇಕಾದ್ರೂ ನಮ್ಮ ಕೈ ಬಿಡಬಹುದು ಆದರೆ ನಾವು ನಂಬಿದ ದೈವ ದೇವರು ಎಂದಿಗೂ ನಮ್ಮ ಕೈ ಬಿಡುವುದಿಲ್ಲ, ನಮ್ಮ ಕೈ ಹಿಡಿದು ನಡೆಸುತ್ತಾರೆ.
ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ ಅಕ್ಕಾ... ಧನ್ಯವಾದಗಳು...
10ನೇ ತರಗತಿ
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ
ಪ್ರೌಢ ಶಾಲೆ ರಾಮಕುಂಜ.
ಕಡಬ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
ನಮಸ್ತೇ ಅಕ್ಕಾ..... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು.
ರಜೆ ಮುಗಿದ ಕೂಡಲೇ ಪರೀಕ್ಷೆ ಇರುವುದರಿಂದ ಓದುವುದು, ಚಿತ್ರ ಮಾಡುವುದು, ಬರೆಯುವುದು ಇದ್ದ ಕಾರಣ ರಜೆ ಮುಗಿದು ಹೋದದ್ದೇ ತಿಳಿಯಲಿಲ್ಲ. ನವರಾತ್ರಿಯ ಹಬ್ಬದ ಸಮಯದಲ್ಲಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಬಂದೆವು. ಹಿರಿಯರು ಮಾಡಿರುವ ಆಚರಣೆಯ ಹಿಂದೆ ಒಂದು ಒಳ್ಳೆಯ ಕಾರಣವೂ ಇರುತ್ತದೆ. ಅವರು ಅದರ ಬಗ್ಗೆ ತಿಳಿದು ಅವರ ಅನುಭವದಿಂದ ನಮಗೆ ಹೇಳುತ್ತಾರೆ. ನಾವು ಅವರು ಹೇಳಿದಾಗ ಭಕ್ತಿಯಿಂದ ಆಚರಣೆ ಮಾಡಬೇಕೆಂದು ನಾನು ನಂಬಿರುವೆನು. ಹಬ್ಬ ಹಾಗೂ ಸಾಂಪ್ರದಾಯಿಕ ಆಚರಣೆಯು ಖಂಡಿತಾ ಬೇಕು. ಇಲ್ಲದೇ ಹೋದಲ್ಲಿ ಮುಂದಿನ ಪೀಳಿಗೆಯವರಿಗೆ ನಮ್ಮ ಆಚರಣೆ ಅಲ್ಲದೇ ದೇವರು, ದೈವ ಯಾವುದರ ಕುರಿತೂ ಭಯ, ಭಕ್ತಿ ಇಲ್ಲದೇ ಹೋಗಬಹುದು. ತಂತ್ರ ಜ್ಞಾನ ಯುಗದಲ್ಲಿ ಇವೆಲ್ಲವನ್ನೂ ಕಳೆದುಕೊಳ್ಳದೆ ಅದರ ಆಚರಣೆಯ ಮಹತ್ವವನ್ನು ಇನ್ನೂ ನಾವು ಉಳಿಸಬೇಕು..... ಧನ್ಯವಾದಗಳು ಅಕ್ಕ,
8ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು, ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************
ನಮಸ್ತೆ ಅಕ್ಕಾ.. ನಾನು ನಿಭಾ. ಹೌದು ರಜೆ ಮುಗಿಯುತ್ತಾ ಬಂತು ರಜೆಯನ್ನು ತುಂಬಾ ಆನಂದಿಸಿದೆವು. ಶಾಲೆ ಪ್ರಾರಂಭವಾದ ಕೂಡಲೇ ಪರೀಕ್ಷೆ ಕೂಡ ಇದೆ. ನೀವು ಹೇಳಿದ ಹಾಗೇ ಈಗ ಎಲ್ಲಿಯೂ ಕಾಂತಾರ ಚಿತ್ರದ್ದೆ ಸದ್ದು. ನಾನು ಚಿತ್ರ ನೋಡಿಲ್ಲ ಆದರೆ ಚಿತ್ರ ತುಂಬಾ ಅದ್ಭುತವಾಗಿದೆ ಎಂದು ಕೇಳಿದ್ದೇನೆ. ನೀವು ಹೇಳಿದಂತೆ ಅದರಲ್ಲಿ ನಮ್ಮ ಸಂಸ್ಕೃತಿಯಾದ ಭೂತಕೋಲ ಕಂಬಳ ದೈವಾರಾಧನೆ ಇದರ ಬಗ್ಗೆ ಇದೆ ಎಂದೂ ಕೇಳಿದ್ದೇನೆ. ಸಂಸ್ಕೃತಿಗಳು ಅಳಿದು ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಅಂತಹ ಒಂದು ಚಿತ್ರ ಬಂದದ್ದು ಬಹಳ ಸಂತೋಷದ ಸಂಗತಿಯಾಗಿದೆ. ಈ ಚಿತ್ರ ಕರಾವಳಿಯ ಸಂಸ್ಕೃತಿಯನ್ನು ಚಿತ್ರದಲ್ಲಿ ತೋರಿಸಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ರಾಜ್ಯಗಳಲ್ಲಿ ಅವರದ್ದೇ ಆದ ನಂಬಿಕೆಗಳು ಆಚರಣೆಗಳು ಇರುತ್ತವೆ. ಇಂತಹ ಆಚರಣೆಗಳನ್ನು ಮರೆಯುವ ಬದಲು ಮುಂದುವರೆಸುತ್ತಾ ಹೋದರೆ ನಮ್ಮ ಮುಂದಿನ ಪೀಳಿಗೆ ಗೆ ತುಂಬಾ ಒಳ್ಳೆಯದು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಇಂತಹ ಆಚರಣೆಗಳೆಂದರೇನು...? ಎಂಬುದೇ ತಿಳಿದಿರಲಿಕ್ಕಿಲ್ಲ. ನಾವೇ ಮುಂದುವರೆಸಬೇಕು ಎಂದೇನಿಲ್ಲ. ಮುಂದುವರೆಸುವವರಿಗೆ ಪ್ರೋತ್ಸಾಹ ನೀಡಿದರೂ ಸಾಕು. ಆದರೆ ಹಿಂದಿನ ಕಾಲದಿಂದಲೂ ಬಂದ ಜನರ ನಂಬಿಕೆ ಆಚರಣೆಗಳನ್ನು ಅಳಿಯಲು ಬಿಡುವುದು ಬೇಡ ಎಂದು ಭಾವಿಸುತ್ತೇನೆ. ಈ ಚಿತ್ರ ನೋಡದಿದ್ದರೂ ಅದರ ಬಗ್ಗೆ ಕೇಳಿ ಟ್ರೈಲರ್ ನೋಡಿ ಮೈ ಜುಮ್ ಎನಿಸುತ್ತದೆ. ಟಿಕೆಟ್ ಕೇಳಲು ಹೋದಾಗ ಅದೂ ಸಿಗಲಿಲ್ಲ ಇದರಲ್ಲೇ ಗೊತ್ತಾಗುತ್ತದೆ ಚಿತ್ರ ಹೇಗಿದೆ ಎಂದು. ನಾನು ಇದುವರೆಗೂ ಚಿತ್ರ ಮಂದಿರಕ್ಕೆ ಹೋಗಿಯೇ ಇಲ್ಲ. ಆದರೆ ಈ ಬಾರಿ ಅವಕಾಶ ಸಿಕ್ಕರೆ ಖಂಡಿತ ಬಿಡುವುದಿಲ್ಲ. ಇಂತಹ ಒಳ್ಳೆ ಸಂಸ್ಕೃತಿಯನ್ನು ತೋರಿಸುವ ಚಿತ್ರದ ಜೊತೆ ಟಾಕೀಸ್ ನೋಡುವ ಅನುಭವವು ಸಿಗುತ್ತದೆ. ಹೀಗೆ ನಮ್ಮ ಸಂಸ್ಕೃತಿ ಆಚರಣೆ ನಂಬಿಕೆಗಳನ್ನು ಬೆಳೆಸೋಣ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಧನ್ಯವಾದಗಳು
9ನೇ ತರಗತಿ
ಸ ಪ ಪೂ ಕಾಲೇಜು ಕೊಂಬೆಟ್ಟು
(ಪ್ರೌಢಶಾಲಾ ವಿಭಾಗ)
ಪುತ್ತೂರು ತಾಲೂಕು, ದ. ಕ. ಜಿಲ್ಲೆ
*******************************************
ನಮಸ್ತೆ ಅಕ್ಕಾ.. ನಾನು ಪ್ರಣಮ್ಯ. ಜಿ. ಅಕ್ಕನ ಪತ್ರ ಓದಿ ಸಂತೋಷವಾಯಿತು. ನಮ್ಮ ಹಿರಿಯರ ಕಾಲದ ಹಬ್ಬ - ಹರಿದಿನಗಳು, ಸಂಪ್ರದಾಯಗಳು, ಜೀವನದ ರೀತಿ-ನೀತಿಗಳು, ಅಷ್ಟೇ ಏಕೆ ಆರೋಗ್ಯ ವ್ಯವಸ್ಥೆಗಳು ಕೂಡ ಮೆಲ್ಲ - ಮೆಲ್ಲಗೆ ಸರಿದು ಮೂಲೆ ಗುಂಪಾಗುವ ಹಂತದಲ್ಲಿದೆ. ಇಂತಹ ಒಂದು ಸಂದರ್ಭದಲ್ಲಿ ನಮ್ಮ ನಾಡಿನ ಪರಂಪರೆಯನ್ನು ಎತ್ತಿ ಹಿಡಿದು ಲೋಕದಾದ್ಯಂತ ಭಕ್ತಿ-ಭಾವದೊಂದಿಗೆ ಸಾಮಾಜಿಕ ಕಳಕಳಿಯನ್ನು ಜಾಗೃತಗೊಳಿಸುವಂತಹ ಮಾಹಿತಿ ಹೊತ್ತು ತಂದ "ಕಾಂತಾರ" ನಿಜಕ್ಕೂ "ದೈವದ ಆವತಾರ" ಎಂದೇ ಹೇಳಬೇಕು.......... ಆಳವಾದ ಜ್ಞಾನ ಸಿಂಚನವನ್ನು ತಮ್ಮ ಬರಹಗಳ ಮೂಲಕ ಹರಡಿ ನಾಡು - ನುಡಿಯ ಬಗ್ಗೆ ಇರುವಂತಹ ಒಲವು, ಗೌರವಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವಂತಹ ಭಾವನೆ ಮೂಡಿಸಿದ ತೇಜಸ್ವಿ ಟೀಚರ್ ನಿಮಗೆ ಧನ್ಯವಾದಗಳು. ನಮ್ಮ ಊರಿನ ನೆರೆಯ ಶಾಲೆಯಲ್ಲಿ ಶಿಕ್ಷಕಿಯಾಗಿರುವ ನಿಮ್ಮ ಕ್ರಿಯಾತ್ಮಕ ಚಟುವಟಿಕೆಗಳನ್ನು ಕಣ್ಣು ತುಂಬಿಸಿ ಕೊಂಡಿರುವ ನಮಗೆ ನಿಮ್ಮ ಮೇಲೆ ಹೆಮ್ಮೆಯಿದೆ.
10 ನೇ ತರಗತಿ
ಸಂತ ಜಾರ್ಜ್ ಆಂಗ್ಲ ಮಾಧ್ಯಮ
ಪ್ರೌಢಶಾಲೆ ನೆಲ್ಯಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
ಹರಿ ಓಂ... ನಾನು ಸ್ರಾನ್ವಿ..... ಹೇಗಿದ್ದೀರ ಅಕ್ಕ. ನಾನು ಚೆನ್ನಾಗಿದ್ದೇವೆ. ನಿಮ್ಮ ಪತ್ರ ಓದಿದೆ ಅಕ್ಕ. ರಜೆ ಮುಗಿದದ್ದೆ ಗೊತ್ತಿಲ್ಲ... ನಾಳೆ ಶಾಲೆಗೆ ಹೋಗಬೇಕು ಪರೀಕ್ಷೆ ಇದೆ. ನಾನು ಕೂಡ ಕಾಂತಾರ ಸಿನಿಮಾ ನೋಡಿದೆ. ಅಬ್ಬಾ ಮೈ ರೋಮಾಂಚನವಾಯಿತು ನೋಡಿ. ನಮ್ಮ ಕರಾವಳಿಯ ದೈವ ದೇವರುಗಳ ಶಕ್ತಿ, ನಮ್ಮಲ್ಲಿ ಇನ್ನಷ್ಟು ಭಕ್ತಿ ಹೆಚ್ಚಿಸಿದೆ. ದೈವದ ಬಗ್ಗೆ ಹೇಳುತ್ತಾರಲ್ಲ, ಅಮ್ಮನಂತೆ ಪ್ರೀತಿ ತೋರಿಸುವವರು ಮಾವನಂತೆ ದಾರಿತೋರಿಸುವರು ಅಂತ, ಅದು ತುಂಬಾ ಇಷ್ಟವಾಯಿತು. ಅದರಲ್ಲಿ ಬರುವ ಕಂಬಳ, ಕೋಳಿ ಅಂಕ ನೋಡಿದೆ, ಅದರಲ್ಲಿ ಬರುವ ಜನಗಳು. ನಾವು ಎಲ್ಲಾ ಜನಾಂಗದವರನ್ನು ಎಲ್ಲಾ ಧರ್ಮದವರನ್ನು ಗೌರವಿಸಬೇಕು. ಎಲ್ಲರನ್ನು ಸಮಾನ ದ್ರಷ್ಟಯಿಂದ ನೋಡಬೇಕೆಂದು ಅಸಿನಿಮಾದಲ್ಲಿ ತೋರಿಸಿಕೊಟಿಟದ್ದಾರೆ. ರಿಷಭ್ ಶೆಟ್ಟಿಯವರ ಅಭಿನಯವಂತು ಅಮೋಘ. ಧನ್ಯವಾದ ಅಕ್ಕ. ................................................ ಸ್ರಾನ್ವಿಶೆಟ್ಟಿ
9ನೇ ತರಗತಿ
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ
ಸ್ಕೂಲ್ ಗುಡ್ಡೆಯಂಗಡಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೆ ಅಕ್ಕ ನನ್ನ ಹೆಸರು ಸಿಂಚನಾ ಶೆಟ್ಟಿ
ನಾವು ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದೇವೆ.
ನನಗೆ ಕಾಂತಾರ ಸಿನಿಮಾ ತುಂಬಾ ತುಂಬಾ ಇಷ್ಟವಾಯಿತು. ಸಿನಿಮಾ ನೋಡುವಾಗ
ನನಗೆ ನಮ್ಮ ಊರಿನ ಜಾತ್ರೆ ನೆನಪಾಯಿತು.
ನಮ್ಮನ್ನು ಆ ದೇವರು ಯಾವತ್ತೂ ಕೈ ಬಿಡಲು ಸಾಧ್ಯವಿಲ್ಲ. ಬದುಕನ್ನು ಸಂಭ್ರಮಿಸುವಂತೆ ಮಾಡುವ ಹಬ್ಬ ಹಾಗೂ ಇತರ ಸಾಂಪ್ರದಾಯಿಕ ಆಚರಣೆಗಳು ಖಂಡಿತಾ ಬೇಕು. ನನಗೆ ಮೊದಲಿಗೆ ಭಯವಾಯಿತು. ಸಿನಿಮಾದ ಕೊನೆಗೆ ದೇವರ ಮೇಲೆ ನನಗೆ ತುಂಬಾ ಆಸಕ್ತಿ ಬಂದಿತು. ನಿಮ್ಮ ಆರೋಗ್ಯ ಕೂಡ ಜೋಪಾನ. ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಸಿಂಚನಾಳ ನಮನಗಳು. ಧನ್ಯವಾದಗಳು
5ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇಡಿಗುಳಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
ಮಕ್ಕಳ ಜಗಲಿ... ಅಕ್ಕನ ಪತ್ರ--34
ಪ್ರೀತಿಯ ಅಕ್ಕನಿಗೆ.. ಲಹರಿಯು ಮಾಡುವ ನಮಸ್ಕಾರಗಳು. ಇತ್ತೀಚಿನ ದಿನಗಳಲ್ಲಿ ನಾನು ನಾಲ್ಕು ಕಡೆಯೂ ಕಾಂತಾರದ ಸದ್ದನ್ನೇ ಕೇಳಿರುವೆನು. ನಿಮ್ಮ ಪತ್ರ ಓದುವ ಹುಮ್ಮಸ್ಸಿನಲ್ಲಿ ಮೊಬೈಲ್ ಹಿಡಿದು ಕೊಂಡಾಗ ಅಲ್ಲೂ ಕಾಂತಾರ ಸದ್ದು ಮಾಡಿತು. ನನಗೆ ಖುಷಿಯ ಜೊತೆ ಸೋಜಿಗವೂ ಅನಿಸಿತು. ನಮ್ಮೆಲ್ಲರ ಪ್ರೀತಿಯ ಅಕ್ಕ ಕೂಡ ಕಾಂತಾರದೆ ವಿಷಯವನ್ನು ಮಾತನಾಡುತ್ತಿರುವವರಲ್ಲ ಎಂದು. ನಿಜ ಅಕ್ಕ ಈ ಸಿನಿಮಾ ಮನಸ್ಸಿಗೆ ನಾಟುವಂತದ್ದು. ನಮ್ಮ ಸಂಪ್ರದಾಯಗಳನ್ನು, ನಂಬಿಕೆಗಳನ್ನು ಉಳಿಸಿ ಬೆಳೆಸುವಂತೆ ಮನಸ್ಸು ಮಾಡಲು ಈ ಸಿನಿಮಾ ತುಂಬಾ ಸಹಾಯಕವಾಗಬಲ್ಲದು ಎಂದು ನನ್ನ ಅನಿಸಿಕೆ. ನಾವೆಲ್ಲರೂ ಕುಟುಂಬ ಸಮೇತರಾಗಿ ಕುಟುಂಬದ ಭೂತಕ್ಕೂ, ಕೋಲಕ್ಕೂ ಹೋದಂತೆ ಅನಿಸುವುದು ಈ ಸಿನಿಮಾ ನೋಡಿದಾಗ. ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ಅವಿಭಕ್ತ ಕುಟುಂಬದಲ್ಲಿ ಇದ್ದಾಗ ಎಲ್ಲರೂ ಒಟ್ಟಾಗಿ ಕುಳಿತು ಹಬ್ಬ ಹರಿದಿನಗಳಂದು ಊಟ ಮಾಡುವುದು ನೋಡುವುದೇ ಒಂದು ಸಂತೋಷ ಎಂದು ಹೇಳುತ್ತಿದ್ದರು. ಆದರೆ ಈಗ ನಮಗೆ ಅಂತಹ ಸುಸಂದರ್ಭಗಳನ್ನು ನೋಡುವ ಹಾಗಿಲ್ಲ. ಯಾಕೆಂದರೆ ಈಗ ಎಲ್ಲವೂ ವಿಭಕ್ತ ಕುಟುಂಬ. ದೀಪಾವಳಿ ಹಬ್ಬವು ಹತ್ತಿರ ಬರುತ್ತಿದೆ. ಈ ದಿನಗಳಂದು ನಾವೆಲ್ಲ ಕುಟುಂಬ ಸಮೇತರಾಗಿ ಸಂತೋಷದಿಂದ ದೀಪಾವಳಿ ಹಬ್ಬವನ್ನು ಆಚರಿಸೋಣ. ಪ್ರೀತಿಯ ಅಕ್ಕ ನಿಮ್ಮ ಮುಂದಿನ ಪತ್ರಕ್ಕಾಗಿ ನಾನು ಕಾಯುತ್ತಿರುವೆನು. ಇಂತಿ ನಿಮ್ಮ ಪ್ರೀತಿಯ ಲಹರಿ.
೭ ನೇ ತರಗತಿ,
ತುಂಬೆ ಸೆಂಟ್ರಲ್ ಸ್ಕೂಲ್, ತುಂಬೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. ನೀವು ಆರೋಗ್ಯವಾಗಿದ್ದೀರಲ್ಲಾ... ನಾನೂ ಆರೋಗ್ಯವಾಗಿದ್ದೇನೆ. ನಾನು ಈ ದಸರಾ ರಜೆಯನ್ನು ಬಹಳ ಖುಷಿಯಿಂದ ಕಳೆದೆನು. ನವರಾತ್ರಿಯ ಸಮಯದಲ್ಲಿ ದೇವಸ್ಥಾನಗಳಲ್ಲಿ ನೃತ್ಯಸೇವೆಯನ್ನು ಕೂಡ ಮಾಡಿದೆನು. ನಮ್ಮ ಕುಟುಂಬದ ಮನೆಯಲ್ಲಿ ನಡೆದ ನವರಾತ್ರಿ ಪೂಜೆಯಲ್ಲಿ ಭಾಗವಹಿಸಿದೆನು. ಹಿರಿಯರ ಕಾಲದಿಂದಲೂ ನಡೆದು ಬಂದ ಈ ಆಚರಣೆಯಲ್ಲಿ ನಾವೆಲ್ಲರೂ ಪ್ರತಿ ವರ್ಷವೂ ಭಾಗವಹಿಸುತ್ತೇವೆ. ಕುಟುಂಬದ ಜೊತೆ ಭಾಗವಹಿಸುವುದರಿಂದ ಸಂತೋಷವು ಸಿಗುತ್ತದೆ. ಈ ಎಲ್ಲಾ ಆಚರಣೆಗಳು, ಸಂಪ್ರದಾಯಗಳು ಕುಟುಂಬದವರನ್ನು ಬೆಸೆಯಲು ಸಹಕಾರಿಯಾಗಿವೆ. ಈ ಎಲ್ಲಾ ಪದ್ಧತಿಗಳು ಹೀಗೆ ನಡೆದುಕೊಂಡು ಬರಲಿ ಎಂದು ಆಶಿಸುತ್ತೇನೆ. ಧನ್ಯವಾದಗಳೊಂದಿಗೆ
6ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ
ಹನುಮಾನ್ ನಗರ ಕಲ್ಲಡ್ಕ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************
ಅಕ್ಕನಿಗೆ ನನ್ನ ಜೈ ಶ್ರೀರಾಮ್ ...... ನಾನು ಪೂಜಾ. ನಂಗೆ ನಿಮ್ಮ ಪತ್ರಕ್ಕೆ ಯವಾಗಲೂ ಉತ್ತರ ಬರೆಯಬೇಕೆಂದು ಆಸೆ. ಮೊನ್ನೆ ಶಾರದಾ ಉತ್ಸವದಂದು ನಡೆದ ಕುಣಿತ ಭಜನೆ ತುಂಬಾ ಗಮನ ಸೆಳೆಯಿತು. ಚಿಕ್ಕ ವಯಸ್ಸಿನ ಮಕ್ಕಳು ಕೂಡ ಕುಣಿತ ಭಜನೆ ಮಾಡಿದರು. ಬ್ಯಾಂಡ್ ಸೆಟ್ ಕೂಡ ಇತ್ತು. ಅದು ನಮ್ಮ ಮನಸ್ಸಿಗೆ ತುಂಬಾ ಮನೋರಂಜನೆ ನೀಡಿತು. ಈ ಭಜನೆ ಎಂಬ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ನನಗೆ ಅಜ್ಜಿ ಕತೆ ಹೇಳುತ್ತಿದ್ದರು. ಎಲ್ಲ ಕತೆಗಳು ತುಂಬಾ ಚೆನ್ನಾಗಿ ಇರುತ್ತಿತ್ತು. ನನ್ನ ಅಜ್ಜಿ ಹೇಳುತ್ತಿದ್ದರು.... ಹಿಂದೆ ಇದ್ದಂತಹ ಹಬ್ಬಗಳು ಈಗಿನ ಕಾಲದಲ್ಲಿ ನಶಿಸಿ ಹೋಗಿವೆ. ಈಗಿನ ಕಾಲದ ಮಕ್ಕಳಿಗೆ ಯಾವ ಹಬ್ಬಗಳೂ ಗೊತ್ತಿಲ್ಲ. ಮೊದಲೆಲ್ಲ ಗದ್ದೆಗಳು ತುಂಬಾ ಇರುತ್ತಿತ್ತು. ಈಗ ಗದ್ದೆಗಳೇ ಕಾಣ ಸಿಗುತ್ತಿಲ್ಲ ಮೊದಲೆಲ್ಲ ಗದ್ದೆಗಳಲ್ಲಿಯೂ ಹಬ್ಬಗಳು ಇರುತ್ತಿತ್ತು. ದೀಪಾವಳಿ ಹಬ್ಬದಂದು ಬಲಿಯೇಂದ್ರ ಬಲಿಯೇಂದ್ರ ಎಂದು ಕೂಗಿ ಬಲಿಯೇಂದ್ರ ನನ್ನು ಕರೆಯುವ ಸಂಸ್ಕೃತಿ, ಆಚರಣೆ ಹಬ್ಬವಿತ್ತು. ವಿರಳವಾಗಿ ಕೆಲವೊಂದು ಕಡೆ ಆಚರಿಸುತ್ತಾರೆ. ಇಂತಹ ಹಬ್ಬಗಳನ್ನು ಕೇಳಿ ತಿಳಿದು ಆಚರಿಸಬೇಕು. ಎಂದು ಹೇಳುತ್ತಾ ನಿಮಗೆಲ್ಲರಿಗೂ ನನ್ನ ನಮನಗಳು.......
ಎಂಟನೇ ತರಗತಿ
ವಿವೇಕಾನಂದ ಕನ್ನಡ ಮಾದ್ಯಮ ಶಾಲೆ
ತೆಂಕಿಲ ಪುತ್ತೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
ಪ್ರೀತಿಯ ಅಕ್ಕನಿಗೆ ಲಮಿತಾ C.L ಮಾಡುವ ನಮಸ್ಕಾರಗಳು...... ದೈವ ದೇವರುಗಳ ಶಕ್ತಿಯನ್ನು ನಂಬಬೇಕು. ಸಾಂಪ್ರದಾಯಿಕ ಆಚರಣೆಯನ್ನು ಪಾಲಿಸಬೇಕು. ಮುಂದಿನ ಪೀಳಿಗೆಗಳು ಆಚರಣೆಗಳನ್ನು ಮುಂದುವರಿಸಿ ಕೊಂಡು ಪ್ರಕೃತಿಯ ವಿಸ್ಮಯಗಳನ್ನು ಅಚ್ಚರಿಪಡುತ್ತಾ ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಿಕೊಂಡು ಹೋಗಬೇಕ್ಕೆನ್ನುವುದು ಈ ಸಿನಿಮಾದ ಆಶಯವಾಗಿರುವುದು ಎನ್ನುವುದು ನನ್ನ ಕುಟುಂಬದವರ ಅಭಿಪ್ರಾಯವಾಗಿದೆ.
5ನೇ ತರಗತಿ
ವಿಶ್ವಮಂಗಳ ಹಿರಿಯ ಪ್ರಾಥಮಿಕ ಶಾಲೆ .
ಕೊಣಾಜೆ. ಮಂಗಳೂರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
ನಮಸ್ತೆ ಅಕ್ಕ.... ನಾನು ಸಾತ್ವಿ .ಡಿ.. ನಾನು ಚೆನ್ನಾಗಿದ್ದೇನೆ. ಮಕ್ಕಳ ಜಗಲಿಯಲ್ಲಿ ಬರುವ ಅಕ್ಕನ ಪತ್ರವನ್ನು ಓದಲು ತುಂಬಾ ಖುಷಿಯಾಗುತ್ತದೆ. ಕಾಂತರಾ ಸಿನಿಮಾವು ತುಳುನಾಡಿನ ಭೂತಾರಾಧನೆ ಮತ್ತು ಬೇರೆ ಬೇರೆ ದೈವಗಳ ಆರಾಧನೆಯಿಂದ ಜನರಲ್ಲಿ ಭಯ ಭಕ್ತಿಯನ್ನು ಮೂಡಿಸುತ್ತದೆ. ಕಾಂತಾರ ಸಿನಿಮಾದಿಂದಾಗಿ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಈಗಿನ ಮಕ್ಕಳಾದ ನಮ್ಮಲ್ಲಿಯೂ ಬೆಳೆಯಲು ಸಹಕಾರಿಯಾಗಿದೆ. ಕಾಂತಾರ ಸಿನಿಮಾದ ಹೆಚ್ಚಿನ ವಿಷಯಗಳು ಅಕ್ಕನ ಪತ್ರದಿಂದಾಗಿ ತಿಳಿಯಿತು. ಅಕ್ಕ ನಿಮಗೆ ವಂದನೆಗಳು.
6ನೇ ತರಗತಿ
ಸ.ಉ.ಹಿರಿಯ ಪ್ರಾಥಮಿಕ ಶಾಲೆ ದರ್ಬೆತ್ತಡ್ಕ.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************