-->
ಅಕ್ಕನ ಪತ್ರ - 33 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 33 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 33 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


         ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........



      ಮಕ್ಕಳ ಜಗಲಿಯ ಎಲ್ಲಾ ಪ್ರೀತಿ ಪಾತ್ರರಿಗೂ ಆತ್ಮೀಯ ಶುಭ ನಮನಗಳು...... ನಾನು ಪ್ರಿಯ...
ಈಗಂತೂ... ಎಲ್ಲೆಡೆಯೂ ದಸರಾ ಸಂಭ್ರಮ...!! 
ಹಳ್ಳಿಗಳ ಆಚೆಗಿನ ರಸ್ತೆಗಳಲ್ಲಿ ಹುಲಿವೇಷದ ಕುಣಿತದ ಅಬ್ಬರ....!! ಶಿಕ್ಷಣ ಭೋದನೆಯಲ್ಲಿ ವಿರಾಮದ ರೀತಿಯ ಸಣ್ಣ ರಜೆ..! ಈ ರಜೆಯಂತು ಹೇಗೆ ಓಡುತ್ತಂತ ಗೊತ್ತೇ ಆಗೋಲ್ಲ.... ಈ ರಜೆಯಲ್ಲಿ ನಾನು ಅಪ್ಪ ಅಮ್ಮನ ಬಳಿ ನವರಾತ್ರಿ ಆಚರಣೆ..!!! ಅಂದ್ರೆ ದೇವಿಯರ ಕಥೆಗಳ ಬಗ್ಗೆ ಚರ್ಚಿಸಿದೆ ಅವರು ಬಹಳ ಸೊಗಸಾಗಿ ವಿವರಿಸಿದರು... ನನಗಂತೂ ತುಂಬಾ ಖುಷಿ ಆಯ್ತು...!! ಹಾಗೆಯೇ ನನ್ನ ತಂಗಿ ಶಾಲೆಯ ಲೈಬ್ರರಿಯಿಂದ ರಜೆಯಲ್ಲಿ ಕುಳಿತು ಓದಲು "ಕಲಾಂ ಅವರಿಗೆ ಮಕ್ಕಳ ಪ್ರಶ್ನೆಗಳು" ಎಂಬ ಪುಸ್ತಕವನ್ನು ತಂದಿದ್ದಳು... ನಾನು ಮತ್ತು ತಂಗಿ ಇಬ್ಬರು ಕುಳಿತು ಓದಿ ಸಂತಸಪಟ್ಟೆವು.... ಹಾಗೆಯೇ ರಜೆಯ ಮುನ್ನ.... ನಮ್ಮ ಕಾಲೇಜಿನಲ್ಲಿ "RED CROSS" ಎಂಬ ಕಾರ್ಯಕ್ರಮಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಧಕರೊಬ್ಬರೂ ಅತಿಥಿಯಾಗಿ ಆಗಮಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಒಂದು ಒಳ್ಳೆಯ ನುಡಿಯನ್ನು ಪ್ರಸ್ತಾಪಿಸಿದರು... ಅವರು ಮಳೆಯ ಉದಾಹರಣೆ ತೆಗೆದುಕೊಂಡು ಮಳೆ ನೀರಿನ ಹನಿಗಳು ಬೀಳುವ ಘಟ್ಟದ ಬಗ್ಗೆ ತಿಳಿಸಿದರು... "ಮಳೆ ಹನಿಯು ಕೆಸುವಿನ ಎಲೆಯ ಮೇಲೆ ಬಿದ್ದಾಗ ಅದು ಆ ಸಮಯದಲ್ಲಿ ಮಿನುಗಿ , ಎಲೆಯ ಮೇಲೆ ಕುಣಿದು ಕೆಳ ಬೀಳುತ್ತದೆ... ನಂತರ ಅದು ಯಾರಿಗೂ ಕಾಣ ಸಿಗೋಲ್ಲ.... ಕಾವಲಿಗೆ ಬಿದ್ದ ನೀರಿನ ಹನಿ, ಅಲ್ಲಿಗೆ ಆವಿಯಾಗುತ್ತೆ... ಅದು ಯಾರಿಗೂ ಕಾಣವುದಿಲ್ಲ... ಆದ್ರೆ ಎಲ್ಲೋ ದೂರದ ಸಮುದ್ರದಲ್ಲಿ ಇರುವ ಚಿಪ್ಪಿನೊಳಗೆ ಬಿದ್ದ ನೀರಿನ ಹನಿಯು ಒಂದು ಸುಂದರ "ಮುತ್ತಾಗಿ" ಪರಿವರ್ತನೆ ಯಾಗುತ್ತೆ... ಇದೇ ರೀತಿ ನಾವು ಸಹ ಅತಿಯಾಗೂ ಅಲ್ಲ... ಕಡಿಮೆ ಪ್ರಮಾಣದಲ್ಲೂ ಅಲ್ಲ ನಮ್ಮ ಮಟ್ಟಕ್ಕೆ ನಾವು ಪ್ರಾಮಾಣಿಕ , ಹಾಗೂ ಉತ್ತಮರಾಗಿ ಇರಬೇಕು ಇದು ಸಾಧನೆಯ ಹಾದಿಯ ಸಣ್ಣ ನುಡಿ ಎಂದರು..." ಅವರ ಮಾತು ಎಲ್ಲರಿಗೂ ಸ್ಪೂರ್ತಿ ಯಾಗುವಂತಹದ್ದು, ಹಾಗೂ ಇಂತಹ ಮಾತುಗಳು ಕೆಲ ಮನಸ್ಸುಗಳನ್ನು ಉತ್ಸುಕರನ್ನಾಗಿಸುತ್ತದೆ ಎಂದು ಹೇಳುತ್ತಾ ನನ್ನ ಉತ್ತರಕ್ಕೆ ಪೂರ್ಣ ವಿರಾಮ ಇಡುತ್ತಿದ್ದೇನೆ..... ಧನ್ಯವಾದಗಳು.......
...................................................... ಪ್ರಿಯ
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************



     ನಮಸ್ತೇ ಅಕ್ಕಾ.... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು. ನಮ್ಮ ಮನೆ ಚಿಕ್ಕದಾದ ಮುಳಿ ಹುಲ್ಲಿನ ಮನೆ ಆಗಿತ್ತಂತೆ. ಅಪ್ಪ ದೊಡ್ಡಪ್ಪನವರು ಶಾಲೆಗೆ ಹೋಗುವಾಗ 5 ಕಿಲೋಮೀಟರ್ ದೂರ ನಡೆದುಕೊಂಡು ಹೋಗುತ್ತಿದ್ದರಂತೆ. ಅವರು ಸಣ್ಣದಿರುವಾಗ ಬೈ ಹುಲ್ಲು ತರಲು ಎತ್ತಿನ ಬಂಡಿ ಉಪಯೋಗಿಸುತ್ತಿದ್ದರು. ಸರಿಯಾದ ಮಾರ್ಗದ ವ್ಯವಸ್ಥೆ ಯಾವುದೂ ಇರಲಿಲ್ಲ. ಚಿಕ್ಕದಾದ ಒಂದು ನೀರಿನ ಗುಂಡಿ ಇತ್ತು. ಬಟ್ಟೆ ತೊಳೆಯಲು ಅಲ್ಲಿ ಹೋಗಿ ತೊಳೆಯುವ ಪರಿಸ್ಥಿತಿ ಇತ್ತು. ಕುಡಿಯುವ ನೀರು ತೋಟದಿಂದ ಹೊತ್ತು ತರುತ್ತಿದ್ದರು. ಆಗ ವಿದ್ಯುತ್, ದೂರವಾಣಿ ಯಾವುದೂ ಇರಲಿಲ್ಲ. ಚಿಕ್ಕದಾದ ಒಂದು ಲಾಂಪ್ ಇಟ್ಟು ಓದಿ-ಬರೆದು ಮಾಡುತ್ತಿದ್ದರಂತೆ. ನೆಂಟರಲ್ಲಿ ಪತ್ರದ ಮೂಲಕ ಯೋಗ ಕ್ಷೇಮ ವಿಚಾರಣೆ ಮಾಡುತ್ತಿದ್ದರು. ಭತ್ತವನ್ನು ನಮ್ಮ ಮನೆಯಲ್ಲಿಯೇ ಬೆಳೆಯುತ್ತಿದ್ದರು. ಮನೆಯಲ್ಲಿ ಅಪ್ಪ ಚಿಕ್ಕದಿ ರುವಾಗ ಎಮ್ಮೆ , ದನ ಇತ್ತು. ಈಗ ದನ ಮಾತ್ರ ಇದೆ. ಆಗ ಅಷ್ಟೆಲ್ಲಾ ಕಷ್ಟ ಇದ್ದರೂ ತುಂಬಾ ಕಷ್ಟ ಪಟ್ಟು ವಿದ್ಯೆ ಕಲಿತರು. ಈಗಿನ ಮಕ್ಕಳಿಗೆ ವಾಹನ, ಫೋನ್, ಟಿ.ವಿ, ವಿದ್ಯುತ್, ನೀರು ಎಲ್ಲಾ ವ್ಯವಸ್ಥೆಯು ಇದೆ. ನಾವು ಇದನ್ನು ದುರುಪಯೋಗ ಪಡಿಸದೇ ನಮ್ಮ ಅಗತ್ಯಕ್ಕೆ ಬೇಕಾದಷ್ಟೇ ಉಪಯೋಗಿಸಿ ಚೆನ್ನಾಗಿ ವಿದ್ಯೆ ಕಲಿತು ಒಳ್ಳೆಯ ಕೆಲಸವನ್ನ ಮಾಡಬಹುದು. ಧನ್ಯವಾದಗಳು ಅಕ್ಕಾ.......
........................................ ಸಾತ್ವಿಕ್ ಗಣೇಶ್ 
8ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************




       ನಮಸ್ತೆ ಅಕ್ಕ ನಾನು ಚೆನ್ನಾಗಿದ್ದೇನೆ... ನೀವು ಹೇಗಿದ್ದೀರಿ....? ಪತ್ರವನ್ನು ಬರೆಯದೆ ತುಂಬಾ ದಿನವಾಯಿತು. ನಮಗೆ ಪರೀಕ್ಷೆ ಇದ್ದುದ್ದರಿಂದ ಪತ್ರ ಬರೆಯಲು ಆಗಲಿಲ್ಲ. ಪತ್ರವನ್ನು ಓದುವಾಗ ನನಗೆ ಎಂ .ಪಿ ಜ್ಞಾನೇಶ್ ಸರ್ ಬರೆದ ಕಥೆಯು ನೆನಪಿಗೆ ಬಂತು. ಅವರು ಹೇಳುವ ಪ್ರಕಾರ ಒಬ್ಬ ವ್ಯಕ್ತಿಯನ್ನು ಪ್ರೇರಣೆಯಾಗಿ ತೆಗೆದುಕೊಳ್ಳುವುದಕ್ಕಿಂತ, ಕವಿಗಳು ಬರೆದ ತತ್ವಗಳಿಗೆ ಹೆಚ್ಚು ಪ್ರಾಮುಖ್ಯತೆ ಯನ್ನು ನೀಡಿದ್ದಾರೆ. ನನಗೆ ಅವರು ಬರೆದ ಮನಮುಟ್ಟುವಂತಿದ್ದ ಸಾಲುಗಳು ನನಗೆ ಕೆಲವು ಬಾರಿ ಪ್ರೇರಣೆಯಾಗಿದೆ. ಇನ್ನು ಹಿರಿಯರ ಪ್ರೇರಣೆ ಹೇಳುವುದಾದರೆ ನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕರಾದ ತಾರಾನಾಥ್ ಸರ್ ಇವರಿಂದ ನಾನು ಬಹಳ ಕಲಿತಿದ್ದೇನೆ. ಇವರ ಬಗ್ಗೆ ಹೇಳುವುದಾದರೆ ಇವರಿಗೆ ತಾಳ್ಮೆ ಜಾಸ್ತಿ ಮತ್ತು ಹುರಿದುಂಬಿಸುವ ರೀತಿ ಹೆಚ್ಚಿದೆ. ಎಲ್ಲಾ ಶಿಕ್ಷಕರಿಂದ ಎಲ್ಲ ರೀತಿಯ ಪ್ರೇರಣೆ ಪಡೆಯುತ್ತೇವೆ ಆದರೆ ಈ ಸರ್ ಯಿಂದ ಸ್ವಲ್ಪ ಹೊಸದಾಗಿ ಬೇರೆ ರೀತಿಯಲ್ಲಿ ಪ್ರೇರಣೆ ನೀಡುತ್ತಾರೆ ನಮಗೆ. ನನಗೆ ನನ್ನ ಅಚ್ಚು ಪ್ರೇರಣೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಏಕೆಂದರೆ ಅವರು ASI ಪೋಲೀಸ್. ಇವರು ಕಷ್ಟಪಟ್ಟು ಇಷ್ಟಪಟ್ಟು ಮೇಲೆ ಬಂದವರು. ಸಾಧನೆ ಮಾಡಬೇಕಾದರೆ ಬಡತನ ಸಿರಿತನ ಬೇಕಾಗಿಲ್ಲ. ಕೇವಲ ಧೈರ್ಯ ಒಂದಿದ್ದರೆ ಸಾಕು ಎಂಬುದನ್ನು ನಾನು ಅವರಿಂದ ಕಲಿತೆನು, ಎಂದು ಹೇಳಲು ನನಗೊಂದು ಹೆಮ್ಮೆಯ ವಿಷಯ. 
ಧನ್ಯವಾದಗಳೊಂದಿಗೆ 
...................................................... ಧೃತಿ 
10 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ, ಕೊಳ್ನಾಡು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************



      ನಮಸ್ತೆ ಅಕ್ಕ. ಜಗಲಿಯ ಎಲ್ಲರಿಗೂ ದಸರ ಹಬ್ಬದ ಶುಭಾಶಯಗಳು..... ನಾನು ಶ್ರಾವ್ಯ . ನಮ್ಮ ಕುಟುಂಬದ ಹಿರಿಯರಾದ ನಮ್ಮ ದೊಡ್ಡಮ್ಮನ ಬಗ್ಗೆ ಹೇಳಲು ಇಚ್ಛಿಸುತ್ತೇನೆ. ಹಲವು ಸಂಸಾರಗಳು ಇರುವಾಗ ತಾನು ಒಬ್ಬ ದೊಡ್ಡ ಸೊಸೆಯಾಗಿ ಮನೆ ನಿಭಾಯಿಸುವುದು, ತಮ್ಮ ಮಕ್ಕಳ ಕಾಳಜಿ , ಹೀಗೆ ಅನೇಕ ಜವಬ್ದಾರಿಯನ್ನು ಕೈಗೆತ್ತಿಕೊಂಡು ಇತ್ತೀಚಿನವರೆಗೂ ಗಲಾಟೆ, ಮನಸ್ತಾಪ ಮಾಡಿಕೊಳ್ಳದೆ ಇದ್ದಿದ್ದು ನನಗೆ ವಿಶೇಷ ಎನ್ನಿಸಿತು. ಮುಂಜಾನೆ ಬೇಗ ಎದ್ದು 'ಹಾಲು ಕರೆದು, ಮನೆ ಕೆಲಸ ಮುಗಿಸಿ ಹೊಲದ ಕೆಲಸಕ್ಕೂ ಕೈಜೋಡಿಸುತ್ತಿದ್ದರು. ಎತ್ತು-ದನದ ಮೇವು, ತರಗಲೆ ಹೀಗೆ ಸಣ್ಣ ಪುಟ್ಟ ಕೆಲಸಗಳನ್ನೂ ಮಾಡಿ ಎಷ್ಟೇ ಸುಸ್ತಾದರೂ ಯಾರಲ್ಲೂ ಹೇಳಿಕೊಳ್ಳದೆ ದಿನನಿತ್ಯದ ಕೆಲಸದಲ್ಲಿ ಬೇಜಾರಿಲ್ಲದೆ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಿದ್ದರು. ಕೆಲಸದ ನಡುವೆ ಕೋಪ, ಮನಸ್ತಾಪ, ನೋವಾದರೂ ಅದನ್ನೆಲ್ಲಾ ಅಲ್ಲೇ ಬಿಟ್ಟು ಮುಂದಿನ ದಿನದ ಬಗ್ಗೆ ಯೋಚನೆ ಮಾಡುತ್ತಿದ್ದುದು.... ನನಗೆ ಖುಷಿ ಮತ್ತು ಆಶ್ಚರ್ಯ ಎನಿಸಿತು. ಇತ್ತೀಚಿನ ದಿನಕ್ಕೂ ಹಿಂದಿನ ದಿನಗಳಿಗಿದ್ದ ವ್ಯತ್ಯಾಸದ ಚಿತ್ರಣವೇ ಕಣ್ಣ ಮುಂದೆ ಮೂಡಿತು. ಒಂದು ದಿನ ಬಿಡದೆ ಸದಾ ಕಾರ್ಯ ಪ್ರವೃತರಾಗಿರುತ್ತಿದ್ದು, ಈಗಲೂ ತಮ್ಮ ಇಳಿವಯಸಿನಲ್ಲಿ ತಮ್ಮ ಕೆಲಸವನ್ನು ಮುಂದುವರೆಸುತ್ತಿರುವುದು, ಅವರ ಕಾರ್ಯಪ್ರವೃತಿ ನನಗೆ ಪ್ರೇರಣೆ. ವಿಭಕ್ತ ಕುಟುಂಬಗಳೇ ಇರುವ ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬದಲ್ಲಿ ಸು:ಖ ದುಃಖ ನೋವು-ನಲಿವು 'ಸಹನೆ - ಅಸಹನೆ ತ್ಯಾಗ ಎಲ್ಲಾ ಭಾವವನ್ನು ತುಂಬಿಕೊಂಡು ಜೀವನ ನಡೆಸಿದ್ದ ಅವರ ಜೀವನ ಪಯಣ ನನಗೊಂದು ಸ್ಪೂರ್ತಿ..... ಧನ್ಯವಾದಗಳು
...................................................... ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************




ಅಕ್ಕನ ಪತ್ರ ಸಂಚಿಕೆ 33ಕ್ಕೆ ಶಿಶಿರನ ಉತ್ತರ      
      ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ನಮಸ್ಕಾರಗಳು. ನಾನು ಕ್ಷೇಮವಾಗಿರುವೆನು. ದಸರಾ ರಜೆಯ ಮೂರು ದಿನಗಳು ಕಳೆದವು. ಮನೆಗೆ ಚಿಕ್ಕಮ್ಮನ ಮಕ್ಕಳು ಬಂದಿದ್ದರು. ಅವರೊಂದಿಗೆ ಆಟ ಮಾತುಕತೆ ಆಡಿ ಮೂರು ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ಪತ್ರದಲ್ಲಿ ನೀವು ನಮ್ಮ ಸುತ್ತ ಮುತ್ತ ಇರುವ ಹಿರಿಯರ ಅನುಭವದ ನೆನಪುಗಳನ್ನು ದಾಖಲಿಸಲು ತಿಳಿಸಿದ್ದೀರಿ. ಹೌದಕ್ಕ ನಮ್ಮ ನೆರೆಹೊರೆಯಲ್ಲಿ ನಾನು ಕಂಡಂತೆ ಒಬ್ಬರು 85 ವರುಷದ ಅಜ್ಜಿ ಇದ್ದಾರೆ. ಅವರು ಇಳಿವಯಸ್ಸಿನಲ್ಲೂ ಕೂಡ ತುಂಬಾ ಉತ್ಸಾಹ ಲವಲವಿಕೆಯಿಂದ ಇದ್ದಾರೆ. ಅವರು ನಮ್ಮನ್ನೆಲ್ಲಾ ಕೂರಿಸಿ ಹೇಳುವ ಪೌರಾಣಿಕ ಕಥೆಗಳು, ತುಳುನಾಡಿನ ಕೋಟಿ ಚೆನ್ನಯ, ಅಗೋಳಿ ಮುಂಜಣ್ಣನ ಕಥೆ ದೇವು ಪೂಂಜ ಅವರ ಜೀವನ ಕಥೆಗಳು ನಮಗೆ ತುಂಬಾ ಇಷ್ಟ. ಹಿಂದಿನ ಕಾಲದ ಸಂಪ್ರದಾಯ ಆಚರಣೆಗಳ ಬಗ್ಗೆ, ಹಬ್ಬದ ವಿಶೇಷತೆಯ ಬಗ್ಗೆ ವಿಸ್ತಾರವಾಗಿ ವಿವರಿಸಿ ಅದರ ಮಹತ್ವವನ್ನು ತಿಳಿಸುತ್ತಾರೆ. ಅವರ ಹಿಂದಿನ ಕೃಷಿ ಬದುಕಿನ ಅನುಭವಗಳು ಎತ್ತುಗಳ ಜೊತೆ ಗದ್ದೆ ಉಳುಮೆ ಮಾಡುವ ಚೆಂದ, ನೇಜಿ ನೆಡುವಾಗ ಹೇಳುವ ಪಾಡ್ದನ, ಅವರು ನೋಡಿದ ಕಂಬಳದ ಸೊಬಗು ಎಲ್ಲವನ್ನೂ ವಿವರವಾಗಿ ನಮಗೆ ಹೇಳುತ್ತಾರೆ. ನಾನಾ ಕಾರಣಗಳಿಂದ ತನ್ನ ಮೂವರು ಗಂಡು ಮಕ್ಕಳನ್ನು ಕಳೆದುಕೊಂಡ ಅಜ್ಜಿ ಸ್ವಲ್ಪವೂ ಧ್ತೃತಿಗೆಡದೆ ತನ್ನ ದುಃಖವನ್ನೆಲ್ಲಾ ನುಂಗಿ ಸಂತೋಷದಿಂದ ಎಲ್ಲರೊಂದಿಗೆ ಬೆರೆಯುವ ಪರಿ ನಮಗೆ ಅಚ್ಚರಿಯಾಗುತ್ತದೆ. ವಿದ್ಯಾವಂತೆಯಲ್ಲದಿದ್ದರೂ ಯಾವ ವಿಚಾರದ ಬಗ್ಗೆ ಕೇಳಿದರೂ ಸಂತೋಷದಿಂದ ವಿವರಿಸುವ ಅವರ ಅನುಭವ, ತಾಳ್ಮೆ, ಜ್ಞಾನ ನಮಗೆಂದಿಗೂ ಸ್ಪೂರ್ತಿ. ಔಷಧೀಯ ಸಸ್ಯಗಳ ಬಗ್ಗೆ ಅಪಾರ ವಾದ ಜ್ಞಾನವೂ ಅವರಿಗಿದೆ. ಅಂದ ಹಾಗೆ ನಮ್ಮ ಅಜ್ಜಿಯ ಹೆಸರು ಹೂವಮ್ಮ ಎಂದು. ಇಳಿ ವಯಸ್ಸಿನಲ್ಲೂ ಮಕ್ಕಳೊಂದಿಗೆ ಮಗುವಾಗಿ ಜೀವನವನ್ನು ಆರೋಗ್ಯ, ಪ್ರೀತಿ, ಉತ್ಸಾಹದಿಂದ ಕಳೆಯುತ್ತಿರುವುದು ಸಾಧನೆಯೇ ಸರಿ. ನಮ್ಮ ಹಿರಿಯಜ್ಜಿಯ ಬಗ್ಗೆ ಬರೆಯಲು ಅವಕಾಶವಿತ್ತ ನಿಮಗೆ ಧನ್ಯವಾದಗಳು ಅಕ್ಕ....
.............................................. ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



ಮಕ್ಕಳ ಜಗಲಿ : ಅಕ್ಕನ ಪತ್ರ---33
     ಪ್ರೀತಿಯ ಅಕ್ಕ ನಿಮಗೆ ಲಹರಿ ಮಾಡುವ ನಮಸ್ಕಾರಗಳು.... ನಿಮ್ಮ ಪತ್ರ ಓದಿ ನನಗೆ ತುಂಬಾ ಸಂತೋಷವಾಯಿತು..... ಪರೀಕ್ಷೆ ಇದ್ದ ಕಾರಣ ನಿಮ್ಮ ಪತ್ರಗಳಿಗೆ ಉತ್ತರಿಸಲು ಆಗಲಿಲ್ಲ.... ಅಕ್ಕ ನಮ್ಮ ಊರಲ್ಲಿ ಶಾರದೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯುತ್ತಾ ಇದೆ.... ನನಗೆ ಅಲ್ಲಿ ಕುಣಿತ ಭಜನೆ ಕಾರ್ಯಕ್ರಮ ಇದೆ... ಹಾಗಾಗಿ ಅದರ ಅಭ್ಯಾಸದಲ್ಲಿ ತೊಡಗಿದ್ದೇನೆ. ನೀವು ಹೇಳಿದಂತೆ ಯಾರ ಸಂದರ್ಶನ ಮಾಡಲೂ ಆಗಲಿಲ್ಲ.... ಕ್ಷಮಿಸಿ ಅಕ್ಕ. ಮುಂದೊಮ್ಮೆ ಖಂಡಿತಾ ಪ್ರಯತ್ನಿಸುವೆನು. ನಿಮ್ಮ ಕಡೆ ಶಾರದಾ ಪೂಜೆ ಹೇಗೆ ನಡೆಯುತ್ತಿದೆ ಅಕ್ಕಾ? ನಿಮಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ಅಕ್ಕ... ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುವೆನು. ಇಂತೀ ನಿಮ್ಮ ಪ್ರೀತಿಯ 
.............................................. ಲಹರಿ ಜಿ.ಕೆ,
೭ ನೇ ತರಗತಿ,
ತುಂಬೆ ಸೆಂಟ್ರಲ್ ಸ್ಕೂಲ್, ತುಂಬೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************




ಹರಿ ಓಂ.... ಅಕ್ಕ ನಾನು ಸ್ರಾನ್ವಿ ಶೆಟ್ಟಿ... ನಾವು ಚೆನ್ನಾಗಿದ್ದೇವೆ. ನೀವು ಕೂಡ ಕ್ಷೇಮ ತಾನೆ, ನಿಮ್ಮ ಪತ್ರ ಓದಿದೆ ಅಕ್ಕ. ರಜಾ ಮುಗಿಯುತ್ತಾ ಬಂದದ್ದು ಗೊತ್ತಾಗಿಲ್ಲ. ದಸರಾ ರಜೆ ಮಜಾ ಕೊಟ್ಟಿಲ್ಲ. ಯಾಕಂದರೆ ನಮ್ಮ ರಜಾ ಮುಗಿದ ಮರುದಿನ ಪರೀಕ್ಷೆ ಇದೆ. ರಜದಲ್ಲಿ ಪರೀಕ್ಷೆಗೆ ತಯಾರು ಮಾಡಲಕ್ಕಿದೆ. ಮತ್ತೆ ನಾನು ಹೊರಗೆ ಯಾರನ್ನೂ ಬೇಟಿಯಾಗಿಲ್ಲ ನಮ್ಮ ಮನೆಯಲ್ಲಿ ನನ್ನ ಅಜ್ಜ ಇದ್ದಾರೆ. ಅವರ ಜತೆಗೆ ಮಾತನಾಡಿದೆ. ಅವರಿಗೆ ಈಗ 79 ವರುಷ. ಮುಂಚೆಯೂ ಮೊದಲಿನ ವಿಷಯ ಎಲ್ಲ ಹೇಳುತ್ತಾ ಇದ್ದರು. ಅವರು 6ನೇ ತರಗತಿ ತನಕ ಶಾಲೆಗೆ ಹೋಗಿದ್ದಾರಂತೆ. ಲೆಕ್ಕ ಎಲ್ಲ ನಮಗಿಂತ ಚೆನ್ನಾಗಿ ಮಾಡುತ್ತಾರೆ. ದಿನಾ ಪೇಪರ್ ಓದುತ್ತಾರೆ. ಅವರು ಸಣ್ಣದಿಂದನೇ ಕೃಷಿಕರು. ಈಗಲೂ ಇಡೀ ದಿನ ಕೆಲಸ ಏನಾದರು ಮಾಡುತ್ತಲೇ ಇರುತ್ತಾರೆ. ಅವರು ಸಣ್ಣವರಿದ್ದಾಗಿನ ಕಷ್ಟದ ದಿನಗಳನ್ನೆಲ್ಲಾ ಹೇಳುತ್ತಿರುತ್ತಾರೆ. ನನ್ನ ಅಜ್ಜನವರು 8 ಮಂದಿ ಮಕ್ಕಳಂತೆ ನನ್ನ ಅಜ್ಜ ಎರಡನೆಯವರಂತೆ. ಅಷ್ಟು ಮಕ್ಕಳನ್ನು ಸಾಕಲು ಅವರ ಅಮ್ಮ ಅಪ್ಪ ಎಷ್ಟೊಂದು ಕಷ್ಟ ಪಟ್ಟಿರಬಹುದು. ಅಲ್ವಾ ಅಕ್ಕಾ ಧನ್ಯವಾದಗಳು.
................................................ ಸ್ರಾನ್ವಿಶೆಟ್ಟಿ    
9ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



Ads on article

Advertise in articles 1

advertising articles 2

Advertise under the article