-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 64

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 64

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
                   ವೆಂಕಟರಾಯರಿಗೆ ತುಂಬಾ ಹಸಿವಾಗಿತ್ತು. ಅಡುಗೆ ಕೋಣೆಗೆ ಹೋದವರು ಅನ್ನದ ಪಾತ್ರೆಗಾಗಿ ಹುಡುಕಾಡಿದರು. ಅವರಿಗೆ  ಬಿಸಿ ಬಿಸಿ ಅನ್ನದ ಪಾತ್ರೆಯ ಜತೆಗೆ  ಅದರ ಪಕ್ಕದಲ್ಲಿಯೇ ತಂಗಳನ್ನದ ಪಾತ್ರೆ ಕೂಡಾ ಕಂಡಿತು. ಕೂಡಲೇ  ತಂಗಳನ್ನವನ್ನು ವ್ಯರ್ಥವಾಗಿ ಬಿಸಾಡಲು ಮನಸ್ಸಾಗದೆ  ಅದನ್ನು ಊಟ ಮಾಡಿದ ನಂತರ ಹಸಿವೆ ಉಳಿದಿದ್ದರೆ ಮಾತ್ರ ಬಿಸಿ ಅನ್ನ ಉಣ್ಣುವ ಎಂದು ಯೋಚಿಸಿ ತಂಗಳನ್ನವನ್ನು ಸೇವಿಸಿದರು. ತಂಗಳನ್ನದಲ್ಲಿಯೇ ಹಸಿವೆ ತೀರಿತು. ಬಿಸಿ ಬಿಸಿ ಅನ್ನ ಹಾಗೆಯೇ ಉಳಿಯಿತು. ಆ ಬಿಸಿಯೂಟ ಮರುದಿವಸಕ್ಕೆ ತಂಗಳನ್ನವಾಗಿ ಪರಿವರ್ತನೆಯಾಯಿತು. ಆ ಉಳಿದ ಬಿಸಿ ಅನ್ನವನ್ನು ಮತ್ತೆ  ಮರುದಿನ ತಂಗಳನ್ನವಾಗಿ  ತಿನ್ನುವ ಸಂದರ್ಭ ಮೂಡಿಬಂದಿತ್ತು. ಇದರಿಂದಾಗಿ ವೆಂಕಟರಾಯರಿಗೆ ಪ್ರತಿದಿನವೂ ಬಿಸಿ ಅನ್ನ ಮಾಯವಾಗಿ ತಂಗಳನ್ನವೇ ಖಾಯಂ ಆಯಿತು. ಒಂದು ವೇಳೆ ಆ ದಿನವೇ ಗಟ್ಟಿ ಮನಸ್ಸು ಮಾಡಿ ತಂಗಳನ್ನವನ್ನು ಬಿಸಾಡಿ ವಿಲೇವಾರಿ ಮಾಡಿದ್ದರೆ ಪ್ರತಿದಿನವೂ ಬಿಸಿಯೂಟ ಮಾಡಿ ಆರೋಗ್ಯವಂತರಾಗಿ ಇರಬಹುದಿತ್ತಲ್ಲವೇ...? .
        ನಮಗೆ ಯಾರಾದರೂ ಉಡುಗೊರೆಯಾಗಿ ಕೊಟ್ಟ ಒಳ್ಳೆಯ ಪೆನ್ನುಗಳನ್ನು  ಎಲ್ಲರೂ ನೋಡಲೆಂದು ಜಾಗ್ರತೆಯಲ್ಲಿ ಬೀರುವಿನಲ್ಲಿಟ್ಟು ಹಳತು  ಪೆನ್ನಲ್ಲಿ ಬರೆಯುತ್ತೇವೆ.  ಸ್ವಲ್ಪದಿನಗಳ ಬಳಿಕ ನೋಡಿದಾಗ ಆ ಒಳ್ಳೆಯ ಪೆನ್ನುಗಳೂ ಬರೆಯಲಾರದ ಸ್ಥಿತಿಗೆ ಬಂದಿರುತ್ತವೆ. ಹೊಸ ಪಾತ್ರೆಗಳನ್ನು ಶೋಕೇಸಿನಲ್ಲಿಟ್ಟು ಉಪಯೋಗಕ್ಕೆ ಯೋಗ್ಯವಲ್ಲದ ಪಾತ್ರೆಗಳಲ್ಲಿಯೇ ಅಡುಗೆ ಮಾಡುತ್ತೇವೆ. ಸ್ವಲ್ಪ ದಿನ ಬಿಟ್ಟು ನೋಡಿದಾಗ ಹೊಸ ಪಾತ್ರೆಗಳು ಹಳತಾಗಿರುತ್ತವೆ. ಕೊಡುಗೆಯಾಗಿ ಸಿಕ್ಕಿರುವ ಬಟ್ಟೆಯ ಉಡುಗೊರೆಗಳನ್ನು ಬೀರುವಿನೊಳಗಿಟ್ಟು ಖುಷಿ ಪಡುತ್ತೇವೆ. ಆದರ ಉಪಯೋಗಿಸಲೆಂದು ನೋಡಿದಾಗ ಬಣ್ಣ ಕಳೆದು ಮೌಲ್ಯ ಕಳೆದು ಕಳಾಹೀನವಾಗಿರುತ್ತದೆ.
       ಹೊಸ ಮನೆ ಕಟ್ಟಿಸಿ ಬಾಡಿಗೆಗೆ ಕೊಟ್ಟು ಹಳೆಯ ಚಿಕ್ಕದಾದ ಮನೆಯಲ್ಲಿ ಇರುತ್ತೇವೆ. ಹೊಸ ವಾಹನವನ್ನು ಖರೀದಿಸಿ ಶೆಡ್ ನಲ್ಲಿಟ್ಟು ಕೇವಲ ಚಂದ ನೋಡುತ್ತೇವೆ. ಹೀಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ನಮ್ಮಲ್ಲಿರುವ ವಸ್ತುಗಳು ಹಾಗೂ ಸೌಲಭ್ಯಗಳು ಉಪಯೋಗ ರಹಿತವಾಗಿ ಕೇವಲ ಪ್ರದರ್ಶನಕ್ಕಾಗಿ ಕಂಡುಬರುವ ಹಲವಾರು ಸಂದರ್ಭಗಳನ್ನು ದಿನನಿತ್ಯವೂ ನಾವು ಕಾಣುತ್ತೇವೆ. ನಮಗೆ ಲಭ್ಯವಿರುವ ಸಮಯವನ್ನೂ ದುರಾಶೆಯಿಂದ ಕಳೆದು ಸೃಜನಾತ್ಮಕ, ಸಮಾಜಮುಖಿ ಅಥವಾ ಸಂಘ ಸಂಸ್ಥೆ ಸೇವೆಗಳು ಅಥವಾ ಆಧ್ಯಾತ್ಮಿಕ ಕಾರ್ಯದ ಅವಕಾಶ ಬಂದಾಗ ಈಗ ಸಮಯವಿಲ್ಲವೆಂದು ಬಿಡುತ್ತೇವೆ. ಆದರೆ ಸಮಯವಿರುವಾಗ ಕಾಲ ಮಿಂಚಿರುತ್ತವೆ. ಹಾಗಾದರೆ ಜೀವನವನ್ನು ಆನಂದಿಸುವುದು ಯಾವಾಗ ?. ನಾಳೆಗೆ ಬೇಕೆಂಬ ದುರಾಶೆಗೆ ಬಲಿಯಾಗಿ ಇಂದಿನ ಸುಖ ಕಳೆದುಕೊಳ್ಳುತ್ತೇವೆ. ಸುಖವೆನ್ನುವುದು ಬರೀ ಮರೀಚಿಕೆಯಾಗುತ್ತದೆ. ವಸ್ತುಗಳನ್ನು ಅಥವಾ ಸೌಲಭ್ಯಗಳನ್ನು ಹೊಂದುವುದು ಮಾತ್ರವಲ್ಲ ಅದನ್ನು ಅನುಭವಿಸಲೂ ಕಲಿಯಬೇಕು. ಇಲ್ಲದಿದ್ದರೆ ಎಲ್ಲವೂ ವ್ಯರ್ಥ.
        ಭಗವದ್ಗೀತೆಯ ಕರ್ಮಯೋಗವು ಜೀವನವನ್ನು ಹೇಗೆ ಜೀವಿಸಬೇಕೆಂದು ವಿವರಿಸಿದೆ. ನಾವೆಲ್ಲರೂ ಕರ್ಮ ಮಾಡುತ್ತೇವೆ, ಆದರೆ ಅದು ಸ್ವಾರ್ಥಮಯವಾಗಿರುವ ತಪ್ಪು ನಿರ್ಧಾರಗಳಿಂದಾಗಿ ಪ್ರತಿಫಲ ರಹಿತವಾಗಿರುತ್ತದೆ. ನಮ್ಮಲ್ಲಿ ಎಲ್ಲವೂ ಇದ್ದರೂ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಹಾಗಾದರೆ ಇದ್ದುದನ್ನು ಭವಿಷ್ಯತ್ತಿನ ದುರಾಶೆಗಾಗಿ ಕೂಡಿಡದೆ  ಅಗತ್ಯಕ್ಕನುಗುಣವಾಗಿ ಬಳಸೋಣ. ನೋಡುವುದಕ್ಕಿಂತ ಹೆಚ್ಚಾಗಿ ಅರ್ಥ ಮಾಡೋಣ. ಕೇಳುವುದಕ್ಕಿಂತ ಹೆಚ್ಚಾಗಿ ಅರಿಯೋಣ. ಓದುವುದಕ್ಕಿಂತ ಹೆಚ್ಚಾಗಿ ಮನದಟ್ಟು ಮಾಡೋಣ. ಸಂಗ್ರಹ ಮಾಡುವುದಕ್ಕಿಂತ ಹೆಚ್ಚಾಗಿ ಉಪಯೋಗಿಸೋಣ. ಈ ಬಗ್ಗೆ ಆಲೋಚಿಸಿದರೆ ನೂರಾರು ದಾರಿಗಳು ತೆರೆದುಕೊಳ್ಳುತ್ತವೆ. ಆ ದಾರಿಯಲ್ಲಿ ಆಲೋಚಿಸಿ ಹೆಜ್ಜೆ ಇಡೋಣ
ಪ್ರತಿಕ್ಷಣವನ್ನು  ಪ್ರಸನ್ನತೆಯಿಂದ ಜೀವಿಸೋಣ. ಪ್ರತಿಕ್ಷಣವನ್ನು ಅನುಭವಿಸೋಣ. ಈ ಧನಾತ್ಮಕ ಬದಲಾವಣೆಗೆ  ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article