
ಜೀವನ ಸಂಭ್ರಮ : ಸಂಚಿಕೆ - 51
Sunday, September 11, 2022
Edit
ಜೀವನ ಸಂಭ್ರಮ : ಸಂಚಿಕೆ - 51
ಮಕ್ಕಳೇ..... ಇಂದು ನಾವು ಶಿಸ್ತಿನ ಬಗ್ಗೆ ಮಾತನಾಡುತ್ತೇವೆ. ಆದರೆ ಶಿಸ್ತು ಎಂದರೇನು....?. ಇದರಿಂದ ಆಗುವ ಲಾಭ ಏನು ನೋಡೋಣ.
ಶಿಸ್ತು ಎಂದರೆ, "ನಿರ್ದಿಷ್ಟ ಕಾಲಮಿತಿಯಲ್ಲಿ ಅಚ್ಚುಕಟ್ಟಾಗಿ, ಸುಂದರವಾಗಿ ಕೆಲಸ ಮಾಡುವುದು ಎಂದರ್ಥ ಹಾಗೂ ನಿರ್ದಿಷ್ಟ ಗುರಿ ಮುಟ್ಟಲು ನಾವೇ ವಿಧಿಸಿಕೊಂಡ ನಿಯಮ" ಎನ್ನಬಹುದು. ನಿರ್ದಿಷ್ಟ ಕಾಲಮಿತಿ ಎಂದಾಗ, ಆ ಕಾಲದಲ್ಲಿ ಅದನ್ನು ಮಾಡದಿದ್ದರೆ, ಉಪಯೋಗವಿಲ್ಲ. ಉದಾಹರಣೆಗೆ ಒಂದು ಸುವಾಸಿತ ಹೂ ಬೆಳಿಗ್ಗೆ ಅರಳಿದೆ, ಸಂಜೆ ಬಾಡುತ್ತದೆ. ಅದು ಅರಳಿದಾಗ ಮುಡಿದರೆ ಅದರ ಸೊಬಗು ಹೆಚ್ಚು. ಬಾಡಿದ ನಂತರ ಮುಡಿದರೆ ಪ್ರಯೋಜನವಿಲ್ಲ. ಹಾಗೆ ಪ್ರತಿಯೊಂದು ಕೆಲಸವನ್ನು ಸೂಕ್ತ ಸಮಯದಲ್ಲಿ, ಅಚ್ಚುಕಟ್ಟಾಗಿ, ಸುಂದರವಾಗಿ ಮಾಡಬೇಕಾಗುತ್ತದೆ. ಕೆಲವೊಮ್ಮೆ ಸೂಕ್ತ ಸಮಯದಲ್ಲಿ ಕೆಲಸ ಮಾಡುತ್ತೇವೆ, ಆದರೆ ಅದರಲ್ಲಿ ಅಚ್ಚು ಕಟ್ಟುತನ, ಸೌಂದರ್ಯ ಇಲ್ಲದಿದ್ದಲ್ಲಿ ಅದು ಶಿಸ್ತು ಆಗುವುದಿಲ್ಲ.
ಶಿಸ್ತು ಪಾಲನೆಯಿಂದ ಆಗುವ ಲಾಭಗಳು.
1. ಪ್ರತಿಯೊಬ್ಬರೂ ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು. ಅಂದರೆ ಕೋಳಿ ಕೂಗುವ ಮುನ್ನ ಏಳಬೇಕೆಂದು ಹಿರಿಯರು ಹೇಳುತ್ತಾರೆ. ಏಕೆಂದರೆ ವೈಜ್ಞಾನಿಕವಾಗಿ ನೋಡಿದರೆ ನಮ್ಮ ದೇಹದಲ್ಲಿ ಹಾರ್ಮೋನ್ ಸ್ರವಿಸುವಿಕೆ ಸೂರ್ಯನನ್ನು ಅವಲಂಬಿಸಿದೆ. ಬೆಳಿಗ್ಗೆ ಮೂರು ಗಂಟೆಯ ನಂತರ ಹಾರ್ಮೋನ್ ಸ್ರವಿಸುವಿಕೆ ಪ್ರಾರಂಭವಾಗಿ, ಸೂರ್ಯ ಏರಿದಂತೆ ಹಾರ್ಮೋನ್ ಬಿಡುಗಡೆ ಏರಿಕೆಯಾಗುತ್ತದೆ. ಮಧ್ಯಾಹ್ನದಲ್ಲಿ ಗರಿಷ್ಠವಾಗಿದ್ದು, ಸೂರ್ಯ ಇಳಿದಂತೆ ಸ್ರವಿಸುವಿಕೆ ಕಡಿಮೆಯಾಗುತ್ತದೆ. ಸೂರ್ಯೋದಯದ ನಂತರ ಬಹಳಷ್ಟು ವಿಳಂಬವಾಗಿ ಎದ್ದರೆ, ನಮ್ಮ ಮಾಂಸಖಂಡಗಳು (degenerate,) ದುರ್ಬಲಗೊಳ್ಳುತ್ತವೆ. ಹಾಗಾಗಿ ಬೇಗ ಏಳಬೇಕು. ಬೇಗ ಎದ್ದ ನಂತರ ಸಾಧಾರಣ ಬಿಸಿ ನೀರನ್ನು ಎರಡು ಲೋಟ ಕುಡಿಯಬೇಕು. ಇದರಿಂದ ರಾತ್ರಿಯಲ್ಲಾ ಬಾಯಲ್ಲಿ ಉಪಯುಕ್ತ ಬ್ಯಾಕ್ಟೀರಿಯ ಬೆಳೆದಿರುತ್ತದೆ. ಇದು ದೇಹದ ಕರುಳನ್ನು ಸೇರಿ ಒಳ್ಳೆ ಬ್ಯಾಕ್ಟೀರಿಯ ವೃದ್ಧಿಯಾಗುತ್ತದೆ. ಇದು ನಮ್ಮ ರೋಗ ನಿರೋಧಕ ಶಕ್ತಿಗೆ ಅಗತ್ಯ. ಸ್ವಲ್ಪ ಹೊತ್ತು ಒಳ್ಳೆಯ ವಿಚಾರ ಚಿಂತನೆ ಮಾಡಬೇಕು. ದೇವರ ಧ್ಯಾನ , ಒಳ್ಳೆಯ ಗ್ರಂಥ ಓದುವುದು, ಇದರಿಂದ ಸಕಾರಾತ್ಮಕ ಚಿಂತನೆ ಮೂಡಿದರೆ, ದಿನವೆಲ್ಲಾ ಸಂತೋಷವಾಗಿರಲು ಸಾಧ್ಯ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿರುಗಾಡುವುದು, (walking) ಯೋಗ ಮಾಡುವುದು, ವ್ಯಾಯಾಮ ಮಾಡುವುದು ಮಾಡಬೇಕು. ಏನಾದರೂ ತಿಂದರೆ ನಮ್ಮ ಹೃದಯ ಜೀರ್ಣ ಮಾಡಲು ಅನುಕೂಲಿಸಲು ಹೆಚ್ಚು ರಕ್ತವನ್ನು ಜಠರದ ಕಡೆಗೆ ಪಂಪ್ ಮಾಡುತ್ತದೆ. ಇದರಿಂದ ಹೃದಯಕ್ಕೆ ಹೆಚ್ಚು ಒತ್ತಡ ಉಂಟಾಗುತ್ತದೆ. ಇದರಿಂದ ಹೃದಯಕ್ಕೆ ಹಾನಿಯಾಗಬಹುದು. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಅಥವಾ ಯೋಗಾಸನ ಅಥವಾ ತಿರುಗಾಟ ಮಾಡಬೇಕು. ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ, ನೀರು ಜಠರ ಪ್ರವೇಶ ಮಾಡಿದ ತಕ್ಷಣ, ಜಠರದಿಂದ ನರಗಳ ಮೂಲಕ ಮೆದುಳಿಗೆ ಸಂದೇಶ ಹೋಗುತ್ತದೆ. ಜಠರಕ್ಕೆ ಪದಾರ್ಥ ಬಂದಿದೆ ಎಂದು. ಆಗ ಮೆದುಳು ತಕ್ಷಣ ನಮ್ಮ ಮಲ ವಿಸರ್ಜನಾಂಗಕ್ಕೆ ಸಂದೇಶ ಕಳುಹಿಸಿ, ಶೇಖರಣೆ ಗೊಂಡಿರುವ ಮಲ ಹೊರ ಹಾಕುವಂತೆ ತಿಳಿಸುತ್ತದೆ. ಇದರಿಂದ ನಮಗೆ ಗೊತ್ತಿರುವಂತೆ ನೀರು ಕುಡಿದ 10 ನಿಮಿಷದೊಳಗೆ ಮಲ ವಿಸರ್ಜನೆ ಆಗುತ್ತದೆ.
2. ಬೆಳಿಗ್ಗೆ ತಿಂಡಿ ಕಡ್ಡಾಯವಾಗಿ ತಿನ್ನಬೇಕು. ಬೆಳಗಿನ ತಿಂಡಿಗೆ ಆಂಗ್ಲ ಭಾಷೆಯಲ್ಲಿ ಬ್ರೇಕ್ ಫಾಸ್ಟ್ ಎನ್ನುತ್ತೇವೆ. ಅಂದರೆ ಪಾಸ್ಟಿಂಗ್ ಅನ್ನು ಬ್ರೇಕ್ ಮಾಡಿ ಎಂದರ್ಥ. ಅಂದರೆ ರಾತ್ರಿ ಊಟ ಮಾಡಿ ಮಲಗಿದರೆ, ಬೆಳಗ್ಗೆ ತಿಂಡಿ ಹೊತ್ತಿಗೆ 12 ಗಂಟೆ ಆಗಿರುತ್ತದೆ. ಈ 12 ಗಂಟೆ ಉಪವಾಸವನ್ನು ಬ್ರೇಕ್ ಮಾಡಿ, ಅಂದರೆ ತುಂಡರಿಸಿ ಅಂತ. ನಮ್ಮ ಆಹಾರ ಸೂರ್ಯನ ಚಲನೆಗೆ ಅನುಗುಣವಾಗಿರಬೇಕು. ಬೆಳಗ್ಗೆ ಸೂರ್ಯನ ತಾಪ ಕಡಿಮೆ, ತಿಂಡಿ ಕೂಡ ಕಡಿಮೆ ಇರಬೇಕು. ಮಧ್ಯಾಹ್ನ ತಾಪ ಹೆಚ್ಚು. ಆಗ ಆಹಾರ ಹೆಚ್ಚು ಸೇವಿಸಬೇಕು, ಕಾರಣ ಆಗ ಹಾರ್ಮೋನ್ ಸ್ರವಿಸುವಿಕೆ ಹೆಚ್ಚಿರುತ್ತದೆ. ಸಂಜೆ ಪೂರ್ತಿ ತಂಪಾಗಿರುವುದರಿಂದ ಊಟ ಲಘುವಾಗಿರಬೇಕು. ಕಾರಣ ಹಾರ್ಮೋನ್ ಸ್ರವಿಸುಕೆ ನಿಂತಿರುತ್ತದೆ.
3. ಸಮಯಕ್ಕೆ ಸರಿಯಾಗಿ, ಸ್ನಾನ ಮಾಡಿ, ಸ್ವಚ್ಛ ಬಟ್ಟೆಯನ್ನು ಸುಂದರವಾಗಿ ಧರಿಸಿ, ಶಾಲೆಗೆ ಹಾಜರಾಗಬೇಕು. ನಿಧಾನವಾದರೆ ನೀವು ಬರುವ ವೇಳೆಗೆ ಆಗಿರುವ ಪಾಠ ಅರ್ಥವಾಗದೆ, ಮುಂದಿನದು ಅರ್ಥವಾಗುವುದಿಲ್ಲ. ಆದ್ದರಿಂದ ಸಮಯ ಪಾಲನೆ ಅಗತ್ಯ.
4. ತರಗತಿಯಲ್ಲಿ ಕುಳಿತುಕೊಳ್ಳುವಾಗ ಬೆನ್ನು ನೇರವಾಗಿರಲಿ. ಇದರಿಂದ ಉಸಿರಾಟ, ರಕ್ತ ಚಲನೆ ಉತ್ತಮವಾಗುತ್ತದೆ ಹಾಗೂ ಮೂಳೆ ರಚನೆ ಸರಿಯಾಗಿರುತ್ತದೆ.
5. ಸಂಜೆ ಬಂದ ನಂತರ ಸ್ವಲ್ಪ ಹೊತ್ತು ಆಟ ಆಡಿ ಅಥವಾ ತಿರುಗಾಡಿ 6 ಗಂಟೆ ಗೆ ಓದಲು ಕುಳಿತುಕೊಳ್ಳಿ. ಓದುವ ಮುನ್ನ ಕೈಕಾಲು ಮುಖ ತೊಳೆದು ಅಥವಾ ಸ್ನಾನ ಮಾಡಿದ ನಂತರ ಒಳ್ಳೆ ಚಿಂತನೆ ಮಾಡಿ ಅಥವಾ ದೇವರ ಧ್ಯಾನ ಮಾಡಿ, ಓದಲು ಕುಳಿತುಕೊಳ್ಳಬೇಕು. ಇದರಿಂದ ಮನಸ್ಸು ಆಹ್ಲಾದಕರವಾಗಿರುತ್ತದೆ.
6. ಓದುವುದಕ್ಕೆ ಅನುಕೂಲವಾಗುವಂತೆ ವೇಳಾಪಟ್ಟಿಯನ್ನು ಮಾಡಿಕೊಳ್ಳಬೇಕು. ಇದರಿಂದ ಕಾಲಮಿತಿಯಲ್ಲಿ ಎಲ್ಲಾ ವಿಷಯಕ್ಕೂ ಗಮನ ನೀಡಿ, ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಇದು ಕೇವಲ ಓದುವಿಕೆಗೆ ಅಲ್ಲ. ಪ್ರತಿದಿನ ನಾವು ಮಾಡಬೇಕಾದ ಕೆಲಸವನ್ನು ಆದ್ಯತೆ ಅನುಸಾರ ಪಟ್ಟಿ ಮಾಡಿ, ಅದನ್ನು ಅನುಸರಿಸಿದರೆ, ಎಲ್ಲಾ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ.
7. ನಾವು ಪರೀಕ್ಷೆಗೆ ಆಗಿರಲಿ, ಪ್ರವಾಸಕ್ಕೆ ಆಗಿರಲಿ, ಏನೇನು ಇಟ್ಟುಕೊಳ್ಳಬೇಕು ಎನ್ನುವುದನ್ನು ಪಟ್ಟಿ ಮಾಡಿಟ್ಟುಕೊಳ್ಳಬೇಕು. ಪಟ್ಟಿ ಮಾಡಿಟ್ಟುಕೊಂಡು ಅನುಸರಿಸಿದರೆ ಮರೆಯುವ ಸಾಧ್ಯತೆ ಇರುವುದಿಲ್ಲ.
ಮಕ್ಕಳೇ, ಜೀವನದ ಯಶಸ್ವಿಗೆ ಶಿಸ್ತು ಮುಖ್ಯ. ಶಿಸ್ತಿರುವ ಕಡೆ ಸಮಯ ಪಾಲನೆ ಮತ್ತು ಸೌಂದರ್ಯ ಇರುತ್ತದೆ. ಸಮಯ ಪಾಲನೆ ಇರುವಲ್ಲಿ ಶಿಸ್ತು ಮತ್ತು ಸೌಂದರ್ಯ ಇರುತ್ತದೆ. ಹಾಗೆಯೆ ಸೌಂದರ್ಯ ಇರುವಲ್ಲಿ ಶಿಸ್ತು ಮತ್ತು ಸಮಯ ಪಾಲನೆ ಇರುತ್ತದೆ. ನಾವು ಸುಂದರ ಜೀವನ ಸಾಗಿಸಲು ಶಿಸ್ತು ಅಗತ್ಯ ಅಲ್ಲವೇ ಮಕ್ಕಳೇ.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************