-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 32

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 32

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 32        ನಮಸ್ತೆ ಮಕ್ಕಳೇ..... ಹೇಗಿದ್ದೀರಿ...? ನಾನು ಚೆನ್ನಾಗಿದ್ದೇನೆ. ಜಗಲಿ ತುಂಬೆಲ್ಲಾ ನಿಮ್ಮದೇ ಓಡಾಟವನ್ನು ನ಼ೋಡೋದೇ ಚಂದ. ಶಿಕ್ಷಕರ ಕುರಿತಾದ ತಮ್ಮೆಲ್ಲರ ಅತ್ಯಂತ ಭಾವತುಂಬಿದ ಪತ್ರಗಳು, ಚಿತ್ರಗಳು ಗುರುಪರಂಪರೆಯ ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯವನ್ನು ಅನಾವರಣಗೊಳಿಸಿತು. ಶಾಲೆ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆಯ ಮೂಲಕ ದಿನವಿಡೀ ಸಂಭ್ರಮಿಸಿ, ಪ್ರೀತಿಯ ನೆನಪುಗಳನ್ನು ಕಟ್ಟಿಕೊಟ್ಟ ಎಲ್ಲಾ ಶಾಲೆಗಳ ಮಕ್ಕಳಿಗೂ ಶಿಕ್ಷಕರೆಲ್ಲರ ಪರವಾಗಿ ನಮನಗಳು.
      ಶಾಲೆಯಲ್ಲಿ ಮಕ್ಕಳು ನಮ್ಮ ಹಿಂದೆ ಮುಂದೆ ಸುತ್ತಿಕೊಂಡು ಅದು ಇದೂ ಅಂತಾ ಕೇಳ್ತಿರ್ತಾರೆ. ಮಕ್ಕಳು ದಿನಕ್ಕೆ ‌ಸಾಮಾನ್ಯ ಹತ್ತು ಸಲವಾದರೂ ಬರ್ತಾರೆ ನನ್ನ ಹತ್ತಿರ... "ಮೇಡಂ ಗಮ್ ಇದೆಯಾ?".
     ಮೊನ್ನೆ ಶಾಲೆಯ ಜಗಲಿಯಲ್ಲಿ ಮಕ್ಕಳ ಜೊತೆಗೆ craft ಮಾಡ್ತಿದ್ದೆ. ಗಮ್ ಇಲ್ಲದೆ ನಾವು ಮಾಡಿದ ಯಾವುದೇ ಕೆಲಸ ಪೂರ್ತಿ ಆಗ್ತಿರ್ಲಿಲ್ಲ. ಲೆಕ್ಕಕ್ಕೆ ನಿಲುಕದಷ್ಟು ಖಾಲಿಯಾದ fevicol ಡಬ್ಬಗಳು ಕಸದ ಬುಟ್ಟಿಗೆ ಸೇರ್ತಿವೆ....ಆಗ ನನಗೆ ಈ fevicol ನ ಇತಿಹಾಸದ ಬಗ್ಗೆ ಕುತೂಹಲ ಮೂಡಿತು. ಅದರ ಕಥೆ ಹೇಳ್ತೇನೆ ಕೇಳಿ.
     ಸಾಮಾನ್ಯವಾಗಿ ವಿದೇಶಿ ಕಂಪೆನಿಗಳ ಉತ್ಪನ್ನಗಳೇ ಮಾರುಕಟ್ಟೆಯನ್ನು ಆಳುವ ದಿನಗಳಲ್ಲಿ ಹುಟ್ಟಿಕೊಂಡ ನಮ್ಮದೇ ದೇಶದ fevicol ಉತ್ಪನ್ನಗಳ ಬಗ್ಗೆ ಓದುತ್ತಾ ಹೋದಂತೆ, ಈ *ಪಿಡಿಲೈಟ್* ಕಂಪೆನಿಯ ಸ್ಥಾಪಕ ಬಲವಂತರಾಯ್ ಕಲ್ಯಾಣಜಿ ಪಾರೇಖ್ ಎನ್ನುವ ಶ್ರೀಮಂತ ಸಾಧಕನನ್ನು ನಿಮಗೆ ಪರಿಚಯಿಸಬೇಕೆನಿಸಿತು. 
      ಹರಿದ, ತುಂಡಾದ, ಒಡೆದು ಹೋದ ವಸ್ತುಗಳನ್ನು ಜೋಡಿಸಲು ನಾವೆಲ್ಲರೂ ಫೆವಿಕಾಲ್, ಫೆವಿಕ್ವಿಕ್, ಡಾ.ಫಿಕ್ಸಿಟ್ , ಫೆವಿ ಸೀಲ್, ಫೆವಿ ಬಾಂಡ್.... ಇವುಗಳನ್ನೇ ಅವಲಂಬಿತರಾಗಿದ್ದೇವೆ. ಈ ಉತ್ಪನ್ನಗಳನ್ನು ತಯಾರಿಸುವುದು ಪಿಡಿಲೈಟ್ ಎನ್ನುವ ಕಂಪೆನಿ. ದಿನಕ್ಕೆ‌ ಕೇವಲ 14 ರೂಪಾಯಿಗಳಿಗೆ ದುಡಿಯುವ ಜವಾನನಾಗಿ ಕೆಲಸಕ್ಕೆ ಸೇರಿಕೊಂಡು, ಅವಮಾನಗಳ ಮೇಲೆ ಅವಮಾನಗಳನ್ನು ಸಹಿಸಿಕೊಂಡು, ಆ ಬಳಿಕ 5000 ಕೋಟಿಯ ಒಡೆಯನಾದ ಸಾಧಕ ಈ ಬಲವಂತರಾಯ್ ಪಾರೇಖ್.
      ಸ್ವಾತಂತ್ರ್ಯ ಹೋರಾಟ ಅತ್ಯಂತ ಪ್ರಬಲವಾಗಿದ್ದ ಕಾಲ. 1942 ರ ಮಹಾತ್ಮ ಗಾಂಧಿ ನೇತೃತ್ವದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ತಾರಕಕ್ಕೆ ಏರಿದ್ದ ದಿನಗಳವು. ತಂದೆಯ ಆಸೆಯಂತೆ ಕಾನೂನು ಪದವಿಯನ್ನು ಪಡೆಯಲು ಹುಟ್ಟೂರು ಗುಜರಾತಿನಿಂದ‌ ಮುಂಬೈಗೆ ಬಂದರೂ, ಗಾಂಧೀಜಿಯ ಮಾತುಗಳಿಂದ ಪ್ರಭಾವಿತರಾಗಿ, ಭಾರತದ ಸಂಕಷ್ಟದ ಸಮಯದಲ್ಲಿ ಈ ಪದವಿ ಪಡೆಯುವುದು ಅನಿವಾರ್ಯವಲ್ಲವೆಂದು ಅರ್ಧದಲ್ಲಿಯೇ ಕಾಲೇಜು ತೊರೆದು ಮತ್ತೆ ಊರಿಗೆ ವಾಪಾಸ್ಸಾದರು. ಆದರೆ ತಂದೆಯ ಒತ್ತಾಯ.. ಹೇಗೂ ಲಾ ಪದವಿಯನ್ನು ಮುಗಿಸಿದರು. ಸುಳ್ಳು ಹೇಳಿ ಕೇಸ್ ಗೆಲ್ಲುವ ಕೆಲಸ ಬೇಡ ಎಂದುಕೊಂಡು, ಮನೆಯವರ ವಿರೋಧದ ನಡುವೆಯೇ ಆ ಕ್ಷೇತ್ರವನ್ನೇ ತೊರೆದರು. ಅನಿವಾರ್ಯವಾಗಿ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕಿತ್ತು. ಅಲ್ಲಿ ಇಲ್ಲಿ ಕೆಲಸ ಹುಡುಕಿ ಒಂದು ಪ್ರಿಂಟಿಂಗ್ ಪ್ರೆಸ್ ನಲ್ಲಿ ತಿಂಗಳಿಗೆ 90 ರೂ ಗಳಿಗೆ ಕೆಲಸಕ್ಕೆ ಸೇರಿಕೊಂಡರು. ಏನೋ ಸರಿ ಎನಿಸದೆ ಅಲ್ಲಿಯೂ ಕೆಲಸ ಬಿಟ್ಟು, ಮುಂದಿನ‌ ದಾರಿಯ ಹುಡುಕಾಟಕ್ಕಾಗಿ ಮುಂಬೈ ಗೆ ತೆರಳಿದರು. 14 ರೂ ಬಾಡಿಗೆ. ಸಂಸಾರ ನಿರ್ವಹಣೆ ಕಷ್ಟ ಅನ್ನಿಸಿತು. ಊರಿನಿಂದ ತುಪ್ಪ ತಂದು ಮಾರಾಟ ಮಾಡಿದರು. ಅತ್ಯಂತ ಪ್ರಾಮಾಣಿಕತೆ, ಉದಾರತೆಯಿಂದಾಗಿ ಜನರಿಂದ ಮೋಸ ಹೋದರು. ಅವಮಾನಿತರಾದರು. ಸೋತಲ್ಲಿಂದಲೇ ಮೇಲೆದ್ದು ಬರುವ ಛಲವನ್ನು ಹೊಂದಿದರು. ಆಗಾಗಲೇ ವಿದೇಶದಿಂದ ಬಣ್ಣ ತರಿಸಿ ಮಾರುತ್ತಿದ್ದ ಮೋಹನಭಾಯ್‌ ಎನ್ನುವವರೊಂದಿಗೆ ಸೇರಿಕೊಂಡು ವ್ಯಾಪಾರ ಆರಂಭಿಸಿದರು. ಹಣದ ಲೆಕ್ಕಾಚಾರದಲ್ಲಿ ವ್ಯತ್ಯಾಸವಾದಾಗ ಆ ವ್ಯವಹಾರವನ್ನೂ ತೊರೆದರು. ಸುಳ್ಳು ಹೇಳದೆ, ಮೋಸ ಮಾಡದೆ ವ್ಯಾಪಾರ ಮಾಡುತ್ತಿದ್ದ ಬಲವಂತರಾಯ್ ಅವರಿಗೆ ವಿದೇಶದ ಕಂಪೆನಿಗಳು ಅವಕಾಶ ಕೊಟ್ಟವು. ಹೆಚ್ಚಿನ‌ ಅಧ್ಯಯನಕ್ಕಾಗಿ ಜರ್ಮನಿಗೆ ತೆರಳಿದವರ ಕಣ್ಣಿಗೆ, ಅಲ್ಲಿ ವಾರ್ಡ್ ರೋಬ್ ಗಳನ್ನು ಅಂಟಿಸಲು ಬಳಸುತ್ತಿದ್ದ Movicol ಎನ್ನುವ ಅಂಟು ಪದಾರ್ಥ ಕಣ್ಣಿಗೆ ಬಿತ್ತು.
      ಹೊಸ ಕನಸಿನೊಂದಿಗೆ ಭಾರತಕ್ಕೆ ಮರಳಿದ ಬಲವಂತರಾಯ್, ಅತ್ಯುತ್ತಮ ಗುಣಮಟ್ಟದ ಗಮ್ ನಮ್ಮ ದೇಶದಲ್ಲಿ ಇಲ್ಲ ಎನ್ನುವುದನ್ನು ಅರಿತುಕೊಂಡರು. ಜರ್ಮನಿಯ Movicol ಎಂಬ ಹೆಸರನ್ನು ಸ್ವಲ್ಪ ಬದಲಿಸಿ, Fevicol ಎನ್ನುವ ಹೊಸ ಅಂಟು ದ್ರವವನ್ನು ಉತ್ಪಾದಿಸಿದರು.
     ಅತ್ಯಂತ ಮನಮುಟ್ಟುವ ಜಾಹೀರಾತುಗಳನ್ನು ನೀಡಿ, ಭಾರತೀಯರ ಮನಗೆದ್ದರು. ಫೆವಿಕಾಲ್ ಅಂಟಿಸಿದ ವಾರ್ಡ್ ರೋಬ್ ಇಪ್ಪತ್ತು ವರ್ಷಗಳ ಕಾಲ ಗಟ್ಟಿಮುಟ್ಟಾಗಿ ಉಳಿಯುತ್ತದೆ ಎಂದು ಘೋಷಿಸಿದರು. ಭಾರತದ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದರು. ವಿವಿಧ ವಸ್ತುಗಳನ್ನು ಅಂಟಿಸಲು, ಬೇರೆ ಬೇರೆ ಮಾರ್ಪಾಡುಗಳೊಂದಿಗೆ, ಫೆವಿಬಾಂಡ್, ಫೆವಿಕ್ವಿಕ್, ಡಾ.ಫಿಕ್ಸಿಟ್, ಫೆವಿಕ್ರಿಲ್..... ಹೀಗೆ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಿದರು. ಭಾರತದಲ್ಲಿಯೇ ತಯಾರಾಗುವ ಈ ಎಲ್ಲ ಉತ್ಪನ್ನಗಳಿಗೆ ಅಮೇರಿಕ, ಬ್ರೆಜಿಲ್, ಈಜಿಪ್ಟ್, ಬಾಂಗ್ಲಾದೇಶ, ದುಬೈ.....ಹೀಗೆ ವಿದೇಶಗಳಿಂದ ಅತೀ ಹೆಚ್ಚಿನ ಬೇಡಿಕೆ ಬಂತು. ಪಿಡಿಲೈಟ್ ಕಂಪೆನಿಯ ಲಾಭ 5000 ಕೋಟಿಗೇರಿತು.....!
       ದೇಶದ ಅತ್ಯಂತ ಶ್ರೀಮಂತ ರ ಪಟ್ಟಿಯಲ್ಲಿ ಬಲವಂತರಾಯರ ಹೆಸರು!! ಅವಮಾನಿಸಿದವರೇ ಸನ್ಮಾನಿಸಿದರು. 'ಪಾರೇಖ್- ದಿ ಜ್ಯುವೆಲ್ ಆಫ್ ಇಂಡಿಯಾ' ಎಂದು ಕೊಂಡಾಡಿದರು. ಸಾವಿರಾರು ಕೋಟಿಗಳ ಒಡೆಯರಾದರೂ ಸಾಮಾನ್ಯರಂತೆಯೇ ಬದುಕಿದ ಈ ಸಾಧಕ 2013 ರ ತಮ್ಮ 88 ನೆಯ ವಯಸ್ಸಿನಲ್ಲಿ ತೀರಿಕೊಂಡರು.
     ಅಬ್ಬಾ......! ಸಾಧನೆಗೆ ಏನೆಲ್ಲಾ ಜೊತೆಯಾದವು! ಪರಿಶ್ರಮ, ಛಲ, ಬದ್ಧತೆ, ಶ್ರದ್ಧೆ,
ಪ್ರಾಮಾಣಿಕತೆ..... ನಮಗೆಲ್ಲರಿಗೂ ಇವರು ಬದುಕಿನ ಪಾಠ ಅಲ್ವಾ...? 
     ಏನನ್ನಿಸಿತು? ಬರೆದು ಕಳಿಸ್ತೀರಲ್ಲಾ...? ನಿಮ್ಮ ನುಡಿಗಳಿಗಾಗಿ ಜಗಲಿಯ ಬಳಗ ಕಾಯಯತ್ತಿರುತ್ತದೆ. ಆರೋಗ್ಯ ಜೋಪಾನ. ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************


Ads on article

Advertise in articles 1

advertising articles 2

Advertise under the article