ಅಕ್ಕನ ಪತ್ರ - 31ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1
Saturday, September 3, 2022
Edit
ಅಕ್ಕನ ಪತ್ರ - 31 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1
ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........
ಅಕ್ಕನ ಪತ್ರ ಸಂಚಿಕೆ 31ಕ್ಕೆ ಶಿಶಿರನ ಉತ್ತರ
ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ನಮಸ್ಕಾರಗಳು. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬ ಮಾತಿದೆ. ತಾಯಿ ಸನ್ನಡತೆಯನ್ನು ಕಲಿಸುವ ಗುರು. ತಾಯಿಯ ನಂತರ ನಮ್ಮನ್ನು ತಿದ್ದಿ ತೀಡಿ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡುವವರೇ ಶಿಕ್ಷಕರು. ನನ್ನ ಶೈಕ್ಷಣಿಕ ಜೀವನದಲ್ಲಿ ಅಂಗನವಾಡಿಯಿಂದ ಇಲ್ಲಿಯವರೆಗೆ ಒಳ್ಳೊಳ್ಳೆಯ ಶಿಕ್ಷಕರನ್ನು ಪಡೆದಿರುವುದು ನನ್ನ ಭಾಗ್ಯ. ಕೊರೋನ ಕಾಲ ಘಟ್ಟದಲ್ಲಿ ಶಾಲೆ ಇಲ್ಲದೆ ಗುರುಗಳನ್ನು ಭೇಟಿಯಾಗದೆ ಮನೆಯಲ್ಲಿಯೇ ಇದ್ದ ನಮಗೆ ಆನ್ ಲೈನ್ ಪಾಠದ ಮೂಲಕ ಅನೇಕ ತೊಂದರೆಗಳನ್ನು ಎದುರಿಸಿ ಪಾಠವನ್ನು ಮಾಡಿದ ಶಿಕ್ಷಕರನ್ನು ಮರೆಯಲು ಸಾಧ್ಯವೇ...? ಈ ವರುಷ ಶಾಲೆ ಆರಂಭವಾದ ನಂತರ ನಾನು ಅನಾರೋಗ್ಯಕ್ಕೆ ತುತ್ತಾದಾಗ ನನ್ನ ಎಲ್ಲಾ ಶಿಕ್ಷಕರು ಫೋನ್ ಮಾಡಿ ಆರೋಗ್ಯವನ್ನು ವಿಚಾರಿಸಿ ನನಗೆ ಧೈರ್ಯ ತುಂಬಿ ಮತ್ತೆ ಮರಳಿ ಶಾಲೆಗೆ ಬರಲು ಪ್ರೊತ್ಸಾಹಿಸಿದರು. ನನಗೆ ಸಂಗೀತ ಕಲಿಸುತ್ತಿರುವ ನನ್ನ ಗುರುಗಳಾದ ವಿದ್ವಾನ್ ಕೃಷ್ಣಾಚಾರ್ಯರು ನನಗೆ ಅಚ್ಚು ಮೆಚ್ಚು. ಬೇಸಿಗೆ ರಜೆಯಲ್ಲಿ ಚಿಣ್ಣರ ಮೇಳದ ಮೂಲಕ ಬೇರೆ ಬೇರೆ ಕಲೆಯಲ್ಲಿ ನಮಗೆ ಪ್ರೀತಿಯಿಂದ ಮಾರ್ಗದರ್ಶನ ನೀಡಿದ ಜೀವನ್ ರಾಂ ಸುಳ್ಯ ಸರ್ ಅವರು ಕೂಡ ನನ್ನ ಮೆಚ್ಚಿನ ಶಿಕ್ಷಕರು. ಅಕ್ಕನ ಪತ್ರದ ಮೂಲಕ ಒಳ್ಳೆಯ ವಿಚಾರವನ್ನು ತಿಳಿಸಿಕೊಡುವ ನೀವು ನಮಗೆ ಅಕ್ಕನ ರೂಪದಲ್ಲಿ ಸಿಕ್ಕ ಶಿಕ್ಷಕಿ. ಮಕ್ಕಳ ಜಗಲಿಯ ಮೂಲಕ ಅನೇಕ ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ನಮ್ಮ ಪ್ರೀತಿಯ ತಾರಾನಾಥ ಕೈರಂಗಳ ಸರ್ ಗೆ ನಾವು ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು. ನಮ್ಮನ್ನು ತಮ್ಮ ಮಕ್ಕಳಂತೆ ಪ್ರೀತಿಸುವ ಸ್ನೇಹಭಾವ ತೋರಿಸುವ ನನ್ನ ಎಲ್ಲಾ ಪ್ರೀತಿಯ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು
10ನೇ ತರಗತಿ
ಎಸ್.ಎಲ್. ಎನ್. ಪಿ. ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೆ ಅಕ್ಕ..... ನಿಜ ಅಕ್ಕ, ತಾಯಿಯ ಪ್ರೀತಿ ಕೊಡುವ ಆಪ್ತತತೆಯ ಭಾವ ಮತ್ಯಾರು ನೀಡಲಾರರು. ತಾಯಿಯು ಮಡಿಲಿನಿಂದ ಶಾಲೆಯ ಮಡಿಲಿಗೆ ಸೇರಿದಾಗ ಅಲ್ಲಿಯ ಶಿಕ್ಷಕರೂ ಸಹ ತಾಯಿಯಷ್ಟೇ ಪ್ರೀತಿ ನೀಡಿದ ದಿನಗಳು ಮೆಲುಕು ಹಾಕುವಾಗ, ಖುಷಿ ಎನಿಸುತ್ತದೆ. ಮೊದಲ ದಿನದ ಶಾಲೆಯ ದಿನಗಳು ನೆನಪಿಲ್ಲವಾದರೂ ಶಾಲೆಗೆ ಹೋಗುವಾಗ ಅಳುತ್ತಾ ಹೋದ ದಿನಗಳು ಇಂದೂ ನೆನಪಿದೆ. ಎನೇನೋ ಸುಳ್ಳು ಕಾರಣ ಹೇಳಿ ಮನೆಯಲ್ಲೇ ಉಳಿದುಕೊಳ್ಳಲು ಮಾಡುತ್ತಿದ್ದ ಪ್ರಯತ್ನ ಅಂದು ಸಫಲಗೊಂಡಿದನ್ನು ಇಂದು ನೆನೆಯುವಾಗ ತಮಾಷೆ ಎನಿಸುತ್ತದೆ.
ಗುರುಗಳ ವಿಚಾರಕ್ಕೆ ಬಂದಾಗ ಪ್ರಾಥಮಿಕ ಶಾಲೆಯಲ್ಲಿದ್ದ ಗುರುಗಳು ತಂದೆ ತಾಯಿಯಂತೆ ಪ್ರೀತಿ ನೀಡಿ, ವಿದ್ಯಾ-ಬುದ್ದಿ ನೀಡಿ ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿದವರು. ಆ ದಿನಗಳಲ್ಲಿ ಶಾಲೆಯಲ್ಲಿ ಭಾಗವಹಿಸುತ್ತಿದ್ದ ಕಲಾ ಚಟುವಟಿಕೆ ಆಟೋಟ ಸ್ಪರ್ಧೆಗಳನ್ನೆಲ್ಲಾ ನೆನೆಯುವಾಗ ಖುಷಿ ಎನಿಸುತ್ತದೆ. ಯಾವುದೇ ಭೇಧ ಭಾವ ಇಲ್ಲದೆ ಇಡೀ ತರಗತಿಯೇ ಒಂದು ಗುಂಪಾಗಿ ಭಾಗವಹಿಸುತ್ತಿದ್ದ ಸ್ಪರ್ಧೆಗಳನ್ನೆಲ್ಲ ಮೆಲುಕು ಹಾಕಿದಾಗ ಆ ದಿನಗಳು ಕಣ್ಣ ಮುಂದೆಯೇ ಹಾದು ಹೋದಂತಿದೆ. ಈಗ ನಾವು ಯಾವುದಾದರೂ ಕ್ಷೇತ್ರದಲ್ಲಿ ಮುಂದಿದ್ದೇವೆ ಎಂದರೆ ಮುಖ್ಯ ಕಾರಣ ನಮ್ಮ ಮೊದಲ ಹಂತದಲ್ಲಿ ನಮ್ಮ ಕೈ ಹಿಡಿದು ಮುನ್ನಡೆಸಿದ ಗೌರವಾನ್ವಿತ ಗುರುವೃಂದ. "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ "ಎಂಬ ಮಾತು ನೂರಕ್ಕೆ ನೂರು ನಿಜ. ವಿದ್ಯಾರ್ಥಿಗಳಾದ ನಮ್ಮನ್ನು ತಿದ್ದಿ ತೀಡಿ ನಮ್ಮ ಬದುಕಿನ ಮಾರ್ಗದರ್ಶಕರಾಗಿರುವ ಗುರುಗಳನ್ನು ಗೌರವಿಸೋಣ ಅವರ ಆಶೀರ್ವಾದ ಸದಾ ಬೇಡೋಣ.....
ದ್ವಿತೀಯ ಪಿಯುಸಿ
ಶ್ರೀ ರಾಮ ವಿದ್ಯಾ ಕೇಂದ್ರ , ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೆ ಅಕ್ಕ ಚೆನ್ನಾಗಿದ್ದೀರ.... ನಾನು ಸ್ರಾನ್ವಿ ಶೆಟ್ಟಿ. ನಿಮ್ಮ ಹೋದ ವಾರದ ಪತ್ರಕ್ಕೆ ಉತ್ತರಿಸಲು ಸಾಧ್ಯವಾಗಲಿಲ್ಲ, ಕ್ಷಮೆಯಿರಲಿ. ನಿಮ್ಮ 31ನೇ ಪತ್ರ ಓದಿದೆ ಅಕ್ಕ , ಪತ್ರ ಓದಿದಾಗ ನಿಜವಾಗಿಯೂ ನನ್ನ ಬಾಲ್ಯದ ಪ್ರಸಂಗಗಳನ್ನು ನೆನಿಸಿ ನಗು ಬಂತು. ಕೆಲವೊಂದು ನೆನಪಿದೆ. ನೆನಪಿಲ್ಲದ್ದನ್ನು ಅಮ್ಮ ಹೇಳುತ್ತಿರುತ್ತಾರೆ. ನಾನು ಮೊದಲು ಅಂಗನವಾಡಿಗೆ ಹೋಗುತ್ತಿದ್ದೆ. ಅಮ್ಮ ಶಾಲೆಗೆ ಬಿಟ್ಟು ಬರುವಾಗ ನಾನು ಅಳುತ್ತಿದ್ದೆ, ಅಮ್ಮ ಶಾಲೆಯ ಪಕ್ಕದ ಮನೆಯಲ್ಲೇ ನಿಂತು 11 ಗಂಟೆಗೆ ವಾಪಾಸು ಕರೆದುಕೊಂಡು ಬರುತಿದ್ದರಂತೆ. ಆನಂತರ LKG ಗೆ ಸೇರಿಸುವಾಗ ನಾನು ಶಾಲೆಗೆ ಹೋಗಲು ಹಟ ಮಾಡುತ್ತೇನೆಂದು ನನ್ನನ್ನು ಆರು ತಿಂಗಳು ಲೇಟಾಗಿ ಶಾಲೆಗೆ ಸೇರಿಸಿದ್ದರಂತೆ. ನನಗೆ ಮೊದಲಿಗೆ ಒಂದುವಾರ ಮಧ್ಯಾಹ್ನದ ವರೆಗೆ ಶಾಲೆ ಇತ್ತಂತೆ. ಮೊದಲ ದಿನ ಅಮ್ಮ ಬಿಟ್ಟು ಶಾಲೆಯ ಹೊರಗೆ ಹೋಗಿ ಕೂತಿದ್ದವರು, ಅಮ್ಮ ಹೊರಗೆ ಹೋದಾಗ ನಾನು ಕಣ್ಣಲ್ಲಿ ನೀರು ತುಂಬಿಕೊಂಡು ನಾನು ಬರುತ್ತೇನೆ ಎಂದು ಹೇಳಿದ್ದೆನಂತೆ. ಒಂದುವಾರ ಹೀಗೆ ಹೊರಗೆ ನಿಂತು ನನ್ನನ್ನು ಮಧ್ಯಾಹ್ನ ವಾಪಾಸು ಕರೆತರುತಿದ್ದರು. ನನಗೆ Lkg ಯಲ್ಲಿ ದ್ದಾಗ ಮೊದಲು ಅಮ್ಮನ ರೂಪದಲ್ಲಿ ಸಿಕ್ಕಿದವರು ಟೀಚರ್ ಲಾವ್ಯ ಟೀಚರ್. ಒಂದು ಸಲ ನೋಡದೆ ಅವರ ಕಾಲು ಕೂಡ ತುಳಿದಿದ್ದೆ, ಆನಂತರ ಸಾರಿ ಕೇಳಿದ್ದೆ. ಆದರೂ ಜೋರು ಮಾಡಲಿಲ್ಲ ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು. ಅಷ್ಟೊಂದು ಅಳುವ ಮಕ್ಕಳನ್ನು ತಾಯಂದಿರು ಬಿಟ್ಟು ಹೋಗುವಾಗ ಸಮಾಧಾನ ಪಡಿಸಲು ತುಂಬಾನೇ ತಾಳ್ಮೆ ಇರಬೇಕು. ನಮಗೆ ಒಂದು ವಾರದ ನಂತರ ಶಾಲೆಗೆ ಶಾಲೆಯ ಬಸ್ಸಲ್ಲಿ ಹೋಗಲಿಕ್ಕೆ, ಬಸ್ಸಿಗೆ ಹತ್ತಿಸುವಾಗ ನಾನು ಅತ್ತಿದ್ದೆನಂತೆ. ನನ್ನನ್ನು ಕಳುಹಿಸಿ ಮನೆಗೆ ಹೋಗಿ ನನ್ನ ಅಮ್ಮ ಕೂಡ ಅತ್ತಿದ್ದರಂತೆ. ಆದರೆ ನಾನು ಯಾವತ್ತೂ ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡಿಲ್ಲವಂತೆ. ಹುಶಾರಿಲ್ಲದಾಗ ಮಾತ್ರ ರಜೆ ಬೇರೆ ದಿನ ಯಾವತ್ತೂ ಶಾಲೆ ತಪ್ಪಸಲಿಲ್ಲ. ನಾನು ಐದನೇ ತರಗತಿಗೆ ನನ್ನ ಮೊದಲ ಶಾಲೆ ಬಿಡಬೇಕಾಯಿತು. ನನಗೆ ಶಾಲೆ ಬಿಡಲು ಮನಸ್ಸೇ ಇರಲಿಲ್ಲ. ನಮ್ಮ ಮನೆಯ ಹತ್ತಿರವೇ ಹೊಸ ಶಾಲೆ ಪ್ರಾರಂಭ ಮಾಡಿದರು. ಅದೇ ಸಮಯಕ್ಕೆ ನಮ್ಮ ಶಾಲೆಗೆ ಹೋಗುತ್ತಿದ್ದ ದಾರಿಯಲ್ಲಿದ್ದ ಸೇತುವೆ ಮಳೆ ನೀರಿಗೆ ಕೊಚ್ಚಿಹೋಯಿತು. ಒಂದು ವರ್ಷ ದೂರದ ದಾರಿಯಾಗಿ ಹೋಗಿ ಐದನೇ ತರಗತಿ ಮುಗಿಸಿದೆವು. ಆರನೇ ತರಗತಿಗೆ ಹೊಸ ಶಾಲೆಗೆ ಬಂದಾಗ ನಮ್ಮ ಮೊದಲ ಟೀಚರ್ ಲಾವ್ಯ ಕೂಡ ಇಲ್ಲಿಗೆ ಬಂದಿದ್ದರು. ತುಂಬಾ ಕುಷಿಯಾಯಿತು. ನಾನು ಅಮ್ಮ ನಲ್ಲಿ ನಿನ್ನೆಯಷ್ಟೇ ಹೇಳಿದ್ದೇ ಕೊರೋನದಿಂದಾಗಿ ಟೀಚರ್ಸ್ ಡೇಗೆ ವಿಷ್ ಮಾಡಲಾಗಿರಲಿಲ್ಲ ಈ ಸಲ ಮೊದಲು ಹೋಗಿ ಲಾವ್ಯ ಟೀಚರ್ಗೆ ವಿಷ್ ಮಾಡುತ್ತೇನೆ ಎಂದು. ಆನಂತರ ಆರನೇ ತರಗತಿಗೆ ಮೊದಲ ಕ್ಲಾಸ್ ಟೀಚರ್ ಆಗಿದ್ದ ಪೂಜ ಟೀಚರ್ಗೆ, ಹೊಸ ಶಾಲೆಯಲ್ಲ್ಲಿ ನಮಗೆ ಪ್ರೆಂಡ್ ತರ ಇದ್ದರು. ಈಗ ನಮ್ಮ ಕ್ಲಾಸ್ ಟೇಚರ್ ಮಮತ ಅವರಿಗೆ, ಆನಂತರ ನಮ್ಮ ಶಾಲೆಯ ಎಲ್ಲ ಟೀಚರ್ಸ್ಗೆ ವಿಷ್ ಮಾಡಿ ಧನ್ಯವಾದ ಹೇಳಲಿಕ್ಕೆ, ಕೊರೋನಾದಿಂದಾಗಿ ನಮ್ಮ ಎರಡು ವರ್ಷ ವೇಸ್ಟಾಯಿತು. ಈಗ ಶಾಲೆ ಶುರುವಾಗಿ ಕುಷಿಯಾಗಿದೆ. ನಮ್ಮ ಮೊದಲ ಶಾಲಾದಿನವನ್ನು ನೆನಪಿಸಿದರೆ ಧನ್ಯವಾದ ಅಕ್ಕ.
9ನೇ ತರಗತಿ
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ
ಸ್ಕೂಲ್ ಗುಡ್ಡೆಯಂಗಡಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ಕಾರಗಳು ನನ್ನ ಪ್ರೀತಿಯ ಅಕ್ಕ.... ನಾನು ಶಿಫಾನ. ಅಮೃತ ಭಾರತೀಯ ಮಡಿಲಿನಲ್ಲಿ ನಾನು ಖುಷಿಯಾಗಿದ್ದೇನೆ. ನನ್ನ ಕಲಿಕೆಯ ಮೊದಲ ಅನುಭವದ ಮಾತು. ಪ್ರಪ್ರಥಮವಾಗಿ ನಾನು ಅಂಗನವಾಡಿಗೆ ಹೋದ ದಿನದ ನೆನಪು. ತಂದೆ ತಾಯಿಯರ ಅತಿಯಾದ ಪ್ರೀತಿಯ ಕಾರಣ ಅವರನ್ನು ಬಿಟ್ಟು ಅಂಗನವಾಡಿಯಲ್ಲಿ ಕುಳಿತುಕೊಳ್ಳಲು ಮೊದಮೊದಲಿಗೆ ಏನೋ ಬೇಸರ, ಒಂದೆಡೆ ಭಯ. ತಾಯಿ ತಂದೆಯರಂತಹದ ಪ್ರೀತಿ ವಾತ್ಸಲ್ಯ ತೋರಿಸಿದ ಟೀಚರ್ ಅವರ ನೆನಪು, ಅವರ ಪ್ರೀತಿಯ ಮುಂದೆ ನನಗೆ ಬೇಸರ ಹೆದರಿಕೆ ಹೋಯಿತು. ಒಂದನೇ ತರಗತಿಗೆ ಕಾಲಿಟ್ಟಾಗ ಮೊದಲಿಗೆ ಪರಿಚಯವಾದ ಟೀಚರ್ ಕೀರ್ತಿ ಟೀಚರ್ ಹಾಗೂ ಪ್ರಸಾದ್ ಸಾರ್ ಪ್ರೀತಿಯಿಂದ ಬರಮಾಡಿಕೊಂಡರು. ಅಂಗನವಾಡಿಯಿಂದ ಒಂದನೇ ತರಗತಿಗೆ ಕಾಲಿಡುವಾಗ ಅದೇ ಭಯ ಬೇಸರ ಹೊಸಪರಿಚಯ. ಹೊಸ ಹೊಸ ಮಕ್ಕಳ ಜೊತೆ ಹೊಂದಾಣಿಕೆ ಒಂದನೇ ತರಗತಿಯಲ್ಲಿ ಪರಿಚಯವಾದ ನನ್ನ ಫೇವರೆಟ್ ಟೀಚರ್ ಕೀರ್ತಿ ಟೀಚರ್ ಅವರಿಗೆ ಮಕ್ಕಳ ಜಗಲಿಯ ಮೂಲಕ ವಂದನೆ ಹೇಳುತ್ತೇನೆ. ಆಟ ಪಾಠದೊಂದಿಗೆ ಮಕ್ಕಳ ಜೊತೆ ಮಕ್ಕಳಾಗುತ್ತಾ ಟೀಚರ್ ಅವರು ಪ್ರತಿಭಾ ಕಾರಂಜಿ ಇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಾ ಭರವಸೆ ತುಂಬುತ ನನಗೆ ಧೈರ್ಯ ಕೊಟ್ಟಂತಹ ಟೀಚರ್ಸ್ ರವರನ್ನು ಮರೆಯಲು ಸಾಧ್ಯವೇ ಇಲ್ಲ. ಪ್ರತಿ ವರ್ಷ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಪಡೆದಿದ್ದೇನೆ. ಇದಕ್ಕೆ ಕಾರಣರಾದ ನನ್ನ ಪ್ರೈಮರಿ ಟೀಚರ್ಸ್ ಗಳು ದಾಮೋದರ್ ಸರ್ , ಉಮಾ ಟೀಚರ್ , ಕೀರ್ತಿ ಟೀಚರ್ , ಪ್ರಸಾದ್ ಸಾರ್, ಅವರಿಗೆ ನನ್ನ ಹೃದಯಾಂತರದ ನಮನಗಳು. ಪ್ರೈಮರಿ ಸ್ಕೂಲ್ ಅನ್ನು ಬಿಟ್ಟು ಹೈಸ್ಕೂಲಿಗೆ ಬೇರೆ ಶಾಲೆಗೆ ಹೋಗುವಾಗ ಮೊದಲ ದಿನದ ಅನುಭವ ಏನೋ ಒಂತರ ಚಡಪಡಿಕೆ. ಹೇಗಿರುವವರು ಟೀಚರ್ಸ್ ರವರು ಹಾಗೂ ಕ್ಲಾಸ್ ಮಕ್ಕಳು ಆದರೆ ನನ್ನ ನಿರೀಕ್ಷೆಗೆ ಮೀರಿದಂತಹ ಟೀಚರ್ಸ್ ರವರು ಹಾಗೂ ತರಗತಿಯ ವಿದ್ಯಾರ್ಥಿಯರನ್ನು ನೋಡಿ ನನಗೆ ತುಂಬಾನೇ ಖುಷಿಯಾಯಿತು. ತಂದೆ ತಾಯಿಯರು ಕೊಟ್ಟಂತಹ ಪ್ರೀತಿಯನ್ನು ತೋರಿಸುವಂತಹ ಟೀಚರ್ ರವರು ಆಟ ಪಾಠಕ್ಕೂ ಕೈ ಜೋಡಿಸಿದರು. ನನ್ನ ಪ್ರತಿಭೆಯನ್ನು ತೋರಿಸಿ ಕೊಟ್ಟಂತಹ ಒಂದೊಂದು ವಿಷಯದಲ್ಲೂ ಒಂದೊಂದು ಟೀಚರ್ ಅವರು ನನಗೆ ಫೇವರೆಟ್ ಟೀಚರ್ ಭಾರತಿ ಟೀಚರ್, ಲತಾ ಟೀಚರ್, ಶರತ್ ಸಾರ್, ಶುಭ ಟೀಚರ್, ರಫೀಕ್ ಸಾರ್, ಸರೋಜಾ ಟೀಚರ್, ಹಾಗೂ ಗೋಪಾಲಕೃಷ್ಣ ಸಾರ್ ಅವರಿಗೂ ವಂದನೆಗಳು. ಇವರನ್ನು ಮಕ್ಕಳ ಜಗಲಿ ಮೂಲಕ ಪರಿಚಯಿಸಲು ಅವಕಾಶ ಮಾಡಿಕೊಟ್ಟಂತಹ ತಾರನಾಥ ಸಾರ್ ಕೈರಂಗಳ ಅವರಿಗೂ ತುಂಬು ಹೃದಯದ ವಂದನೆಗಳು.
ಹತ್ತನೇ ತರಗತಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ಮಕ್ಕಳ ಜಗಲಿಯ ಎಲ್ಲಾ ಪ್ರೀತಿ ಪಾತ್ರರಿಗೂ ಆತ್ಮೀಯ ಶುಭ ನಮನಗಳು..... ನಾನು ಪ್ರಿಯ,
ತಾಯಿ ಭಾರತಾಂಬೆಯ ಮಡಿಲಲ್ಲಿ ಜನಿಸಿದ ನಾವುಗಳೆಲ್ಲರು ಸ್ವಚ್ಛಂದದಿದ್ದೇವೆ....
"ಅಮ್ಮ" ಎಂದರೇನೆ ಪ್ರೀತಿ, ಕಾಳಜಿ, ಮಮತೆ, ವಾತ್ಸಲ್ಯ ಗಳ ಪ್ರತಿರೂಪ... ಅಮ್ಮನಿಗಿಂತ ಆಪ್ತರು ಮತ್ತೊಬ್ಬರಿರಲು ಏನಿತು ಅಸಾಧ್ಯ...
ನಾವೆಲ್ಲರೂ ಸಣ್ಣಂದಿರಿರುವಾಗಿನ ಮಾತುಗಳನ್ನೊಳಗೊಂಡ ನಿಮ್ಮ ಪತ್ರವನ್ನ ಓದುವಾಗ ನನಗೆ ನನ್ನ ತಂಗಿಯ ಚಿಕ್ಕಂದಿನ ಕೆಲವು ಹಾಸ್ಯಾಸ್ಪದ ಘಟನೆಗಳು ಮರುಕಳಿಸಿದವು.... ಚಿಕ್ಕಂದಿನಲ್ಲಿ ನಾನು ಮತ್ತು ತಂಗಿ ಹಾಗೂ ಇನ್ನೂ ಕೆಲ ಮಕ್ಕಳು ಶಾಲೆಗೆ ರಿಕ್ಷಾದಲ್ಲಿ ಹೊರಡುತ್ತಿದ್ದೆವು... ಆಗ
ನನ್ನ ತಂಗಿ ಶಾಲೆಯ ಸಮವಸ್ತ್ರವನ್ನೆಲ್ಲ ತೊಟ್ಟ ನಂತರ ನನ್ನ ಕಾಲು ನೋವು ಎಂದು ಹೇಳುತ್ತಿದ್ದ ಘಟನೆ ನೆನಪಿಗೆ ಬಂತು..! ಅಮ್ಮ ನಮ್ಮನ್ನು ಶಾಲೆ ಎಂಬ ನಿಲಯಕ್ಕೆ ಸೇರ್ಪಡಿಸಿದ ಮೇಲೆ ನಮ್ಮನ್ನು ಅಲ್ಲಿನ ಶಿಕ್ಷಕರು ತುಂಬಾ ಕಾಳಜಿ ಹಾಗೂ ಜವಾಬ್ದಾರಿಯಿಂದ ನೋಡಿಕೊಂಡರು.... ಅವರನ್ನು ನಾವು ಎಂದಿಗೂ ಮರೆಯಲು ಅಸಾಧ್ಯ... ನಮ್ಮೆಲ್ಲರ ಜೀವನದಲ್ಲಿ ಶಿಕ್ಷಕರ ಪಾತ್ರವೂ ಮಹತ್ವಪೂರ್ಣವಾದದ್ದು...
"ಹಿಂದೆ ಗುರುವಿರಬೇಕು ಮುಂದೆ ಗುರಿ ಇರಬೇಕು" ಎಂಬ ಮಾತು ನಿಜಕ್ಕೂ ಸತ್ಯ... ಎಲ್ಲಾದರೂ ನಮಗೆ ಭೋದಿಸಿದ ಶಿಕ್ಷಕರು, ಹಿರಿಯರನ್ನು ಕಂಡಾಗ ನಾವು ಅವರಿಗೆ ಕರ ಮುಗಿದಾಗ ಅವರ ಮೊಗದಲ್ಲಿ ಬೀರುವ ಸಂತಸವೆ ನಮ್ಮ ಯಶಸ್ಸಿಗೆ ಮೆಟ್ಟಿಲು... ಕೊರೋನದ ನಂತರ ಎಂದಿನಂತೆ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುತ್ತವೆ... ನಮ್ಮೆಲ್ಲರ ಪ್ರತಿಭೆಯನ್ನು ಗುರುತಿಸುವ ಎಲ್ಲರಿಗೂ ವಂದನೆಗಳು... ಇಂತಹ ಒಳ್ಳೆಯ ಸಂದೇಶವನ್ನು ಸಾರುವ ನಿಮ್ಮ ಎಲ್ಲಾ ಪತ್ರಕ್ಕಾಗಿ ನಿಮಗೆ ಆತ್ಮೀಯ ವಂದನೆಗಳು ಅಕ್ಕ....
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ (ತಾ), ದಕ್ಷಿಣ ಕನ್ನಡ ( ಜಿ).
*****************************************
ಪ್ರೀತಿಯ ಅಕ್ಕನಿಗೆ ಸಾನ್ವಿ ಮಾಡುವ ವಂದನೆಗಳು. ನಿಮ್ಮ ಪತ್ರ ಓದಿದೆ, ತುಂಬಾ ಚೆನ್ನಾಗಿತ್ತು. ಮೊದಲಿಗೆ ನನ್ನ ಎಲ್ಲಾ ಗುರುವೃಂದದವರಿಗೂ ಪ್ರೀತಿಪೂರ್ವಕವಾದ ನಮನಗಳು. ನೀವು ಹೇಳಿದಂತೆ ಮೊದಲನೆಯ ದಿನ ನಾನು ತುಂಬಾ ಖುಷಿಯಿಂದಲೇ ಶಾಲೆಗೆ ಹೋದೆ. ಆಮೇಲೆ ಕೆಲವು ಬೇಸರವಾದ ದಿನಗಳು ಇವೆ. ಆಗ ನನ್ನನ್ನು ಅಮ್ಮನಂತೆ ನನ್ನ ಶಿಕ್ಷಕಿಯರು ಪ್ರೀತಿಯಿಂದ ನೋಡಿಕೊಂಡರು. ಕೆಲವೊಂದು ದಿನ ನಾನು ಹೊಟ್ಟೆ ನೋವು ಎಂದು ಶಾಲೆಗೆ ಹೋಗದಿದ್ದದ್ದೂ ಇದೆ. ಶಿಕ್ಷಕರು ನಮಗೆ ಪಾಠ ಮಾತ್ರವಲ್ಲದೆ ಜೀವನದ ಮೌಲ್ಯದ ಬಗ್ಗೆಯೂ ಅರಿವು ಮೂಡಿಸುತ್ತಾರೆ. ಶಿಕ್ಷಕರು ಯಾವತ್ತಾದರೂ ನಮ್ಮನ್ನು ಬೈದರೆ ಅದು ನಮ್ಮ ಒಳಿತಿಗಾಗಿಯೇ ಆಗಿರುತ್ತದೆ. ಹೀಗೆ ಶಿಕ್ಷಕರು ನಮ್ಮ ಜೀವನದಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಮಗದೊಮ್ಮೆ ನನ್ನ ಎಲ್ಲಾ ಶಿಕ್ಷಕರಿಗೂ ವಂದನೆಗಳು. ಮುಂದೆಯೂ ಇಂತಹ ಒಳ್ಳೆ ಒಳ್ಳೆ ಮಾಹಿತಿಗಳನ್ನು ತಿಳಿಸಿಕೊಡಿ. ಇನ್ನು ಮುಂದಿನ ಪತ್ರದಲ್ಲಿ ಭೇಟಿಯಾಗೋಣ. ಧನ್ಯವಾದಗಳು......
5ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*****************************************
ನಮಸ್ತೇ ಅಕ್ಕಾ...... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು. ನಾನು ಮೊದಲು ಶಾಲೆಗೆ ವೇಣೂರು ಶಿಶು ಮಂದಿರಕ್ಕೆ ಹೋದೆನು. ಅಲ್ಲಿನ ಹೇಮಾ ಮಾತಾಜಿಯವರನ್ನು ನನಗೆ ಮರೆಯಲು ಸಾಧ್ಯವೇ ಇಲ್ಲ. ಅವರು ಅಷ್ಟು ಪ್ರೀತಿಯಿಂದ ನನ್ನನು ಅಮ್ಮನ ಹಾಗೆಯೇ ನೋಡಿಕೊಳ್ಳುತ್ತಿದ್ದರು. ನಾನು ಅತ್ತಾಗ ಆಟದ ಸಾಮಾನು ಕೊಟ್ಟು ಆಟವಾಡಿಸುತ್ತಿದ್ದರು. ಮಕ್ಕಳ ಜೊತೆ ಮಕ್ಕಳಂತೆಯೇ ಆಟವಾಡುತ್ತಾ ನಮಗೆ ಶ್ಲೋಕ, ಅ, ಆ, ಇ, ಈ ಬರೆಯಲು, ಪದ್ಯ ,ಡಾನ್ಸ್ ಹೇಳಿಕೊಟ್ಟಿದ್ದರು. ಭಾಷಣ ಮಾಡಲು ನನಗೆ ಹೇಳಿಕೊಟ್ಟು ನಾನು ಸ್ವಾಗತ ಭಾಷಣವನ್ನ ಮಾಡಿದ್ದೆನು ಎಂದು ಅಮ್ಮ ಮತ್ತು ಅಪ್ಪ ಹೇಳಿದರು. ಮಾತಾಜಿಯವರು ಈಗಲೂ ನನ್ನನು ಪ್ರೀತಿಯಿಂದ ಮಾತನಾಡಿಸುವಾಗ ನನಗೆ ತುಂಬಾ ಸಂತೋಷವಾಗುತ್ತದೆ. ಒಂದನೇ ತರಗತಿಗೆ ಬಜಿರೆ ಶಾಲೆಗೆ ಬಂದಾಗಲೂ ನನಗೆ ಅಮ್ಮನಂತೆಯೇ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಟೀಚರ್ ನವರು ಸಿಕ್ಕಿದ್ದರು. ಧನ್ಯವಾದಗಳು ಅಕ್ಕಾ.......
8ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*****************************************