-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 61

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 61

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    

             ಸ್ವ ಅನುಭವ ಮುಖ್ಯವೋ... ಆಸಕ್ತಿ ಮುಖ್ಯವೋ.... ಎಂಬ ಪ್ರಶ್ನೆ ಸದಾ ನನ್ನಲ್ಲಿ ಗೊಂದಲಕಾರಿ ಪ್ರಶ್ನೆಯಾಗಿ ಕೊರೆಯುತಿತ್ತು. ಈ ಬಗ್ಗೆ ನಾನೊಮ್ಮೆ ಹಿರಿಯರೊಬ್ಬರಲ್ಲಿ ಪ್ರಶ್ನೆ ಕೇಳಿದಾಗ ಅವರು ಹೇಳಿದ ಸ್ವಾರಸ್ಯಕರ ಘಟನೆ ನನ್ನ ಗೊಂದಲಕ್ಕೆ ಉತ್ತರ ಕೊಟ್ಟಿತು.
      ಅವರೊಬ್ಬರು ನಗರದಲ್ಲಿ  ಹೆರಿಗೆ ತಜ್ಞರಾಗಿ ಪ್ರಸಿದ್ಧರಾಗಿರುವ ಪುರುಷ ಡಾಕ್ಟರ್. ಅವರಲ್ಲಿ  "ನೀವು ಪುರುಷ ಡಾಕ್ಟರ್..... ಆದರೂ ನೀವು ಮಹಿಳೆಯರಿಗೆ ಸಂಬಂಧಿಸಿದ ಹೆರಿಗೆ ಡಾಕ್ಟರ್ ಆಗಿದ್ದೀರಿ. ನಿಮಗೆ ಹೆರಿಗೆಯ ಸ್ಟ - ಅನುಭವ ಇಲ್ಲದಿದ್ದರೂ ಹೇಗೆ ಹೆರಿಗೆ ತಜ್ಞರೆಂದೆನಿಸಿದ್ದೀರಿ. ನಿಮಗೆ ಗರ್ಭಿಣಿಯರ ಆರ್ತನಾದ - ನೋವಿನ ಸ್ವ ಅನುಭವ ಇಲ್ಲದಿದ್ದರೂ ಹೇಗೆ ಹೆರಿಗೆ ಮಾಡಿಸುತ್ತೀರಿ. ನಿಮಗಿದು ಕಷ್ಟ ಮತ್ತು ಕಿರಿಕಿರಿ ಅನಿಸುವ ಕೆಲಸ ಎಂದು ಅನಿಸುವುದಲ್ಲವೇ..?" ಎಂದು ಯಾರೋ ಪ್ರಶ್ನೆ ಮಾಡಿದರಂತೆ. ಅದಕ್ಕೆ ಆ ಡಾಕ್ಟರ್ ನಗುತ್ತ  "ನಾನೋರ್ವ ಹೆರಿಗೆ ವೈದ್ಯ. ನನ್ನಲ್ಲಿ ಬಂದ ಪ್ರತಿ ಗರ್ಭಿಣಿಯ ಬಗ್ಗೆ ಆರೋಗ್ಯ ಕಾಳಜಿ ವಹಿಸುತ್ತೇನೆ. ನಾನು ಹೆರಿಗೆ ಪ್ರಕ್ರಿಯೆ ಬಗೆಗಿನ ಕಲಿಕಾಸಕ್ತಿ ಹಾಗೂ ಗರ್ಭಿಣಿಯ ಸ್ಥಾನದಲ್ಲಿದ್ದು  ಹೊಂದುವ ಭಾವನಾತ್ಮಕ ಅನುಭವದಿಂದಾಗಿ ಆಕೆಯ ನೋವುಗಳನ್ನು ಅರಿಯಬಲ್ಲೆ. ಗರ್ಭಿಣಿಯ ಸ್ಥಾನದಲ್ಲಿ ನನ್ನನ್ನು ನಾನು ಕಲ್ಪಿಸಿಕೊಂಡು ಅವರಿಗೆ ಔಷಧವನ್ನು  ನೀಡಬಲ್ಲೆ. ಎಲ್ಲದಕ್ಕೂ ಸ್ವಾನುಭವ ಬೇಕಿಲ್ಲ ಆದರೆ ಸ್ವ-ಆಸಕ್ತಿ ಮಾತ್ರ ಬೇಕೇ ಬೇಕು" ಎಂದರಂತೆ.
      ಹೌದಲ್ಲವೇ... ಇಂಥಹ ಅನೇಕ ಉದಾಹರಣೆಗಳನ್ನು ದಿನನಿತ್ಯ ನಾವು ಕಾಣಬಹುದು. ಸ್ವ ಅನುಭವವಿಲ್ಲದಿದ್ದರೂ ಕಲಿಕೆಯ ಸ್ವ ಆಸಕ್ತಿಯಿಂದ ಲೋಕಮಾನ್ಯರಾದ ಸಾವಿರಾರು ಸಾಧಕರು ಸುತ್ತಮುತ್ತ  ಸಿಗುತ್ತಾರೆ. ಕಲಿಕೆ ಎಂಬ ಸಾಗರದಲ್ಲಿ ಈಜಲು ಆಸಕ್ತಿ ಎಂಬುದೇ ಹರಿಗೋಲು. ಕಲಿಕೆಯ ವಿಚಾರದಲ್ಲಿ ಮೊದಲು ಬರುವುದು ಕಲಿಯಬೇಕಾದ ವಿಷಯದ ಬಗೆಗಿನ ಜ್ಞಾನ. ತದನಂತರ  ವಿಷಯದ ತಿಳುವಳಿಕೆ. ಅದರ ಬಳಿಕ ಆ ವಿಷಯದ ಅನ್ವಯ  ಬರುತ್ತದೆ. ತದನಂತರ ಆ ವಿಷಯ ಮೇಲಿನ ಮೆಚ್ಚುಗೆ ಬರುತ್ತದೆ. ಕೊನೆಗೆ ಆಸಕ್ತಿ ಬರುತ್ತದೆ. ಈ ಆಸಕ್ತಿಯ ಫಲವೇ ಸಾಧನೆ.
      ಬೇರುಕಾಂಡ ಎಲೆಗಳಿದ್ದರೆ ಮರ ಎಂದು ಗುರುತಿಸುವುದು ಜ್ಞಾನ. ನೋಡಿದ ಮರವನ್ನು ಇದೇ ಮರವೆಂದು ಸ್ಪಷ್ಟವಾಗಿ ಗುರುತಿಸುವುದು (ಉದಾ: ಮಾವು , ತೆಂಗು..) ತಿಳುವಳಿಕೆ. ಆ ಮರದ ಬಗ್ಗೆ ತನ್ನದೇ ರೀತಿಯಲ್ಲಿ ಸ್ವಂತ ಅಭಿಪ್ರಾಯ ವ್ಯಕ್ತಪಡಿಸುವುದು ಅಭಿವ್ಯಕ್ತಿ. ಮರದ ಬಗ್ಗೆ ಪ್ರಶಂಸಿಸುವುದೇ ಮೆಚ್ಚುಗೆ. ಆ ಮರವನ್ನು ಉಳಿಸಿ-ಬೆಳೆಸುವುದೇ ಆಸಕ್ತಿ. ಕೆಲವರು ಮರದ ಬಗ್ಗೆ ಭಾಷಣ ಮಾಡುತ್ತಾರೆ. ಜ್ಞಾನ - ತಿಳುವಳಿಕೆ - ಅನ್ವಯ - ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ ಉಳಿಸಿ - ಬೆಳಸುವಲ್ಲಿ ಆಸಕ್ತಿ ಇರುವುದಿಲ್ಲ. ಅದರಿಂದ ಸಾಲುಮರದ ತಿಮ್ಮಕ್ಕನಂತೆ ಸಾಧಕರಾಗುವುದಿಲ್ಲ.
     ಕ್ರಿಕೆಟ್ ಬಗ್ಗೆ ಜ್ಞಾನವಿರುವವರು ಕೋಟಿಗಟ್ಟಲೆ ಜನ ಸಿಗುತ್ತಾರೆ. ಆದರೆ ಎಲ್ಲರೂ  ಸಚಿನ್ ತೆಂಡೂಲ್ಕರ್ ಆಗಲಿಲ್ಲ. ಏಕೆಂದರೆ ಅವರು ಕ್ರಿಕೆಟ್ ಜ್ಞಾನವನ್ನು ಆಸಕ್ತಿಯನ್ನಾಗಿ ಪರಿವರ್ತಿಸಿಲ್ಲ. ಸಚಿನ್ ಗೆ  ಕ್ರಿಕೆಟ್ ನ ಎಲ್ಲಾ ಆಯಾಮಗಳ ಜ್ಞಾನ ಇತ್ತು. ಅದರಿಂದ  ಕ್ರಿಕೆಟ್ ನ ಪ್ರತಿ ಅಂಶಗಳ ಪರಸ್ಪರ ಸಂಬಂಧಗಳ  ಬಗ್ಗೆ ತಿಳುವಳಿಕೆ ಹೊಂದಿದ. ತನ್ನ ಕ್ರಿಕೆಟ್ ಜ್ಞಾನ ಹಾಗೂ ತಿಳುವಳಿಕೆಗಳನ್ನು ತಾನಾಡುವ ಕ್ರಿಕೆಟ್ ನಲ್ಲಿ ಅಳವಡಿಸಿದ. ಬೇರೆ-ಬೇರೆ ಕೌಶಲಗಳನ್ನು ಪ್ರಾಯೋಗಿಕವಾಗಿ ಅನ್ವಯ ಮಾಡಿದ. ಕ್ರಿಕೆಟ್ ಆಟದ ಬಗೆಗೆ ಮೆಚ್ಚುಗೆ ಗಳಿಸಿದ. ಆ ಮೆಚ್ಚುಗೆಯನ್ನೇ ಆಸಕ್ತಿಯನ್ನಾಗಿ ಪರಿವರ್ತಿಸಿದ. ಆ ಆಸಕ್ತಿಯಿಂದ ಅವನು ವಿಶ್ವಮಾನ್ಯ ಆಟಗಾರನಾದ. 
      ನಾವೆಲ್ಲ ಗಮನಿಸಿದಂತೆ  ಜ್ಞಾನದಿಂದ ಮೆಚ್ಚುಗೆಯವರೆಗೆ ಹೆಚ್ಚಿನವರು ಬರುತ್ತಾರೆ. ಆದರೆ ಆ ಮೆಚ್ಚುಗೆಯನ್ನು ಆಸಕ್ತಿಯನ್ನಾಗಿ ಪರಿವರ್ತಿಸುವವರ ಸಂಖ್ಯೆ ಕಡಿಮೆ. ನಮಗೆ ಜ್ಞಾನವಂತರು , ತಿಳುವಳಿಕೆಯವರು, ಅನ್ವಯಿಗಳು , ಪ್ರಶಂಸಗಾರರು ಸಿಗುತ್ತಾರೆ. ಆದರೆ ಯಾವುದೇ ವಿಷಯದ ಬಗೆಗಿನ ಆಸಕ್ತವುಳ್ಳವರು ಹಾಗೂ ಸಾಧಕರು ಸಿಗುವುದು ವಿರಳ. ಹಾಗಾಗಿ ಆ ವಿರಳ ಸಂಖ್ಯೆಯನ್ನು ವಿಶಾಲ ಸಂಖ್ಯೆಗೆ ಬದಲಾಯಿಸುವತ್ತ ಬದಲಾಗಬೇಕಾಗಿದೆ. ಬನ್ನಿ ಜ್ಞಾನದಿಂದ ಆಸಕ್ತಿಯ ಕಡೆಗಿನ ದಾರಿಯ ಪಯಣಕ್ಕೆ ಬದಲಾಗೋಣ. ಈ ಧನಾತ್ಮಕ ಬದಲಾವಣೆಗೆ  ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article