-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 28

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 28

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 28

               ನಮಸ್ತೆ ಮಕ್ಕಳೇ...... ನಾನು ಚೆನ್ನಾಗಿದ್ದೇನೆ.. ನೀವು ಹೇಗಿದ್ದೀರಿ....? 
ಮಳೆ.... ಮಳೆ..... ಮಳೆ....!
ಹೊರಗೆ ಹೋಗ್ಬೇಡಿ.... ಜಾರಿ ಬೀಳ್ತೀರಿ... ನೀರಿನಲ್ಲಿ ಆಟ ‌ಆಡ್ಬೇಡಿ..... ಶೀತ ಆಗ್ತದೆ...! T V ನೋಡಿಕೊಂಡೇ ಇರ್ಬೇಡಿ... ಕಣ್ಣಿಗೆ ಒಳ್ಳೆಯದಲ್ಲ....! ಯಾವಾಗ ನೋಡಿದ್ರೂ phone... ಪುಸ್ತಕ ಹಿಡೀರಿ ಕೈಯಲ್ಲಿ...! ಆಟ ಆಡಿದ್ದು ಸಾಕು... ಕೆಲಸ ಮಾಡಿ...!
    ಅಬ್ಬಾ ....! ಬಾಲ್ಯ ಮುಗಿದೇ ಹೋಯ್ತಾ...? ಅಪ್ಪ, ಅಮ್ಮ... ಎಷ್ಟೊಂದು ಉಪದೇಶ ಮಾಡ್ತಾರೆ ಅಲ್ವಾ...? ಅಪ್ಪನಂತೂ.... ಒಂದಲ್ಲಾ ಒಂದು ಸಮಯದಲ್ಲಿ ಬಯ್ದುಕೊಂಡೇ ಇರ್ತಾರೆ.. ಕಿರಿಕಿರಿ ಅನ್ನಿಸ್ತದಾ ನಿಮ್ಗೆ....?
     ಆ ದಿನ‌‌ ಎಪ್ಪತ್ತು ವರ್ಷ ಕಳೆದ ತಂದೆ , ಮನೆಯ ಸೋಫಾದ ಮೇಲೆ ಕುಳಿತುಕೊಂಡಿದ್ದರು. ಅಂದು ಭಾನುವಾರ.. ಕೆಲಸದ ನಡುವೆ busy ಇರ್ತಿದ್ದ ಮಗನೂ ಆ ದಿನ‌ ಬಿಡುವಾಗಿದ್ದ. ಕಿವಿಗೆ ಇಯರ್ ಫೋನ್ ಇಟ್ಟುಕೊಂಡಿದ್ದ ಮಗನ ಪಕ್ಕದಲ್ಲಿ, ಪೇಪರ್ ಓದಿಕೊಂಡು ಕುಳಿತ ಅಪ್ಪನಿಗೆ ಹೊರಗಿನಿಂದ ಯಾವುದೋ ಪಕ್ಷಿ ಕೂಗುವ ಧ್ವನಿ ಕೇಳಿಸಿತು. 'ಮಗಾ..ಅದೇನು ಸದ್ದು....? ಹಕ್ಕಿ ಕೂಗ್ತಾ ಇರೋದಾ....? ಯಾವ ಪಕ್ಷಿ ಅದು?' ಎಂದು ಕೇಳಿದರು. ಮಗ ತಾತ್ಸಾರದಿಂದಲೇ, 'ಅಪ್ಪಾ... ಅದು ಕಾಗೆ' ಎಂದ. ಕೆಲವು ನಿಮಿಷಗಳ‌ ನಂತರ ಪಕ್ಷಿ ಮತ್ತೆ ಕೂಗಿತು. 'ಕಂದಾ.. ಯಾವ ಪಕ್ಷಿ ಅದು?' 'ಅದೇ ಅಪ್ಪಾ...ಕಾಗೆ..' ಸಿಡುಕಿನಿಂದಲೇ ಉತ್ತರಿಸಿದ. ಸ್ವಲ್ಪ ಹೊತ್ತಿನ‌ ಬಳಿಕ ಹಕ್ಕಿ ಕೂಗಿತು. ಅಪ್ಪ, ಅದೇ ಪ್ರಶ್ನೆ ಕೇಳಿದರು. ಮಗನ ಸಿಟ್ಟು ನೆತ್ತಿಗೇರಿತು. ಎಷ್ಟು ಸಲ ಹೇಳೋದು ನಿನ್ಗೆ...? ಎಂದು ಜೋರು ಮಾಡಿದ. ಸ್ವಲ್ಪವೇ ಸಮಯದಲ್ಲಿ ಮತ್ತೆ ಕಾಗೆಯ ಧ್ವನಿ..! ಅಪ್ಪ, ಅದೇ ಶಾಂತ ಸ್ವರದಲ್ಲಿ... 'ಕಂದಾ.. ಅದು ಕಾಗೆಯಾ ಕೂಗ್ತಾ ಇರೋದು?' ಅಂದರು. ಮಗ, ಥಟ್ಟನೆ ಸೋಫಾದಿಂದ ಮೇಲೆದ್ದು, ಇಯರ್ ಫೋನ್ ನ್ನು ಕಿತ್ತೆಸೆದು, ಸೋಫಾವನ್ನೊಮ್ಮೆ ಕಾಲಿನಿಂದ ಒದ್ದು, ಏರು ಸ್ವರದಲ್ಲಿ 'ಅದು..ಕಾಗೆ..ಕಾಗೆ...ಕಾಗೆ...ಕಾಗೆ.. ಆವಾಗ್ಲಿಂದ ಇದನ್ನೇ ಹೇಳ್ತಾ ಇದ್ದೀನಿ. ಯಾಕೆ ಬೆಳಗ್ಗೆನೇ ನನ್ನ ತಲೆ ತಿಂತೀಯಾ...? ಮೂರು ಸಲ ಹೇಳಿದ್ರೂ ಮತ್ತೆ ಅದೇ ಪ್ರಶ್ನೆ ಕೇಳ್ತಿದ್ದೀಯಲ್ಲಾ.. ತಲೆ ಕೆಟ್ಟಿದೆಯಾ ನಿನ್ಗೆ...?' ಒಂದೇ ಸಮನೆ ಮಗ ಒದರುತ್ತಲೇ ಇದ್ದ. ಆಗಲೂ ಅಪ್ಪ ಸುಮ್ಮನಿದ್ದು, ಸೀದಾ ಕೋಣೆಯೊಳಗೆ ಹೋಗಿ, ಸ್ವಲ್ಪ ಸಮಯದ ಬಳಿಕ, ಎರಡು ಡೈರಿಗಳನ್ನು ಹಿಡಿದುಕೊಂಡು ಮಗನ ಕೈಗಿತ್ತರು. ಕುತೂಹಲದಿಂದಲೇ ಪುಟ ತೆರೆದ ಮಗ. ಓದತೊಡಗಿದ...
       "ಇವತ್ತು ಮೂರು ವರ್ಷದ ನನ್ನ ಮಗನೊಂದಿಗೆ ಸೋಫಾದಲ್ಲಿ ಕುಳಿತುಕೊಂಡಿದ್ದೆ. ಕಾಗೆಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತುಕೊಂಡಿತು. 'ಅಪ್ಪಾ ಅದು ಯಾವ ಪಕ್ಷಿ...? ಅದು.. ಕಾಗೆ...ಕಂದಾ' ಎಂದೆ. ನನ್ನ ಮುದ್ದು ಮಗ ಮತ್ತೆ ಮತ್ತೆ ಕೇಳುತ್ತಲೇ ಇದ್ದ. ನಾನು ಅಷ್ಟೇ ಶಾಂತವಾಗಿ ಬೇ‌ಸರಿಸದೆ ಉತ್ತರಿಸುತ್ತಿದ್ದೆ. ಇಪ್ಪತ್ತೈದು ಸಲ ಅವನು ಅದೇ ಪ್ರಶ್ನೆಯನ್ನು ಕೇಳಿದ. ಪ್ರತಿ ಸಲ‌ ಪ್ರಶ್ನೆ ಕೇಳುವಾಗಲೂ ಅವನನ್ನು ತಬ್ಬಿಕೊಂಡು ಮುತ್ತಿಡುತ್ತಿದ್ದೆ. ಅವನ ಮುಗ್ಧ ಪ್ರಶ್ನೆ, ತುಂಟತನ ಬಹಳ ಇಷ್ಟ ಆಯ್ತು ನನಗೆ........"
        ಪುಟಗಳನ್ನು ಓದುತ್ತಿದ್ದಂತೆಯೇ ಮಗನಿಗೆ ಅವನ ವರ್ತನೆಯ ಬಗ್ಗೆ ನಾಚಿಕೆ ಎನಿಸಿತು. ಎಷ್ಟೊಂದು ಪ್ರೀತಿಸ್ತಿದ್ರು ನನ್ನಪ್ಪ..! ಡೈರಿಯನ್ನು ತಬ್ಬಿಕೊಂಡು, 'ಗದ್ಗದಿತನಾಗಿ ನನ್ನನ್ನು ಕ್ಷಮಿಸ್ತೀರಾ ಅಪ್ಪಾ..' ಎಂದು ಕಾಲಿಗೆರಗಿದ.
     ಎ .ಆರ್ . ಮಣಿಕಾಂತ್ ಅವರ 'ಅಪ್ಪ ಅಂದ್ರೆ ಆಕಾಶ' ಪುಸ್ತಕದ ಪುಟದಲ್ಲಿ ಕಟ್ಟಿಕೊಟ್ಟ ಘಟನೆ ಇದು. ನಾವು ಹೇಗಿದ್ದರೂ, ಅಪ್ಪ-ಅಮ್ಮನ ಆಂತರ್ಯದಲ್ಲಿ ನಮಗಾಗಿ ಪ್ರೀತಿಯನ್ನೇ ತುಂಬಿಕೊಂಡ ಅಕ್ಷಯ ಪಾತ್ರೆಯಿದೆ. ಸಾಂದರ್ಭಿಕವಾಗಿ ಅದರ ಸವಿಯನ್ನು ಉಣಿಸುತ್ತಲೇ ಇರ್ತಾರೆ. ಅವರ ಪ್ರತಿಯೊಂದು ಗದರುವಿಕೆ, ಕಾಳಜಿ, ನಿರ್ಬಂಧ ಗಳ‌ ಹಿಂದೆ ಇರುವುದು ಈ ಪ್ರೀತಿಯೇ...
      ಒಮ್ಮೆ ಕಣ್ಣು ಮುಚ್ಚಿ... ನಮ್ಮ ಅಪ್ಪ ಅಮ್ಮನ ಧ್ವನಿಯನ್ನು ಆಲಿಸಿಕೊಳ್ಳೋಣ. ಎಂತಹಾ ಭದ್ರತೆಯ ಭಾವ ಅಲ್ವಾ...? ಆ ಪ್ರೀತಿಗೆ ಕೊನೆಯೇ ಇಲ್ಲ. ಇನ್ಯಾವ ಸಂಬಂಧದಲ್ಲಿಯಾದರೂ ನಾವು ಗಳಿಸುವ ಪ್ರೀತಿಯನ್ನು ಉಳಿಸಿಕೊಳ್ಳಬೇಕಾದರೆ, ನಾವು ಕೂಡಾ ಅಷ್ಟೇ ಪ್ರೀತಿಯಿಂದ ವರ್ತಿಸಬೇಕು. ಆದರೆ ಅದ್ಯಾವ ನಿರೀಕ್ಷೆಗಳೇ ಇಲ್ಲದೆ ನಮ್ಮನ್ನು ಪ್ರೀತಿಸುವ ಎರಡು ಜೀವಗಳು ಅಪ್ಪ...ಅಮ್ಮ!
    ಹೋ...ಮಳೆ ಸ್ವಲ್ಪ ಕಡಿಮೆ ಆಯ್ತು... ಮಾತನಾಡ್ತಾ ಸಮಯ ಕಳೆಯಿತು. ನಾನೂ ಮತ್ತೊಮ್ಮೆ ಮಗುವಾದೆ. ನನ್ನ ಅಪ್ಪ..ಅಮ್ಮನ ಮಾತುಗಳೂ ಪ್ರತಿಧ್ವನಿಸ್ತಿವೆ. ನಿಮ್ಮ ಜೊತೆ... ಈ ಮಳೆಯ ದಿನ. ತುಂಬಾ ಖುಷಿ ನನ್ಗೆ.. ನಿಮ್ಗೆ...?ಏನನ್ನಿಸ್ತಿದೆ. ಬರೆದು ಕಳಿಸ್ತೀರಾ....?
       ಮುಂದಿನ‌ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಆರೋಗ್ಯ ಜೋಪಾನ. ಅಲ್ಲಿಯವರೆಗೆ ಅಕ್ಕನ ನಮನಗಳು. 
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************
Ads on article

Advertise in articles 1

advertising articles 2

Advertise under the article