
ಬದುಕಲು ದಾರಿಗಳು ನೂರಾರು.. ಲೇಖನ : ಜೆಸ್ಸಿ ಪಿ.ವಿ
Thursday, June 16, 2022
Edit
ಜೆಸ್ಸಿ ಪಿ.ವಿ
ಸಹಶಿಕ್ಷಕಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
ನನ್ನ ಸಾವಿಗೆ ನಾನೇ ಕಾರಣ.. ನನ್ನ ಸಾವಿಗೆ ಇಂಥವರು ಕಾರಣ ಎಂದು ಕಾರಣ ಬರೆದಿಟ್ಟು ಆತ್ಮಹತ್ಯೆ ಮಾಡುವವರಿದ್ದಾರೆ. ಬದುಕಲು ಕಾರಣಗಳಿಲ್ಲ ಎಂದು ಭಾವಿಸಿದವರು ಸಾಯಲು ಕಾರಣ ಕಂಡುಕೊಳ್ಳುತ್ತಾರೆ. ಅವರ ಮುಂದೆ ಬದುಕಿನ ದಾರಿ ಮುಚ್ಚಲ್ಪಟ್ಟಿದೆ ಎಂದು ಅವರು ತಪ್ಪು ತಿಳಿದುಕೊಂಡಿರುತ್ತಾರೆ. ಆದರೆ ಬದುಕಲು ಕಾರಣ ಇರುವವರು, ಬದುಕಬೇಕೆಂಬ ಉತ್ಕಟ ಇಚ್ಛೆ ಇರುವವರು ಬದುಕುವ ದಾರಿಯನ್ನು ಹುಡುಕುತ್ತಿರುತ್ತಾರೆ. ಅವರು ಹೇಗಾದರೂ ಮಾಡಿ ಬದುಕುವ ದಾರಿ ಕಂಡುಕೊಳ್ಳುತ್ತಾರೆ. ಅಂತಹ ಹಲವು ಉದಾಹರಣೆಗಳು ನಮ್ಮ ಮುಂದಿವೆ.
ಬದುಕುವ ದಾರಿ ಮುಚ್ಚಿ ಹೋಗಿದೆ ಎಂದು ಭಾವಿಸಿದ್ದ, ನಿರುದ್ಯೋಗಿಯಾಗಿದ್ದ ಬಡ ಯುವಕನೊಬ್ಬ ಆಕಸ್ಮಿಕವಾಗಿ ಬದುಕಿನ ದಾರಿ ಕಂಡುಕೊಂಡು, ಇನ್ನೂ ಹಲವರಿಗೆ ಬದುಕಿನ ದಾರಿ ತೋರಿಸಿದ ಸತ್ಯ ಘಟನೆ ಇಲ್ಲಿದೆ. ಅದು 2012 ರ ಒಂದು ದಿನ. ರಾಬರ್ಟ್ ಸ್ಯಾಮುಯೆಲ್ ಕೆಲಸವಿಲ್ಲದೇ ಅಲೆಯುತ್ತಿದ್ದ. ಅಲ್ಲಿ ಒಂದು Apple I phone ನ ಅಂಗಡಿಯೆದುರು ಜನರು ಕ್ಯೂ ನಿಂತಿದ್ದರು. ಆ ಕ್ಯೂ ಬಹಳ ಉದ್ದವಿತ್ತು. ಅನೇಕ ಶ್ರೀಮಂತ ಜನರು ಆ ಸಾಲಲ್ಲಿ ನಿಂತಿದ್ದರು. ಅಲ್ಲೊಂದು ಅವಕಾಶ ಇದೆ ಎಂದು ರಾಬರ್ಟ್ ಗೆ ಅನಿಸಿತು. ತನಗೆ 350 ಡಾಲರ್ ನೀಡಿದರೆ ಅವನಿಗೋಸ್ಕರ ತಾನು ಕ್ಯೂವಿನಲ್ಲಿ ಕಾಯುತ್ತಾ ನಿಲ್ಲುವುದಾಗಿ ರಾಬರ್ಟ್ ಒಬ್ಬ ಶ್ರೀಮಂತ ಯುವಕನಿಗೆ ಹೇಳಿದ. ಆತ ಒಪ್ಪಿಕೊಂಡ. ಜೀವನದಲ್ಲಿ ಪ್ರಥಮ ಬಾರಿ ಹೆಚ್ಚು ಶ್ರಮವಿಲ್ಲದೇ ಸುಲಭವಾಗಿ ಹಣಗಳಿಸಲು ರಾಬರ್ಟ್ ಗೆ ಸಾಧ್ಯವಾಯಿತು. ಮರುದಿನ ಆತ ಇನ್ನೊಬ್ಬರಿಗಾಗಿ ಕ್ಯೂ ನಿಂತ. ಮತ್ತೆ ಇನ್ನೊಬ್ಬನಿಗಾಗಿ.. ಹೀಗೆ ಈ ಕಾಯಕ ಮುಂದುವರಿಯಿತು. ಬೇರೊಬ್ಬರಿಗೋಸ್ಕರ ಐಫೋನ್ ಖರೀದಿಸಲು ಕ್ಯೂ ನಿಂತ ರಾಬರ್ಟ್ ಈಗ ಸ್ವತಃ ಐಫೋನ್ ಖರೀದಿಸುವಷ್ಟು ಸಂಪಾದನೆ ಮಾಡಿದ. ತಾನು ಯಾಕೆ ಇದನ್ನು ತನ್ನ ವೃತ್ತಿಯಾಗಿಸಬಾರದು ಎಂಬ ಯೋಚನೆ ರಾಬರ್ಟ್ ಗೆ ಹೊಳೆದದ್ದೇ ತಡ ಅವನು ಬಿಸಿನೆಸ್ ಪ್ರಾರಂಭಿಸಿಯೇ ಬಿಟ್ಟ. ಅಮೆರಿಕದಲ್ಲಿ ಜನ ತಮ್ಮ ಇಷ್ಟದ ಬ್ರಾಂಡೆಡ್ ವಸ್ತುಗಳನ್ನು ಖರೀದಿಸಲು ಕೆಲವು ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಿತ್ತು. ಈ ಕ್ಯೂ ನಿಲ್ಲುವ ಕಷ್ಟದ ನಡುವೆ ವಿಶ್ರಾಂತಿ ಪಡೆಯಲು ಕೆಲವರು ಟೆಂಟ್ ಬಟ್ಟೆ ತಂದು ಟೆಂಟ್ ಹಾಕಿಕೊಳ್ಳುತ್ತಿದ್ದರು. ಶ್ರೀಮಂತರ ಈ ಕಾಯುವಿಕೆಯಲ್ಲಿ ತನ್ನ ಅದೃಷ್ಟ ಅಡಗಿದೆ ಎಂದು ರಾಬರ್ಟ್ ಅರಿತ. If you have to wait in line to get it, we will do it. WE WAIT FOR YOUR WANTS ಎಂಬ ಘೋಷಣೆಯೊಂದಿಗೆ ರಾಬರ್ಟ್ ಕೆಲವು ಗೆಳೆಯರನ್ನು ಸೇರಿಸಿಕೊಂಡು Same Ole Line Dudes ಎಂಬ ಕಂಪೆನಿ ಹುಟ್ಟುಹಾಕಿದ. ಕ್ಯೂ ನಿಂತವರಿಗೆ ಬಿಸಿನೆಸ್ ಕಾರ್ಡ್ ನೀಡುವ ಮೂಲಕ, ದಾರಿ ಬದಿಗಳಲ್ಲಿ ಜಾಹೀರಾತು ಫಲಕಗಳನ್ನು ನಿಲ್ಲಿಸುವ ಮೂಲಕ ಅವನ ಕಂಪೆನಿ ಗಿರಾಕಿಗಳನ್ನು ಸೆಳೆಯುತ್ತಿತ್ತು. ಐಫೋನ್ ನ ಮಳಿಗೆಗಳ ಎದುರಷ್ಟೇ ಅಲ್ಲ, ಕೇಕ್, ಶೂ ಮುಂತಾದವುಗಳ ಮಳಿಗೆಗಳಲ್ಲೂ, ರೆಸ್ಟೋರೆಂಟ್ ಗಳಲ್ಲೂ ರಾಬರ್ಟ್ ಈ ರೀತಿಯ ಉದ್ದನೆಯ ಕ್ಯೂಗಳನ್ನು ಗಮನಿಸಿದ. ಅಲ್ಲಿಯೂ ತನ್ನ ಬಿಸಿನೆಸ್ ಸಾಧ್ಯತೆಯನ್ನು ಆತ ಕಂಡುಕೊಂಡ. ಸರಕಾರಿ ಅರ್ಜಿಗಳನ್ನು ಕೊಳ್ಳಲು ಕ್ಯೂ ನಿಲ್ಲುವವರು ಕೂಡಾ ಈತನ ಕಂಪೆನಿಯ ಸೇವೆಯನ್ನು ಬೆಳೆಸಿಕೊಳ್ಳಲಾರಂಭಿಸಿದರು.
ರಾಬರ್ಟ್ ಉದ್ಯೋಗ ಕಂಡುಕೊಂಡದ್ದಷ್ಟೇ ಅಲ್ಲ, ಹಲವರಿಗೆ ಉದ್ಯೋಗ ನೀಡಿ ಬದುಕುವ ದಾರಿ ತೋರಿಸಿದ. ಇವನ ಕಂಪೆನಿಯ ಉದ್ಯೋಗಕ್ಕೆ ಯಾವ ವಿದ್ಯಾರ್ಹತೆಯ ಅಗತ್ಯವೂ ಇರಲಿಲ್ಲ. ಕ್ಯೂನಲ್ಲಿ ಗಂಟೆಗಟ್ಟಲೆ ನಿಲ್ಲಬಲ್ಲ ತಾಳ್ಮೆ ಹಾಗೂ ಶಕ್ತಿ ಇರುವ ಯಾರು ಬೇಕಾದರೂ ಅವನ ಕಂಪೆನಿಯಲ್ಲಿ ಕೆಲಸ ಮಾಡಬಹುದಿತ್ತು. ನಿವೃತ್ತರು, ಗೃಹಿಣಿಯರು, ವಿದ್ಯಾರ್ಥಿಗಳು ಹೀಗೆ ಎಲ್ಲಾ ರೀತಿಯ ವ್ಯಕ್ತಿಗಳೂ ಅವನ ಕಂಪೆನಿಯ ಮೂಲಕ ಕೆಲಸ ಮಾಡುತ್ತಿದ್ದರು.
ಮುದ್ದು ಮಕ್ಕಳೇ, ಪ್ರಪಂಚದಲ್ಲಿ ಅವಕಾಶಗಳು ಬೇಕಾದಷ್ಟಿವೆ. ಅವು ತಮ್ಮನ್ನು ಆಯ್ದುಕೊಳ್ಳುವವರಿಗಾಗಿ ಕಾಯುತ್ತಿರುತ್ತವೆ. ಹುಡುಕುವ ಮನಸ್ಸಿದ್ದವರಿಗೆ, ತಾಳ್ಮೆಯಿದ್ದವರಿಗೆ, ದುಡಿಯುವ ಆಸಕ್ತಿಯಿರುವವರಿಗೆ ಆ ಅವಕಾಶಗಳು ಗೋಚರಿಸುತ್ತವೆ. ಅವನ್ನು ಬಾಚಿಕೊಂಡು ಅವರು ಗೆಲ್ಲುತ್ತಾರೆ. ಅವಕಾಶಗಳಿಗಾಗಿ ಹುಡುಕಾಟವೇ ಮಾಡದವರು ವಿಧಿಯನ್ನು ದೂಷಿಸುತ್ತಾ ನಿರಾಸೆಯಿಂದ ಕಾಲಕಳೆಯುತ್ತಾರೆ.
ಒಂದು ಕಡೆ ಅವಕಾಶಗಳು ಮುಚ್ಚಿಹೋದಾಗ ಎದೆಗುಂದದೇ ಹೊಸ ಅವಕಾಶಕ್ಕಾಗಿ ಹುಡುಕಬೇಕು. ಹುಡುಕುವವನಿಗೆ ಅವಕಾಶ ಸಿಕ್ಕಿಯೇ ಸಿಗುತ್ತದೆ. ಬದುಕಿನಲ್ಲಿ ಸೋತೆವೆಂಬ ನಿರಾಸೆಗೆ ಅರ್ಥವಿಲ್ಲ. ಯಾಕೆಂದರೆ ನಮ್ಮ ಮುಂದಿನ ಸಾವಿರ ದಾರಿಗಳಲ್ಲಿ ಒಂದಷ್ಟೇ ಮುಚ್ಚಿದೆ. ಉಳಿದವು ಇನ್ನೂ ತೆರೆದೇ ಇವೆ. ಆ ತೆರೆದ ದಾರಿಯಲ್ಲಿ ಸಾಗಿ, ಗೆಲುವು ಸಾಧಿಸಿ ಹೆಮ್ಮೆಯಿಂದ ತಲೆಯೆತ್ತಿ ನಿಲ್ಲೋಣ.
ಸಹಶಿಕ್ಷಕಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
****************************************