-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 50

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 50

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 50

   

      
                ರಿಚಾರ್ಜ್ ಮಾಡಿ ಪ್ಲೀಸ್.....
               ----------------------------
       ಊರಿನಲ್ಲೊಂದು ನೀರು ತುಂಬಿದ ಕೆರೆ. ವರ್ಷವಿಡಿ ಸದಾ ನೀರು ತುಂಬಿದ್ದ ಕಾರಣ ಆ ಕೆರೆಯು ಎಲ್ಲರ ಪ್ರೀತಿ , ಗೌರವ , ಅಭಿಮಾನಕ್ಕೆ ಪಾತ್ರವಾಗಿತ್ತು. ಆ ನೀರಲ್ಲಿ ಚಿಣ್ಣರು ಆಟ ಆಡುತ್ತಿದ್ದರು. ಅದರ ಪಕ್ಕದಲ್ಲಿಯೇ ಹೆಂಗಸರು ಬಟ್ಟೆ ತೊಳೆಯುತ್ತಿದ್ದರು. ದನಕರುಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಕೆಲವರ ಪಾಲಿಗದು ಗಂಗಾ ಮಾತೆಯಂತೆ ಪವಿತ್ರ ಕೆರೆಯಾಗಿತ್ತು. ಕೆಲವರಿಗದು ಕೃಷಿ ಕಾರ್ಯಗಳಿಗೆ ನೀರೊದಗಿಸುವ ಅಮೃತಧಾರೆಯಾಗಿತ್ತು. ಕೆಲವರ ಪಾಲಿಗದು ಮನರಂಜನೆ ತಾಣವಾಗಿತ್ತು. ವಿಹಾರಿಗಳಿಗೆ ನೆಚ್ಚಿನ ಶಾಂತಿಧಾಮವಾಗಿತ್ತು. ಹೀಗೆ ಸರ್ವರಿಂದಲೂ ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ಉಪಯೋಗಿಸಲ್ಪಟ್ಟ ಕೆರೆಯು ಕಾಲಕಳೆದಂತೆ ಪರಿಸ್ಥಿತಿ ಬದಲಾದಂತೆ ಒಣಗಲಾರಂಭಿಸಿತು. ಅದು ತನ್ನೊಳಗಿನ ಸ್ಫೂರ್ತಿಯ ನೀರನ್ನು ಕಳೆದುಕೊಂಡು ಬರಡು ಕೆರೆಯಾಯಿತು. ಜನಾಕರ್ಷಣೆ ಕಳೆದುಕೊಂಡಿತು. ಸ್ವಲ್ಪ ಸಮಯದ ನಂತರ ಒಬ್ಬೊಬ್ಬರೆ ಕೆರೆಯ ಸಹವಾಸ ಬಿಡಲಾರಂಭಿಸಿದರು. ಕೊನೆಗದು ತನ್ನ ಅಂತರ್ ಸತ್ವವನ್ನು ಕಳೆದುಕೊಂಡು ಒಂಟಿ ಕೆರೆಯಾಗಿ - ಬರಡು ಕೆರೆಯಾಗಿ ಬದಲಾಯಿತು. ಅಲ್ಲಿಂದ ಕ್ರಮೇಣ ಅದು ಊರವರಿಗೆ ಕಸದ ತೊಟ್ಟಿಯಾಗಲಾರಂಭಿಸಿತು. ಊರ ಪರವೂರಿನವರೆಲ್ಲ ಕಸವನ್ನು ಬಿಸಾಡಿ ಮಲೀನಗೊಳಿಸಲಾರಂಭಿಸಿದರು. ಕೆರೆಯು ತನ್ನ ಗಬ್ಬುನಾತದಿಂದ ಎಲ್ಲರಿಂದಲೂ ತಿರಸ್ಕಾರಗೊಳಗಾಯಿತು. ನೂರಾರು ಜನ ಭೇಟಿಯಾಗುತ್ತಿದ್ದ ಜನಾಕರ್ಷಣೆಯ ಕೆರೆಯಿಂದು ತನ್ನ ಗಬ್ಬುನಾತದಿಂದ ಏಕಾಂಗಿಯಾಗಿದೆ. ಈಗ ಆ ನೀರು ತುಂಬಿದ ಕೆರೆಯ ಕಥೆ ಕೇಳಿದರೆ ನೋವು ಉಕ್ಕಲಾರಂಭಿಸುತದೆ.......
      ಹೌದಲ್ವೆ...... ಉತ್ಸಾಹದ ನೀರು ಇರುವವರೆಗೆ ನಾವೆಲ್ಲರಿಗೂ ಬೇಕಾದವರೆ... ನಮ್ಮನ್ನು ಎಲ್ಲರೂ ಬಯಸುವವರೇ. ಆದರೆ ಯಾವಾಗ ಬದುಕಿನ ಉತ್ಸಾಹ ಕಡಿಮೆಯಾಗಿ ನಿರುತ್ಸಾಹಿಯಾಗುತ್ತೇವೋ ಆಗ ನಾವು ತಿರಸ್ಕರಿಸಲ್ಪಡುತ್ತೇವೆ. ಕೊನೆಗೆ ಎಲ್ಲರನ್ನು ಕಳೆದುಕೊಂಡು ಒಂಟಿಯಾಗಿ ಬಿಡುತ್ತೇವೆ. ಅವರಿವರ ವ್ಯಂಗ್ಯದ ಮಾತುಗಳೆಂಬ ಕಸಗಳಿಗೆ ಕಸದ ತೊಟ್ಟಿಯಾಗಿ ಬಿಡುತ್ತೇವೆ. ಜೀವ ಇರುವ ತನಕ ಮಾನ... ಅಪಮಾನ... ಅವಮಾನ... ಸನ್ಮಾನ..... ಸತ್ತ ಮೇಲೆ ಸುಟ್ಟು ಬೂದಿ ಮಾಡುತ್ತಾರೆ. ಆದರೆ ಸತ್ತ ಮೇಲೂ ನಾವು ಬದುಕಬೇಕು. ಸತ್ತ ಮೇಲೂ ಬದುಕಿರಬೇಕಾದರೆ ಸದಾ ಇನ್ನೊಬ್ಬರಿಗೆ ಸ್ಫೂರ್ತಿಯಾಗಿ ಉತ್ಸಾಹದ ಚಿಲುಮೆಯಾಗಿ ಜೀವದುಸಿರು ಇರುವರೆಗೂ ಬಾಳಬೇಕು. ನಾವು ಉತ್ಸಾಹ ಕಳೆದುಕೊಂಡರೆ ಬದುಕಿರುವಾಗಲೇ ಸತ್ತಂತೆ. ಹಾಗಾಗಿ ಸತ್ತರೂ ಸದಾ ಬದುಕಿರುವಂತೆ ಇರಬೇಕು. ಇದೇ ಜೀವನ. 
        ತನ್ನ ಅಂಕಿತದಲ್ಲಿರದ ಬಾಹ್ಯ ಪರಿಸ್ಥಿತಿಗಳಿಂದಾಗಿ ಕೆರೆಗಾದರೂ ನೀರನ್ನು ಪುನರ್ ಸೃಷ್ಟಿಸುವುದು ಕಷ್ಟಸಾಧ್ಯ. ಆದರೆ ಮನುಷ್ಯನ ಬದುಕು ಹಾಗಲ್ಲ. ತನ್ನದೇ ಅಂಕೆಯಲ್ಲಿರುವ ತನ್ನ ಬದುಕಿನ ಉತ್ಸಾಹವನ್ನು ತಾನು ಮನಸ್ಸು ಮಾಡಿದರೆ ಯಾವಾಗ ಬೇಕಾದರೂ ಮರುಸೃಷ್ಟಿಸಬಹುದು. ಬತ್ತಿಹೋಗದಂತೆ ತಡೆಗಟ್ಟಬಹುದು. ನೀರನ್ನು ಬೆಂಕಿಯಿಂದ ಎಷ್ಟು ಬಿಸಿ ಮಾಡಿದರೂ ನೀರು ತನ್ನ ಬೆಂಕಿಯನ್ನು ಆರಿಸೋ ಗುಣವನ್ನು ಎಂದೂ ಬಿಡುವುದಿಲ್ಲ. ಅದರಂತೆ ನಾವು ಎಷ್ಟೇ ಸಮಸ್ಯೆಗಳಿಂದ ಬೆಂದರೂ ನಮ್ಮ ಬದುಕಿನಲ್ಲಿ ಸದಾ ಎಲ್ಲರೊಂದಿಗೆ ಉತ್ಸಾಹದಿಂದಿರುವ ಗುಣವನ್ನು ಬಿಡಬಾರದು. ಅದು ಎಲ್ಲರಿಗೂ ಸ್ಫೂರ್ತಿಯಾಗಬೇಕು. ಮೊಬೈಲ್ ಚಾರ್ಚ್ ಖಾಲಿಯಾದರೆ ಯಾರಾದರೂ ಎಂದಾದರೂ ಮೊಬೈಲ್ ಎಸೆಯುತ್ತೇವೆಯೇ..? ಇಲ್ಲ ತಾನೇ..... ಮತ್ತೆ ಬೇಕಾದಷ್ಟು ಚಾರ್ಚ್ ಮಾಡಿ ಮೊಬೈಲ್ ಬಳಸುತ್ತೇವೆ. ಅದೇ ರೀತಿ ಬದುಕಿನಲ್ಲಿ ಬೇಜಾರು ಆದರೆ ನಿರುತ್ಸಾಹದಿಂದ ಬದುಕನ್ನು ಎಸೆಯಬಾರದು. ಆಗಾಗ ಉತ್ಸಾಹವನ್ನು ರಿಚಾರ್ಜ್ ಮಾಡಿ ಬದುಕನ್ನು ಅನುಭವಿಸಬೇಕು.... ಏನೇ ಇರಲಿ... ಏನೇ ಬರಲಿ ಸದಾ ಉತ್ಸಾಹದ ನೀರಿನ ಚಿಲುಮೆಯಂತೆ ಸಂತಸವಾಗಿರಬೇಕು. ಬನ್ನಿ ನಾವೆಲ್ಲರೂ ಆಗಾಗ ಉತ್ಸಾಹದ ರಿಚಾರ್ಚ್ ಮಾಡಲು ಕಲಿಯೋಣ. ಆ ಕಲಿಕೆಯೊಂದಿಗೆ ಸದಾ ಉತ್ಸಾಹಿಯಾಗಲು ಬದಲಾಗೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article