
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 26
Saturday, June 18, 2022
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 26
ನಮಸ್ತೆ ಮಕ್ಕಳೇ... ನಾನು ಕ್ಷೇಮವಾಗಿದ್ದೇನೆ... ನೀವೂ ಕ್ಷೇಮ ತಾನೇ.....? ಮೊನ್ನೆಯ ಪತ್ರಕ್ಕೆ ಪರಿಸರ ಕಾಳಜಿಯ ನುಡಿಗಳೊಂದಿಗೆ ಉತ್ತರಿಸಿದ ವೈಷ್ಣವಿ ಕಾಮತ್, ಲಹರಿ ಜಿ.ಕೆ, ಶ್ರಾವ್ಯ, ಅಕ್ಷಿತ , ಭವಿತ್ ಕುಲಾಲ್, ಸಾತ್ವಿಕ್ ಗಣೇಶ್, ಕೃತಿಕಾ ಕೆ, ಕೆ. ಬಿಂದುಶ್ರೀ, ಪ್ರಿಯಾ, ಧೃತಿ , ಸ್ರಾನ್ವಿ ಶೆಟ್ಟಿ ಹಾಗೂ ಪ್ರತಿಸಲವೂ ಪ್ರೀತಿಯಿಂದ ಓದುವ ನನ್ನ ಬಳಗಕ್ಕೆ ಅಕ್ಕರೆಯ ನಮನಗಳು.
ಟೋಪಿ ಮಾರುವವನ ಕಥೆಯನ್ನು ಕೇಳಿದ್ದೀರಲ್ವಾ....? ಈ ಟೋಪಿ ಮಾರುವವ ಅಜ್ಜನಾದ ಮೇಲೆ, ತನ್ನ ಮೊಮ್ಮಗನಿಗೆ ಅವನಿಗಾದ ಅನುಭವವನ್ನು ಹೇಳಿದನಂತೆ... ಒಂದು ದಿನ ವ್ಯಾಪಾರ ಮುಗಿಸಿ, ತಲೆಯಲ್ಲೊಂದು ಟೋಪಿ ಧರಿಸಿಕೊಂಡು , ಉಳಿದ ಟೋಪಿಗಳೊಂದಿಗೆ ಮನೆಗೆ ಮರಳುತ್ತಿದ್ದ. ಸುಸ್ತಾಯಿತೆಂದು ದಾರಿಯ ಬದಿಯಲ್ಲಿದ್ದ ಮರದಡಿಯಲ್ಲಿ ಮಲಗಿದ. ಅಲ್ಲೇ ನಿದ್ದೆಗೆ ಜಾರಿದ. ಆ ಮರದ ಮೇಲಿದ್ದ ತುಂಟ ಕೋತಿಗಳು ಇವನ ಟೋಪಿಯ ಗಂಟನ್ನು ಬಿಚ್ಚಿ ಎಲ್ಲವೂ ಒಂದೊಂದು ಟೋಪಿಯನ್ನು ಹಾಕಿಕೊಂಡು ಮರವನ್ನೇರಿದವು. ವ್ಯಾಪಾರಿಗೆ ಎಚ್ಚರವಾದಾಗ ಟೋಪಿಯ ಗಂಟಿಲ್ಲ. ಮರದ ಮೇಲೆ ನೋಡಿದ. ತಕ್ಷಣವೇ ಏನೋ ಹೊಳೆದವನಂತೆ ತನ್ನ ತಲೆಯ ಮೇಲಿದ್ದ ಟೋಪಿಯನ್ನು ಕೆಳಕ್ಕೆಸೆದ. ಮಂಗಗಳೂ ಹಾಗೆಯೇ ಮಾಡಿದವಂತೆ. ಎಲ್ಲ ಟೋಪಿಗಳನ್ನೂ ಹೆಕ್ಕಿಕೊಂಡು ಮನೆ ಕಡೆ ನಡೆದ.
ಈ ಬುದ್ಧಿವಂತ ಅಜ್ಜನ ಮೊಮ್ಮಗನೂ ಈಗ ಟೋಪಿ ವ್ಯಾಪಾರ ಮಾಡುವವನು. ಅವನಿಗೂ ಇದೇ ಸಂದರ್ಭ ಎದುರಾಯಿತು. ವ್ಯಾಪಾರ ಮುಗಿಸಿ ಸುಸ್ತಾಯಿತೆಂದು ಮರದಡಿ ಮಲಗಿದನಿಗೆ ಜೋರು ನಿದ್ದೆ. ಎದ್ದು ನೋಡಿದಾಗ ಮಂಗಗಳ ಕೈಯಲ್ಲಿ ಟೋಪಿ ಇತ್ತು. ಕೂಡಲೇ ಅಜ್ಜನ ಉಪಾಯ ನೆನಪಾಯಿತು. ಟೋಪಿಯನ್ನು ತಲೆಯಿಂದ ತೆಗೆದ... ಪುನಃ ತಲೆಯ ಮೇಲಿಟ್ಟ.. ಕೋತಿಗಳೂ ಹಾಗೆಯೇ ಮಾಡಿದವು. ಹುಡುಗನಿಗೆ ಸಮಾಧಾನವಾಯಿತು. ತಲೆಯಿಂದ ಟೋಪಿಯನ್ನು ತೆಗೆದು ಗಾಳಿ ಹಾಕಿಕೊಂಡ. ಮಂಗಗಳೂ ಅದನ್ನೇ ಪುನರಾವರ್ತನೆ ಮಾಡಿದವು. ಕೋತಿಗಳು ತನ್ನನ್ನೇ ಅನುಕರಿಸ್ತಿವೆ ಎಂದು ಇವನಿಗೆ ಇನ್ನೂ ಧೈರ್ಯ ಬಂತು. ಈಗ ಹುಡುಗ ಟೋಪಿಯನ್ನು ಕೆಳಕ್ಕೆಸೆದ. ಆಗ ಮೇಲಿದ್ದ ಬುದ್ಧಿವಂತ ಕೋತಿಯೊಂದು, "ಮೂರ್ಖ...... ನಿನ್ನಜ್ಜ ಹೇಳಿದ ಕಥೆಯನ್ನೇ ನಮ್ಮ ಅಜ್ಜನೂ ಹೇಳಿದ್ದಾರೆ. ಏನು ಮಾಡಬಾರದು ಅನ್ನುವುದು ನಮಗೂ ಗೊತ್ತಾಗಿದೆ ಈಗ" ಎಂದಿತು. ಜನ, ಮನ, ಕಾಲ.... ಎಲ್ಲವೂ ಬದಲಾವಣೆಯ ಹಾದಿಯಲ್ಲಿ..... ಆ ಕಾಲದ ಪರಿಹಾರ ಈಗಿನ ಸಮಸ್ಯೆಗೆ ಪರಿಹಾರವಾಗಬಹುದೇ...? ಸೃಜನಶೀಲತೆಯನ್ನು
ಮೈಗೂಡಿಸಿಕೊಂಡು, ಸಮಯ, ಸಂದರ್ಭಗಳಿಗೆ ನಮ್ಮ ಆಲೋಚನೆಗಳನ್ನೂ ಬದಲಾಯಿಸಿಕೊಳ್ಳುವ ಅನಿವಾರ್ಯತೆಯಿದೆ. ಹುಡುಗನಿಗೆ ಒದಗಿದ ಸಂದರ್ಭ ನಮಗೂ ಒದಗಿದರೆ.....? ಹೇಗೆ ಪರಿಹರಿಸುತ್ತಿದ್ದೆವು.....? ಬರೆದು ಕಳಿಸ್ತೀರಲ್ಲಾ....? ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು. ಆರೋಗ್ಯ ಜೋಪಾನ. ಇನ್ನು ನನ್ನ ನಿಮ್ಮ ಭೇಟಿ..... ಮುಂದಿನ ಪತ್ರದೊಂದಿಗೆ...... ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************