ಪ್ರೀತಿಯ ಪುಸ್ತಕ : ಸಂಚಿಕೆ - 11
Friday, June 17, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 11
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ.
ಪ್ರೀತಿಯ ಮಕ್ಕಳೇ....... ಇದು ಒಂದು ಅಜ್ಜ ಮೊಮ್ಮಗನ ಕಥೆ. ಈ ಅಜ್ಜನಿಗೆ ಹಾವು ಅಂದರೆ ಇಷ್ಟ. ಸಾಕು ಪ್ರಾಣಿ ತರಹ ನೋಡಿಕೊಳ್ಳಲೂ ರೆಡಿಯೇ. ಹಾಗೆ ದಾರಿಯಲ್ಲಿ ಹಾವು ಮಾರುವವರ ಕೈಯಿಂದ ಹೆಬ್ಬಾವು ಕೊಂಡು ಮನೆಗೆ ತಂದು ಹಾಕಿದ ಮೇಲೆ ನಡೆದ ಗೊಂದಲಗಳ ವಿವರ ಈ ಪುಸ್ತಕದಲ್ಲಿ ಇದೆ. ಒಂದೊಂದು ಘಟನೆಗಳೂ ಕೂಡಾ ಬಹಳ ಮಜ ಕೊಡುತ್ತವೆ. ದೊಡ್ಡ ಹಾವು ಒಂದು ಬಂದು ಮನೆಯಲ್ಲಿ ಕನ್ನಡಿ ಎದುರು ತಲೆ ಎತ್ತಿ ನಿಂತರೆ ಹೇಗೆ ಇರಬಹುದು, ಊಹಿಸಿ ನೋಡಿ. ಇದರಲ್ಲಿ ಮೊಮ್ಮಗ ಚಿಕ್ಕ ಹುಡುಗ, ಹಾವಿನ ಜೊತೆಗೆ ಅವನಿಗೂ ಸ್ನೇಹ ಬೆಳೆಯುತ್ತದೆ. ಮನೆಯಲ್ಲಿ ನಾಯಿ, ಬೆಕ್ಕು ಜೊತೆಗೆ ಬೆಳೆಯುತ್ತದಲ್ಲಾ ಹಾಗೆ. ಕಪ್ಪು ಬಿಳುಪು ಚಿತ್ರಗಳೂ ಕತೆಯ ಸ್ವಾರಸ್ಯವನ್ನು ಎತ್ತಿ ಹಿಡಿಯುತ್ತವೆ. ನನಗೆ ಹಾವು ಅಂದರೆ ಭಯ, ಆದರೂ ಏನೋ ಒಂಥರಾ ಇಷ್ಟ. ಅದರ ಕತೆಗಳಂತೂ ಬಹಳ ರೋಮಾಂಚಕಾರಿ. ಬಹಳ ಮಂದಿ ಮಕ್ಕಳಿಗೆ ಈ ಪುಸ್ತಕ ಉಡುಗೊರೆಯಾಗಿ ಕೊಟ್ಟಿದ್ದೇನೆ. ಅವರಿಗೂ ಬಹಳ ಇಷ್ಟವಾಗಿದೆ.
ಈ ಪುಸ್ತಕ ಬರೆದ ರಸ್ಕಿನ್ ಬಾಂಡ್ ಇದ್ದಾರಲ್ಲಾ, ಅವರು ಮಕ್ಕಳಿಗಾಗಿ ಬಹಳಷ್ಟು ಪುಸ್ತಕ ಬರೆದಿದ್ದಾರೆ. ಅವರ ಪರಿಚಯವನ್ನೂ ನೀವು ಮಾಡಿಕೊಳ್ಳಬೇಕು. ಓದಿ ನೋಡಿ, ಹಾವುಗಳೂ ನಮ್ಮ ಸಹಜೀವಿಗಳು. ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ
ಲೇಖಕರು: ರಸ್ಕಿನ್ ಬಾಡ್
ಅನುವಾದ: ಲಲಿತ ಶ್ರೀನಿವಾಸ್
ಚಿತ್ರಗಳು: ಮಿಕ್ಕಿ ಪಟೇಲ್
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ
ಬೆಲೆ: ರೂ.12
ಐದು, ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************