-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 44

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 44

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    

                     ನದಿಯ ಆಚೆ ದಡದಲ್ಲಿ ಜರಗುವ ಮನೋರಂಜನೆ ಹಾಗೂ ಸಂಭ್ರಮದ ಕಾರ್ಯಕ್ರಮಕ್ಕೆ ಮೋಹನ ಏಕಾಂಗಿಯಾಗಿ ಹೊರಟ್ಟಿದ್ದ. ನದಿಗೆ ಹೋಗುವ ದಾರಿಯ ಮಧ್ಯೆ ಹಲವರಿಗೆ ಈ ವಿಷಯ ಗೊತ್ತಾಗಿ ಪುಕ್ಕಟೆಯಾಗಿ ಮನರಂಜನೆ ಪಡೆಯುವ ಆಶೆಯಲ್ಲಿ ಅವನ ಜತೆ ಪ್ರಯಾಣಿಸಲು ದೋಣಿಯ ಬಳಿ ಬಂದರು. ಏಕಾಂಗಿಯಾಗಿ ಪ್ರಯಾಣಿಸಬೇಕಾದ ಮೋಹನನ ದೋಣಿ ಈಗ ಭರ್ತಿಯಾಯಿತು. ದೋಣಿ ಪ್ರಯಾಣಿಸಿದ ಕೆಲವೇ ಸಮಯದಲ್ಲಿ ಅತಿಭಾರವನ್ನು ತಾಳಲಾರದೆ ದೋಣಿಯು ಮುಳುಗುವ ಹಂತಕ್ಕೆ ಬಂತು. ಮುಳುಗುವ ಸಾಧ್ಯತೆ ನೋಡಿ ಹೆಚ್ಚಿನವರು ಹೆದರಿ ದೋಣಿಯಿಂದ ಹೊರಗೆ ಜಿಗಿದರು. ನಾಲ್ಕೈದು ಜನ ಮಾತ್ರ ಪರಸ್ಪರ ಧೈರ್ಯ ತುಂಬಿಸುತ್ತ ದೋಣಿಯಲ್ಲಿಯೇ ಉಳಿದರು. ಒಬ್ಬೊಬ್ಬರೇ ಜಿಗಿಯುತ್ತಿದ್ದಂತೆ ದೋಣಿ ತನ್ನ ಅತಿ ತೂಕವನ್ನು ಕಳೆದು ಸಹಜಸ್ಥಿತಿಗೆ ಬಂತು. ಹಗುರವಾದ ದೋಣಿಯಲ್ಲಿ ಮೋಹನನು ಉಳಿದ ನಾಲ್ಕೈದು ಮಂದಿಯ ಜತೆ ಆರಾಮವಾಗಿ ನದಿಯ ಆಚೆ ದಡ ಸೇರಿದನು. ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಭಾಗವಹಿಸಿ ಖುಷಿ ಪಡೆದನು.
         ಈ ಕಥೆಯಲ್ಲಿರುವಂತೆ ನಮ್ಮ ಬದುಕಿನ ದೋಣಿಯ ಪಯಣದಲ್ಲಿ ಪುಕ್ಕಟೆಯಾಗಿ ಸುಖದ ಸಂಭ್ರಮ ಹಾಗೂ ಮನರಂಜನೆ ಪಡೆಯಲು ನೂರಾರು ಜನ ಸಿಗುತ್ತಾರೆ, ಆದರೆ ಬದುಕು ಮುಳುಗುವ ಕಷ್ಟದ ಕಾಲದಲ್ಲಿ ಬೇರೆ ಬೇರೆ ನೆಪ ಹೇಳಿಯೋ - ಹೇಳದೆಯೊ ಒಬೊಬ್ಬರಾಗಿ ಜಿಗಿದು ಪರಾರಿಯಾಗುವರು. ಆದರೆ ನಾವು ನಡುದಾರಿಯಲ್ಲಿ ಕೈಬಿಟ್ಟು ಹೋದವರಿಗಾಗಿ ಬೇಸರಿಸದೆ ವ್ಯಥಾ ಚಿಂತಿಸದೆ ಮುಳುಗಬೇಕಾದ ದೋಣಿಯನ್ನು ಹಗುರ ಮಾಡಿದುದಕ್ಕಾಗಿ ಕೃತಜ್ಞತೆ ಸಲ್ಲಿಸಿ ಬದುಕಿನ ಪಯಣ ಮುಂದುವರಿಸಬೇಕು. ನಮ್ಮ ಪಯಣದ ಕಠಿಣ ಸಂದರ್ಭದಲ್ಲಿ ಧೈರ್ಯದಿಂದ ನಮ್ಮಜತೆ ಕೊನೆವರೆಗೂ ಯಾರು ಉಳಿಯುತ್ತಾರೋ ಅವರೇ ನಿಜವಾದ ಗೆಳೆಯರು, ಬಂಧುಗಳು. ಅವರ ಜತೆ ಸದಾ ಧೈರ್ಯದಿಂದ ಎಲ್ಲಿಗೂ ಪಯಣಿಸಬಹುದು.
        ಗೆಲುವಿಗೆ ಸಾವಿರಾರು ಅಪ್ಪಂದಿರು
ಸೋಲಿಗೆ ನೀನೊಬ್ಬನೇ ಅಪ್ಪ.
ಎಂಬ ಹಿರಿಯರ ಅನುಭವದ ಮಾತು ಅರ್ಥಗರ್ಭಿತ. ಯಾವುದೇ ಗೆಲುವಿನ ಸಾಧನೆಯಲ್ಲಿ ನಿಜವಾದ ಸಾಧಕನನ್ನು ಬಿಟ್ಟು ಉಳಿದವರೆಲ್ಲ ತಾವೇ ಪಾಲುದಾರರಂತೆ ಬಿಂಬಿಸಿಕೊಳ್ಳುತ್ತಾರೆ ಮತ್ತು ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಸಾಧನೆಯ ಹಾದಿಯಲ್ಲಿ ಸೋತರೆ ಒಬ್ಬರೂ ಇರುವುದಿಲ್ಲ. ಎಲ್ಲದಕ್ಕೂ ನಾವೊಬ್ಬರೇ ಜವಾಬ್ದಾರರಾಗಬೇಕು. ಹಾಗಾಗಿ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಜಾಗರೂಕರಾಗಿ ಇರಬೇಕು. ಸುಖ ಪಯಣಕ್ಕೆ ದಾರಿದೀಪವಾಗಿ ಹಿರಿಯರ ಅನುಭವ ಸಲಹೆಗಳನ್ನು ಕೇಳುವುದು ತುಂಬಾ ಉಪಯುಕ್ತ. ಮಹಾಭಾರತದಲ್ಲಿ ಕೃಷ್ಣನ ಸಲಹೆಯಿಂದ ಪಾಂಡವರು ಯುದ್ಧ ಗೆದ್ದರು. ಶಕುನಿಯ ಸಲಹೆಯಿಂದಾಗಿ ಕೌರವರು ಯುದ್ಧದಲ್ಲಿ ಸೋತು ಜೀವ ಕಳೆದುಕೊಂಡರು. ಇದರರ್ಥ ಸಾಧನೆಯ ಹಾದಿಯಲ್ಲಿ ಯಾರ ಜತೆ ಸಲಹೆ ಕೇಳುತ್ತೇವೆಯೋ ಅದು ಕೂಡಾ ತುಂಬಾ ಮುಖ್ಯವಾಗಿದೆ. ನಾವು ಇತರರನ್ನು ಮೆಚ್ಚಿಸಲು ಜನಿಸಿಲ್ಲ. ನಮ್ಮ ಬದುಕನ್ನು ಸಮಾಜಕ್ಕೆ ಪೂರಕವಾಗಿ ಮಾನವೀಯವಾಗಿ ನಡೆಸಬೇಕು. ಇತರರನ್ನು ಮೆಚ್ಚಿಸಲು ಬದುಕಿದರೆ ಒತ್ತಡ, ಆತಂಕ ಮತ್ತು ಖಿನ್ನತೆ ಉಂಟಾಗಿ ಬದುಕು ರಸಹೀನವಾಗುತ್ತದೆ. ಅದಕ್ಕೆ ಧನಾತ್ಮಕವಾಗಿ ಮುಕ್ತವಾಗಿ ಆರಾಮವಾಗಿ ಬದುಕಲು ಕಲಿಯಬೇಕು. ತಪ್ಪು ವ್ಯಕ್ತಿಗಳನ್ನು ಒಪ್ಪಿಕೊಳ್ಳುವುದು ನಮ್ಮ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ ಆದರೆ ಒಬ್ಬ ಸರಿಯಾದ ಆತ್ಮೀಯ ವ್ಯಕ್ತಿಯನ್ನು ಮರೆಯುವುದು ಜೀವನದುದ್ದಕ್ಕೂ ನಮ್ಮನ್ನು ಕಾಡುತ್ತದೆ. ಹಾಗಾಗಿ ಬದುಕಿನ ದೋಣಿಯಲ್ಲಿ ಸರಿಯಾದ ಸಮರ್ಥ ವ್ಯಕ್ತಿಗಳನ್ನು ಮಾತ್ರ ಸಹಪ್ರಯಾಣಿಕನಾಗಿಯೂ ಜತೆಗಾರನಾಗಿಯೂ ಹತ್ತಿಸಿಕೊಳ್ಳಿ. ಇಲ್ಲದಿದ್ದಲ್ಲಿ ಅಪಾಯ ಖಂಡಿತಾ. ಪ್ರತಿ ಬಾರಿಯೂ ನಾವೇ ಸರಿ ಎಂದು ಭಾವಿಸಿದರೆ, ಜೀವನದಿಂದ ಏನೂ ಕಲಿತಿಲ್ಲ ಎಂದರ್ಥ. ಯಾವತ್ತೂ ನಾವು ಅಂದುಕೊಂಡ ರೀತಿಯಲ್ಲೇ ಜೀವನ ಸಾಗುತ್ತಿರುವುದಿಲ್ಲ. ನಮ್ಮ ನಿರ್ಧಾರಗಳು ಅಂತಿಮ ಮತ್ತು ಸರಿಯಾದ್ದುದೇ ಆಗಿರಬೇಕಾಗಿಲ್ಲ. ಅದು ತಪ್ಪಾಗಿಯೂ ಇರಬಹುದು. ಹಾಗಾಗಿ ನಿರ್ಧಾರಗಳ ವಿಮರ್ಶೆ ಯಾವತ್ತೂ ನಡೆಯುತ್ತಿರಬೇಕು. ಪ್ರತಿಯೊಂದು ಭಾವನೆಗಳು ಹೃದಯದಿಂದ ಬರುವುದರಿಂದ ಅವು ನಮ್ಮ ಜೀವನದಲ್ಲಿ ಮುಖ್ಯವಾಗಿವೆ.. ಭಾವನೆಗಳಿಗೆ ನೀವು ಪ್ರತಿಕ್ರಿಯಿಸಿದರೆ ಅವು ಬೆಳೆಯುತ್ತವೆ, ನೀವು ನಿರ್ಲಕ್ಷಿಸಿದರೆ ಸಾಯುತ್ತವೆ ಮತ್ತು ನೀವು ಗೌರವಿಸಿದರೆ ಅವು ಶಾಶ್ವತವಾಗಿ ಉಳಿಯುತ್ತವೆ. ಹಾಗಾಗಿ ಧನಾತ್ಮಕ ವ್ಯಕ್ತಿಗಳ ಭಾವನೆಗಳನ್ನು ಸದಾ ತಪ್ಪದೆ ಗೌರವಿಸೋಣ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಕ್ಕಾಗಿ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article