-->
ಜೀವನ ಸಂಭ್ರಮ : ಸಂಚಿಕೆ - 34

ಜೀವನ ಸಂಭ್ರಮ : ಸಂಚಿಕೆ - 34

            ಜೀವನ ಸಂಭ್ರಮ : ಸಂಚಿಕೆ - 34


                        ಕಾರ್ಯೋತ್ಸಾಹ.
                  ------------------------
       ಮಕ್ಕಳೇ, ಕೆಲಸ ಯಾವುದಾದರೂ ಇರಲಿ , ಅದನ್ನು ಉತ್ಸಾಹದಿಂದ ಮಾಡಬೇಕು. ಸಂತೋಷ ಹೊರಗಡೆ ಹುಡುಕಿದರೆ ಸಿಗುವುದಿಲ್ಲ. ಮಾಡುವ ಪ್ರತಿಯೊಂದು ಕೆಲಸದಲ್ಲೂ ಸಂತೋಷ ಕಾಣಬೇಕು.  ಅದರಿಂದ ಆನಂದ ಪಡೆಯಬೇಕು.
ಕೆಲಸಕ್ಕಾಗಿ ಮೂರು ನಿಯಮಗಳು
1. ಆನಂದಕ್ಕಾಗಿ ಕೆಲಸ, ಅದಕ್ಕಾಗಿ ಉತ್ಸಾಹದಿಂದ ಮಾಡಬೇಕು.
2. ಕೌಶಲ್ಯಯುತವಾಗಿ, ಸುಂದರವಾಗಿ, ಅಚ್ಚುಕಟ್ಟಾಗಿ ಮಾಡಬೇಕು , ಸ್ವಚ್ಛವಾಗಿರಬೇಕು. ನಮಗೆ ಮತ್ತು ಬೇರೆಯವರಿಗೆ ಸೌಂದರ್ಯ ಕಾಣಬೇಕು.
3. ಇದರಿಂದ ಪ್ರತಿಫಲ ಬರುವ ನಂಬಿಕೆ ಇರಬೇಕು. ನಿರೀಕ್ಷೆ ಬೇಡ. ಕೆಲಸವನ್ನು ಈ ಕೆಳಕಂಡ ಕಾರಣಗಳಿಗಾಗಿ ಮಾಡುತ್ತೇವೆ.
    1. ಗಳಿಕೆಗಾಗಿ ಕೆಲಸ ಮಾಡುತ್ತೇವೆ. ಇದರಲ್ಲಿ ಊಟಕ್ಕೆ ಪ್ರಾಧ್ಯಾನ್ಯತೆ ಇರಲಿ.
    2. ಬಳಕೆಗಾಗಿ ಕೆಲಸ ಮಾಡುತ್ತೇವೆ. ಗಳಿಸಿದ್ದನ್ನು ಬಳಸಿ ಆನಂದ ಪಡಬೇಕು.
    3. ಆರೋಗ್ಯಕ್ಕಾಗಿ ಕೆಲಸ ಮಾಡುತ್ತೇವೆ.
    4. ಆನಂದಕ್ಕಾಗಿ ಕೆಲಸಮಾಡುತ್ತೇವೆ.
ಪ್ರತಿ ಕೆಲಸವನ್ನು ನನ್ನದೆಂದು ಭಾವಿಸಿ ಸುಂದರವಾಗಿ ಮಾಡಬೇಕು. ಸಂತೋಷಪಡಬೇಕು. ಆನಂದ ಅನುಭವಿಸಬೇಕು. ಆದರೆ ಅದು ನನ್ನದಲ್ಲ ಎಂಬ ಸತ್ಯ ತಿಳಿದಿರಬೇಕು. ಸಾಮರ್ಥ್ಯ ಇರುವುದು ಗಳಿಸಲು ಅಲ್ಲ ಆನಂದ ಪಡಲು. ಕೆಲಸ ಮಾಡೋದು ಅಂದರೆ ಕಣ್ಣು ಬಳಸುತ್ತಾ ಇರುವುದು. ಕಿವಿ ಬಳಸುತ್ತಾ ಇರೋದು. ಬಾಯಿ ಬಳಸುತ್ತಾ ಸುಂದರ ಮಾತುಗಳನ್ನು ಆಡುತ್ತಿರುವುದು. ಹಾಗೆಯೇ ಕೈ , ಕಾಲು , ಮೂಗು, ನಾಲಿಗೆ , ಮನಸ್ಸು ಮತ್ತು ಭಾವನೆ ಚೆನ್ನಾಗಿ ಬಳಸುವುದು. ಬುದ್ಧಿಯಿಂದ ವಿವೇಚನೆ ಮಾಡುವುದು. ಮನಸ್ಸನ್ನು ಅರಳಿಸುವುದು. ಇದರಿಂದ ಕಣ್ಣುಗಳು , ಕಿವಿಗಳು , ಕೈ, ಕಾಲುಗಳು ಸೇರಿದಂತೆ ಪಂಚೇಂದ್ರಿಯಗಳಿಗೆ ಸಾರ್ಥಕತೆ ಬರುತ್ತದೆ ಹಾಗೂ ಅವು ಶ್ರೀಮಂತಗೊಳ್ಳುತ್ತವೆ.
ಆನಂದಕ್ಕಾಗಿ ಕೆಲಸ ಆಸೆಗಾಗಿ ಅಲ್ಲ. ನಿರೀಕ್ಷೆಗಳು ದುಃಖ ತರುತ್ತದೆ. ಯಾರಾದರೂ ಕೊಂಡಾಡಲಿ ಅಥವಾ ತೆಗಳಲಿ ಕೆಲಸ ನಿಲ್ಲಿಸಬಾರದು. ಕೆಲಸದಿಂದ ಗಳಿಸುವುದೇ ನಿಜವಾದ ಸಂಪತ್ತು. ಕೆಲಸದಿಂದ ಬಂಧನ ಮೋಹಕ್ಕೆ ಒಳಗಾಗಬಾರದು.
       ಕೆಲಸದ ವಿಧಗಳು : 
1. ಸಾಮಾನ್ಯ ಬದುಕಿನ ಕೆಲಸ- ಓದುವುದು, ಬರೆಯುವುದು, ಮನೆ ಸ್ವಚ್ಛ ಮಾಡುವುದು , ಬಟ್ಟೆ ಧರಿಸುವುದು, ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು, ನಿದ್ರೆ ಮಾಡುವುದು , ಕುಳಿತುಕೊಳ್ಳುವುದು, ನಡೆಯುವುದು , ಇವು ಹೇಗೇಗೋ ಇರಬಾರದು. ಸುಂದರವಾಗಿರಬೇಕು. ಅಚ್ಚುಕಟ್ಟಾಗಿರಬೇಕು ಮತ್ತು ಸ್ವಚ್ಛವಾಗಿರಬೇಕು.
2. ಬದುಕಲು ಉದ್ಯೋಗ - ಏನಾದರೂ ಉತ್ಪಾದಕ ಕೆಲಸವನ್ನು ಜೀವನ ನಿರ್ವಹಣೆಗಾಗಿ ಮಾಡಬೇಕು.
3. ಮಾನ, ಮರ್ಯಾದೆ , ಗೌರವ ಮತ್ತು ಕೀರ್ತಿ ಗಳಿಸಲು ಕೆಲಸ ಮಾಡಬೇಕು.
4. ಜಗತ್ತನ್ನು ಅರ್ಥಮಾಡಿಕೊಳ್ಳುವುದು ಅಂದರೆ ಜ್ಞಾನದ ಕೆಲಸ ಮಾಡಬೇಕು.
5. ತನ್ನ ಆನಂದಕ್ಕಾಗಿ ಕೆಲಸ ಮಾಡಬೇಕು.
ಕೆಲಸ ಸಣ್ಣದಿರಲಿ, ದೊಡ್ಡದಿರಲಿ ಅದನ್ನು ಚೆನ್ನಾಗಿ ಮಾಡುವುದು ಮುಖ್ಯ. ಉದ್ಯೋಗ ಜೀವನ ಕೆಡಿಸಬಾರದು. ನಮ್ಮ ವೈಭವ, ಶಾಂತಿ ಕೆಡಿಸಬಾರದು. ಕೆಲಸ ಮುಖ್ಯವಲ್ಲ ಅದರಿಂದಾಗುವ ಆನಂದ ಮುಖ್ಯ.
ಈ ಕೆಲಸವನ್ನು ನಮ್ಮ ಜೀವ ಇರೋ ತನಕ ಅಥವಾ ನಮ್ಮ ಕೈಯಲ್ಲಿ ಆಗೋ ತನಕ ಮಾಡಬೇಕು. ಜೀವನ ದುಡಿಮೆ ಬೇರ್ಪಡಿಸಲು ಸಾಧ್ಯವಿಲ್ಲ. ಅನ್ನದ ರುಚಿ ಗೊತ್ತಾಗುವುದು ಚೆನ್ನಾಗಿ ದುಡಿದು ಹಸಿವಾದಾಗ. ಅದೇ ರೀತಿ ನೀರಿನ ರುಚಿ ಗೊತ್ತಾಗುವುದು ಚೆನ್ನಾಗಿ ದುಡಿದು ದಾಹವಾದಾಗ. ಇವು ಅಮೃತಕ್ಕೆ ಸಮಾನವಾಗುತ್ತವೆ. ಈ ಜಗತ್ತು ಸುಂದರವಾಗಿರುವುದು ಈ ಸುಂದರ ಎರಡು ಕೈಗಳಿಂದ ಚಲೋ ಚಲೋ ಕೆಲಸಮಾಡುವುದರಿಂದ. ಬೇಲೂರು, ಹಳೇಬೀಡು , ಬಾದಾಮಿ, ಐಹೊಳೆ, ಪಟ್ಟದಕಲ್ಲು , ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಅದರ ಹಿಂದೆ ಇರುವ ಸುಂದರ ವನ , ಇವೆಲ್ಲ ನಿರ್ಮಾಣವಾಗಿರುವುದು ಈ ಸುಂದರ ಕೈಗಳಿಂದಲೇ. ಈ ಕೈಗಳನ್ನು ಪಂಚೇಂದ್ರಿಯಗಳನ್ನು ಬಳಸಿಕೊಂಡು ನಾವಿರುವ ಸ್ಥಳವನ್ನು ಸ್ವರ್ಗವನ್ನಾಗಿ ನಿರ್ಮಾಣ ಮಾಡಬಹುದು. ಆ ಶಕ್ತಿ ನಮ್ಮ ಕೈ ಮತ್ತು ಪಂಚೇಂದ್ರಿಯಗಳಿಗೆ ಇವೆ. ಮಕ್ಕಳೇ , ಸುಂದರ ಸುಂದರ ಕೆಲಸದ ಮೂಲಕ ನಿಮ್ಮ ಜೀವನ ಸುಂದರವಾಗಿರಿಸಿಕೊಳ್ಳಿ.
       ಮಕ್ಕಳೇ , ಓದುವುದು, ಬರೆಯುವುದು, ಯೋಗಾಸನ ಮಾಡುವುದು , ಪ್ರಾಣಾಯಾಮ ಮಾಡುವುದು ಮತ್ತು ಆಟ ಆಡುವುದು ಕೂಡ ಸುಂದರವಾದ ಕೆಲಸಗಳು. ನಾವು ಜ್ಞಾನ ಪಿಪಾಸುಗಳಾಗಬೇಕು. ಜ್ಞಾನ ಎಂದರೆ ಜಗತ್ತನ್ನು ಅರ್ಥಮಾಡಿಕೊಳ್ಳುವುದು ಮತ್ತು ಸತ್ಯವನ್ನು ತಿಳಿದುಕೊಳ್ಳುವುದು. ಇಂತಹ ಸುಂದರವಾದ ಜ್ಞಾನ ಪಡೆಯಲು ನಾವು ಕಣ್ಣು, ಕಿವಿ , ಬುದ್ಧಿ , ಮನಸು ಮತ್ತು ಕೈಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಶಿಕ್ಷಕರು ಬರೆಯುವ ಸುಂದರವಾದ ಚಿತ್ರಗಳನ್ನು , ಪ್ರಯೋಗಗಳನ್ನು , ನಾವು ಭೇಟಿ ಕೊಟ್ಟ ಸ್ಥಳದ ಸುಂದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು. ಶಿಕ್ಷಕರಿಂದ ಹೊರಡುವ ಮಧುರವಾದ ಜ್ಞಾನದ ಧ್ವನಿಯನ್ನು ಗಮನವಿಟ್ಟು ಆಲಿಸಬೇಕು. ಶಿಕ್ಷಕರು ಹೇಳುವ ಘಟನೆಯ ಚಿತ್ರಗಳನ್ನು ಕಲ್ಪಿಸಿಕೊಳ್ಳಬೇಕು. ಆ ಚಿತ್ರದ ಜೊತೆ ಮದುರ ಭಾವನೆಯನ್ನು ಜೋಡಿಸಬೇಕು. ಕೈಗಳಿಂದ ಸುಂದರವಾಗಿ ಪಾಠ ಟಿಪ್ಪಣಿಯನ್ನು ಬರೆದುಕೊಳ್ಳಬೇಕು. ಬಣ್ಣ ಬಣ್ಣದ ಪೆನ್ಸಿಲ್ ಗಳಿಂದ ಚಿತ್ರಗಳನ್ನು ಸುಂದರವಾಗಿ ಬರೆಯಬೇಕು. ನಾವು ಶಾಲೆಗೆ ಹೋಗುವಾಗ ಇರುವ ಬಟ್ಟೆಯನ್ನೇ ಶುಭ್ರವಾಗಿ ಇಸ್ತ್ರಿ ಮಾಡಿ ಸುಂದರವಾಗಿ ಧರಿಸಿ ಉಲ್ಲಾಸದಿಂದ ಶಾಲೆಗೆ ಹೋಗಬೇಕು. ಶಾಲೆಯಲ್ಲಿ ಜಾಗವಿದ್ದರೆ ಹೂವು ಹಣ್ಣು ನೀಡುವ ಗಿಡಗಳನ್ನು ನೆಟ್ಟು ಪೋಷಿಸಬೇಕು. ಆಗ ನಮ್ಮ ಕಲಿಕೆಗೆ ಆನಂದ ಕೊಡುತ್ತದೆ. 
        ಪಾಸ್ಕಲ್ ಎನ್ನುವ ವಿದೇಶಿಗ, ಗಣಿತಜ್ಞ ಹೇಳುತ್ತಾನೆ, "ಏನೂ ಮಾಡದೆ ಸುಮ್ಮನಿರುವುದು ಮರಣಕ್ಕೆ ಸಮ" ಎಂದು. ಮಕ್ಕಳೇ ನಾವು ಬದುಕಿರುವವರೆಗೂ ಸುಂದರ ಕೆಲಸಗಳನ್ನು ಮಾಡುತ್ತಾ ಆನಂದದ ಜೀವನವನ್ನು ಅನುಭವಿಸಬೇಕು ಅಲ್ಲವೇ.....
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article