-->
ಸ್ಫೂರ್ತಿಯ ಮಾತುಗಳು - ಲೇಖಕಿ : ಹರಿಣಾಕ್ಷಿ ಕಕ್ಯಪದವು

ಸ್ಫೂರ್ತಿಯ ಮಾತುಗಳು - ಲೇಖಕಿ : ಹರಿಣಾಕ್ಷಿ ಕಕ್ಯಪದವು

ಹರಿಣಾಕ್ಷಿ. ಕೆ
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 


                   ಮಕ್ಕಳೇ....... ನಾವೆಲ್ಲ ಇಳೆಯ ಬೆಳಕನ್ನು ಕಂಡ ದೇಶ ಭಾರತ. ಪ್ರಾಚೀನ ಇತಿಹಾಸ ಹೊಂದಿರುವ ನಮ್ಮ ದೇಶವೆಂದರೆ ವೈವಿಧ್ಯತೆಯ ಆಗರ. ಶ್ರೇಷ್ಠತೆಯ ಗುರಿಕಾರ. ಸಾಂಸ್ಕೃತಿಕ ಹಿರಿಮೆಯುಳ್ಳ ಈ ದೇಶದಲ್ಲಿ ದೊರೆತ ಪವಿತ್ರ ಜನ್ಮದ ಬಗ್ಗೆ ನಾವು ಹೆಮ್ಮೆ ಪಟ್ಟುಕೊಳ್ಳುತ್ತೇವೆ. ನಮ್ಮ ದೇಶದ ಬಗ್ಗೆ ಅಭಿಮಾನ ಪಟ್ಟುಕೊಳ್ಳುತ್ತೇವೆ. ಒಂದೊಮ್ಮೆ ನನ್ನ ದೇಶವನ್ನು ಬಹಳಷ್ಟು ಪ್ರೀತಿಸ್ತೇನೆ ಎಂಬುದಾಗಿ ಎದೆತಟ್ಟಿ ಹೇಳುತ್ತೇವೆ. ಹಲವಾರು ಭಾಷಣಗಳಲ್ಲಿ ವಾಗ್ಝರಿಯನ್ನು ಹರಿಸಿ ದೇಶದ ಕುರಿತ ಒಲುಮೆಯನ್ನು ಹೊರಹೊಮ್ಮಿಸುತ್ತೇವೆ…..
        ಆದರೆ ವಿಷಾದನೀಯವೆಂದರೆ ಎಷ್ಟೋ ಸಂದರ್ಭ ನಾವು ನಮ್ಮ ತಾಯಿ ನೆಲವನ್ನು ನೈಜವಾಗಿ ಪ್ರೀತಿಸುವುದರಲ್ಲಿ ಸೋತಿದ್ದೇವೇನೋ ಎಂಬ ನೋವು ಹಲವು ಸನ್ನಿವೇಶಗಳಲ್ಲಿ ಮೂರ್ತ ರೂಪದಲ್ಲಿ ಚಿಕ್ಕ ಪುಟ್ಟ ಉದಾಹರಣೆಗಳ ಮೂಲಕ ಕಣ್ಣಿಗೆ ಕಾಣಲಾರಂಭಿಸುತ್ತದೆ.
          ಮಕ್ಕಳೇ, ಇತ್ತೀಚಿನ ದಿನಗಳಲ್ಲಿ ವಿದೇಶಿ ಸಂಸ್ಕೃತಿಯ ಆಕರ್ಷಣೆಯ ಭರಾಟೆಯಲ್ಲಿ , ಜಾಹೀರಾತಿನ ಮೋಡಿಯಲ್ಲಿ ನಾವು ನಮ್ಮನ್ನ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ದೇಶದ, ನಮ್ಮ ನೆಲದ ಸೊಗಡನ್ನು ಮರೆಯುತ್ತಿದ್ದೇವೆ. ನಮ್ಮ ದೇಶಕ್ಕೆ ಅದರದ್ದೇ ಆದಂತಹ ಸಂಸ್ಕೃತಿ ಇದೆ. ನಿತ್ಯ ಬದುಕಿನಲ್ಲಿ ಜನಮಾನಸದಲ್ಲಿ ಹಲವಾರು ಆಚರಣೆಗಳು ಅರ್ಥಗರ್ಭಿತವಾಗಿ ಹಾಸುಹೊಕ್ಕಾಗಿವೆ. ಇವೆಲ್ಲವುಗಳ ಮೂಲಕ ಪ್ರಸಾರವಾಗುವಂತಹ ಸಂಸ್ಕಾರದ ಎಳೆಯಿದೆ. ಸತ್ಚಿಂತನೆಯ ಕೊಂಡಿಗಳಿವೆ. ಅದರೆ ಇವೆಲ್ಲವೂ ಪ್ರಾಪ್ತವಾಗಬೇಕಾದರೆ ನಮ್ಮ ಸಂಸ್ಕೃತಿಯನ್ನ ಸರಿಯಾಗಿ ಅರ್ಥೈಸಿಕೊಳ್ಳಬೇಕು. ವಿದೇಶೀ ವ್ಯಾಮೋಹದಿಂದ ಹೊರಬರಬೇಕು. ಆಗ ಮಾತ್ರ ಸಂಸ್ಕಾರ ನಮ್ಮ ವ್ಯಕ್ತಿತ್ವದಲ್ಲಿ ಅಳವಡಿಕೆ ಯಾಗುತ್ತದೆ.
         ಯಾಕೆ ಈ ಮಾತು ಪ್ರಸ್ತುತವಾಗಿದೆ ಯೆಂದರೆ ನಮ್ಮ ಇತ್ತೀಚಿನ ದಿನದ ಅಭ್ಯಾಸಗಳು, ಹವ್ಯಾಸಗಳು ಎಲ್ಲವೂ ಬದಲಾಗಿಬಿಟ್ಟಿದೆ. ಬೆಳಿಗ್ಗೆ ಏಳುವಿಕೆಯಿಂದ , ಎದ್ದ ತಕ್ಷಣ ಆರಂಭವಾಗುವ ದಿನಚರಿಯಿಂದ ರಾತ್ರಿಯವರೆಗಿನ ದಿನಚರಿಯ ಸಮಯಾವಕಾಶದಲ್ಲಿ ನಮ್ಮ ದೇಸೀಯ ಸುಗಂಧದ ಕಂಪು ಮೈಮನವನ್ನು ಆವರಿಸುತ್ತಿಲ್ಲ. ತಿನ್ನೋ ಆಹಾರ, ತೊಡುವ ಉಡುಗೆಗಳು, ಬೆಸೆಯೋ ಸಂಬಂಧಗಳಲ್ಲಿ ದೇಸೀ ಸಂಪತ್ತಾಗಲೀ , ದೇಸೀ ಆತ್ಮೀಯತೆಗಳಾಗಲೀ ಕಾಣಸಿಗುತ್ತಿರುವುದು ಅಪರೂಪಕ್ಕೆಂಬಂತೆ ಅಲ್ಲೊಂದು ಇಲ್ಲೊಂದು ಅಷ್ಟೆ.
             ಆಧುನಿಕತೆಯ ಸೋಗಿನಲ್ಲಿ ನಾವು ಬಳಸುವ ಹೆಚ್ಚಿನ ವಸ್ತುಗಳು ವಿದೇಶಿ ಉತ್ಪನ್ನಗಳು. ವಸ್ತುಗಳ ಗುಣಮಟ್ಟದ ನೈಜತೆಯ ಪರೀಕ್ಷೆಗಿಳಿಯದೆ ಮಾಧ್ಯಮಗಳಲ್ಲಿ ಬಿಂಬಿತ ವಿಚಾರಗಳಿಗೆ ಮಾರು ಹೋಗಿ ಅದರ ಬಳಕೆದಾರರು ಅಗಿರುತ್ತೇವೆ. ಕೆಲವೊಮ್ಮೆ ದಾಸರೂ ಅಗಿರುತ್ತೇವೆ. ಗಾಂಧೀಜಿ , ತಿಲಕರಂತಹವರ ಆದರ್ಶ ವ್ಯಕ್ತಿಗಳು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವದೇಶಿ ವಸ್ತುಗಳ ಬಗ್ಗೆ ಸಾಕಷ್ಟು ಅರಿವು ಮೂಡಿಸಲು ಪ್ರಯತ್ನಪಟ್ಟಿದ್ದರು. ಆದರೆ ಕಾಲ ಕಳೆಯುತ್ತಿದ್ದಂತೆ , ವರ್ಷಗಳು ಉರುಳಿದಂತೆ ನಾವು ನಮ್ಮ ಸ್ವದೇಶಿ ವಸ್ತುಗಳ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾ ಇದ್ದೇವೆ. ಬಳಸುವ ಔಷಧಿಯಿಂದ ಹಿಡಿದು ಆಡುವ ಪರಿಕರಗಳವರೆಗೆ ಐಷಾರಾಮಿ ಬದುಕಿನ ಪರಿಕಲ್ಪನೆಯಲ್ಲಿ ವಿದೇಶೀ ವ್ಯಾಮೋಹ ನಮ್ಮನ್ನಾವರಿಸಿದೆ.
          ಇನ್ನು ತಿನಿಸಿನ ಬಗ್ಗೆ ಹೇಳುವುದಾದರೆ ಮಕ್ಕಳೇ ನಿಮಗೇ ಗೊತ್ತಿದೆ. ನಮ್ಮ ಆರೋಗ್ಯದ ಬಗೆಗಿನ ಕಾಳಜಿಯ ಯೋಚನೆ ನಮ್ಮಿಂದ ದೂರ ಆಗ್ತಾ ಇದೆ. ನಾಲಗೆಯ ರುಚಿ ಸಾಮರ್ಥ್ಯಕ್ಕೆ ತಕ್ಕಂತೆ ನಾವು ತಿನ್ನುವಂತಹ ತಿಂಡಿಗಳು ಬದಲಾಗುತ್ತಿವೆ. ಸ್ಥಳೀಯ ಲಭ್ಯ ತಿನಿಸುಗಳು, ಹಣ್ಣು ಹಂಪಲುಗಳು ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತಿವೆ. ಇಲ್ಲವೇ ಕೆಲವೇ ಸಾಮೂಹಿಕ ಆಚರಣೆಗಳಲ್ಲಿ ವಿಶಿಷ್ಟ ಖಾದ್ಯಗಳಾಗಿ ವರುಷಕ್ಕೊಮ್ಮೆ ಬಂದು ಹೋಗುತ್ತಿವೆ. ನಿತ್ಯದ ತಿನಿಸುಗಳ ಪಟ್ಟಿಯಿಂದ ಮರೆಯಾಗಿ ಹೋಗಿದೆ. ಆದ್ದರಿಂದಲೇ ನಮ್ಮ ಪೂರ್ವಜರಿಗಿದ್ದ ಆರೋಗ್ಯ ನಮ್ಮಿಂದ ಮರೀಚಿಕೆಯಾಗಿ ಹೋಗ್ತಾ ಇದೆ. ಹೀಗೆ ನಮ್ಮ ಸಂಸ್ಕೃತಿಯನ್ನು ನಾವು ಅರಿತು ನಡೆಯದೇ ಹೋದರೆ ಮುಂದೊಂದು ದಿನ ನಾಗರಿಕತೆಗಳು ಅಳಿದು ಅವಶೇಷಗಳು ಉಳಿದಂತೆ ಆಗಿ ಹೋಗಬಹುದೇನೋ ಎನ್ನುವಂತಹ ಭಯ ಕಾಡ್ತಾ ಇದೆ .
        ಹಿಂದೆಲ್ಲಾ ಪ್ರತೀ ಮನೆಯ ಪ್ರತಿ ಸದಸ್ಯನಿಗೆ ಕೂಡ ಆ ಮನೆಯಲ್ಲಿ ನಡೆಯುತ್ತಿದ್ದಂತಹ ವಿಧಿವಿಧಾನಗಳ ಬಗ್ಗೆ ಅರಿವಿತ್ತು. ಆಚಾರ ವಿಚಾರಗಳ ಅನುಸರಣೆಯ ಕ್ರಮದ ಬಗ್ಗೆ ಗೊತ್ತಿತ್ತು. ಆದರೆ ಇಂದು ನಮ್ಮ ದೇಶೀಯ ಸೊಗಡಿನ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಅರಸಿಕೊಂಡು ಹೋಗುತ್ತಿರುವುದು ನಮ್ಮ ದುರದೃಷ್ಟ.
      ಮುದ್ದು ಮಕ್ಕಳೇ, ವಿದೇಶಿಯರು ಯಾರೇ ನಮ್ಮ ದೇಶಕ್ಕೆ ಕಾಲಿಟ್ಟಾಗಲೂ ನಮ್ಮ ದೇಶದ ಸಂಸ್ಕೃತಿಯನ್ನು ವಿವರಿಸುವಂತಹ ಸಾಮರ್ಥ್ಯ ಪ್ರತಿಯೊಬ್ಬ ಮಗುವಿಗೆ ಬರಬೇಕು. ಭಾರತದ ಪ್ರತಿ ಮಗುವೂ ರಾಷ್ಟ್ರದ ಸಂಸ್ಕ್ರತಿಯ ಜ್ಞಾನದಲ್ಲಿ ಸಿರಿವಂತನಾಗಿ ಸುಸಂಸ್ಕೃತನಾಗಬೇಕು. ಆ ಮೂಲಕ ನಮ್ಮ ದೇಶದ ಸಂಸ್ಕೃತಿಯನ್ನು ಎಲ್ಲೆಡೆಯಲ್ಲೂ ಪಸರಿಸುವಂತಹ ರಾಯಭಾರಿಯಾಗಬೇಕು. ಹೀಗೆ ಆಗಬೇಕೆಂದರೆ ಎಳವೆಯಲ್ಲಿಯೇ ನಮ್ಮ ಸಂಸ್ಕೃತಿಯ ಬಗ್ಗೆ ಅರಿವನ್ನು ಬೆಳೆಸಿಕೊಳ್ಳುವ ಬಗ್ಗೆ ನಾವು ಕಾಳಜಿ ವಹಿಸಿಕೊಳ್ಳಬೇಕು. 'ಈ ದೇಶವನ್ನು ಪ್ರೀತಿಸುತ್ತೇನೆ' ಎಂದೆನ್ನುವ ಪ್ರತಿ ನಾಗರಿಕನೂ ನಮ್ಮೀ ನೆಲದ ಪೂಜನೀಯ ಮಣ್ಣನ್ನು ಗೌರವಿಸಬೇಕು , ಆರಾಧಿಸಬೇಕು. ಇಲ್ಲಿನ ನೆಲದೊಂದಿಗೆ ಬೆಸೆದುಕೊಂಡ ಆಚಾರ ವಿಚಾರಗಳ ವೈಜ್ಞಾನಿಕ ಕಾರಣಗಳನ್ನು ಅರಿತು ಅನುಸರಿಸಬೇಕು. ದೇಶದ ಹಿರಿತನವನ್ನು ಅರ್ಥೈಸಿಕೊಂಡು ನಾವೆಲ್ಲರೂ ಅನ್ನ , ಆಹಾರ , ಜಲವನ್ನು ನೀಡಿದ , ಉಸಿರನ್ನು ನೀಡಿದ ದೇಶಕ್ಕೆ ಕೃತಜ್ಞತೆಯನ್ನು ಸಮರ್ಪಿಸಬೇಕು.
         ಮಕ್ಕಳೇ, ಈಗಾಗಲೇ ನೀವೆಲ್ಲ ಬೇಸಿಗೆ ರಜದ ಸಂಭ್ರಮದಲ್ಲಿ ಹೇಗೂ ನೆಂಟರ ಮನೆಯ ಕಡೆಗೆ ಪಯಣ ಬೆಳೆಸಿರಬಹುದು. ಪ್ರಕೃತಿಯ ಮಡಿಲಲ್ಲಿ ಹಿರಿಯರೊಂದಿಗೆ, ಸಮವಯಸ್ಕರೊಂದಿಗೆ ಕಾಲ ಕಳೆಯುತ್ತಿರಬಹುದು. ಅಲ್ಲಿ ನಿಮ್ಮ ಅರಿವಿಗೆ ಬರದ ಹಲವಾರು ವಿಚಾರಗಳಿರುತ್ತವೆ. ಘಟನೆಗಳೊಳಗೆ ಕಾರಣಗಳು ಹುದುಗಿರುತ್ತವೆ. ಇಂತಹ ಸಂದರ್ಭದಲ್ಲಿ ಮನೆಯ ಹಿರಿಯರೊಂದಿಗೆ ನಿಮ್ಮ ಸದುದ್ದೇಶಪೂರಿತ ಕುತೂಹಲಭರಿತ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದುಕೊಳ್ಳಿ. ಶಾಲೆಯ ಪಾಠದ ಕಲಿಕೆ ಒಂದು ವಿಧವಾದರೆ ಅನೌಪಚಾರಿಕವಾಗಿ ದೊರೆಯುವ ಈ ಶಿಕ್ಷಣ ನಿಮಗೆ ಬದುಕನ್ನು ಕಟ್ಟಿಕೊಡಬಲ್ಲುದು. ಹಳ್ಳಿ ಮನೆಗಳಲ್ಲಂತೂ ಕಲಿಕೆಯು ಅನುಭವದಿಂದ ಅಗಾಧ ಪ್ರಮಾಣದಲ್ಲಿ ದೊರೆಯುತ್ತದೆ. ಅಷ್ಟೇ ಅಲ್ಲದೆ ಆಟಗಳೊಂದಿಗೆ ಸಮಯದ ಓಟ ದೇಹಕ್ಕೆ ಪುಷ್ಟಿ ನೀಡುವುದಲ್ಲದೆ, ಬೌದ್ಧಿಕ ಮಟ್ಟವನ್ನು ಹೆಚ್ಚಿಸಬಲ್ಲದು. ಹಲವು ಕಲಿಕೆಗಳ ಆಗರವಾಗಿರುವ ಆಟದಲ್ಲಿರುವ ಗ್ರಾಮೀಣ ಸೊಗಡನ್ನು ನೀವು ಅರಿತುಕೊಳ್ಳಿ. ಹಿರಿಯರ ಮೂಲಕ ಆಧ್ಯಾತ್ಮಿಕ ಮೌಲ್ಯವನ್ನು ಉತ್ತಮಪಡಿಸಿಕೊಳ್ಳಿ. ಬಾಲ್ಯದ ಕನಸುಗಳಿಗೆ ಗರಿ ಮೂಡಿಸೋ ಬೇಸಿಗೆ ರಜೆಯ ಖುಷಿಯಲ್ಲಿರೋ ನಿಮಗೆ ಅಲ್ಲಿ ಕಳೆಯುವ ಪ್ರತಿ ಕ್ಷಣವೂ ನಿಮ್ಮ ಭವಿಷ್ಯದಲ್ಲಿ ಸಿಹಿ ನೆನಪುಗಳಾಗಿ ಕಾಡಲಿ. ದೊರೆತ ಅನುಭವ ನಿಮ್ಮ ಬೌದ್ಧಿಕ ಮಟ್ಟವನ್ನು ಚುರುಕುಗೊಳಿಸಲಿ. ಹಾಗೆಯೇ ನಮ್ಮ ಮಣ್ಣಿನೊಂದಿಗೆ ಭಾವಗಳು ಬೆಸೆಯಲಿ ಎಂದು ಹಾರೈಸುತ್ತೇನೆ.....
..............................................ಹರಿಣಾಕ್ಷಿ. ಕೆ
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************


Ads on article

Advertise in articles 1

advertising articles 2

Advertise under the article