-->
ಅಕ್ಕನ ಪತ್ರ : ಸಂಚಿಕೆ - 22

ಅಕ್ಕನ ಪತ್ರ : ಸಂಚಿಕೆ - 22

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 22

      ನಮಸ್ತೆ ಮಕ್ಕಳೇ... ಚೆನ್ನಾಗಿದ್ದೀರಾ...? ಸದಾ ಒಂದಿಲ್ಲೊಂದು ಚಟುವಟಿಕೆ... ಬೇಕು - ಬೇಡಗಳನ್ನೆಲ್ಲಾ ಅಪ್ಪ ಅಮ್ಮ ನಲ್ಲಿ ಹೇಳಿಕೊಂಡು, ನಮ್ಮದೇ ಲೋಕದಲ್ಲಿ ವಿಹರಿಸುತ್ತಾ ಬಾಲ್ಯಕ್ಕೆ ತೆರೆದುಕೊಳ್ಳುತ್ತೇವೆ ಎನ್ನುವಾಗಲೇ ಗ್ಯಾಜೆಟ್ ಗಳ ಬಂಧನದಿಂದ ಹೊರಬರುವ ಮೊದಲು.... ಬಾಲ್ಯ ಕಳೆದು ಹೋಗ್ತದೆ...!
     ವಸ್ತು , ವ್ಯಕ್ತಿ, ಸಂದರ್ಭ, ಅವಕಾಶಗಳು ಬಳಿಯಲ್ಲಿರುವಾಗ ಅವುಗಳ ಮಹತ್ವ ಗೊತ್ತಾಗುವುದಿಲ್ಲ.. ಕಳೆದುಕೊಂಡಾಗಲೇ ಅರಿವಾಗುವುದು...!
       ನಮ್ಮೂರಿನ‌ ಅನಾಥಾಶ್ರಮಕ್ಕೆ ಮೊನ್ನೆ ಹೋಗಿದ್ದೆವು. ಮಕ್ಕಳು, ಮನೆಯವರು ದೂರ ಮಾಡಿದ ಅಮ್ಮಂದಿರ ಆಶ್ರಮ..! ತಾಯಿಗೆ ಎಷ್ಟು ಮಕ್ಕಳಿದ್ದರೂ ಭಾರವೆನಿಸುವುದಿಲ್ಲ... ಆದರೆ ಮಕ್ಕಳಿಗೆ, ಮನೆಯವರಿಗೆ ಅಮ್ಮ.. ಅಪ್ಪ... ಬೇಡವಾಗುತ್ತಾರೆ. ಯಾವುದೇ ಕಷ್ಟಗಳನ್ನು ಮಕ್ಕಳ ಎದುರಿಗೆ ತೋರಿಸದೆ , ಪ್ರೀತಿಯ ಕೈತುತ್ತನ್ನುಂಡ ಕರುಳ ಕುಡಿಗಳು ಇಷ್ಟೊಂದು ನಿರ್ಭಾವುಕತೆ ಮೆರೆದದ್ದಾರೂ ಹೇಗೆ...? ಮಕ್ಕಳಿಗೆ ಅಮ್ಮಂದಿರು ಭಾರವಾಗುವ, ಕಿರಿ ಕಿರಿ ಎನಿಸುವ ದುರಂತ ಕಾಲಘಟ್ಟಕ್ಕೆ ಸಾಕ್ಷಿಗಳು ನಾವು!
    ಅಪ್ಪ ..ಅಮ್ಮ.. ಅಜ್ಜ ... ಅಜ್ಜಿ .... ಮಕ್ಕಳು, ಮೊಮ್ಮಕ್ಕಳು... ಅಬ್ಬಾ! ಸಂಸಾರದ ಪರಿಕಲ್ಪನೆ ಎಷ್ಟು ಚಂದ ಅಲ್ವಾ....? ನಮ್ಮ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವುದು ಸಂಸ್ಕಾರಗಳು.
    ಯಾವ ಕಾರಣಕ್ಕೆ ಈ ನಿರ್ಲಕ್ಷ್ಯ ಹಿರಿಯ ಜೀವಗಳ ಮೇಲೆ....? ಇತ್ತೀಚೆಗೆ ಸಂಬಂಧಗಳು ಭಾವನಾತ್ಮಕವಾಗಿ ಬೆಸೆದುಕೊಂಡಿಲ್ಲ. ನಮ್ಮ ನಮ್ಮ ಅಗತ್ಯಗಳು ಈಡೇರಿದ ಮೇಲೆ ಯಾರದ್ದೂ ನೆನಪಿರುವುದಿಲ್ಲ. ಬದುಕು ಯಂತ್ರಗಳನ್ನು ನೆಚ್ಚಿಕೊಂಡಷ್ಟು ಮಾನವೀಯತೆಗೆ ಜಾಗ ಕೊಡುತ್ತಿಲ್ಲ...!!
        ಆಶ್ರಮದಲ್ಲಿದ್ದ ಅಮ್ಮಂದಿರ ಕಣ್ಣುಗಳಲ್ಲಿದ್ದ ವೇದನೆಗಳು ಹೃದಯವನ್ನು ತಟ್ಟಿದವು. ತೊರೆದು ನಡೆದವರು ಶಾಶ್ವತ ನೆಮ್ಮದಿಯನ್ನೆಂದೂ ಕಾಣಲಾರರು. ಗಂಡ, ಮಕ್ಕಳು, ಅಣ್ಣ, ಅಕ್ಕ, ತಮ್ಮ, ತಂಗಿಯಂದಿರನ್ನೆಲ್ಲಾ ನೆನಪಿಸಿಕೊಂಡ ಹೆಣ್ಣು ಜೀವಗಳು ಭಾವುಕರಾಗುತ್ತವೆ. ಅವರನ್ನು ನೋಡಿಕೊಳ್ಳುತ್ತಿರುವ ಧರ್ಮ ಭಗಿನಿಯರು ಹೇಳುತ್ತಿರುವ ಪ್ರಕಾರ , ಕೆಲವರನ್ನು ಯಾರೋ ತಂದು ಬಿಟ್ಟು ಹೋದ್ದಂತೆ! ಇನ್ನು ಕೆಲವರನ್ನು ಮಕ್ಕಳು ಬಿಟ್ಟು ಹೋದ್ದು! ಅವರನ್ನು ಮಾತನಾಡಿಸಲು ಯಾವ ಮಕ್ಕಳೂ, ಸಂಬಂಧಿಕರೂ ಬರುತ್ತಿಲ್ಲವಂತೆ!
        ವಿಪರ್ಯಾಸ ಅಲ್ವಾ.....!! ನಾವು ಒಂದಷ್ಟು ಜನಹೋದೆವು.... ಮಾತನಾಡಿಸಿದೆವು.. ಹಾಡು... ಆಟ.. ಒಂದಷ್ಟು ಮನರಂಜನೆ ಕೊಟ್ಟಿತು ಅವರಿಗೆ. ಅಷ್ಟೇ ಬೇಕಾದ್ದು ಆ ಮನಸ್ಸುಗಳಿಗೆ.
ಪ್ರೀತಿ....! ಆಪ್ತವಾಗಿ ಮಾತನಾಡುವಾಗ ಖುಷಿ ಪಟ್ಟರು. ನಮ್ಮಲ್ಲೇ ಅವರ ಸಂಬಂಧಿಕರನ್ನು ಕಂಡರು. ಮೈ ಮನ ತುಂಬಾ ಒಲವನ್ನು ಆವರಿಸಿಕೊಂಡು ಮತ್ತೆ ಬನ್ನಿ ಎನ್ನುವ ಹೃದಯದ ಮಾತುಗಳು ನಮ್ಮನ್ನೂ ಭಾವುಕರನ್ನಾಗಿಸಿತು.
    ಒಲವಿನ ಗೆಳೆಯ ಗೆಳತಿಯರೇ.. ಬದುಕು ಸಂಭ್ರಮವಾಗುವುದು ನಮ್ಮವರೆನ್ನುವವರು ಜೊತೆಯಲ್ಲಿದ್ದಾಗ...! ಪ್ರೀತಿ... ಒಲವು... ಸಂಬಂಧಗಳು... ಬಾಂಧವ್ಯ! ಇವುಗಳನ್ನು ಹೊರತುಪಡಿಸಿದ ಸುಖಗಳೆಲ್ಲವೂ ಕ್ಷಣಿಕ...!ದೇವರ ಸ್ವರೂಪವಾಗಿ ಇಂತಹ ಅನಾಥರನ್ನು ನೋಡಿಕೊಳ್ಳುವ ಅನೇಕ ಬಂಧುಗಳು, ಸೋದರ ಸೋದರಿಯರಿದ್ದಾರೆ.... ಅವರಿಗೆ ಪ್ರಣಾಮಗಳು.
       ಆಲೋಚಿಸಬೇಕಿದೆ ಅಲ್ವಾ? ಬದುಕನ್ನಿತ್ತವರನ್ನು ಮರೆತು ಬಿಡುವ ಅನಾಗರಿಕತೆಗೆ ಧಿಕ್ಕಾರವಿರಲಿ. ಓಹ್....ಪತ್ರ ದೀರ್ಘವಾಯಿತು ಅನ್ನಿಸ್ತದೆ... ತೋಚಿದನ್ನೆಲ್ಲಾ ಹೇಳಿಬಿಟ್ಟೆ.... ಏನನ್ನಿಸ್ತದೆ ನಿಮ್ಗೆ.....?
      ನಿಮ್ಮ ಮಾತುಗಳನ್ನೂ ಹಂಚಿಕೊಳ್ಳಿ... ಆರೋಗ್ಯ ಜೋಪಾನ. ಇನ್ನು ನನ್ನ ನಿಮ್ಮ ಭೇಟಿ..... ಮುಂದಿನ ಪತ್ರದೊಂದಿಗೆ...... ಅಲ್ಲಿಯವರೆಗೆ ಅಕ್ಕನ ನಮನಗಳು.
...................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article