-->
ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು 

                           ಛಲವಿರಲಿ
                    -------------------
        ಛಲವು ಯಾವುದೋ ಅಗೋಚರವಾದ ಶಕ್ತಿಯಾಗಿ ಮನಸ್ಸಿನೊಳಗೆ ಭಯ, ಒತ್ತಡ ಮತ್ತು ಕಾತರಗಳನ್ನು ಸೃಷ್ಟಿಸುತ್ತದೆ. ನಮ್ಮ ಛಲವು ಸಾಕಾರಗೊಂಡಾಗ ಬೃಹತ್ಸಾಧನೆ ಮಾಡಿದವರಂತೆ ಪುಳಕಿತರಾಗುತ್ತೇವೆ. ತನಗೆ ತನ್ನ ಗುರಿಯನ್ನು ಸಾಧಿಸಲು ಸಾಧ್ಯವಾಯಿತಲ್ಲಾ ಎಂದು ಆತ್ಮಾಭಿಮಾನ ಉಕ್ಕುತ್ತದೆ. ಹಾಗಾದರೆ ಛಲವೆಂದರೇನು....? ತಾನು ಉದ್ದೇಶಿಸಿದ ಕಾರ್ಯವನ್ನು ಎಷ್ಟೇ ಕಷ್ಟವಾದರೂ ಸಾಧಿಸದೆ ಬಿಡಲಾರೆನೆಂಬ ನಿರ್ಧಾರದೊಂದಿಗೆ ಕಾರ್ಯೋನ್ಮುಖರಾಗುವುದೇ ಛಲ. ಹಠ ಮತ್ತು ಛಲಗಳಿಗೆ ಅರ್ಥಾಂತರವಿದೆ. ಹಠವು ತನ್ನದೇ ಸರಿ ಅಥವಾ ತಾನು ಹೇಳುವುದು ಮತ್ತು ಮಾಡುವುದೇ ಸರಿಯಾದುದೆಂಬ ಮೊಂಡುತನ. ಮಹಾ ಭಾರತದ ಕೌರವನಿಗೆ ಇದ್ದುದು ಛಲ ಅನ್ನುವುದಕ್ಕಿಂತ ಹಠವೆಂದರೆ ತಪ್ಪಾಗದು, ರಾವಣ ಸೀತೆಯನ್ನು ಅಪಹರಿಸಿರುವುದು ಹಠವೇ ಹೊರತು ಛಲವಲ್ಲ. ಹಠವು ಒಳಿತಿಗೂ ಕೆಡುಕಿಗೂ ಕಾರಣವಾಗುತ್ತದೆ. ಛಲವು ಒಳಿತಿಗಾಗಿಯೇ ಕೈಗೊಳ್ಳುವ ಕ್ರಿಯಾಯಜ್ಞ. ಛಲ ಸಾಧನಾ ಪಥದಲ್ಲಿ ಪರಿಶ್ರಮ ಮತ್ತು ಸತ್ಯಗಳೇ ಶಪಥಗಳಾಗಿರುತ್ತವೆ. ಹಠವು ಪರಿಶ್ರಮ, ಸತ್ಯ ಅಥವಾ ಮಿಥ್ಯಗಳ ತಾಕಲಾಟ.  ಸತ್ಯಪಥವಿರುವ ಧನಾತ್ಮಕ ಫಲಿತಾಂಶದ ಹಠವಾದರೆ, ಹಠದ ಪ್ರತಿಫಲವು ಸಮಷ್ಠಿಗೆ ಹಿತಕಾರಕವಾದರೆ  ಅದು ಸ್ವೀಕಾರಾರ್ಹವಾದ ಹಠವಾಗುತ್ತದೆ. ನಾನು ಶಾಲೆಗೆ ಹೋಗುವುದಿಲ್ಲ, ನಾನು ಊಟ ಮಾಡೆನು, ನನಗೆ ಈಗಲೇ ಕಾರು ಸಿಗಬೇಕು ಇಂತಹವು ಹಠವೇ ವಿನಹ ಛಲವಲ್ಲ. ನಾನು ಈಜು ಕಲಿಯಲೇ ಬೇಕು, ಒಳ್ಳೆಯ ಗೆಳೆಯರನ್ನು ಪಡೆಯಲೇ ಬೇಕು, ನಾನು ಉತ್ತಮವಾದ ವೈದ್ಯನಾಗಲೇ ಬೇಕು... ಇಂತಹ ಗುಣಭರಿತ ಗುರಿಗಳು ಛಲಕ್ಕೆ ಅನುರೂಪವಾಗಿವೆ.
            ಮಾನವನಲ್ಲಿ ಛಲವಿದ್ದರೆ ಬಲಾಢ್ಯನಾಗುತ್ತಾನೆ. ಸಾಧನೆಗೆ ಛಲವೇ ಸೋಪಾನ. ಛಲವು ನಮ್ಮ ಕಾರ್ಯಸಾಧನೆಗೆ ಮಾತ್ರವೇ ಸೀಮಿತವಲ್ಲ. ಮೌಲ್ಯಯುತವಾದ ಜೀವನ ಸಾಧನೆಗೂ ಛಲವಿರಬೇಕು. ನಾನು ಇತರರ ಸಂಪತ್ತು ಕೊಳ್ಳೆಹೊಡೆಯುವುದಿಲ್ಲ, ಯಾವುದೇ ಲಂಚಕ್ಕೆ ತಲೆ ಬಾಗುವುದಿಲ್ಲ, ಯಾರಿಗೂ ದ್ರೋಹ ಬಗೆಯುವುದಿಲ್ಲ, ಸತ್ಯಸಂಧತೆ ಮತ್ತು ಪ್ರಾಮಾಣಿಕತೆಯೇ ನನಗೆ ದೇವರು, ಯಾರ ಮನಸ್ಸಿಗೂ ನೋವು ಮಾಡುವುದಿಲ್ಲ, ಗುರು ಹಿರಿಯರನ್ನು ನಾನು ಗೌರವಿಸುತ್ತೇನೆ, ಕಳ್ಳಕಾಕರನ್ನು ಎಂದಿಗೂ ನಾನು ಬೆಂಬಲಿಸುವುದಿಲ್ಲ......... ಇಂತಹ ಛಲವಿರುವಾತನ ಜೀವನ ಮೌಲ್ಯಯುತವಾಗಿರುತ್ತದೆ. ಇಂತಹವರನ್ನು ದೇವತಾ ಮನುಷ್ಯರೆಂದು ಸಮಾಜ ಆದರಿಸುತ್ತದೆ. ಒಳ್ಳೆಯವರನ್ನೇ ದೇವತಾ ಮನುಷ್ಯರೆಂದು ಹೇಳುತ್ತೇವೆ. ಇವರು ಸಜ್ಜನರೂ ಹೌದು. ನಾವು ಬೇರೆ ಬೇರೆ ಪದವಿ ಪ್ರಶಸ್ತಿಗಳನ್ನು ಪಡೆಯಬಹುದು. ಆದರೆ ಒಳ್ಳೆಯವನೆಂಬ ಹೆಸರುಗಳಿಸುವ ಛಲ ಅತ್ಯಂತ ಶ್ರೇಷ್ಠವಾದುದು. 
ಒಳ್ಳೆಯ ವಿದ್ಯಾರ್ಥಿ, ಒಳ್ಳೆಯ ಅಧ್ಯಾಪಕ, ಒಳ್ಳೆಯ ವೈದ್ಯ, ಒಳ್ಳೆಯ ದರ್ಜಿ, ಒಳ್ಳೆಯ ಮನುಷ್ಯ ಮುಂತಾಗಿ ಕರೆಸಲ್ಪಡುವುದು ಕಷ್ಟಕರವಲ್ಲ. ತಪ್ಪುಗಳನ್ನು ಮಾಡುವುದಿಲ್ಲವೆಂಬ ಛಲವುಳ್ಳವರು ಒಳ್ಳೆಯವರೇ ಆಗುತ್ತಾರೆ. ಹಠವೀರರು ಒಳ್ಳೆಯವರೆನಿಸಿ ಕೊಂಡಿರುವುದು ವಿರಳ. ಛಲವಂತರೆಲ್ಲರೂ ಸಾಧನೆಯ ಶಿಖರಗಳನ್ನು ಏರಿದ್ದಾರೆ, ನಮ್ಮನ್ನು ಉದ್ಧರಿಸುವುದು ಜಾತಿ, ಮತ, ಪಕ್ಷ, ವರ್ಗ, ವರ್ಣಗಳಲ್ಲ. ನಮ್ಮ ಛಲವೇ ನಮ್ಮನ್ನು ಉದ್ಧರಿಸುತ್ತದೆ. 
            ಮನುಷ್ಯನ ಉದ್ಧಾರ ಆತನ ಮನದೊಳಗೆ ಹುಟ್ಟುವ ಛಲವನ್ನಾಶ್ರಯಿಸಿದೆಯೇ ವಿನಹ ಯಾವುದೇ ಬಾಹ್ಯ ಬಲದಿಂದಲ್ಲ. ಬಾಹ್ಯ ಬಲವು ಕಟ್ಟಿಕೊಟ್ಟ ಬುತ್ತಿಯಂತೆ ಸಣ್ಣ ಪ್ರಯೋಜನಕ್ಕಷ್ಟೇ ಸೀಮಿತ. ಹಾಗೆಂದು ನಾವು ಪ್ರವರ್ಧಮಾನರಾಗಲು ಬಾಹ್ಯ ಬೆಂಬಲವು ಬೇಡವೇ ಬೇಡ ಎಂದಲ್ಲ. ಬಾಹ್ಯ ಬೆಂಬಲಕ್ಕಿಂತ ಕಠಿಣ ನಿರ್ಧಾರದ ಆಂತರಿಕ ಬೆಂಬಲ ಅತೀ ಅಗತ್ಯ. ಹೊಳೆಯ ಬದಿಗೆ ಎತ್ತನ್ನು ಒಯ್ಯಬಹುದು. ಆದರೆ ಅದಕ್ಕೆ ಒತ್ತಾಯದಿಂದ ನೀರು ಕುಡಿಸಲಾಗದು. ಬಾಯಾರಿಕೆಯಾದರೆ ಸಹಜವಾಗಿ ಎತ್ತು ನೀರು ಕುಡಿಯುತ್ತದೆ. ಬೇರೆಯವರು ನಮ್ಮ ಬಗ್ಗೆ ಯಾವ ಪ್ರಯತ್ನ ಮಾಡಿದರೂ ನಮ್ಮಲ್ಲಿ ನಮ್ಮ ಉದ್ಧಾರದ ತೃಷೆಯಿಲ್ಲವೆಂದಾದರೆ ಬಾಹ್ಯವಾಗಿ ದೊರೆತ ಬೆಂಬಲ ನಮ್ಮನ್ನುದ್ಧರಿಸದು....!!
..................................ರಮೇಶ  ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************


Ads on article

Advertise in articles 1

advertising articles 2

Advertise under the article