-->
ಪರೀಕ್ಷಾ ಯಶಸ್ಸಿನ ಸೂತ್ರಗಳು

ಪರೀಕ್ಷಾ ಯಶಸ್ಸಿನ ಸೂತ್ರಗಳು



          ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೇ....
               ಪರೀಕ್ಷಾ ಯಶಸ್ಸಿನ ಸೂತ್ರಗಳು 
        ಪರೀಕ್ಷೆಯೆಂದರೆ ಪ್ರತಿಯೊಂದು ವಿಷಯದಲ್ಲಿ ವಿದ್ಯಾರ್ಥಿಯ ಕಲಿಕಾ ಗುಣಮಟ್ಟವನ್ನು ನಿರ್ಣಯಿಸುವ ಸಲುವಾಗಿ ನಡೆಯುವ ಮೌಲ್ಯಮಾಪನ. ಪರೀಕ್ಷೆಯೆಂಬುದು ಪ್ರತಿವರ್ಷ ಬರುವ ಸ್ನೇಹಿತ ಇದ್ದಹಾಗೆ ಈ ಸ್ನೇಹಿತನ ಜೊತೆ ನಗುನಗುತ್ತ ವ್ಯವಹಾರ ಮಾಡಿದರೆ ನಾವು ಉತ್ತೀರ್ಣರಾಗಿ ಮುಂದಿನ ತರಗತಿಗೆ ಹೋಗುತ್ತೇವೆ. ಭವಿಷ್ಯವನ್ನು ನಿರ್ಧರಿಸುವ ಪರೀಕ್ಷೆಗಳು ಹತ್ತಿರವಾದಂತೆ ಬಹುತೇಕ ಎಲ್ಲಾ ವಿದ್ಯಾರ್ಥಿಗಳಲ್ಲಿ ಒಂದು ಬಗೆಯ ಆತಂಕ ಕಳವಳ ಮನೆಮಾಡಿ ಎಷ್ಟೋ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿ, ಅನಗತ್ಯ ಹೆದರಿಕೆಯಿಂದ ಭಯಭೀತರಾಗುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಮತ್ತು ಪ್ರತಿಭಾವಂತ ಮಕ್ಕಳು ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ಕಾಡುತ್ತದೆ. ಒಳ್ಳೆಯ ಅಂಕಗಳನ್ನು ಪಡೆದಾಗ ಸಿಗುವ ಬಹುಮಾನ ಹೊಗಳಿಕೆ ಕೀರ್ತಿ ಒಂದೆಡೆಯಾದರೆ, ಕಡಿಮೆ ಅಂಕಗಳನ್ನು ಪಡೆದಾಗ ಅಥವಾ ಫೇಲಾದಾಗ ಪೋಷಕರು-ಶಿಕ್ಷಕರು, ಸ್ನೇಹಿತರಿಂದ ಆಗುವ ಅವಮಾನ ಶಿಕ್ಷೆ ಎಲ್ಲಾ ಅಂಶಗಳು ವಿದ್ಯಾರ್ಥಿಗಳ ಮಾನಸಿಕ ಸಮತೋಲನವನ್ನು ಪರೀಕ್ಷೆಯೆಂಬ ಭಯ ಕಾಡಬಹುದು. ವಿದ್ಯಾರ್ಥಿಗಳ ಮೇಲಾಗುವ ಒತ್ತಡಗಳಿಂದಾಗಿ ಕೋಮಲ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಉದಾಹರಣೆಗೆ ರೇಸ್ ನಲ್ಲಿ ನನ್ನ ಕುದುರೆಯೇ ಮೊದಲ ಸ್ಥಾನ ಪಡೆಯಲಿ ಎಂದು ಹಾತೊರೆಯುವ ಮಾಲೀಕನಿಗೆ ಕುದುರೆ ಮನಸ್ಥಿತಿ ಅರ್ಥವಾಗುವುದಿಲ್ಲ, ಅದೇ ರೀತಿ ತಮ್ಮ ವಿದ್ಯಾರ್ಥಿಗಳು ಉಳಿದ ಶಾಲೆಯ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಅಂಕ ಪಡೆಯಲು ಒತ್ತಾಯ ಮಾಡುತ್ತಾರೆ. ಪಾಲಕರು ಪಕ್ಕದ ಮನೆ ಹುಡುಗ/ ಹುಡುಗಿಗಿಂತ ಹೆಚ್ಚು ಅಂಕ ಪಡೆಯುವಂತೆ ಒತ್ತಡ ಹೇರುತ್ತಾರೆ. ಹೀಗೆ ಎರಡು ಕಡೆಗಳಿಂದ ಒತ್ತಡಕ್ಕೆ ಒಳಗಾಗುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಪರೀಕ್ಷೆಯೆಂದರೆ ಯುದ್ಧ ಗೆದ್ದರೆ ಬಹುಮಾನ ಸೋತರೆ ಶಿಕ್ಷೆ ಎಂಬ ಪೂರ್ವ ನಿರ್ಧಾರಕ್ಕೆ ಬಂದು ಬಿಡುತ್ತಾರೆ. 
          ಇನ್ನು ಕೆಲವು ವಿದ್ಯಾರ್ಥಿಗಳು ಮೊದಲಿನಿಂದ ಕ್ರಮಬದ್ಧವಾಗಿ ಅಧ್ಯಯನ ಮಾಡದೆ ಕೇವಲ ಒಂದು ತಿಂಗಳು ಅಥವಾ ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಹೆಚ್ಚು ಹೆಚ್ಚು ಓದುತ್ತಾ ಹೋಗುವುದು ಊಟ, ನಿದ್ರೆ, ಮರೆತು ಕೇವಲ ಓದಿನಲ್ಲಿ ತೊಡಗುವುದು ವಿದ್ಯಾರ್ಥಿಗಳಲ್ಲಿ ಕೀಳರಿಮೆ ಉಂಟಾಗಿ ಅವರು ಚಿಕ್ಕಚಿಕ್ಕ ವಿಚಾರಗಳಿಗೆ ಭಾವೋದ್ವೇಗಕ್ಕೆ ಒಳಗಾಗುವ ಸಂದರ್ಭಗಳು ಹೆಚ್ಚಾಗಿರುತ್ತವೆ. ಇನ್ನು ಕೆಲವು ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಒಳಗಾಗುವ ಸಂಭವಗಳು ಇರುತ್ತವೆ.
        ಪರೀಕ್ಷಾ ಭಯದಿಂದ ಉಂಟಾಗುವ ಪರಿಣಾಮಗಳೆಂದರೆ : ಪರೀಕ್ಷೆ ಭಯದಿಂದಾಗಿ ನಿಶ್ಚಿಂತೆಯಿಂದ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ, ಏಕಾಗ್ರತೆ ಇಲ್ಲದಂತಾಗುತ್ತದೆ, ನೆನಪಿನಲ್ಲಿ ಉಳಿಯುವುದಿಲ್ಲ, ತಲೆನೋವು, ಕಣ್ಣುರಿ, ತಲೆಬಾರ ಮುಂತಾದ ಅನಾರೋಗ್ಯದ ಮುನ್ಸೂಚನೆಗಳು ಕಂಡುಬರುತ್ತವೆ. ವಿದ್ಯಾರ್ಥಿಗಳಲ್ಲಿ ಹಸಿವು ಮಾಯವಾಗಿ ತಮ್ಮ ಮೊದಲಿನ ಲವಲವಿಕೆ ಆಸಕ್ತಿ ಕಳೆದುಕೊಂಡು ಮಾನಸಿಕ ಖಿನ್ನತೆಗೆ ಒಳಗಾಗುವ ಸಂದರ್ಭಗಳು ಹೆಚ್ಚಾಗಿರುತ್ತವೆ. ಪರೀಕ್ಷೆ ಭಯದಿಂದಾಗಿ ವಿದ್ಯಾರ್ಥಿಗಳು ಮನೆಯ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ ಬರೆಯುವುದನ್ನು ಬಿಟ್ಟು ಏಕಾಂಗಿಯಾಗಿರಲು ಇಷ್ಟಪಡುತ್ತಾರೆ. ಎದೆ ಬಡಿತ ಮತ್ತು ಉಸಿರಾಟದ ವೇಗ ಹೆಚ್ಚಾಗಿ ವಿದ್ಯಾರ್ಥಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ. ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕೆಂಬ ಭಾವನೆ ಉಂಟಾಗುತ್ತದೆ. ವಿಷಯವೆಲ್ಲ ಮರೆತು ಹೋದಂತೆ ಭಾಸವಾಗುತ್ತದೆ.
        ಪರೀಕ್ಷಾ ಭಯ ನಿವಾರಣೆ ಯಾಗಬೇಕಾದರೆ ಉತ್ತಮ ಓದುವ ಪದ್ಧತಿ , ಆತ್ಮವಿಶ್ವಾಸ , ಉತ್ಸಾಹ , ಕ್ರಮಬದ್ಧ ದಿನಚರಿ ಬಳಸುವುದರಿಂದ ಪರೀಕ್ಷೆಯೆಂಬ ಭೀತಿಯಿಂದ ಹೊರಬರಬಹುದು. "ಯುದ್ಧ ಕಾಲೇ ಶಸ್ತ್ರಾಭ್ಯಾಸ" ಎಂಬಂತೆ ಕೇವಲ ಪರೀಕ್ಷೆ ಸಮಯದಲ್ಲಿ ಕಠಿಣ ಅಭ್ಯಾಸ ಮಾಡದೆ ವರ್ಷಪೂರ್ತಿ ಹಿತಮಿತವಾಗಿ ದಿನಚರಿಗೆ ಅನುಗುಣವಾಗಿ ಅಧ್ಯಯನ ಮಾಡಿದ್ರೆ ವರ್ಷದ ಕೊನೆಯಲ್ಲಿ ಬರುವ ಪರೀಕ್ಷೆಯನ್ನು ಎದುರಿಸಲು ಕಟ್ಟುನಿಟ್ಟಾದ ವೇಳಾಪಟ್ಟಿಯನ್ನು ಅನುಸರಿಸಬೇಕು. ನಿಗದಿತ ಸಮಯದಲ್ಲಿ ಊಟ, ನಿದ್ರೆ, ವಿಹಾರ, ಮನರಂಜನೆ ಇತ್ಯಾದಿ ಅನುಸರಿಸಬೇಕು. ಯಾವುದೇ ಪರಿಸ್ಥಿತಿಯಲ್ಲಿ ನಿದ್ದೆಗೆಟ್ಟು ಓದಬಾರದು. ವಿದ್ಯಾರ್ಥಿಗಳು ಉತ್ತಮ ದೈಹಿಕ ಆರೋಗ್ಯ ಹೊಂದಿದಾಗ ಮಾತ್ರ ನಮ್ಮ ಮನಸ್ಸು-ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು. ಅಂತಹ ಸಂದರ್ಭದಲ್ಲಿ ನಾವು ಸುಲಭವಾಗಿ ಎಲ್ಲಾ ವಿಷಯಗಳನ್ನು ಅರ್ಥ ಮಾಡಿಕೊಂಡು ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತದೆ. ಪಾಲಕರು ಮಕ್ಕಳನ್ನು ಹೆಚ್ಚೆಚ್ಚು ಓದುವಂತೆ ಒತ್ತಡ ಹೇರಬಾರದು. ಈ ರೀತಿ ಒತ್ತಡ ಹೇರಿದರೆ ಸದಾ ಪುಸ್ತಕ ಹಿಡಿದುಕೊಂಡು ಕುಳಿತುಕೊಳ್ಳುತ್ತಾರೆ. ಅದು ನಮಗೆ ಓದುವಂತೆ ಕಾಣುತ್ತದೆ, ಆದರೆ ಅವರ ಮೆದುಳಿಗೆ ಸ್ವಲ್ಪವೂ ಹೋಗುವುದಿಲ್ಲ ಮಕ್ಕಳ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಸ್ಪಂದಿಸಿ ಓದಲು ಪ್ರೋತ್ಸಾಹ ನೀಡಬೇಕು. ಈ ಸಮಯದಲ್ಲಿ ಪಾಲಕರಾಗಲಿ ಶಿಕ್ಷಕರಾಗಲಿ ಮಕ್ಕಳನ್ನು ನಿಂದಿಸುವುದು, ಶಿಕ್ಷೆ ನೀಡುವುದು ಮಾಡಬಾರದು. ಆದರೆ ಅಗತ್ಯವಾದ ಸಲಹೆಗಳನ್ನು ನೀಡುವುದನ್ನು ಮರೆಯಬಾರದು. ಪ್ರತಿದಿನ ಸಾಯಂಕಾಲ ಚಿಂತೆ ಮರೆತು ಅರ್ಧಗಂಟೆ ಹೊರಗಡೆ ಸುತ್ತಾಡಿ ಬರುವುದು ರೂಡಿಸಿಕೊಳ್ಳಬೇಕು. ಇದರಿಂದ ಸತತ ಓದಿನಲ್ಲಿ ತೊಡಗಿರುವ ನಿಮ್ಮ ಮನಸ್ಸುಗಳಿಗೆ ವಿಶ್ರಾಂತಿ ದೊರೆತು ಅಧ್ಯಯನಮಾಡಲು ಚೈತನ್ಯ ದೊರೆಯುತ್ತದೆ.
       ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಣೆ ಹೇಗೆ.....?
          ವಿದ್ಯಾರ್ಥಿಗಳು ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ, ನಿಮ್ಮ ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಿಕೊಂಡು ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಮನೆಯಲ್ಲಿ ಗಡಿಯಾರ ಇಟ್ಟುಕೊಂಡು ಹಿಂದಿನ ಪ್ರಶ್ನೆ ಪತ್ರಿಕೆಗಳಿಗೆ ನಿಗದಿತ ಸಮಯದಲ್ಲಿ ಉತ್ತರಿಸಿ, ಇದರಿಂದ ಹೆಚ್ಚು ಅಂಕ ಗಳಿಸಲು ಅನುಕೂಲವಾಗುತ್ತದೆ. ಓದುವಾಗ ಅರ್ಥವಾಗದ ಅಥವಾ ಕಷ್ಟಕರವಾದ ಪ್ರಶ್ನೆಗಳಿದ್ದರೆ ವಿಷಯ ಶಿಕ್ಷಕರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ, ಇದರಿಂದ ಪರೀಕ್ಷೆಯಲ್ಲಿ ಉಂಟಾಗುವ ಗೊಂದಲಗಳನ್ನು ನಿವಾರಿಸಬಹುದು. 
         ಪರೀಕ್ಷಾ ಯಶಸ್ಸಿನ ಸೂತ್ರಗಳು : 
 ◾ಅಂದವಾದ ತಪ್ಪಿಲ್ಲದ ಬರವಣಿಗೆ ಇರಬೇಕು. 
 ◾ಉತ್ತರ ಎಷ್ಟು ಸೂಕ್ತವೋ ಅಷ್ಟೇ ಬರೆಯಬೇಕು.  
 ◾ ಪತ್ರಿಕೆಗಳನ್ನು ಸಿದ್ಧಪಡಿಸುವಾಗ ಮನೋವೈಜ್ಞಾನಿಕ ಕ್ರಮದಲ್ಲಿ ಸಿದ್ಧಪಡಿಸಿರುತ್ತಾರೆ. ತೀರಾ ಸುಲಭವಾದ ಮತ್ತು ಒಂದು ಅಂಕದ ಪ್ರಶ್ನೆಗಳಿಗೆ ಮೊದಲು ಉತ್ತರಿಸಬೇಕು. 
◾ಸರಳವಾದ ಮತ್ತು ನೇರವಾದ ಭಾಷೆಯಲ್ಲಿ ಉತ್ತರಿಸಬೇಕು. 
 ◾ಸುತ್ತಿಬಳಸಿ ಹೇಳುವ ಗೊಂದಲದ ವಾಕ್ಯಗಳನ್ನು ಬಳಸಬಾರದು. 
 ◾ನಿಗದಿತ ಸಮಯಕ್ಕಿಂತ ಬೇಗ ಉತ್ತರ ಬರೆದು ಮುಗಿಸಿ. 
 ◾ನಂತರ ಇಡೀ ಉತ್ತರ ಪತ್ರಿಕೆಯನ್ನು ಒಂದು ಸಾರಿ ಪರಿಶೀಲಿಸಿ. 
 ◾ ಪ್ರಶ್ನೆ ಪತ್ರಿಕೆ ಓದಿ ಅರ್ಥ ಮಾಡಿಕೊಳ್ಳಿ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ
◾ ಪರೀಕ್ಷೆಯಲ್ಲಿ ಬೇರೆಯವರನ್ನು ಅವಲಂಬಿಸಬೇಡಿ
◾ಆದರೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. 
◾ಪರೀಕ್ಷೆಗೆ ಹೋಗುವ ಮುನ್ನ ಹಿರಿಯರ ಆಶೀರ್ವಾದ ತೆಗೆದುಕೊಳ್ಳಿ ಅವರ ಶುಭಹಾರೈಕೆ ನಿಮ್ಮಲ್ಲಿ ಧೈರ್ಯ ತುಂಬಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. 
 ◾ಪರೀಕ್ಷೆಗೆ ಹೋಗುವಾಗ ನಿಮ್ಮ ಮನಸ್ಸು ಶಾಂತವಾಗಿರಲಿ
◾ ದ್ವೇಷಾಸೂಯೆಯಂತಹ ವಿಚಾರಗಳಿಂದ ಮನಸ್ಸು ಮುಕ್ತವಾಗಿರಲಿ. 
        ಹೀಗೆ ಈ ಮೇಲಿನ ಎಲ್ಲಾ ಸೂತ್ರಗಳನ್ನು ಬಳಸುವುದರಿಂದ ಪರೀಕ್ಷೆಯೆಂಬ ಭೀತಿಯನ್ನು ಹೋಗಲಾಡಿಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವ ಮನಸ್ಥಿತಿ ನಿಮ್ಮದಾಗಬಹುದು. ಹಾಗಾಗಿ ವಿದ್ಯಾರ್ಥಿಗಳೇ, ಆತ್ಮವಿಶ್ವಾಸದಿಂದ ಅಭ್ಯಾಸ ಮಾಡಿ ಉತ್ತಮ ಅಂಕಗಳನ್ನು ನಿಮ್ಮದಾಗುವುದು. 
ಧನ್ಯವಾದಗಳು
.................................ಮಲ್ಲೇಶಯ್ಯ ಹೆಚ್.ಎಂ. 
ಶಿಕ್ಷಕರು 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ರಾಮಕುಂಜ , ಪುತ್ತೂರು , ದ.ಕ. ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article