-->
ಹಕ್ಕಿ ಕಥೆ - 37

ಹಕ್ಕಿ ಕಥೆ - 37

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ


                         ಹಕ್ಕಿ ಕಥೆ - 37
                     -------------------
       ಮಕ್ಕಳೇ ನಮಸ್ತೇ, ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಒಂದು ದಿನ ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳಿಗೆಲ್ಲಾ ಊಟ ಬಡಿಸಿ ಆದ ನಂತರ ನಾನೂ ಬಂದು ಊಟಮಾಡಲು ಕುಳಿತೆ. ನನ್ನ ಊಟ ಅರ್ಧ ಆಗಿತ್ತು ಆಗಲೇ ಮಕ್ಕಳು ಓಡೋಡಿ ಬಂದರು. ಏನಾಯಿತು ಎಂದು ಗಾಬರಿಯಿಂದ ಕೇಳಿದರೆ “ಅಲ್ಲಿ ನಾವು ಕೈ ತೊಳೆಯುವ ಜಾಗದ ಹತ್ತಿರ ಆ ಕಡೆ ಮರಗಳು ಇವೆಯಲ್ಲ ಆ ಕೊನೇಯ ಅರಳೀ ಮರದಲ್ಲಿ ದೊಡ್ಡದೊಂದು ಗಿಡುಗ ಕೂತಿದೆ. ಮಾಮೂಲಿ ಗಿಡುಗ ಅಲ್ಲ ಸಾರ್. ಅದಕ್ಕಿಂತಲೂ ದೊಡ್ಡದಾಗಿದೆ” ಎಂದರು. “ತಲೆ ಎದೆ ಏನಾದ್ರೂ ಬಿಳಿ ಬಣ್ಣ ಉಂಟಾ” ಎಂದು ಸಂಶಯದಿಂದಲೇ ಕೇಳಿದೆ. “ಇಲ್ಲಾ ಸರ್, ಇದು ಡಾರ್ಕ್ ಕಂದು ಬಣ್ಣ ಇದೆ. ತಲೆ ಮಾತ್ರ ಸ್ವಲ್ಪ ಬೂದು ಬಣ್ಣ ಇದೆ. ತಲೆ ನೋಡ್ಲಿಕ್ಕೆ ಪಾರಿವಾಳದ ತಲೆಯ ಹಾಗೆ ಇದೆ ಸರ್” ಎಂದು ಮಕ್ಕಳು ಹಕ್ಕಿಯನ್ನು ವರ್ಣಿಸಿದರು. 
              ನನ್ನ ಮೇಜಿನ ಮೇಲೆ ಇದ್ದ ಬೈನಾಕುಲರ್ ಅವರಿಗೆ ಕೊಟ್ಟು ಹಕ್ಕಿಯನ್ನು ನೋಡ್ತಾ ಇರಿ ನಾನೀಗ ಊಟ ಮುಗುಸಿ ಬರ್ತೇನೆ ಎಂದು ಹೇಳಿ ಕಳುಹಿಸಿದೆ. ಬೇಗನೇ ಊಟ ಮುಗಿಸಿ ಮಕ್ಕಳು ಇದ್ದಲ್ಲಿಗೆ ಹೋದೆ. ಸಾರ್ ಅದೋ ಆ ಮರದ ಮೇಲೆ ಇದೆ ನೋಡಿ ಸಾರ್ ಎಂದು ಬೈನಾಕುಲಾರ್ ಹಿಡಿದ ರಾಕೇಶ ಹೇಳಿದ. ಇಷ್ಟೆಲ್ಲಾ ಗದ್ದಲದ ನಡುವೆಯೂ ಒಂಚೂರೂ ಇದರ ಪರಿವೆಯೇ ಇಲ್ಲ ಎಂಬಂತೆ ತೋಟದ ಮೂಲೆಯ ಮರದಮೇಲೆ ಕುಳಿತಿದ್ದ ಆ ಗಿಡುಗನನ್ನು ನೋಡಿದೆ. ಕ್ಯಾಮರಾ ಇಲ್ಲದ ಕಾರಣ ಅವತ್ತು ಅದರ ಫೋಟೋ ತೆಗೆಯಲು ಆಗಲಿಲ್ಲ. ಎಲ್ಲರೂ ಹಕ್ಕಿಯನ್ನು ಕಣ್ತುಂಬಾ ನೋಡಿ ಖುಷಿಪಟ್ಟೆವು. ಮಧ್ಯಾಹ್ನದ ತರಗತಿಯ ಬೆಲ್ ಹೊಡೆದ ಕಾರಣ ಮತ್ತೆ ನಾವೆಲ್ಲ ತರಗತಿಗೆ ಹೋದೆವು.
            ಕೆಲವು ದಿನಗಳ ನಂತರ ನಾನು ಬೆಳಗ್ಗೆ ಹಾಲು ತರಲು ಡೈರಿಗೆ ಹೋಗಿ ಹಿಂದೆ ಬರುತ್ತಿದ್ದೆ. ನಮ್ಮ ಮನೆಯ ಹತ್ತಿರದ ದೊಡ್ಡ ಮರದ ಮೇಲೆ ದೊಡ್ಡದೊಂದು ಹಕ್ಕಿ ಹಾರಿ ಬಂದು ಕುಳಿತದ್ದು ಕಂಡಿತು. ಹಾರಾಡುವ ಶೈಲಿ ನೋಡಿದಾಗ ಯಾವುದೋ ಗಿಡುಗದ ಜಾತಿಯ ಹಕ್ಕಿ ಇರಬೇಕು ಎಂಬ ಅನುಮಾನ ಉಂಟಾಯ್ತು. ಬೇಗನೇ ಮನೆಗೆ ಹೋಗಿ ಕ್ಯಾಮರಾ ಹಿಡಿದುಕೊಂಡು ಬಂದೆ. ಹಕ್ಕಿ ಇನ್ನೂ ಅಲ್ಲೇ ಕುಳಿತುಕೊಂಡಿತ್ತು. ಫೋಟೋ ತೆಗೆಯಲು ಪ್ರಯತ್ನ ಪಡುವಾಗಲೇ ಹಾರಿ ಇನ್ನೊಂದು ಮರದ ಮೇಲೆ ಕುಳಿತುಕೊಂಡಿತು. ಆ ಜಾಗದಲ್ಲಿ ಚೆನ್ನಾಗಿ ಬೆಳಕು ಇತ್ತು. ಹಲವಾರು ದಿನಗಳಿಂದ ಕಾಯುತ್ತಿದ್ದ ಜೇನುಗಿಡುಗ ಹಕ್ಕಿಯ ಫೋಟೋ ಸಿಕ್ಕಿತು. ಮರುದಿನ ಅದನ್ನು ಮಕ್ಕಳಿಗೆ ತೋರಿಸಿದಾಗ, ಇದಕ್ಕೆ ಜೇನುಗಿಡುಗ ಎಂಬ ಹೆಸರು ಯಾಕೆ ಬಂತು ಎಂದು ಒಬ್ಬಳು ಹುಡುಗಿ ಕೇಳಿದಳು. ನನಗೂ ಗೊತ್ತಿರಲಿಲ್ಲ. ಸಲೀಂ ಅಲಿಯವರ ಹಕ್ಕಿ ಪುಸ್ತಕ ತೆಗೆದು ಹುಡುಕಿದೆವು. ಆಗಲೇ ತಿಳಿದದ್ದು ಜೇನು ಮತ್ತು ಜೇನುಗೂಡಿನಲ್ಲಿರುವ ಜೇನಿನ ಮೊಟ್ಟೆಗಳು ಈ ಹಕ್ಕಿಯ ಮುಖ್ಯ ಆಹಾರ. ಇದರ ಜೊತೆಗೆ ಕೀಟಗಳು, ಹಲ್ಲಿಗಳು, ಕಪ್ಪೆಗಳು ಮತ್ತು ಚಿಕ್ಕ ಹಕ್ಕಿಯ ಮರಿಗಳನ್ನೂ ಈ ಗಿಡುಗ ತಿನ್ನುತ್ತದೆಯಂತೆ. ಪೆಬ್ರವರಿ ತಿಂಗಳಿನಿಂದ ಜೂನ್ ತಿಂಗಳಿನ ನಡುವೆ ಮರಗಳ ಮೇಲೆ ಅಟ್ಟಳಿಗೆಯಂಥ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುವ ಈ ಹಕ್ಕಿ ನಮ್ಮ ಶಾಲೆಯ ಹಿಂದಿನ ಪುಟ್ಟ ಕಾಡಿನಲ್ಲಿ ಆಗಾಗ ಕಾಣಲು ಸಿಗುತ್ತದೆ. ನಿಮ್ಮ ಆಸುಪಾಸಿನಲ್ಲಿ ಪುಟ್ಟ ಕಾಡು ಇದ್ದರೆ ನೀವೂ ಈ ಹಕ್ಕಿಯನ್ನು ನೋಡಬಹುದು.. ಹುಡುಕ್ತೀರಲ್ಲ..
ಹೆಸರು: ಜೇನುಗಿಡುಗ
ಇಂಗ್ಲೀಷ್ ಹೆಸರು: Oriental Honey-Buzzard
ವೈಜ್ಞಾನಿಕ ಹೆಸರು: Pernis ptilorhyncus
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article