ಬದಲಾಗೋಣವೇ ಪ್ಲೀಸ್.....! ಸಂಚಿಕೆ - 31
Wednesday, February 2, 2022
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 31
ಕಡಿಯುವುದಾದರೆ ಕಡಿಯುವುದನ್ನೇ
ಕಡಿಯಿರಿ.....!
----------------------------------------
ಮನೆಯಲ್ಲಿ ಸಂಭ್ರಮದ ದಿನ. ಬೆಳಗ್ಗಿನಿಂದ ಪ್ರಾರಂಭವಾದ ಸಂಭ್ರಮಕ್ಕೆ ನೆಂಟರು , ಮಿತ್ರರು, ಅತಿಥಿಗಳು ಸಾಕ್ಷಿಗಳಾಗಿ ಬಂದು ತಮ್ಮ ತಮ್ಮ ಮನೆ ಸೇರಿದ್ದಾರೆ. ಸಂಭ್ರಮಾಚರಣೆ ಮುಗಿದ ನಂತರ ಉಳಿದವರೆಲ್ಲರು ಮನೆ ಎದುರುಗಡೆ ಇರುವ ವಿಶಾಲ ಮಾವಿನ ಮರದಡಿಯಲ್ಲಿ ಕುಳಿತು ಪರಸ್ಪರ ಚರ್ಚಿಸಲಾರಂಭಿಸಿದರು. ಅದರಲೊಬ್ಬ ತಾನು ಕುಳಿತ ಕಟ್ಟೆಯಲ್ಲಿರುವ ಮಾವಿನ ಮರವನ್ನೇ ನೋಡುತ್ತಾ..... "ಅಯ್ಯೋ ರಾಯರೇ... ಮನೆಯ ಎದುರಲ್ಲೇ ಇರುವ ಇಷ್ಟು ಹಳೆಯ ಮಾವಿನ ಮರವನ್ನು ಇನ್ನೂ ಕಡಿಯದೆ ಉಳಿಸಿದ್ಯಾಕೆ. ಇದು ಅಪಶಕುನ. ಸಾವಿನ ಸೂಚನೆ. ಮುಂಜಾನೆ ಎದ್ದು ನೋಡಿದರೆ ಅಶುಭ. ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ" ಎಂದನು. ಆಗ ಅಲ್ಲಿದ್ದವರು "ಹೌದು..... ಹೌದು ರಾಯರೇ, ನಮ್ಮ ಮನೆಯಲ್ಲಿ ಎದುರಿದ್ದ ಮಾವಿನ ಮರವನ್ನು ಮೊನ್ನೆ ಕಡಿಸಿದ್ದಾರೆ. ಅದು ಅಪಶಕುನವಂತೆ" ಎಂದು ದನಿಗೂಡಿಸಿದರು. ಅಲ್ಲಿದ್ದ ಎಲ್ಲರೂ ಮರವನ್ನು ಉಳಿಸುವ ಬದಲು ಕಡಿಯಲು ಹಟ ತೊಟ್ಟಂತಹ ಮಹಾನುಭಾವರಂತೆ ಪ್ರತಿಕ್ರಿಯಿಸತೊಡಗಿದರು.
ಇದನ್ನೆಲ್ಲ ಕೇಳಿದ ಮಾವಿನ ಮರ ತನ್ನೊಳಗೆ ಮಾತಾಡಿತು "ಅಯ್ಯೋ ಕೃತಘ್ನರೇ , ನನ್ನ ನೆರಳಲ್ಲಿ ಕುಳಿತು ನನ್ನನೇ ದೂರುತ್ತಿರುವಿರಿ. ಕಳೆದ 50 ವರುಷಗಳಿಂದ ಈ ಮನೆಯ ಎದುರುಗಡೆ ಸದಾ ಕಾವಲುಗಾರನಾಗಿ ನಾನಿದ್ದೇನೆ. ಇಲ್ಲಿಯವರೆಗೆ ಯಾರಿಗೂ ಅಪಶಕುನವಾಗಿ ತೊಂದರೆ ಕೊಟ್ಟವನಲ್ಲ. ನನ್ನ ಹುಟ್ಟಿನಿಂದ ಇಲ್ಲಿಯವರೆಗೆ ನನಗೆ ನೀವ್ಯಾರು ನೀರು ಉಣಿಸಿ ದಾಹ ತಣಿಸಲಿಲ್ಲ. ಹುಳುಗಳು ಎಲೆ ತಿಂದು ಹಾಳು ಮಾಡಿದಾಗ ನನ್ನನ್ನು ರಕ್ಷಿಸಲಿಲ್ಲ. ನನ್ನ ನೋವು ನೋಡದೆ ನಿಮ್ಮ ಸ್ವಾರ್ಥ ಭಾವದ ಬೇಕು ಬೇಕುಗಳಿಗೆಲ್ಲ ನನ್ನೆಲ್ಲ ರೆಂಬೆ - ಕೊಂಬೆ - ಎಲೆ - ಚಿಗುರುಗಳನ್ನೆಲ್ಲ ಕಡಿದು ವಿರೂಪಗೊಳಿಸಿದಿರಿ. ಪಶು - ಪ್ರಾಣಿಗಳು ಚಿಗುರು ತಿಂದಾಗಲೂ ಕಾಯಲಿಲ್ಲ. ಕಾಯಿಗಾಗಿ ಕಲ್ಲು ಬಿಸಾಡಿದಾಗಲೂ ತಡೆಯಲಿಲ್ಲ. ಆದರೂ ಬೆಳೆದಲ್ಲೇ ಬೆಳೆಯಲೇ ಬೇಕೆಂಬ ಒಂದೇ ಛಲದಿಂದ ಈ ಎಲ್ಲಾ ನೋವು, ತೊಂದರೆ ಮತ್ತು ನಿಂದನೆಗಳನ್ನು ಮೀರಿ ಬದುಕಿದ್ದೇನೆ. ನೀವು ನಿಂದಿಸಿದರೂ ನಿಮ್ಮೆದುರೇ ನಿಲ್ಲಬೇಕು ಎಂದು ಬೆಳೆದು ನಿಂತೆ. ನಿಮ್ಮ ನಿಂದನೆಗಳನ್ನೇ ನನ್ನ ಬೆಳವಣಿಗೆಗೆ ಮೆಟ್ಟಿಲಾಗಿಸಿ ಬೃಹದಾಕಾರಕ್ಕೆ ಬೆಳೆದೆ. ನೀವು ಮಾಡಿದ ಎಲ್ಲಾ ತೊಂದರೆಗಳನ್ನು ಮರೆತು ನಿಮಗೆ ಬಿಸಿಲಾದಾಗ ನೆರಳು ನೀಡಿದೆ. ಹಸಿವಾದಾಗ ಹಣ್ಣು ನೀಡಿದೆ. ಬೇಯಿಸಲು ಕಟ್ಟಿಗೆ ನೀಡಿದೆ. ಗೊಬ್ಬರಕ್ಕೆ ಎಲೆ ನೀಡಿದೆ. ಹೊಸ ಮನೆಗೆ ಬಾಗಿಲು ನೀಡಿದೆ. ಆಗ ನಾನು ಅಶುಭವಾಗಲಿಲ್ಲವೇ......? ನೂರಾರು ನಿರ್ಗತಿಕ ಪಕ್ಷಿ - ಕೀಟಗಳಿಗೆ ಆಶ್ರಯತಾಣವಾದಾಗ ನಿಮಗೆ ಅಪಶಕುನವಾಗಲಿಲ್ಲವೇ.........? ನಿಮ್ಮ ಮಕ್ಕಳು ನನ್ನ ರೆಂಬೆಗಳಿಗೆ ಹಗ್ಗ ಕಟ್ಟಿ ಜೋಕಾಲಿಯಾಟ, ಕಳ್ಳ ಪೋಲಿಸು ಆಟ, ಮರಕೋತಿಯಾಟ ಆಡುವಾಗ ನಾನು ಅಶುಭ ಮರವಾಗಲಿಲ್ಲವೇ.......? ನಾನು ಕೊಟ್ಟ ಮಾವಿನ ಮಿಡಿಯಿಂದ ಉಪ್ಪಿನಕಾಯಿ ಮಾಡಿ ಮದುವೆ ಮತ್ತು ಪೂಜೆ ಹಾಗೂ ಎಲ್ಲಾ ಶುಭ ಕಾರ್ಯಕ್ರಮದಲ್ಲಿ ಊಟದ ತಟ್ಟೆಗೆ ಮೊದಲು ಬಡಿಸುವಾಗ ನಾನು ಅಶುಭವಾಗಲಿಲ್ಲವೇ.......? ಶುಭಕಾರ್ಯಕ್ಕೆ , ಗೃಹ ಪ್ರವೇಶ , ಜಾತ್ರೆ ಇತ್ಯಾದಿ ಕಾರ್ಯಕ್ರಮಗಳಿಗೆ ತೋರಣ ಕಟ್ಟಲು ನನ್ನ ಎಲೆ ಬಳಸಿದಾಗ ಅಪಶಕುನವಾಗಲಿಲ್ಲವೇ.......? ಕೊನೆಗೆ ನೀವು ಸಾಯುವಾಗಲೂ ಸ್ವರ್ಗಕ್ಕೆ ಹೋಗಲೇಬೇಕು ಎಂದು ಬಯಸಿ ನನ್ನ ಕಟ್ಟಿಗೆಯಲ್ಲಿಯೇ ಮಲಗಿ... ಉರಿದು ಬೂದಿಯಾದಾಗ ನಾನು ಅಶುಭವಾಗಲಿಲ್ಲವೇ.......? ಇಷ್ಟೆಲ್ಲಾ ಉಪಕಾರಿಯಾಗಿ ಸದಾ ಒಂದಲ್ಲೊಂದು ಧನಾತ್ಮಕ ಅಂಶಗಳಿಂದ ನಿಮಗೆ ಶುಭಕಾರಿಯಾದರೂ ನನ್ನನ್ನು ಅಪಶಕುನ ಅಶುಭ ಎಂದು ಕರೆಯುತ್ತಿರುವಿ ಏಕೆ.......? ದಯವಿಟ್ಟು ಕಡಿಯುವುದಾದರೆ ಕಡಿಯುವುದನ್ನೇ ಕಡಿಯಿರಿ. ಮೊದಲು ನಿಮ್ಮ ಅಪಶಕುನದ ಸಂಕುಚಿತ ಭಾವವನ್ನು ಕಡಿಯಿರಿ ಪ್ಲೀಸ್.....!" ಎಂದು ಮಾವಿನ ಮರ ತನ್ನ ನೋವನ್ನು ಮನದಾಳದೊಳಗೆ ಹೇಳಿತು.
ಮಾವಿನ ಅಂತರಾತ್ಮದ ಪಿಸುಮಾತನ್ನು ನಮ್ಮ ಅಂತರಾತ್ಮದೊಳಗೆ ಒಂದು ನಿಮಿಷ ಕಣ್ಣು ಮುಚ್ಚಿ ಚಿಂತಿಸಿದರೆ ಮರವನ್ನುಳಿಸುವ ಏನಾದರೊಂದು ಮೌಲ್ಯ ಸಿಕ್ಕೀತು.
ಹೌದಲ್ಲವೇ.... ಇಡೀ ವಿಶ್ವದಲ್ಲಿ ಬದಲಾಗಬೇಕಾದ ಜೀವಿ ಎಂದರೆ ಮಾನವ ಮಾತ್ರ. ಉಳಿದವು ಪ್ರಕೃತಿಗೆ ಪೂರಕವಾಗಿಯೇ ಬದುಕುತ್ತಿದೆ. ನಮ್ಮ ಋಣಾತ್ಮಕ ಸ್ವಯಂ ಕಲ್ಪನೆಗಳಲ್ಲಿ ಖಂಡಿತಾ ಬದಲಾವಣೆ ಬೇಕಾಗಿದೆ. ನಾನು ಹೇಳಿದ್ದೇ ಸರಿ ಎಂದು ತನ್ನ ಮೂಗಿನ ನೇರಕ್ಕೆ ಆಲೋಚನೆ ಮಾಡುವುದನ್ನು ಬಿಟ್ಟು ವಿಶಾಲ ಮನೋಭಾವದಿಂದ ಯೋಚಿಸಬೇಕಾಗಿದೆ. ವ್ಯಕ್ತಿಯಲ್ಲಿ ನೂರಾರು ಧನಾತ್ಮಕ ಗುಣಗಳಿದ್ದರೂ ತನ್ನ ಸಂಕುಚಿತ ಭಾವದಿಂದ ದೂರುವವರು ತನ್ನ ಮೂಗಿನ ನೇರಕ್ಕೆ ಅರ್ಥೈಸುವವರು ಇದ್ದೇ ಇರುತ್ತಾರೆ. ಮಾವಿನ ಮರದಂತೆ ಅಲ್ಪರ ಮಾತಿಗೆ ಬೆಲೆ ಕೊಡದೆ ಧೃಡವಾಗಿ ಬದುಕುವುದನ್ನು ಕಲಿಯಬೇಕಾಗಿದೆ. ಅಜ್ಞಾನದಿಂದ ಕಡಿಯಲು ಬಂದವರನ್ನು ರಕ್ಷಕರನ್ನಾಗಿ ಬದಲಾವಣೆ ಮಾಡಬೇಕಾಗಿದೆ. ಹಾಗೆಯೇ ಬೇರೆಯವರನ್ನು ನಮ್ಮ ಸ್ವಯಂ ಕಲ್ಪನೆಯ ತಪ್ಪು ನಿರ್ಧಾರಗಳಿಗೆ ಬಲಿಯಾಗದಂತೆ ಬದಲಾವಣೆ ಮಾಡಬೇಕಾಗಿದೆ. ಬನ್ನಿ ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************