-->
ಪದಗಳ ಆಟ ಭಾವ ಚಿತ್ರ ಪಾತ್ರ : ಸಂಚಿಕೆ - 30

ಪದಗಳ ಆಟ ಭಾವ ಚಿತ್ರ ಪಾತ್ರ : ಸಂಚಿಕೆ - 30

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 30


         ದೇವರ ಕಂಡ ಆಕಾರಕ್ಕೆ ರೂಪ ಕೊಟ್ಟ ರಾಜ.
             ಹಿಂದೂಗಳ ದೇವರ ಮನೆಯಲ್ಲಿ, ದೇವಾಲಯಗಳಲ್ಲಿ, ಗೋಡೆಗಳಲ್ಲಿ ದೇವರ ಚಿತ್ರಪಟಗಳು ಇಲ್ಲದೆ ಇಲ್ಲ. ದೇವರನ್ನು ನೆನೆಯುವಾಗ ನಮ್ಮ ಮನಃಪಟಲದಲ್ಲಿ ಬರುವ ಲಕ್ಷ್ಮಿ,, ಸರಸ್ವತಿಯ ಚಿತ್ರಗಳು ಯಾರ ಕಲ್ಪನೆಗಳು? ರಾಮಾಯಣ ಮಹಾಭಾರತದ ರೋಚಕ ಪ್ರಸಂಗಗಳನ್ನು ನೆನೆಯುವಾಗ ಮನೋಭಿತ್ತಿಯಲ್ಲಿ ಮೂಡುವ ಸನ್ನಿವೇಶ ಚಿತ್ರಗಳು ಯಾವ ಕಲಾವಿದನ ಮೂಸೆಯಲ್ಲಿ ಸ್ವರೂಪ ಪಡೆದುಕೊಂಡು ಅರಳಿದ ಕುಸುರಿಗಳು....? ಒಮ್ಮೆಯಾದರೂ ಯೋಚಿಸಿದ್ದೀರಾ.....? ನಿಮ್ಮನ್ನು ನೀವು ಪ್ರಶ್ನಿಸಿ ಕೊಂಡಿದ್ದೀರಾ......?
          ಲಕ್ಷ್ಮಿ ಎಂದರೆ ನಮ್ಮ ಚಿತ್ತಭಿತ್ತಿಯಲ್ಲಿ ಮೂಡುವುದು ತಾವರೆಯ ಮೇಲೆ ನಿಂತ ಸೀರೆಯುಟ್ಟ ಹೆಣ್ಣು. ಆಕೆಗೆ ನಾಲ್ಕು ಕೈಗಳು. ಒಂದು ಹಸ್ತದಿಂದ ಬೀಳುತ್ತಿರುವ ಚಿನ್ನದ ನಾಣ್ಯಗಳು ಸಿರಿ ದೇವತೆ ಎಂದು ಸೂಚಿಸುತ್ತವೆ. ದೇವತೆಗಳ ತಲೆಯ ಕಿರೀಟದಲ್ಲಿ ತಂಜಾವೂರ್ ಚಿತ್ರಕಲೆಯ ಪ್ರಭಾವ.
        ಈ ಸುಂದರ ಚಿತ್ರಗಳನ್ನು ಮಾಡಿದವ ಪರಪ್ಪನ ರಾಜ ಮನೆತನದವನಾಗಿದ್ದ. ಅಂದಿನ ಚಿತ್ರಜಗತ್ತಿಗೆ ರಾಜನಾಗಿದ್ದ. ರಾಜಾ ಎಂಬ ಬಿರುದಾಂಕಿತನಾಗಿದ್ದ. ಈತನದು ಭಾರತೀಯ ಚಿತ್ರಕಲೆಯ ಚರಿತ್ರೆಯಲ್ಲಿ ಒಂದು ದೊಡ್ಡ ಹೆಸರು. ಅತ್ಯಂತ ಸುಂದರವಾಗಿ ಚಿತ್ರಿಸಬಲ್ಲ ವರ್ಣಚಿತ್ರ ಕಲಾವಿದ , ತೈಲ ವರ್ಣಚಿತ್ರ ಕಲಾವಿದ. ಈತನ ಚಿತ್ರಗಳು ಭಾರತೀಯ ಪ್ರಜ್ಞೆ ಪ್ರತಿಮಾಶಾಸ್ತ್ರ ಹಾಗೂ ಯುರೋಪಿನ ಶಾಸ್ತ್ರೀಯ ಚಿತ್ರಕಲೆಯ ಅದ್ಭುತಸಂಗಮ , ಸಮ್ಮಿಲನ. ಆ ಕಾಲದಲ್ಲಿ ಅಂದರೆ 19ನೇ ಶತಮಾನದಲ್ಲಿ ರಾಜನ ಚಿತ್ರಗಳು ಅಲಂಕೃತವಾಗದ ದೇವಾಲಯಗಳು ಇರಲಿಲ್ಲ, ಮನೆಗಳಿರಲಿಲ್ಲ, ಜನಸಾಮಾನ್ಯರ ಮನೆಯ
ದೇವರ ಮಂಟಪಗಳಲ್ಲಿ ಪೂಜಿಸಲ್ಪಡುತ್ತಿದ್ದುದು ಈತನಿಂದಲೇ ಚಿತ್ರಿಸಲ್ಪಟ್ಟ ದೇವರ ಚಿತ್ರಗಳು. ಅರಸು ಮನೆತನದ ಸದಸ್ಯರಿಗಂತೂ ಈತನಿಂದ ಭಾವಚಿತ್ರ ಬಿಡಿಸಿ ಕೊಳ್ಳುವುದೆಂದರೆ ಗೌರವದ, ಅಭಿಮಾನದ, ಪ್ರತಿಷ್ಠೆಯ ಹಾಗೂ ಸರ್ವ ಸಮ್ಮತವಾದ ಸಂಗತಿಯಾಗಿತ್ತು. ಇಂತಹ ಉತ್ಕೃಷ್ಟ ಕಲಾವಿದನ ಚಿತ್ರ ಪಯಣ ಹೇಗೆ ಶ್ರೀಕಾರ ಗೊಂಡಿತು....? ಆರಂಭವಾಯಿತು....?
        ನಮ್ಮ ಕಲಾವಿದ ಹುಟ್ಟಿದ ತಿರುವಾಂಕೂರಿನ ಕಿಲಿಮನೂರ್ ಅರಮನೆ ಚಿತ್ರದ ಮನೆಯಾಯಿತು. ತಂದೆ ನೀಲಕಂಠನ್ ಭಟ್ಟತಿರಿಪತ, ತಾಯಿ ಉಮಾಯಂಬ ತಂಪು ರಟ್ಟಿ. ತಂದೆ ಸಂಸ್ಕೃತ ಮತ್ತು ಆಯುರ್ವೇದದಲ್ಲಿ ವಿದ್ವಾಂಸ. ತಾಯಿ ಪ್ರತಿಭಾವಂತ ಕವಯಿತ್ರಿ ಬರಹಗಾರ್ತಿ. ಈತ ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಮದುವೆಯಾದದ್ದು ಭಾಗೀರತಿ ಬಾಯಿಯನ್ನು.
        ಆತನ ಮಾವ ರಾಜ ರಾಜವರ್ಮ ಸ್ವತಹ ಖ್ಯಾತ ಚಿತ್ರಕಲಾವಿದ. ಅವರಿಂದ ಚಿತ್ರಕಲೆಗೆ ಪ್ರೇರಣೆ. ಆತ ದೇವಾಲಯದ ಗೋಡೆಗಳಲ್ಲಿ ಸುಂದರವಾದ ಚಿತ್ರ ಮಾಡುತ್ತಿದ್ದುದನ್ನು ಗಮನಿಸಿ ಮಾವ ರಾಮಸ್ವಾಮಿ ನಾಯ್ಡು ಅವರಲ್ಲಿ ಚಿತ್ರ ಕಲೆ ಕಲಿಯಲು ಸೇರಿಸಿದರು. ಅಲ್ಲಿ ಜಲವರ್ಣವನ್ನು ಅತ್ಯಂತ ನಿಷ್ಠೆಯಿಂದ ಕಲಿತರು. ಮಾವ ರಾಜರ ಆಸ್ಥಾನಕ್ಕೆ ಈತನನ್ನು ಆಗಾಗ ಕರೆದುಕೊಂಡು ಹೋಗಿ ಅಲ್ಲಿನ ವರ್ಣಚಿತ್ರಗಳನ್ನು ತೋರಿಸುತ್ತಿದ್ದರು. ಆಸ್ತಾನಕ್ಕೆ ಶ್ರೇಷ್ಠ ಕಲಾವಿದರು ಬಂದಾಗ ಅವರ ಸಹವಾಸದಲ್ಲಿ ಚಿತ್ರಕಲೆಯ ಸೂಕ್ಷ್ಮಗಳನ್ನು ತಿಳಿಯಲು ಅವಕಾಶ ಮಾಡಿಕೊಡುತ್ತಿದ್ದರು. ಅರಸನಿಗೂ ಇವರು ಚಿತ್ರಕಲೆಯಲ್ಲಿ ಬೆಳೆಯಬೇಕು ಎಂಬ ಮಹದಾಸೆ ಇತ್ತು. ಒಮ್ಮೆ ಅರಸರು ಬ್ರಿಟಿಷ್ ಕಲಾವಿದ ಥಿಯೋಡೋರ್ ಅವರನ್ನು ತನ್ನ ಆಸ್ಥಾನಕ್ಕೆ ಆಹ್ವಾನಿಸಿ ಅವರ ಭಾವಚಿತ್ರಗಳನ್ನು ಮಾಡಿಸುತ್ತಿದ್ದರು. ಆ ಸಂದರ್ಭ ಈ ಬಾಲಕನಿಗೆ ಚಿತ್ರ ಬಿಡಿಸುವುದನ್ನು ನೋಡಲು ಆಣತಿ ಕೇಳಿದರು , ಈತನ ಹಿತಾಕಾಂಕ್ಷಿ, ಶ್ರೇಯೋಕಾಂಕ್ಷಿ ಮಾವ. ಅರಸನಿಂದ ಅನುಮತಿ ದೊರೆತರೂ ಕಲಾವಿದ ಒಡಂಬಡಲಿಲ್ಲ. ಕೊನೆಗೆ ಆ ಕಲಾವಿದನಿಂದ ಅವಕಾಶವನ್ನೇ ಕಿತ್ತುಕೊಳ್ಳ ಹೋದಾಗ ಒಪ್ಪಿದರು. ಥಿಯೋಡೋರ್ ರವರಿಂದ ಯುರೋಪ್ ಶೈಲಿಯ ಭಾವ ಚಿತ್ರಕಲೆಯನ್ನು ಅರಿತುಕೊಂಡು ಸತತ ಅಭ್ಯಾಸದಿಂದ ಅನನ್ಯ, ವಿಶಿಷ್ಟ, ಕೈಚಳಕವಾಗಿ ಸಿದ್ಧಿಸಿಕೊಂಡ. ವರ್ಣಚಿತ್ರಗಳ ನೈಜತೆ, ಬಣ್ಣಗಳ ಹೊಳಪು ಈ ಕಲಾವಿದ ರಾಜನ ಮೇಲೆ ಗಾಢ ಪರಿಣಾಮ ಬೀರಿತು.
        ಅಂದಿನವರೆಗೆ ಹಿಂದೂಗಳು ಕಲ್ಲಿನ ವಿಗ್ರಹಗಳನ್ನು ನೆನೆದು ಪೂಜಿಸುತ್ತಿದ್ದರು. ರಾಜ ತನ್ನ ಕಲ್ಪನೆಯನ್ನು ಹರಿಬಿಟ್ಟು ವಿವಿಧ ದೇವರುಗಳಿಗೆ ಹಿಂದೂ ಸುಂದರ ನಾರಿಯರ ಸೌಂದರ್ಯವನ್ನು ಆರೋಪಿಸಿ ಚಿತ್ರ ಮಾಡಿದ. ಭಾವಚಿತ್ರಗಳಲ್ಲಿ ದೇವತೆಗಳ ಲಕ್ಷಣ, ಕಾರ್ಯಗಳಿಗೆ ಅನುಗುಣವಾದ ಪೂರಕ ಅಂಶಗಳನ್ನು ಪಡಿ ಮೂಡಿಸಿದ. ಈತ ದೇವತೆಗಳಿಗೆ ಭೌತಿಕ ಸ್ವರೂಪ ಕೊಟ್ಟ ಚಿತ್ರಬ್ರಹ್ಮ ಎಂದರೆ ಅತಿಶಯವಲ್ಲ. ಭೌತಿಕಕ್ಕೆ ಎರಕಗೊಂಡ ಆಧ್ಯಾತ್ಮಿಕತೆಯ ಆಯಾಮವು ಚಿತ್ರದ ಆಕರ್ಷಣೆಯಾಗಿ ಬಿಟ್ಟಿತ್ತು. ಸರಸ್ವತಿ ವಿದ್ಯಾಧಿದೇವತೆ , ಹಾಗಾಗಿ ನವಿಲಿನ ಮೇಲೆ ಕುಳಿತ ಭಂಗಿ. ಶ್ವೇತ ವಸ್ತ್ರಧಾರಿ, ವೀಣಾಪಾಣಿ. ಹೀಗೆ ವಿಚಾರಪ್ರದವಾಗಿ ಬಿಂಬಿಸಿದ ಚಿತ್ರಗಳಿಗೆ ಅಪಾರ ಬೇಡಿಕೆ ಬಂತು. ಸಾವಿರಾರು ಚಿತ್ರಗಳ ಬೇಡಿಕೆಯನ್ನು ಪೂರೈಸಲಾಗದೆ ರಾಜ ಒಲಿಯೋ ಗ್ರಾಫಿಕ್ ಇಥಿಯೋಗ್ರಫಿಕ್ ಪ್ರೆಸ್ ಸ್ಥಾಪಿಸಿ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ದೇವತಾ ಚಿತ್ರಗಳು ದೊರೆಯುವಂತೆ ಮಾಡಿದ. ಇದು ಈತನ ಚಿತ್ರ ಪಯಣದ ಒಂದು ಮೈಲಿಗಲ್ಲು ಎಂದೇ ಹೇಳಬಹುದು. ಇದರಿಂದಾಗಿ ವಿವಿಧ ದೇವತೆಗಳಿಗೆ ಜನರ ಪೂಜಾ ಭಾಗ್ಯ....! ಹೀಗೆ ರಾಜನ ಚಿತ್ರಗಳ ವಿಪುಲತೆ, ಸರಾಗವಾದ ಲಭ್ಯತೆಯಿಂದಾಗಿ ಜನಸಾಮಾನ್ಯರಲ್ಲಿ ವರ್ಣಚಿತ್ರಗಳಲ್ಲಿ ಅಭಿರುಚಿ ಬೆಳೆಯಿತು. ಭಾರತೀಯ ಚಿತ್ರಕಲಾ ಪ್ರಜ್ಞೆ ಎಂಬ ಅಸ್ಮಿತೆ ಮೂಡಿ ದಟ್ಟವಾಯಿತು, ಗಾಢವಾಗುತ್ತಾ ಹೋಯಿತು. ಹೀಗೆ ಸಪುಷ್ಟವಾದ ಪ್ರಜ್ಞೆಯೇ ಈ ಕಲಾವಿದನನ್ನು ಉತ್ತುಂಗಕ್ಕೆ ಮತ್ತೆ ಬೆಳೆಸುತ್ತಾ ಹೋಯಿತು. ಆತ ಮಹಾಭಾರತ ರಾಮಾಯಣದ ರೋಚಕ ಸನ್ನಿವೇಶಗಳಿಗೆ ಸುಂದರ ಚಿತ್ರಗಳನ್ನು ಬರೆದ. ತಿರುವಾಂಕೂರಿನಲ್ಲಿ ನಡೆದ ಚಿತ್ರ ಪ್ರದರ್ಶನದಲ್ಲಿ ಚಿನ್ನದ ಪದಕ ಗಿಟ್ಟಿಸಿದ. ಈತನ ಚಿತ್ರಗಳು ವಿದೇಶಗಳಿಗೂ ಪಯಣಿಸಿ ಅಲ್ಲಿಯೂ ಜನರ ಚಿತ್ತಾಪಹಾರಕಗಳಾದವು. ವಿಯೆನ್ನಾದಲ್ಲಿ ನಡೆದ ಚಿತ್ರ ಪ್ರದರ್ಶನದಲ್ಲಿ ಮತ್ತೊಂದು ಸುವರ್ಣ ಪದಕದ ಗರಿ. ಸ್ವಾಮಿ ವಿವೇಕಾನಂದರ ವಿಶ್ವಪ್ರಸಿದ್ಧ ಭಾಷಣ ಮಾಡಿದ ಶಿಕಾಗೋ ಧರ್ಮ ಸಮ್ಮೇಳನದಲ್ಲಿ ನಡೆದ ಚಿತ್ರಕಲಾ ಪ್ರದರ್ಶನಕ್ಕೂ ಇವರಿಗೆ ಆಹ್ವಾನದ ಗೌರವ. 3 ಸುವರ್ಣ ಪದಕಗಳು.!!
      ದುಷ್ಯಂತನಿಗೆ ಪ್ರೇಮ ಪತ್ರ ಬರೆಯುವ ಶಾಕುಂತಲೆ, ದಮಯಂತಿ ಮತ್ತು ಹಂಸ, ಯಶೋದೆ ಮತ್ತು ಕೃಷ್ಣ, ಚೆಂಡಾಡುವ ಮೋಹಿನಿ.. ಇಂತಹ ನೂರಾರು ಮನಮೋಹಕ ಚಿತ್ರಗಳು ಚಿತ್ರರಸಿಕರಿಗೆ ಹುಚ್ಚು ಹಿಡಿಸುತ್ತಿದ್ದವು. ಈ ಚಿತ್ರ ವೀಕ್ಷಣಾ ಸುಖ ಎಂಬ ಮದಿರೆಯಲ್ಲಿ ಜನ ಮಿಂದೇಳುತ್ತಿದ್ದರು. ರಾಜಮನೆತನದವರು, ಶ್ರೀಮಂತರು, ವಿದೇಶಿ ಅತಿಥಿಗಳು ಈತನಿಂದ ತಮ್ಮ ಭಾವಚಿತ್ರ ಮಾಡಿಸಿಕೊಳ್ಳಲು ಆತುರದಿಂದ, ಕಾತುರದಿಂದ ತಿಂಗಳುಗಟ್ಟಲೆ ಕಾಯಬೇಕಾದ ಪ್ರಮೇಯ. ಈ ಕಲಾವಿದ ರಚಿಸಿದ ಮೈಸೂರು ಅರಸರ 3ಡಿ ಭಾವಚಿತ್ರ ಈಗಲೂ ಮೈಸೂರು ಅರಮನೆಯಲ್ಲಿ ಪ್ರಥಮ ಆಕರ್ಷಣೆಯಾಗಿ ಮಿಂಚುತ್ತಿದೆ. ಅರಸು ಮನೆತನದವರ ಭಾವಚಿತ್ರಗಳು ಜೀವಂತಿಕೆಯಿಂದ ಕಂಗೊಳಿಸುತ್ತಿವೆ. ಛಾಯಾ ಚಿತ್ರವೋ ಎಂಬ ಭ್ರಮೆಗೆ ನಮ್ಮನ್ನು ತಳ್ಳುತ್ತವೆ. ಕೆಲವು ವರ್ಣಚಿತ್ರಗಳ ನಯನಗಳು ಅದೆಷ್ಟು ಸಹಜವಾಗಿ ಅಭಿವ್ಯಕ್ತವಾಗಿದೆ ಎಂದರೆ ಅವು ನಮ್ಮನ್ನೇ ಅನುಸರಿಸುವಂತೆ ಭಾಸವಾಗುತ್ತದೆ. ಆ ಕಾಲದ ಸಂಸ್ಕೃತಿ ಮತ್ತು ಆಚರಣೆಗಳನ್ನು ಬಿಂಬಿಸುತ್ತಿದ್ದ, ನವರಸಗಳಲ್ಲಿ ಭಾವ ತುಮುಲಗಳನ್ನು ಕುಂಚದಲ್ಲಿ ನವಿರಾಗಿ ಪಡಿಮೂಡಿಸುತ್ತಿದ್ದ ಕುಸುರಿ ಕಲೆಯಿಂದ ಈತನ ಚಿತ್ರಗಳು ಭಾರತದ ಪ್ರಾತಿನಿಧಿಕ ಚಿತ್ರಗಳಾಗಿ ಸ್ಥಾನ ಪಡೆದು ಅತ್ಯಮೂಲ್ಯವಾಗಿವೆ .
        ಹೀಗೆ ಆಧುನಿಕ ಚಿತ್ರಕಲಾ ಜಗತ್ತನ್ನು 25 ವರ್ಷಗಳ ಕಾಲ ಆಳಿದ ಅಪ್ರತಿಮ, ಅದ್ವಿತೀಯ ಪ್ರತಿಭೆಯ ಹೆಸರನ್ನು ಬುಧಗ್ರಹದ ಒಂದು ಗುಳಿಗೆ ಇಡಲಾಗಿದೆ. ಚಿತ್ರ ಪ್ರದರ್ಶನ ಮ್ಯೂಸಿಯಮ್ ಗೂ ಈತನ ಹೆಸರು ಶೋಭೆ ತಂದಿದೆ. ಕೇರಳ ಸರ್ಕಾರ ಈತನ ಹೆಸರಿನಲ್ಲಿ ಚಿತ್ರಕಲೆ ಮತ್ತು ಸಂಸ್ಕೃತಿಯಲ್ಲಿ ಉತ್ಕೃಷ್ಟ ಸಾಧನೆಗೈದವರಿಗೆ ಪುರಸ್ಕಾರ ನೀಡುತ್ತಾ ಬಂದಿದೆ. ದಮಯಂತಿ ಮತ್ತು ಹಂಸ ಚಿತ್ರವಿರುವ ಅಂಚೆಚೀಟಿ ಬಿಡುಗಡೆ ಮಾಡಿ ಗೌರವ ನಮನ ಸಲ್ಲಿಸಲಾಗಿದೆ. ಚಲನಚಿತ್ರವೂ ನಿರ್ಮಾಣಗೊಂಡಿದೆ.
     ಒಟ್ಟಿನಲ್ಲಿ ವರ್ಣಚಿತ್ರ, ತೈಲಚಿತ್ರ ಎಂದ ಕೂಡಲೇ ನಮ್ಮನ್ನು ಸಂಪೂರ್ಣವಾಗಿ ಆವರಿಸುವ ಚಿತ್ರಗಳು ರಾಜ ರಾಜಾನದು. ಈತ ಚಿತ್ರರಸಿಕರ, ವರ್ಣ ಚಿತ್ರ ಪ್ರೇಮಿಗಳ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆಯಾಗಿರುವ ಪ್ರಭು.
ಇಂಥವರು ನಿಮ್ಮೊಳಗಿಲ್ಲವೇ .................?
...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************


Ads on article

Advertise in articles 1

advertising articles 2

Advertise under the article