 
ಮಕ್ಕಳ ತುಂಟ ಮನಸು : ಸಂಚಿಕೆ - 2
Thursday, February 10, 2022
Edit
ಮಕ್ಕಳ 
ತುಂಟ ಮನಸು 
ಸಂಚಿಕೆ - 2
                ಪರೀಕ್ಷೆಯಲ್ಲಿ ಪಕ್ಕದವರ 
            ಪೇಪರ್ ನೋಡಿ ಬರೆದಿದ್ದು......!!
      ---------------------------------------
    "ಈ ಪರೀಕ್ಷೆಯನ್ನು ಕಂಡು ಹಿಡಿದವರು ಯಾರು ಅಂತಾನೆ ಗೊತ್ತಿಲ್ಲಪ್ಪ... ಅದೆಷ್ಟೇ ಓದಿದ್ರೂ ತಲೆ ಒಳಗೆ ನಿಲ್ತಾನೇ ಇಲ್ಲ... ಸ್ವಲ್ಪ ಓದಿಕೊಂಡು ಹೋಗಿ ಪಕ್ಕದಲ್ಲಿ ಇರುವವರ ಪೇಪರ್ ನೋಡಿ ಬರೆದ್ರೆ ಆಯ್ತು ... ಅಂತ ಅಂದುಕೊಂಡು ನಾನು ಶಾಲೆಗೆ ಹೋದೆ. ಅಂದು ಬೆಳಗ್ಗೆ ವಿಜ್ಞಾನ ಪರೀಕ್ಷೆ ಇತ್ತು. ನಾನೇನೋ ಅಲ್ಪ- ಸ್ವಲ್ಪ ಓದಿಕೊಂಡು ಆರಾಮದಲ್ಲಿ ಇದ್ದೆ. ಅಷ್ಟರಲ್ಲೇ ಪರೀಕ್ಷೆಯ ಗಂಟೆ ಬಾರಿಸಿತು... ಟೀಚರ್ ನನ್ನ ಕೈಗೆ ಪೇಪರ್ ಕೊಟ್ಟ ಕೂಡಲೇ ಪ್ರಶ್ನೆ ಪತ್ರಿಕೆ ನೋಡಿದೆ. ಅದರಲ್ಲಿ ನನಗೆ ಉತ್ತರ ಗೊತ್ತಿಲ್ಲದ ಪ್ರಶ್ನೆಗಳೇ ಹೆಚ್ಚು ಕಾಣಿಸಿತು. ಉತ್ತರ ಪತ್ರಿಕೆ ಕೊಡುವ ಮುನ್ನ ಟೀಚರ್,...... "ಅಕ್ಕ-ಪಕ್ಕದವರ ಉತ್ತರ ನೋಡಿ ಬರೆಯಬೇಡಿ, ಕಾಪಿ ಹೊಡೆಯಬೇಡಿ" ಅಂತ ಎಚ್ಚರಿಕೆ ಕೊಟ್ರು. ಟೀಚರ್ ಅಷ್ಟು ಹೇಳಿ ಹಿಂದೆ ತಿರುಗಿದ್ದೇ ತಡ... ನಾನು ಪಕ್ಕದಲ್ಲಿದ್ದ ಗೆಳೆಯನಿಗೆ ಕೈಯಲ್ಲಿ  ಸನ್ನೆ ಮಾಡಿ ಕೇಳಿದೆ... ಅವನು ಸ್ವಲ್ಪ ಹೊತ್ತಲ್ಲಿ ಆಪ್ತ ಮಿತ್ರನಂತೆ ತನ್ನ ಉತ್ತರ ಪತ್ರಿಕೆಯನ್ನು ತೋರಿಸಿಯೇ ಬಿಟ್ಟ... ನಾನು ತುಂಬಾ ಖುಷಿಯಲ್ಲಿ ಅವನ ಉತ್ತರವನ್ನು ನಕಲು ಮಾಡಿದೆ. ಅವನು ಸರಿಯಾಗಿಯೇ ಬರೆದಿರಬಹುದು ಎಂದು ಅಂದುಕೊಂಡು, ನಾನು ಅವನ ಉತ್ತರವನ್ನು ನೋಡಿ ಅವನಂತೆಯೇ ಬರೆದುಬಿಟ್ಟೆ.. ಎರಡು ದಿನಗಳ ನಂತರ ಟೀಚರ್ ಉತ್ತರ ಪತ್ರಿಕೆಯನ್ನು ತೆಗೆದುಕೊಂಡು ತರಗತಿಗೆ ಬಂದೇ ಬಿಟ್ರು... ನನಗೂ ನನ್ನ ಗೆಳೆಯನಿಗೂ ಒಂದೇ ರೀತಿಯ ಅಂಕ ಸಿಕ್ಕಿತ್ತು. ಆದ್ರೆ ಇಬ್ಬರೂ ಕೂಡ ಪಾಸ್ ಆಗಿರ್ಲಿಲ್ಲ.. ಇದನ್ನು ಗಮನಿಸಿದ ಟೀಚರ್, ಇಬ್ಬರ ಉತ್ತರ ಪತ್ರಿಕೆಯನ್ನೂ ತೆಗೆದುಕೊಂಡು "ನಿಮ್ಮಿಬ್ಬರಲ್ಲಿ ನಕಲು ಮಾಡಿದವರು ಯಾರು?" ಎಂದು ಕೇಳಿದಾಗ, ನಾನು ಗೆಳೆಯನತ್ತ ಕೈ ತೋರಿಸಿದೆ.. ಅದೇ ಸಮಯಕ್ಕೆ ಅವನು ನನ್ನತ್ತ ಬೆರಳು ಮಾಡಿ ತೋರಿಸಿದ... ಒಂದೇ ಸಲಕ್ಕೆ ಇಬ್ಬರೂ ಸಿಕ್ಕಿ ಬಿದ್ದೆವು.. ಕೊನೆಗೆ ಇಬ್ಬರಿಗೂ ಒಟ್ಟಾಗಿ ಪೆಟ್ಟು ಕೂಡ ಸಿಕ್ಕಿತು...!! ಮನೆಯಲ್ಲಿ ಅಪ್ಪ-ಅಮ್ಮನಿಗೂ ಕೂಡ ಈ ವಿಷಯ ಗೊತ್ತಾಗಿ ಸರಿಯಾಗಿ ಬುದ್ಧಿ ಹೇಳಿದ್ದರು. 
         ಈ ಒಂದು ಘಟನೆಯ ನಂತರ ಪಕ್ಕದವರ ಉತ್ತರ ಪತ್ರಿಕೆ ನೋಡುವ ಕೆಟ್ಟ ಸಾಹಸಕ್ಕೆ ಮತ್ತೆ ಹೋಗಿಲ್ಲ....!! ಪರೀಕ್ಷೆಗೆ ಸರಿಯಾಗಿ ಓದಿಕೊಂಡು ಹೋಗಬೇಕಾದುದು ನನ್ನ ಕರ್ತವ್ಯ.  ನಕಲು ಮಾಡಿ, ಅನುಕರಣೆ ಮಾಡುವುದರಿಂದ ನಮ್ಮ ವೈಶಿಷ್ಟ್ಯತೆಯನ್ನು ಹಾಗೆಯೇ ನಮ್ಮೊಳಗಿನ ಅಗಾಧ ಶಕ್ತಿಯನ್ನು  ಕಳೆದುಕೊಳ್ಳುತ್ತೇವೆ.  ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸಾಮರ್ಥ್ಯ, ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹುಡುಕಿ ಹೊರತರುವ ಪ್ರಯತ್ನ ಮಾಡಬೇಕು ಅಷ್ಟೇ...! 
ಅಂತಿಮ ಬಿ.ಎ (ಮನ:ಶಾಸ್ತ್ರ ವಿದ್ಯಾರ್ಥಿನಿ)
ಡಾ. ಪಿ. ದಯಾನಂದ ಪೈ - ಪಿ.ಸತೀಶ ಪೈ, 
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, 
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
 
 
   
  