-->
ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

         "ಉತ್ತಮ ವ್ಯಕ್ತಿತ್ವವುಳ್ಳವರು ಉತ್ತಮ ವಿಷಯಗಳನ್ನು ಮಾತ್ರವೇ ನೀಡುತ್ತಾರೆ. ಶೂನ್ಯ ವ್ಯಕ್ತಿತ್ವದವರು ನಕಾರಾತ್ಮಕ ಅಥವಾ ವಿಷಯುಕ್ತ ವಿಷಯಗಳನ್ನೇ   ವಿತರಿಸುತ್ತಾರೆ."


                     ವಿಷ-ವಿಷಯ
                   ------------------    
          ಕ್ಷಣ ಕ್ಷಣವೂ ನಮಗೆ ಹೊಸ ಹೊಸ ವಿಷಯಗಳು ಸಿಗುತ್ತಲೇ ಇರುತ್ತವೆ. ಆಲಿಸುವ ಮೂಲಕ, ಓದುವ ಮೂಲಕ ಅಥವಾ ನೋಡುವ ಮೂಲಕ ನಮಗೆ ಸಿಗುವ ಎಲ್ಲ ವಿಷಯಗಳನ್ನು ದಾಖಲೀಕರಿಸಿದರೆ ಅವು ಬೃಹತ್ ಗ್ರಂಥಗಳೇ ಆಗಬಹುದು. ನಮಗೆ ಅನ್ಯಾನ್ಯ ಮೂಲಗಳಿಂದ ಸಿಗುವ ವಿಷಯಗಳಲ್ಲಿ ಧನಾತ್ಮಕ ವಿಷಯಗಳಿದ್ದರೆ ಬಹಳ ಉತ್ತಮ. ಋಣಾತ್ಮಕ ವಿಷಯಗಳಿದ್ದರೆ ಅವುಗಳಿಂದ ನಮಗೆ ಅಪಾಯವಿದೆಯೆಂಬುದು ಖಚಿತ. ಋಣ ವಿಷಯಗಳೇ ವಿಷಕಾರಿ, ಕಂಟಕಕಾರಿ, ಅಪಾಯಕಾರಿ ಹಾಗೂ ಸಂಕಟಕಾರಿ ಎಂದರೆ ದಿಗಿಲಾಗುವುದಲ್ಲವೇ...?
           ನಮಗೆ ಯಾರಾದರೂ ಏನಾದರೂ ವಸ್ತುಗಳನ್ನು ನೀಡಿದರೆ ಅವುಗಳನ್ನು ನಾವು ಸ್ವೀಕರಿಸುತ್ತೇವೆ. ಸ್ವೀಕರಿಸಲೇ ಬೇಕು. ತಿರಸ್ಕರಿಸುವುದು ಸಜ್ಜನಿಕೆಯಲ್ಲ. ಅವು ಭೌತಿಕ ವಸ್ತುಗಳಾಗಿರಬಹುದು ಅಥವಾ ಸಲಹಾತ್ಮಕ ವಿಚಾರಗಳಾಗಿರಬಹುದು. ಪೆನ್ನನ್ನು ಕೊಟ್ಟರೆ ಬರೆಯಲು ಬಳಸುತ್ತೇವೆ. ಪುಸ್ತಕವಾದರೆ ಓದು ಅಥವಾ ಬರವಣಿಗೆಗೆ ಬಳಕೆ ಮಾಡುತ್ತೇವೆ. ಉಡುಪು ಉಡುಗೊರೆಯಾಗಿ ಬಂದರೆ ಉಡುತ್ತೇವೆ. ಕಬ್ಬಿಣದ ಡಬ್ಬಣ ನೀಡಿದರೆ ಬದಿಗಿರಿಸುತ್ತೇವೆ, ಡಬ್ಬಣವನ್ನು ಅತೀ ಕಡಿಮೆ ಬಳಸುವುದಲ್ಲವೇ? ಯಾರೇನೇ ಕೊಟ್ಟರೂ ಹಸ್ತ ಚಾಚೋಣ. ಅವುಗಳನ್ನು ಎಸೆಯಬೇಕೇ? ಬದಿಗಿಡಬೇಕೇ? ಬಳಸಬೇಕೇ? ಅನುಸರಿಸ ಬೇಕೇ? ಎಂಬುದನ್ನು ನಾವು ನಮ್ಮ ವಿವೇಕಕ್ಕೆ ಬಿಡಬೇಕು. ಧನಾತ್ಮಕ ಮತ್ತು ಮೌಲ್ವಿಕ ವಿಷಯಗಳನ್ನು ಬದುಕಿನಲ್ಲಿ ಬಳಸೋಣ ಅಥವಾ ಅನುಸರಿಸೋಣ. ಋಣಾತ್ಮಕ ಮತ್ತು ಅನೈತಿಕ ವಸ್ತು ಅಥವಾ ವಿಷಯಗಳಾದರೆ ಅವುಗಳನ್ನು ವಿಷವೆಂದೇ ತಿಳಿಯೋಣ. ಅವುಗಳಿಂದ ಮಾರು ದೂರ ಉಳಿಯೋಣ.
              ನಮಗೆ ದೊರೆಯುವ ವಿಷಯಗಳು ಅಥವಾ ಸಂಗತಿಗಳು ವ್ಯಕ್ತಿತ್ವ ಆಧರಿತವಾಗಿರುತ್ತವೆ. ಉತ್ತಮ ವ್ಯಕ್ತಿತ್ವವುಳ್ಳವರು ಉತ್ತಮ ವಿಷಯಗಳನ್ನು ಮಾತ್ರವೇ ನೀಡುತ್ತಾರೆ. ಶೂನ್ಯ ವ್ಯಕ್ತಿತ್ವದವರು ನಕಾರಾತ್ಮಕ ಅಥವಾ ವಿಷಯುಕ್ತ ವಿಷಯಗಳನ್ನೇ ವಿತರಿಸುತ್ತಾರೆ. ಸತ್ಯವನ್ನೇ ಹೇಳುವವನು ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ. ಸುಳ್ಳುಗಳನ್ನು ಹೇಳುವವನು ಸತ್ಯವನ್ನು ಹೇಳುವುದೇ ಇಲ್ಲ ಎಂದೂ ಹೇಳಲಾಗದು. ಆದರೆ ಆತ ಹೇಳಿದ ವಿಷಯ ಸುಳ್ಳೋ ಅಥವಾ ಸತ್ಯವೋ ಎಂದು ವಿಮರ್ಶೆ ಮಾಡುವ ಮನೋಭಾವ ನಮ್ಮಲ್ಲಿರ ಬೇಕು.
         ಕೆಲವೊಮ್ಮೆ ನಮ್ಮನ್ನು ಹೊಗಳುವವರೂ ಇರುತ್ತಾರೆ. ಆದರೆ ಆ ಹೊಗಳಿಕೆಯ ಹಿಂದೆ ಅವರ ಸ್ವಹಿತವೂ ಅಡಗಿರುತ್ತದೆ. ಅದೇ ರೀತಿ ನಮ್ಮ ದೋಷಗಳನ್ನು ಖಂಡ ತುಂಡವಾಗಿ ನಿರೂಪಿಸಿ ನಮ್ಮನ್ನು ತಿದ್ದುವ ಸಜ್ಜನರೂ ಇರುತ್ತಾರೆ. ನಮ್ಮ ತಪ್ಪುಗಳನ್ನು ತಿದ್ದಲು ಹೊರಟವರನ್ನು ನಾವು ಗೌರವಿಸಬೇಕು. ಹೊಗಳಿದಾತನ ಹೊಗಳಿಕೆಗೆ ನಾವು ಅರ್ಹರಾಗಿದ್ದರೆ, ಅವರ ಹೊಗಳಿಕೆಯಲ್ಲಿ ಕಪಟವಿಲ್ಲದಿದ್ದರೆ ಅವರಿಗೂ ನಮ್ಮ ಗೌರವ ಸಲ್ಲಬೇಕು. ಹಾಗಾಗಿ ವಿಷವಿರುವ ವಿಷಯ ಮತ್ತು ವಿಷ ರಹಿತ ವಿಷಯ ಎಂದು ತಾರ್ಕಿಕವಾಗಿ ವಿಂಗಡಿಸುವ ಜಾಣ್ಮೆ ನಮಗಿದ್ದರೆ ಎಂದೂ ಅಪಾಯವಾಗದು.
          ಉತ್ತಮ ಸಾಂಗತ್ಯವಿರುವಲ್ಲಿ ವಿಷಮಯ ಸಂಗತಿಯಿರದು. ವಿಷಮ ಸಾಂಗತ್ಯದಿಂದ ದೂರವುಳಿಯಲು ಕೆಲವೊಮ್ಮೆ ಕಷ್ಟವಾಗುವುದೂ ಇದೆ. ದಾಂಪತ್ಯದ ಸಂಗತಿಗಳಲ್ಲಿ ವಿಷವಿದ್ದಾಗ, ಕೌಟುಂಬಿಕ ಸಂಬಂಧದೊಳಗೆ ವಿಷಮತೆಯಿದ್ದಾಗ, ಕುಹಕ ಮನದವರೊಡನೆ ಬೆರೆತಿರುವಾಗ ವಿಷಮ ಸಂಗತಿಗಳೇ ಸಂಭವಿಸುತ್ತವೆ. ಇಂತಹ ಸಂದರ್ಭಗಳು ಎಲ್ಲರನ್ನೂ ಗೊಂದಲಮಯಗೊಳಿಸುತ್ತವೆ. ಸಂದಿಗ್ಧತೆಯಿದ್ದಾಗ ಎಚ್ಚರಿಕೆಯೇ ಮದ್ದು ಎಂಬ ಅರಿವು ನಮಗಗತ್ಯ. 
           ಆದುದರಿಂದ ವಿಷ ಸಂಗತಿಗಳಿಗೆ ವಿಷ ಮನಸ್ಸುಗಳೇ ಕಾರಣ. ವಿಷ ಮನಸ್ಸುಗಳು ಸ್ವಾರ್ಥಿಗಳಲ್ಲಿಯೇ ಇರುತ್ತವೆ. ಮನಸ್ಸುಗಳು ಅಮೃತಮಯವಾದಾಗ ಅಲ್ಲಿ ಲವದಷ್ಟೂ ವಿಷವುಳ್ಳ ವಿಷಯಗಳುದಿಸದು. ಅಮೃತ ಮನಸ್ಸೇ ನಮ್ಮ ಅಸ್ಮಿತೆಯಾಗಲಿ. ನಮ್ಮೊಳಗೆ ವಿಷಮಯ ವಿಷಯಗಳುದಿಸದಿರಲಿ. ಅಮೃತತ್ವದಿಂದಲೇ ಸಮಷ್ಠಿಯ ಸುಖ ಸಾಧ್ಯ ಎಂಬ ಅರಿವು ಎಲ್ಲರೊಳಗೂ ಗುರುವಾಗಿ ಮೊಳಗಲಿ. ಸಾಧ್ಯವಾದರೆ ವಿಷ ಮನಸ್ಸುಗಳನ್ನು ಅಮೃತಮಯಗೊಳಿಸೋಣ. ಅಸಾಧ್ಯವಾದರೆ ಗುಣವಾಗದ ವಿಷಮಯ ಮನಸ್ಸುಗಳಿಗೆ ನಿರ್ಲಕ್ಷ್ಯವೂ ಉತ್ತಮ ಔಷಧ ಎಂದರಿಯೋಣ. ನಮಸ್ಕಾರ.
................................ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************

Ads on article

Advertise in articles 1

advertising articles 2

Advertise under the article