-->
ಸ್ಪೂರ್ತಿಯ ಮಾತುಗಳು ; ಜಯಲಕ್ಷ್ಮಿ ಶರತ್ ಶೆಟ್ಟಿ

ಸ್ಪೂರ್ತಿಯ ಮಾತುಗಳು ; ಜಯಲಕ್ಷ್ಮಿ ಶರತ್ ಶೆಟ್ಟಿ

           ಬದಲಾವಣೆಯ ಹಾದಿಯಲ್ಲಿ....
           ಮುದ್ದು ಮನಸ್ಸಿನ ಮುಗ್ಧ ಮಕ್ಕಳೇ.......
ಸ್ವಚ್ಛಂದ ಪರಿಸರದಲ್ಲಿ ನಿಷ್ಚಿಂತೆಯಿಂದ ಹಾರಾಡೋ ಚಿಟ್ಟೆಗಳಲ್ಲವೇ ನೀವು... ಆಸೆ ,ಆಮಿಷ ,ಅಸೂಯೆ ಅಂಧಕಾರವಿಲ್ಲದ ಆ ನಿಮ್ಮ ಪುಟ್ಟ ಮನಸ್ಸು ದೇವರ ಗುಡಿ ಇದ್ದಂತೆ.. ಹೌದು, ಮಕ್ಕಳೆಂದರೆ ದೇವರ ನಿಜರೂಪವೆಂದೇ ಹೇಳಬಹುದು. ಸ್ವಾರ್ಥವಿಲ್ಲದ ನಿಷ್ಕಲ್ಮಶವಾದ ಪ್ರೀತಿ ತೋರುವವರು ಮಕ್ಕಳು....     
         ಆಧುನೀಕರಣ... ಯಾಂತ್ರೀಕರಣದ ಈ ಬದಲಾವಣೆಯ ಬದುಕಿನಲ್ಲಿ ಎಲ್ಲವೂ ಅದೆಷ್ಟು ಬೇಗ ಬದಲಾಯಿತೋ ತಿಳಿಯದು!
ಗೆಳೆಯರೊಡಗೂಡಿ ಮರಕೋತಿ, ಕಣ್ಣಾಮುಚ್ಚಾಲೆ, ಲಗೋರಿ ಆಡುತ್ತಿರಬೇಕಾದ ಮಕ್ಕಳಿಂದು ಮೊಬೈಲ್ ಲೋಕದಲ್ಲಿ ತೇಲಾಡುತ್ತಿದ್ದಾರೆ. ಗೆಳೆಯ , ಗೆಳತಿ, ಸಮಾಜ, ಸಮೂಹ, ಸಾಮರಸ್ಯ, ಸಹಬಾಳ್ವೆ ಈ ಎಲ್ಲಾ ಪದಗಳೂ ತನ್ನ ಇರುವಿಕೆಯನ್ನೇ ಕಳೆದುಕೊಂಡಿದೆ ಎಂದರದು ತಪ್ಪಾಗದು ಅಲ್ವೇ..
      ಭಾವನಾತ್ಮಕ ಸಂಬಂಧ ಎಂದರೇನು? ಅದು ಹೇಗಿರಬೇಕು? ಬಾಲ್ಯದಲ್ಲೇ ನೋವಿಗೆ ಸ್ಪಂದಿಸುವ.. ಕಷ್ಟಕ್ಕೆ ಹೃದಯ ಮಿಡಿಯುವ ನಡೆತೆಯುಳ್ಳ ನಾಗರಿಕರಾಗಿ, ಸನ್ಮಾರ್ಗದಲ್ಲಿ ನಡೆಯುವ ಅಂತ:ಕರಣವುಳ್ಳ ಆದರ್ಶ ವ್ಯಕ್ತಿಗಳಾಗಿ ಬದುಕೋ ಕಲೆಯನ್ನು ಮೈಗೂಡಿಸಿಕೊಳ್ಳಬೇಕು. 
       ಡಾಕ್ಟರ್ ಗುರುರಾಜ್ ಕರಜಗಿಯವರು ತಮ್ಮ ಪ್ರೇರಣಾತ್ಮಕ ಮಾತುಗಳನ್ನಾಡುತ್ತಾ ಒಂದು ಭಾವಪೂರ್ಣ ಘಟನೆಯ ಬಗ್ಗೆ ತಿಳಿಸುತ್ತಾರೆ.
       ಈ ಘಟನೆಯ ಬಗ್ಗೆ ನೀವು ತಿಳಿದುಕೊಂಡರೆ ಖಂಡಿತಾ ನಿಮ್ಮ ಕಂಗಳಲ್ಲಿ ಕಂಬನಿಯೊಂದು ನಿಮಗರಿವಿಲ್ಲದೆಯೇ ಜಾರಿ ಹೋಗಬಹುದು...
ಆ ಘಟನೆಯ ಬಗ್ಗೆ ಹೇಳ್ತೇನೆ ಕೇಳಿ..
      ನಿಮ್ಮಂತೆ ಒಬ್ಬಳು ಪುಟ್ಟ ಹುಡುಗಿ ಇರ್ತಾಳೆ. ಆ ದಿನ ಅಮ್ಮನಿಗೂ ಆಕೆಗೂ ಜಿದ್ದಾಜಿದ್ದಿ. ಮೊಸರನ್ನ ಬೇಡವೆಂದು ಮಗಳು... ತಿನ್ನು... ತಿನ್ನು ಎಂದು ಬೆಂಬಿಡದ ಅಮ್ಮ. ನಿಮ್ಮ ಮನೆಯಲ್ಲೂ ಹೀಗೆ ತಿಂಡಿ ತಿನ್ನೋ ಜಗಳ ನಡೆಯುತ್ತಲೇ ಇರಬಹುದೇನೋ.....!
       ಮಗಳು ಮೊಸರನ್ನ ಬೇಡವೆಂದು ಹಠ ಹಿಡಿಯೋದನ್ನ ಕಂಡ ಅಪ್ಪ "ಮಗಳೇ ಒಂದಿಷ್ಟು ತಿಂದು ಬಿಡು ಹೊಟ್ಟೆ ಹಸಿಯುತ್ತೆ" ಎಂದು ಹೇಳಿದರೂ ಆಕೆ ಮೊಸರನ್ನ ತಿನ್ನಲು ಒಪ್ಪುತ್ತಿಲ್ಲ.   ಅಪ್ಪನಂತೂ ಮಗಳನ್ನು ತೊಡೆ ಮೇಲೆ ಕುಳ್ಳಿರಿಸಿ "ಕಂದಾ ಒಂದು ತುತ್ತು ತಿನ್ನು ಸಾಕು.. ನೀನು ಜಾಣೆ ಅಲ್ವಾ" , "ಸರಿ ನಾನು ಮೊಸರನ್ನ ತಿಂತೀನಿ.. ಆದ್ರೆ ನಾನು ಕೇಳಿದ್ದನ್ನ ಕೊಡಿಸ್ಬೇಕು... ಪ್ರಾಮಿಸ್ ಮಾಡು ಅಪ್ಪಾ" ಅಂತಾಳೆ .
       "ಸರಿ ಪುಟ್ಟಾ ಖಂಡಿತ ನೀನು ಹೇಳಿದ್ದನ್ನ ಕೊಡಿಸ್ತೀನಿ ಈಗ ಮೊಸರನ್ನ ತಿನ್ನು" ಅಂದಾಗ ಆಕೆ ಬಲು ಸಂತೋಷದಿಂದ ಮೊಸರನ್ನ ಇಷ್ಟವಿಲ್ಲದಿದ್ದರೂ ತಿಂದು ಖಾಲಿ ಮಾಡ್ತಾಳೆ. ಕೈ ತೊಳೆದು ಬಂದ ಮಗಳಲ್ಲಿ ಅಪ್ಪ ಕೇಳ್ತಾರೆ" ಮಗಳೇ ನಿನ್ಗೆ ಏನ್ ಕೊಡಿಸ್ಬೇಕು ಹೇಳು" 
"ಅಪ್ಪ ನಾನು ಕೇಳಿದ್ದನ್ನ ಖಂಡಿತ ಕೊಡಿಸ್ತೀ ತಾನೇ" "ಖಂಡಿತ ಮಗಳೇ ಯಾವ ಚಾಕ್ಲೇಟ್ ಬೇಕು ಹೇಳು" , "ಅಪ್ಪಾ ನಂಗೆ ಚಾಕ್ಲೇಟ್ ಬೇಡ ನನ್ನ ತಲೆ ಬೋಳಿಸ್ಬೇಕಪ್ಪಾ..... "ಮಗಳ ಮಾತಿಗೆ ಅಪ್ಪನಿಗೆ ಶಾಕ್ ಹೊಡೆದ ಹಾಗಾಯ್ತು ಇದೇನ್ ಇವಳು ಹೀಗೆ ಹೇಳ್ತಾ ಇದ್ದಾಳೆ... ತಲೆ ಬೋಳಿಸೋದ... ಅಪ್ಪ ಆಶ್ಚರ್ಯದಿಂದ ಮಗಳತ್ತ ನೋಡ್ತಾರೆ.    "ಮಗಳೇ ಹೆಣ್ಣು ಮಕ್ಳು ಜಡೆಬಿಟ್ಟು.. ಹೂ ಇಟ್ಕೊಂಡ್ರೇನೇ ಚಂದ.. ತಲೆ ಬೋಳಿಸ್ಕೊಂಡ್ರೆ ತಮಾಷೆ ಮಾಡ್ತಾರೆ ಪುಟ್ಟಾ...."   , "ಇಲ್ಲ ನಂಗೆ ನಾಳೆನೆ ತಲೆ ಬೋಳಿಸ್ಬೇಕು ಅಪ್ಪಾ.."   ಹಾಗೂ ಹೀಗೂ ಕೊನೆಗೆ ಅಪ್ಪ ಮಗಳ ಮಾತನ್ನು ಒಪ್ಪಿಕೊಂಡು ಮಗಳ ತಲೆ ಬೋಳಿಸ್ಕೊಂಡು ಬರ್ತಾರೆ. ಮರುದಿನ ಅಪ್ಪನ ಜೊತೇಲಿ ಕಾರಲ್ಲಿ ಕುಳಿತು ಸ್ಕೂಲ್ಗೆ ಹೋಗ್ತಾಳೆ. ಸ್ಕೂಲ್ ತಲಪುತ್ತಲೇ ಆಕೆ ಕಾರಿಂದ ಇಳಿದು ಓಡಿ ಹೋಗಿ ಗೇಟ್ ಬಳಿ ನಿಂತು ಸುತ್ತಲೂ ನೋಡುತ್ತಾಳೆ. ಮಗಳು ಯಾರನ್ನು ಹುಡುಕ್ತಿದ್ದಾಳೆ ಎಂದು ಅಪ್ಪ ಕಾರಲ್ಲಿ ಕುಳಿತು ಮಗಳನ್ನೇ ನೋಡ್ತಿರಬೇಕಾದ್ರೆ ಆಕೆಯ ಬಳಿಗೆ ತಲೆ ಬೋಳಿಸಕೊಂಡ ಹುಡುಗನೊಬ್ಬ ಓಡುತ್ತಾ ಬಂದು ಆಕೆಯ ಕೈಹಿಡಿದು ನಗುತ್ತಾ ಮಾತಾಡ್ತಾನೆ. ಇಬ್ಬರೂ ಕೈಕೈ ಹಿಡಿದು ನಗುತ್ತಾ ಅದೇನೋ ಮಾತಾಡ್ತಾ ಇರ್ಬೇಕಾದ್ರೆ ಕಾರಲ್ಲಿ ಕುಳಿತಿದ್ದ ಅಪ್ಪನ ಬಳಿಗೆ ಹೆಂಗಸೊಬ್ಬಳು ಅಳುತ್ತಾ ಬಂದು ಕೈಮುಗಿದು ನಿಂತ್ಕೊಂಡು "ಸ್ವಾಮೀ ಆ ತಲೆ ಬೋಳಿಸ್ಕೊಂಡ ಹುಡುಗಿ ನಿಮ್ ಮಗಳೇ ಅಂದಾಗ "ಹೌದು ಆಕೆ ನನ್ ಮಗಳು ಯಾಕೆ"    "ಆಕೆ ಮಗಳಲ್ಲ ಸ್ವಾಮಿ ದೇವತೆ... ದೇವತೆಯವಳು... ಆಕೆಯನ್ನ ಮಗಳಾಗಿ ಪಡೆದ ಪುಣ್ಯವಂತರು ನೀವು ಎನ್ನುತ್ತಾ ಕೈಮುಗಿದು ಅಳುತ್ತಾಳೆ.
      ಕಾರಲ್ಲಿದ್ದ ಅಪ್ಪನಿಗೆ ಒಂದೂ ಅರ್ಥವಾಗಲಿಲ್ಲ. ಆಗ ಆ ಹೆಂಗಸು "ಸ್ವಾಮೀ.. ಕಳೆದ ಕೆಲವು ದಿನಗಳಿಂದ ನನ್ನ ಮಗನಿಗೆ ಅಸೌಖ್ಯವುಂಟಾಯ್ತು. ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿದಾಗ ಆತನಿಗೆ ರಕ್ತದ ಕ್ಯಾನ್ಸರ್ ಇದೆ ಎಂದು ಖಚಿತಪಡಿಸಿದ ಡಾಕ್ಟರ್ ಆತನಿನ್ನು ಹೆಚ್ಚು ದಿನ ಬದುಕೋದಿಲ್ಲ.. ಆತನ ಇಷ್ಟದಂತೆ ನಡೆದುಕೊಂಡು ಆತನನ್ನು ಕಳೆದು ಕೊಳ್ಳಲು ಮಾನಸಿಕವಾಗಿ ತಯಾರಾಗಿರಿ ಎಂದು ಹೇಳಿದ್ದಾರೆ. ಕಳೆದ ಶುಕ್ರವಾರ ನಿಮ್ ಮಗಳು ನಮ್ಮನೆಗೆ ಬಂದು ನನ್ ಮಗನ ಪಕ್ಕದಲ್ಲಿ ಕುಳಿತು ಸ್ಕೂಲ್ಗೆ ಬರುವಂತೆ ಒತ್ತಾಯಿಸುತ್ತಾಳೆ. ಅದಕ್ಕೆ ಒಪ್ಪದ ನನ್ ಮಗ ಇಲ್ಲ ನಾನ್ ಸ್ಕೂಲ್ಗೆ ಬರೋದಿಲ್ಲ. ನನ್ ಬೋಳು ತಲೆ ನೋಡಿ ಎಲ್ರೂ ನಗ್ತಾರೆ ಅಂತ ಹೇಳ್ತಾನೆ. ಆಗ ನಿಮ್ ಮಗಳು ಇಲ್ಲ ಕಣೋ ನಿನ್ನ ನೋಡಿ ಯಾರೂ ನಗೋಲ್ಲ.. ನಾನು ಪ್ರಾಮಿಸ್ ಮಾಡ್ತೀನಿ ಕೇಳು ಖಂಡಿತಾ ನಿನ್ನ ನೋಡಿ ಯಾರೂ ನಗೋಲ್ಲ ಕಣೋ ಎಂದು ಆತನಿಗೆ ಧೈರ್ಯ ತುಂಬಿ ಹೋಗಿದ್ದಳು.. ಇಂದು ಈ ರೀತಿ ತನ್ನ ತಲೆಯನ್ನೇ ಬೋಳಿಸ್ಕೊಂಡು ಬಂದಿದ್ದಾಳೆ ನೋಡಿ ಸ್ವಾಮಿ ಆಕೆ ದೇವತೆ. ಕಣ್ಗೆ ಕಾಣೋ ದೇವರ ನಿಜರೂಪ ಅವಳು , ಎನ್ನುತ್ತಾ ಆ ಹೆಂಗಸು ಜೋರಾಗಿ ಬಿಕ್ಕಿ ಬಿಕ್ಕಿ ಅಳುತ್ತಾಳೆ.
ಕಾರಲ್ಲಿ ಕುಳಿತಿದ್ದ ಅಪ್ಪನಿಗೆ ಇದೆಲ್ಲವನ್ನೂ ಕೇಳಿ ಕಣ್ಣು ತುಂಬಿ ಬಂತು. ಅದು ಆನಂದ ಭಾಷ್ಪವೋ.. ಕಣ್ಣೀರ ಧಾರೆಯೋ.. ಹೇಳಲಾಗದ ಕ್ಷಣ.. ಇನ್ನೊಬ್ಬರ ಭಾವನೆಗೆ ಸ್ಪಂದಿಸದ ಸ್ವಾರ್ಥ ಜಗದಲ್ಲಿ ಆ ಪುಟ್ಟ ಹುಡುಗಿ ದೇವತೆಯಂತೆ ಕಂಡಳು.. ಮಾನವೀಯತೆಯಿಂದ ಮೆರೆದಳು.. ಮನುಕುಲಕ್ಕೆ ಮಾದರಿಯಾದಳು.  
....................................ಜಯಲಕ್ಷ್ಮಿ ಶರತ್ ಶೆಟ್ಟಿ
ಕತ್ತರಿಕೋಡಿ 
ಶಿಕ್ಷಕಿ.... ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆ ತೊಟ್ಟೆತ್ತೋಡಿ.
ಮಂಜೇಶ್ವರ ತಾಲೂಕು 
ಕಾಸರಗೋಡು ಜಿಲ್ಲೆ
ಕೇರಳ ರಾಜ್ಯ
**********************************************








Ads on article

Advertise in articles 1

advertising articles 2

Advertise under the article