ಪದಗಳ ಆಟ ಭಾವ ಚಿತ್ರ ಪಾತ್ರ : ಸಂಚಿಕೆ - 22
Friday, December 17, 2021
Edit
ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 22
ನಿರ್ಮಲ ಸುಮತಿಯರ
ದಾಂಪತ್ಯ ತೋಟದಿ
ಅರಳಿತು ಮೌನವಾಗಿ
ಪುಟ್ಟ ತೋಟದ
ಹೂವು ಯಾರ
ಮುಡಿಗೂ ಹೋಗದೆ
ಶ್ರೀಶೈಲದ
ಲಿಂಗದ ನಿರ್ಮಾಲ್ಯವಾಯಿತು
ಈ ಪಯಣದಲ್ಲಿ
ಬಸವಣ್ಣ ಅಲ್ಲಮ
ಸಿದ್ದರಾಮ ಮಾಚವ್ವೆ
ಸತ್ಸಂಗ ಸೌಗಂಧ
ಇಮ್ಮಡಿ ಚೆಲುವೆ
ಎಲ್ಲ ಹೂಗಳಂತಲ್ಲ
ಯಾರಿಗೂ ಕೊಯ್ಯಲಾಗಲಿಲ್ಲ
ಪಕಳೆಗಳು ಬಾಡಲಿಲ್ಲ
ಅಂತರಂಗದ ಅಧ್ಯಾತ್ಮ
ಸೌಂದರ್ಯದಿ ಕಂಗೊಳಿಸಿತು
ಮುಡಿ ಏರಲಿಲ್ಲ
ಜಡೆ ಸೇರಲಿಲ್ಲ
ಮನೆ ಬಯಸಲಿಲ್ಲ
ಕಿರೀಟದಿ ಬಂಧಿಯಾಗಲಿಲ್ಲ
ಮನೆ ದೇಹ
ಆತ್ಮ ಶಿವಾರ್ಪಿತ
ಮೋಕ್ಷ ಅರಿವು
ತತ್ವ ಜ್ಞಾನೋದಯ
ಜಿಜ್ಞಾಸೆ.
ಲೌಕಿಕ ಭೋಗ
ಭಾಗ್ಯವಿಲ್ಲ
ಗುರಿ ಶಿವೈಕ್ಯ
ದೈಹಿಕ ಪ್ರೀತಿ
ನಶ್ವರ
ದೈವಿಕ ಪ್ರೇಮ
ಶಾಶ್ವತ
ಅಹಂ ತೊರೆದು
ಆಸೆ ಗೆದ್ದು
ಮಾನಾಪಮಾನ ಬಿಟ್ಟು
ಕೇಶವಸನೆ
ಸಂತೆಯೊಳಗಿನ
ಸ್ತುತಿ-ನಿಂದೆ ಗಳಿಗೆ
ಸಮಾಧಾನಿಯಾಗಿ
ಕನಸು ಕಂಡಂತೆ
ಗೊರವನ ಕೂಡಿದಳು
ಪುರುಷಪ್ರಧಾನ
ಸಮಾಜದ ಮೌಡ್ಯ
ತೊಳೆಯ ಹೊರಟ
ಮೊದಲ ಹೆಣ್ಣು
ಮೊದಲ ಕವಯಿತ್ರಿ
ನಗ್ನತೆ ಪ್ರಶ್ನಿಸಿದಾಗಲೂ
ನಿರ್ಗುಣ ಭಾವದಿಂದ
ನಿರ್ಮಲ ಚಿತ್ರದಿಂದ
ನಿರಾಕಾರನನ್ನು ನೆನೆದಳು
ಕನ್ನಡ ಸಾಹಿತ್ಯದ
ಕರ್ನಾಟಕ ಚರಿತೆಯ
ಪ್ರಬಲ ಧ್ವನಿಶಕ್ತಿ
ಲಿಂಗ ತಾರತಮ್ಯ ಪ್ರಶ್ನಿಸಿದ
ಅನುಪಮ ದೃತಿ
ಲಕ್ಷ್ಮಿ ಸೀತೆಯರ
ಪಾತ್ರ ಒಡೆದ
ಅದಮ್ಯ ಶ್ರೀಮತಿ
ವಚನಗಳಲ್ಲಿ ತೀವ್ರತೆ
ಹರಿತ ವಿಮರ್ಶೆ
ಸಾಮಾಜಿಕ ಸುಧಾರಣೆ
ಉಡುಗಣಿಯ ಧ್ವನಿ
ಈಗಲೂ ಉಡುಗಿಲ್ಲ
ಗುಡುಗ ಸಾಲಂತೆ
ಸಾಹಿತ್ಯ ಅಂಬರದಿ
ಅನುರಣಿಸುತಿಹುದು
ಇಂಥವರು ನಿಮ್ಮೊಳಗಿಲ್ಲವೇ .................?
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು
Mob: +91 99016 38372
*******************************************