-->
ಬದಲಾಗೋಣವೇ ಪ್ಲೀಸ್ - ಸಂಚಿಕೆ : 21

ಬದಲಾಗೋಣವೇ ಪ್ಲೀಸ್ - ಸಂಚಿಕೆ : 21

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು

     
                 ಲಸಿಕೆ ಹಾಕಿಸಿಲ್ಲವೇ... 
             ಕೂಡಲೇ ಲಸಿಕೆ ಹಾಕಿಸಿ ... !
         ---------------------------------
      ಕೊರೊನಾ ಲಸಿಕೆಯ 2ನೇ ಡೋಸ್ ಪಡೆದ ಸಂಭ್ರಮದಲ್ಲಿ ಮುನ್ನುಗ್ಗುತ್ತಿದ್ದ ನನಗೆ ದಾರಿಯಲ್ಲಿ ಮುತ್ತಜ್ಜಿ ಸಿಕ್ಕಿದಳು. ನನ್ನನ್ನು ತಡೆದು, "ಏನು ಮಗ , ತುಂಬಾ ಸಂಭ್ರಮದಲ್ಲಿದ್ದೀಯಾ..?" ಎಂದಳು. "ಹೌದು ಅಜ್ಜಿ ನನಗೆ 2ನೇ ಡೋಸ್ ಆಯಿತು. ನಿಮ್ಮದು ಆಯಿತಾ ?" ಎಂದೆ. ಆಗ ನಕ್ಕ ಮುತ್ತಜ್ಜಿ "ನನ್ನದು ಆಗಿದೆ ಆದರೆ ಮುಖ್ಯವಾದ ಇನ್ನೊಂದು ಲಸಿಕೆ ಹಾಕಿಸಿಲ್ಲವೇ..? ಕೂಡಲೇ ಲಸಿಕೆ ಹಾಕಿಸು" ಎಂದರು. ಕೂತೂಹಲದಿಂದ ಕಿವಿಯರಳಿಸಿ "ಅದು ಯಾವ ಲಸಿಕೆ ?" ಎಂದು ಕೇಳಿದೆ. "ಅದುವೇ ಎಲ್ಲರಿಗೂ ಬೇಕಾದ ಮಾನವೀಯತೆಯ ಲಸಿಕೆ" ಎಂದು ಹೇಳಿ ದರದರನೇ ಮುಂದೇ ಹೋದಳು. ಆ ಲಸಿಕೆ ಎಲ್ಲಿ ಸಿಗುತ್ತದೆ...? ಲಸಿಕೆ ಹಾಕುವವರು ಯಾರು...? ಲಸಿಕೆ ಹಾಕಿಸುವಾಗ ಸವಾಲುಗಳೇನು? " ಎಂದು ಆಲೋಚಿಸಿದಾಗ ನನಗೆ ತಾಯಿ-ಮಗುವಿನ ಔಷಧಿ ಕುಡಿಸುವ ಘಟನೆ ನೆನಪಾಯ್ತು.
       ತಾಯಿಯೊಬ್ಬಳು ತನ್ನ 3ರ ಹರೆಯದ ಮಗುವಿನ ಸುತ್ತ ಔಷಧಿ ಮಾತ್ರೆಯನ್ನು ಹಿಡಿದುಕೊಂಡು ಮನೆಯಲ್ಲೆಲ್ಲ ಓಡಾಡುತ್ತಿದ್ದಾಳೆ. ಮಗುವು ಅಮ್ಮನ ಕೈಯಲ್ಲಿರುವ ಮಾತ್ರೆಯನ್ನು ನೋಡಿ ಹೇಗಾದರೂ ಮಾತ್ರೆಯಿಂದ ತಪ್ಪಿಸಬೇಕೆಂದು ಪ್ರಯತ್ನಿಸುತ್ತಿದೆ. ರೋಗ ಗುಣವಾಗಲು ಮಾತ್ರೆಯ ಮಹತ್ವವನ್ನು ಅರಿತ ಅಮ್ಮ ಮಾತ್ರ ಹೇಗಾದರೂ ಮಾಡಿ ಮಗುವಿಗೆ ಮಾತ್ರೆ ಕುಡಿಸಲೇಬೇಕೆಂದು ಹರಸಾಹಸ ಪಡುತ್ತಿದ್ದಾಳೆ. ಮಾತ್ರೆಯ ಮಹತ್ವವನ್ನು ಅರಿಯದ ಮಗು ಮಾತ್ರ "ನಾನು ಸರಿಯಿದ್ದೇನೆ.... ನನಾಗ್ಯಾಕೆ ಔಷಧಿ.." ಎಂದು ಅಮ್ಮನ ಕೈಯಲ್ಲಿರುವ ಮಾತ್ರೆಯಿಂದ ತಪ್ಪಿಸಲು ಗರಿಷ್ಠ ಪ್ರಯತ್ನ ಮಾಡುತ್ತಿದೆ. ಈ ಆಟದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ತಾಯಿಯು ತನ್ನ ಕುರುಡು ಪ್ರೀತಿಯಿಂದ ನಿರ್ಲಕ್ಷ್ಯ ಭಾವ ತೋರಿದರೂ ಅಥವಾ ಮಗು ಕೂಡಾ ಮಾತ್ರೆ ತಿನ್ನಲು ನಿರ್ಲಕ್ಷ್ಯ ಮಾಡಿದರೂ... ಸಾಯುವುದು ಮೊದಲು ಮಗುವೇ. ಇದು ಚಿಕ್ಕಮಕ್ಕಳಿಗೆ ಔಷಧಿ ಕೊಡುವಲ್ಲಿ ಕಷ್ಟಪಡುತಿರುವ ಹೆಚ್ಚಿನ ತಾಯಂದಿರ ಕತೆಯಾಗಿದೆ.
       ಹೌದು... ಇಲ್ಲಿ ಔಷಧಿಯ ಸ್ಥಾನದಲ್ಲಿ ಮಾನವೀಯ ಗುಣಗಳನ್ನು ಇಟ್ಟಾಗ ಪ್ರಸ್ತುತ ಪರಿಸ್ಥಿತಿಯ ಅರಿವಾಗುತ್ತದೆ. ಒಂದೆಡೆ ತಾಯಿಯ ಜವಾಬ್ದಾರಿಯುತ ಸ್ಥಾನದಲ್ಲಿರುವ ಗುರುಹಿರಿಯರು , ಮಾರ್ಗದಶಕರು , ನಾಯಕರಿದ್ದರೆ ಇನ್ನೊಂದೆಡೆ ಅಮಾನವೀಯ ಗುಣಗಳಿಗೆ ದಾಸರಾಗುತ್ತಿರುವ ಪ್ರೌಢ ಹಾಗೂ ಯುವ ಜನಾಂಗ. ಪ್ರಸ್ತುತ ಆಧುನಿಕ ಯಾಂತ್ರಿಕ ಪರಿಸರದಲ್ಲಿ ಯಾರು - ಯಾರಿಗೆ - ಯಾವ ರೀತಿ ಮಾನವೀಯ ಗುಣಗಳನ್ನು ದಾಟಿಸುವುದು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಒಂದೆಡೆ ನಮ್ಮ ಮಕ್ಕಳು, ನಮ್ಮ ಪರಿಸರ , ನಮ್ಮ ಊರು , ನಮ್ಮ ಸಮಾಜ , ನಮ್ಮ ದೇಶ ಚೆನ್ನಾಗಿರಬೇಕು , ಆರೋಗ್ಯವಂತರಾಗಿರಬೇಕು, ನೈತಿಕ ಗುಣಶೀಲರಾಗಿರಬೇಕು ಹಾಗೂ ಸಮಾಜ ಕಂಟಕರಾಗದೆ ಸಮಾಜ ಕಲಶರಾಗಬೇಕೆಂದು ಬಯಸಿ ಸಜ್ಜನ ನಾಗರಿಕರನ್ನು ಸೃಷ್ಟಿಸುತಿರುವ ಜವಾಬ್ದಾರಿಯುತ ಪ್ರಜ್ಞಾಶೀಲ ಜನರಿದ್ದರೆ , ಇನ್ನೊಂದೆಡೆ ತಾನು ಮತ್ತು ತನಗೆ ಮಾತ್ರ ಎಂಬ ನಿಸ್ವಾರ್ಥಿಗಳು , ಅರಿಷಡ್ವೈರಿ ಅಸುರಿಗಳು , ಭೃಷ್ಟಾಚಾರಿಗಳು , ಲಂಚಕೋರ ಸುಳ್ಳುಗಾರರು , ವಿಕೃತ ಮನೋಭಾವಿಗಳು , ಅತ್ಯಾಚಾರಿ- ಅನಾಚಾರಿಗಳು, ಭಯೋತ್ಪಾದಕರು..... ಹೀಗೆ ಅನೈತಿಕ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುತ್ತಿರುವ ಜನರು. 
          ಇವರ ಮಧ್ಯೆ ಆರೋಗ್ಯಯುತ ಸಮಾಜಕ್ಕಾಗಿ ನಮ್ಮ ಹಿರಿಯರು ಹಾಗೂ ಪ್ರಾಜ್ಞರು ಕಂಡುಕೊಂಡು ಮಾನವೀಯ ಮೌಲ್ಯಗಳಾದ ಪ್ರೀತಿ , ಸತ್ಯ , ಪ್ರಾಮಾಣಿಕತೆ , ಸಹಕಾರ , ನಿಸ್ವಾರ್ಥ ... ಇತ್ಯಾದಿ ಗುಣಗಳನ್ನು ಹೆಚ್ಚಿಸಿ ದುರ್ಗುಣಗಳನ್ನು ನಾಶ ಮಾಡುವ ಮಾನವೀಯತೆಯ ಲಸಿಕೆಗಳನ್ನು ಪಡೆಯಲು ಶತಾಯಗತಾಯ ತಪ್ಪಿಸುತ್ತಿರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಏರುತಿದೆ. ಇವರಿಗೆ ನೈತಿಕತೆಯ ಲಸಿಕೆ ಹಾಕುವವರಾರು ಎಂಬುದೇ ಸವಾಲಿನ ಸಮಸ್ಯೆಯಾಗಿದೆ...!
         ಆದರೂ ಸಮಾಜ ಹಾಗೂ ವ್ಯಕ್ತಿತ್ವದ ಹಿತಕ್ಕಾಗಿ ಮಾನವೀಯತೆಯ ಲಸಿಕೆ ಹಾಕಿಸಲೇಬೇಕಾಗಿದೆ. ರೋಗಿಯ ಜೀವವನ್ನುಳಿಸಲು ವೈದ್ಯರು ಪ್ರಯತ್ನಿಸುವಂತೆ, ಮಕ್ಕಳ ಆರೋಗ್ಯಕ್ಕಾಗಿ ಅಮ್ಮಂದಿರು ಕಾಳಜಿ ತೋರುವಂತೆ , ಸಮಾಜದ ಹಿತಕ್ಕಾಗಿ ಚಿಂತನಶೀಲರಾದ ನಾವೆಲ್ಲರೂ ತ್ಯಾಗಜೀವಿಗಳಾಗ ಬೇಕಾಗಿದೆ. ಸತ್ಯ ಮಾರ್ಗದಲ್ಲಿರುವ ನಾವು ಯಾರಿಗೂ ಜಗ್ಗದೆ ಹೆದರದೆ ಎಲ್ಲರಿಗೂ ನೈತಿಕತೆಯ ಲಸಿಕೆಯನ್ನು ಹಾಕಿಸುವತ್ತ ಪ್ರಯತ್ನಶೀಲರಾಗಬೇಕಾಗಿದೆ. 
           ಇಲ್ಲಿರುವ ಎಲ್ಲಾ ಮಕ್ಕಳಲ್ಲಿ ನನ್ನ ವಿನಂತಿ ಎಂದರೆ ನೀವು ಕೂಡಾ ನಿಮ್ಮ ತಾಯಿ ಹಾಗೂ ತಾಯಿಯ ಸ್ಥಾನದಲ್ಲಿರುವ ಗುರುಹಿರಿಯರು ಹಾಗೂ ಮಾರ್ಗದರ್ಶಕರು ಹೇಳುವ ನೈತಿಕ ಗುಣ ಬೆಳೆಸುವ ಮಾತುಗಳನ್ನು ನಿರ್ಲಕ್ಷ್ಯ ಮಾಡದೆ ಕೇಳಿರಿ ಹಾಗೂ ಅವರಂತೆ ವರ್ತಿಸಿರಿ ಅವರಂತೆ ಸದ್ಗುಣ ಸಂಪನ್ನರಾಗಲು ನೈತಿಕತೆಯ ಲಸಿಕೆಯನ್ನು ಹಾಕಿಸಿರಿ. ಇದರಿಂದ ಸಧೃಡರಾಗಿ ಅತ್ಯುತ್ತಮ ಜೀವನ ನಡೆಸಬಹುದಾಗಿದೆ . ನೀವು ಇನ್ನೂ ಲಸಿಕೆ ಹಾಕಿಸಿಲ್ಲವೇ... ಕೂಡಲೇ ಹಾಕಿಸಿ .. ! ಈ ಬದಲಾವಣೆಗೆ ಯಾರನ್ನು ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article