-->
ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 19

ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 19

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 19


           ಬಾಬಾ ರಾಮದೇವ್ ಪತಂಜಲಿಯಲ್ಲಿ 
                  ಅಮಟೆ ಕಾಯಿ ಸಿಕ್ಕರೆ...?.
        ಈ ವರೆಗೆ ಕಂಡ ಮಹಾನ್ ಸಾಧಕರಲ್ಲಿ ನೀವು ಇನ್ನಷ್ಟು ಶ್ರೇಷ್ಠರಿದ್ದೀರಿ. ನಿಮ್ಮ ಅನುಮತಿ ಯೊಂದಿಗೆ ಕೆಲವು ಪ್ರಶ್ನೆ ಕೇಳುತ್ತೇನೆ. ಮಹಾನುಭಾವ, ಸರಿ ಸರಿ..  ಕೇಳಿ..ಕೇಳಿ.
        ಮುರಳೀಧರ ದೇವಿದಾಸರೆ ನೀವು ಓದಿದ್ದು ಕಾನೂನು ಆದರೆ ತೊಡಗಿಸಿಕೊಂಡದ್ದು ಸಮಾಜಸೇವೆಯಲ್ಲಿ. ಇದು ಹೇಗಾಯಿತು?
      ನಾನು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡೆ. ವಾರ್ಧಾದಲ್ಲಿ ಗಾಂಧಿಯವರ ಸೇವಾಗ್ರಾಮದಲ್ಲಿ ಕಾನೂನು ಪ್ರಾಕ್ಟೀಸ್ ಮಾಡುತ್ತಿದ್ದೆ. ಭಾರತೀಯ ನಾಯಕರು ಸ್ವಾತಂತ್ರ್ಯ ಚಳವಳಿಯ ಸಂದರ್ಭ ಜೈಲಿಗೆ ಹೋದಾಗಲೆಲ್ಲ ಬ್ರಿಟಿಷ್ ಸರ್ಕಾರದ ವಿರುದ್ಧ ಲಾಯರ್ ಆಗಿ ವಾದಿಸುತ್ತಿದ್ದೆ. ಸಮಾಜ ಸೇವಕನಾಗಲು ಗಾಂಧಿಯ ಪ್ರಭಾವ ಬಹಳ ಇತ್ತು. 
        ನಿಮಗೆ ಕುಷ್ಟರೋಗಿಗಳ ಸೇವೆ ಮಾಡಬೇಕು ಅನಿಸಿದ್ದು ಯಾವಾಗ...? 
       ......ಒಂದು ದಿನ ನಾನು ಕುಷ್ಠರೋಗಿ ತುಳಸಿ ರಾಮನನ್ನು ಅಚಾನಕ್ಕಾಗಿ ಕಂಡೆ. ಕಂಡು ಭಯಗ್ರಸ್ತನಾದೆ. ನಾನು ಕಾನೂನು ಸಮರ ಮಾಡುವಾಗ ಇರದ ಭಯ, ವಡೋದರದಲ್ಲಿ ಸವಾಲಿಗೆ ಪ್ರತಿಯಾಗಿ ಚರಂಡಿ ಸ್ವಚ್ಛಗೊಳಿಸುವಾಗ ಇರದ ಆತಂಕ, ತುಳಸಿ ರಾಮನ ಅವಸ್ಥೆಗೆ ಮುಖಾಮುಖಿಯಾದಾಗ ತೀವ್ರವಾಗಿ ಬರುತ್ತಿತ್ತು. ನನ್ನೊಳಗೆ ಕುಷ್ಟರೋಗಿಗಳ ಬಗೆಗಿರುವ ಭಯವನ್ನು ಹೋಗಲಾಡಿಸಲು ನಾನು ದೃಢ ನಿಶ್ಚಯ ಮಾಡಿಕೊಂಡೆ. 
   .....ಆ ರೋಗಿಗಳಿಗೆ ನೀವು ಚಿಕಿತ್ಸೆ ಮಾಡುತ್ತಿದ್ರಿ. ಆಪ್ತಸಲಹೆ ಕೊಡುತ್ತಿದ್ದಿರಿ.  ಇದು ಹೇಗೆ ಗೊತ್ತಿತ್ತು?
         ನಾನು ಕಲ್ಕತ್ತಾದ ಟ್ರಾಪಿಕಲ್ ಮೆಡಿಸಿನ್ ಶಾಲೆಯಲ್ಲಿ ಕುಷ್ಟರೋಗಕ್ಕೆ ಸಂಬಂಧಿಸಿದ ಕೋರ್ಸ್ ಅಧ್ಯಯನ ಮಾಡಿದೆ. ಅದು ತುಂಬಾ ಸಹಕಾರಿಯಾಯಿತು. 
  .....ಆಗ ಭಾರತದಲ್ಲಿ ಇಂತಹ ರೋಗಿಗಳ ಬಗ್ಗೆ ಯಾವ ಮನಸ್ಥಿತಿ ಇತ್ತು?
......ಭಾರತದಲ್ಲಿ ಇಂತಹ ರೋಗಿಗಳ ಬಗ್ಗೆ ಅಸ್ಪೃಶ್ಯತಾ ಭಾವನೆ ಮನೆಮಾಡಿತ್ತು. ಸಮಾಜದಿಂದ ವಿದೂರತೆ ಅವರನ್ನು ಮತ್ತಷ್ಟು ಖಿನ್ನತೆಗೆ ತಳ್ಳುತ್ತಿತ್ತು. ಈ ಬಗ್ಗೆ ಜನಜಾಗೃತಿ ಮೂಡಿಸಲು ನಾನು ಮೊದಲು ಕೆಲಸ ಮಾಡಬೇಕಾಯಿತು. 
        ಸಮಾಜಕ್ಕೆ ಅಂದರೆ ಸಮಾಜದ ಮನಸ್ಸುಗಳಿಗೆ ಹಿಡಿದ ಗ್ರಹಣವನ್ನು ಅಥವಾ ಕುಷ್ಟರೋಗವನ್ನು ಮೊದಲು ತೊಡೆಯಬೇಕು. ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದು ತೀರ್ಮಾನಿಸಿದೆ. ಕುಷ್ಠರೋಗಿಯ ಬ್ಯಾಸಿಲಸ್ ಸೂಕ್ಷ್ಮಾಣುಗಳನ್ನು ನನಗೆ ಚುಚ್ಚಿಸಿಕೊಂಡೆ. ಆ ಮೂಲಕ ಈ ರೋಗ ಭಯ ತರುವಷ್ಟು ಸಾಂಕ್ರಾಮಿಕವಲ್ಲ ಎಂದು ಶೃತಪಡಿಸಿದೆ.   ಸಮಾಜದಲ್ಲಿದ್ದ ಇನ್ನೂ ಅನೇಕ ತಪ್ಪು ಕಲ್ಪನೆಗಳನ್ನು ದೂರ ಮಾಡಿ ಭ್ರಮೆಯಿಂದ ಹೊರತಂದೆ. 
    .....ಇದಕ್ಕೆಲ್ಲಾ ನಿಮ್ಮ ಕುಟುಂಬದವರ ವಿರೋಧವಿರಲಿಲ್ಲವೇ..?  ನಿಮ್ಮ ತಂದೆ ತಾಯಿಯ ಬಗ್ಗೆ ಹೇಳಿ.....
        ನಾನು ಹುಟ್ಟಿದ್ದು ವಾರ್ಧಾದ ಶ್ರೀಮಂತ ಮನೆತನದಲ್ಲಿ. ದೇವಿದಾಸ್ ಮತ್ತು ಲಕ್ಷ್ಮೀಬಾಯಿ ನನ್ನ ತಂದೆ ತಾಯಿ. ನನ್ನ ಹದಿನಾಲ್ಕನೇ ವಯಸ್ಸಲ್ಲೇ ಸ್ಪೋರ್ಟ್ಸ್ ಕಾರು ಬಿಡ್ತಾ ಇದ್ದೆ. ಗನ್ ನಿಂದ ಕರಡಿ,  ಜಿಂಕೆ ಬೇಟೆಯಾಡುತ್ತಿದ್ದೆ. ನನ್ನ ವಾಂಚಿತ ಫಲಗಳೆಲ್ಲ ಕೇಳುವ ಮೊದಲೇ ಮಡಿಲಿಗೆ ಬಂದು ಸೇರುತ್ತಿತ್ತು. ಬಾಹ್ಯ ಪ್ರಪಂಚದ ಸಂಕಟಗಳಿಂದ ನನ್ನನ್ನು ಬಹುದೂರ ಇಡಲಾಯಿತು. ಹೊರಗಿನ ಯಾವುದೇ ತಾಕಲಾಟಗಳು, ಸಮಸ್ಯೆಗಳು ನನ್ನನ್ನು ತಟ್ಟಿಯೇ ಇರಲಿಲ್ಲ. ನಾನು ಜನರನ್ನು ಸ್ಪರ್ಶಿಸಿರಲಿಲ್ಲ .  ಆದರೆ ಉನ್ನತ ವಿದ್ಯಾಭ್ಯಾಸ ಮಾಡುತ್ತಾ ಹೋದಂತೆ ಭಾರತೀಯ ಸಮಾಜದ ಅನೇಕ ಜ್ವಲಂತ ಸಮಸ್ಯೆಗಳು ನನಗೆ ಅರಿವಿಗೆ ಬಂತು. ಇಲ್ಲಿನ ಅಸಮಾನತೆ ನನ್ನನ್ನು ಬಹುವಾಗಿ ಕಾಡಿತು. ನಾನು ಸಾಮಾನ್ಯರಂತೆ ಸರಳ ಜೀವನಕ್ಕೆ ಆಕರ್ಷಿತನಾದೆ. ಅದಕ್ಕಾಗಿ ಗಾಂಧಿಯ ಸೇವಾಗ್ರಾಮದಲ್ಲಿ ಚರಕದಿಂದ ನೂಲು ತೆಗೆಯುತ್ತ ಖಾದಿಯನ್ನೇ ಕೊಡಲಾರಂಭಿಸಿದೆ. ಸೇವೆಯೇ ಪರಮಧರ್ಮ ಎಂಬ ಗಾಂಧಿ ತತ್ವಾನುಯಾಯಿಯಾಗಿ ಆಜೀವಪರ್ಯಂತ ಬದುಕಲು ನಿರ್ಧರಿಸಿದೆ. 
         ಕುಷ್ಟರೋಗಿಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ಕೊಡಿಸುವುದು ಹೇಗೆ ಸಾಧ್ಯ?
           ಅವರಿಗಾಗಿ ಮೂರು ಆಶ್ರಮಗಳನ್ನು ಸ್ಥಾಪಿಸಿದೆ. ಕುಷ್ಠರೋಗಿಗಳ ಚಿಕಿತ್ಸಾ ಮತ್ತು ಪುನರ್ವಸತಿ ಕೇಂದ್ರ, ವಿಕಲಾಂಗರಿಗೆ ಬಡವರಿಗೆ ಮಹಾರಾಷ್ಟ್ರದಲ್ಲಿ ಪತ್ನಿ ಸಾಧನ ಜೊತೆ ಆನಂದವನದಲ್ಲಿ ಒಂದು ತರುವಿನ  ಕೆಳಗೆ ಚಿಕಿತ್ಸಾಲಯ ಆರಂಭಿಸಿದೆ. ಅವರಿಗೆ ಗೌರವದ ಬದುಕನ್ನು ನೀಡುವುದಕ್ಕಾಗಿ ಕೃಷಿ ಮತ್ತು ಗುಡಿ ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಆನಂದವನದಲ್ಲಿ ಎರಡು ಆಸ್ಪತ್ರೆ ಮತ್ತು ಅನಾಥಾಶ್ರಮ, ಅಂಧರಿಗಾಗಿ ಶಾಲೆ, ಒಂದು ವಿಶ್ವವಿದ್ಯಾನಿಲಯ ಇದೆ. 
     ....ಆನಂದವನ ಗಾಂಧಿತತ್ವ ಪ್ರತಿಪಾದಕರಾದ ನಿಮಗೆ ಒಂದು ಪ್ರಯೋಗ ಕ್ಷೇತ್ರವಾಗಿತ್ತೆ..? 
   .......ಹೌದು ಆನಂದವನದಲ್ಲಿ ಗಾಂಧಿಯ ಸ್ವಗ್ರಾಮ- ಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸಿದ್ದೇನೆ. ನಮಗೆ ಅವಶ್ಯವಿದ್ದಷ್ಟನ್ನು ಅಲ್ಲೇ ಬೆಳೆಯುತ್ತೇವೆ, ಖಾದಿ ಬಟ್ಟೆಯನ್ನು ನಾವೇ ನೂಲುತ್ತೇವೆ. ನಾನು ಹಣ್ಣು-ತರಕಾರಿಗಳು ಉಳ್ಳ ಸರಳ ಆಹಾರವನ್ನು ಸೇವಿಸುತ್ತೇನೆ. ನಾನು ಹೇಳುವುದು ಇಷ್ಟೇ. ಕೆಲಸ ಕಟ್ಟುತ್ತದೆ, ದಾನ ನಾಶಮಾಡುತ್ತದೆ. ದೇವರು ಬಿಜಿಯಾಗಿದ್ದಾರೆ.  ನಮ್ಮ ಕೆಲಸ ನಾವೇ ಮಾಡಬೇಕು. 
      .......ಲೋಕ್  ಬಿರಾದರ ಪ್ರಕಲ್ಪ ಸಂಸ್ಥೆ ಸ್ಥಾಪಿಸಿದ್ದು ಏನಿದು?   
    ....ಅದು ಗಡಚಿರೋಲಿಯ ಮಡಿಯಾ ಗುಂಡ ಆದಿವಾಸಿಗಳಿಗಾಗಿ ಸ್ಥಾಪಿಸಿದ ಸಹೋದರರ ಸಂಸ್ಥೆ. ಅಲ್ಲಿ ಅವರಿಗೆ ಎಲ್ಲಾ ಜೀವನ ಕೌಶಲಗಳನ್ನು ಕಲಿಸಲಾಗುತ್ತದೆ. ಮೂಲಭೂತವಾದ ವಸತಿ , ನೀರು , ಶಿಕ್ಷಣ, ಆರೋಗ್ಯ ಹೀಗೆ ಎಲ್ಲಾ ಸವಲತ್ತುಗಳು ಸಿಗುವ ಹಾಗೆ ನೋಡಿಕೊಳ್ಳಲಾಗುತ್ತದೆ. 
       .....ನೀವು ನಡಿಗೆಯ ಮೂಲಕ ಕೆಲವು ಆಂದೋಲನ ಮಾಡಿದ್ದೀರಿ ಅವುಗಳ ಬಗ್ಗೆ ತಿಳಿಸುವಿರಾ?
         ......ಭಾರತೀಯರಲ್ಲಿ ಕೋಮುವಾದ ನಿವಾರಣೆಗಾಗಿ ಐಕ್ಯತೆಯನ್ನು ಸ್ಥಾಪಿಸುವುದಕ್ಕಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3500 ಮೈಲ್ ದೂರ ನಡಿಗೆ. ಭಾರತ್ ಜೋಡೋ ಆಂದೋಲನ ಕೈಗೊಂಡೆ. ಎರಡನೇ ನಡಿಗೆ ಅಸ್ಸಾಂನಿಂದ ಗುಜರಾತಿಗೆ ಸಾವಿರದ ಎಂಟು ನೂರು ಮೈಲು.  ಅಲ್ಲಿಯ ನಿವಾಸಿಗಳ ಅಕ್ರಮ ತೆರವು ಹಾಗೂ ಪರಿಸರ ಹಾನಿ ವಿರುದ್ಧ ಹಮ್ಮಿಕೊಂಡಿದ್ದೆವು. 
       .....ಅಂದರೆ ಪರಿಸರ ಜಾಗೃತಿಗಾಗಿಯು ತಾವು ಕೆಲಸ ಮಾಡಿದ್ದೀರಿ...? 
         ಸಾವಿರದ ಒಂಬೈನೂರ ತೊಂಬತ್ತರಲ್ಲಿ ಸರ್ದಾರ್ ಸರೋವರಕ್ಕೆ ಕಟ್ಟುವ ಅಣೆಕಟ್ಟಿನ ವಿರುದ್ಧ ನರ್ಮದಾ ಬಚಾವೋ ಆಂದೋಲನದಲ್ಲಿ ಸಕ್ರಿಯನಾಗಿದ್ದೆ.  ಏಳು ವರ್ಷ ಕಾಲ ನರ್ಮದೆಯ ತಟದಲ್ಲೇ ಬಿಡಾರ ಹೂಡಿದ್ದೆ.  ಪರಿಸರ ಸಮತೋಲನ ನನ್ನ ಇನ್ನೊಂದು ಕಾಳಜಿ. ಅದಕ್ಕಾಗಿ ವನ್ಯಜೀವಿ ಸಂರಕ್ಷಣೆಯ ಕಾರ್ಯವನ್ನು ಕೈಗೊಂಡೆ. 
        .... ನೀವು ಎಂದೂ  ರಾಜಕೀಯ ನಾಯಕನಾಗಲಿಲ್ಲ ಯಾಕೆ? 
      .....ನಾನು ದೊಡ್ಡ ನಾಯಕನಾಗಲು ಎಂದೂ i ಬಯಸುವುದಿಲ್ಲ. ಒಂದು ಎಣ್ಣೆ ಕ್ಯಾನ್ ಜೊತೆ ಮೆಕ್ಯಾನಿಕ್ ಆಗಿರೋದು.... ಕಾವಿ ತೊಟ್ಟವರ ಕೆಲಸಕ್ಕಿಂತ ಇದು ಮೇಲು. 
      ನಿಮ್ಮ ಈ ಕಾಯಕದ ಭವಿಷ್ಯ..?
ನನ್ನ ಇಬ್ಬರು ಮಕ್ಕಳು ಪ್ರಕಾಶ ಹಾಗೂ ವಿಕಾಸ್ ವೈದ್ಯರಾಗಿ ನಮ್ಮ ಚಿಕಿತ್ಸಾಲಯಗಳಲ್ಲಿ ಸೇವೆ ಮಾಡುತ್ತಿದ್ದಾರೆ. ನನ್ನ ವೈದ್ಯ ಸೊಸೆಯಂದಿರು ಪತಿಗೆ ಸರ್ವ ವಿಧದಲ್ಲೂ ಸಹಾಯಕರಾಗಿದ್ದಾರೆ.
  .... ನಿಮಗೆ ಬಂದ ಪ್ರಶಸ್ತಿಗಳ ಬಗ್ಗೆ ಒಂದಿಷ್ಟು?
     ... ನಗು... ಅಯ್ಯೋ ನನಗೆ ನೆನಪಿಲ್ಲ. ಪದ್ಮವಿಭೂಷಣ, ಪದ್ಮಶ್ರೀ, ರಾಮನ್ ಮ್ಯಾಗ್ಸೇಸೆ, ಯುಎನ್ ಪ್ರಶಸ್ತಿ, ಗಾಂಧಿ ಶಾಂತಿ ಪ್ರಶಸ್ತಿ, ಅಂಬೇಡ್ಕರ್ ಅಂತಾರಾಷ್ಟ್ರೀಯ ಪ್ರಶಸ್ತಿ.... 
ಮುಂಬೈ ಟಾಟಾ ಸಂಸ್ಥೆ, ನಾಗಪುರ ವಿಶ್ವವಿದ್ಯಾನಿಲಯ, ನಿಕೇತನ, ಪುಣೆ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ನೀಡಿವೆ. 
  ...... ಯುವ ಜನತೆಗೆ ನಿಮ್ಮ ಸಲಹೆಯೇನು? 
  ......ತರುಗಳ ಬೇರುಗಳಲ್ಲಿರುವ ಶಕ್ತಿಯನ್ನು ಅರ್ಥೈಸಿಕೊಂಡರೆ ಸಹನೆ ಆತ್ಮಸ್ಥೈರ್ಯಗಳಿಂದ  ಸೃಜನಾತ್ಮಕ ಕ್ರಾಂತಿಯನ್ನು ತರಬಹುದು.
        ಇಂತಹ ಗಾಂಧಿವಾದಿ,  ಕಷ್ಟಸಹಿಷ್ಣು, ಸಹಾನುಭೂತಿಯ,  ತದನುಭೂತಿಯ ಯೋಗಿ ತಾನು ದಿವಂಗತನಾದಾಗ  ತನ್ನ ದೇಹವನ್ನು ಸುಡಬಾರದು ಮಣ್ಣು ಮಾಡಬೇಕು ಎಂದು ತಾಕೀತು ಮಾಡಿ ಸಾವಿನಲ್ಲೂ ಪರಿಸರಪ್ರಜ್ಞೆಯನ್ನು ಮೆರೆದ ಅಸಾಧಾರಣ ಪರಿಸರಪ್ರೇಮಿ.
    ನನ್ನೊಳಗಿರುವ ಇವರ ಜೊತೆ ನಾ ಮಾತನಾಡಿದೆ,  ಪ್ರಶ್ನಿಸಿದೆ.  ಇಂಥವರು ನಿಮ್ಮೊಳಗಿಲ್ಲವೇ .............?
...................................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************


 

Ads on article

Advertise in articles 1

advertising articles 2

Advertise under the article