-->
ಜೀವನ ಸಂಭ್ರಮ - 12

ಜೀವನ ಸಂಭ್ರಮ - 12                    ಮದುವೆಯ ಸಂಭ್ರಮ 
               ----------------------------
         ಈ ಘಟನೆ ನಡೆದಿದ್ದು 1990 ರಲ್ಲಿ, ಆಗ ನಾನು ಬಿಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದು , ನನ್ನ ತಂಗಿ ಮಂಗಳಗೌರಿ ವಿವಾಹ ಏರ್ಪಾಡಾಗಿತ್ತು. ಮಂಡ್ಯದಿಂದ ಸುಮಾರು ಹತ್ತು ಕಿಲೋಮೀಟರ್ ಅಂತರದಲ್ಲಿರುವ ಹೆಚ್. ಮಲ್ಲಿಗೆರೆಯ ಯುವಕ ಕೃಷ್ಣನೊಂದಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು. 
      ನಮ್ಮ ಗ್ರಾಮದಲ್ಲಿ ಯಾರದೇ ಮದುವೆಯಾದರೂ ಒಂದೇ ಕ್ರಮ. ಒಂದು ವಾರ ಇರುವಂತೆ ಗಂಡಾದರೂ ಸರಿ, ಹೆಣ್ಣಾದರೂ ಸರಿ, ಸ್ನೇಹಿತರು, ಸಂಬಂಧಿಕರು ಅರಿಶಿಣದ ನೀರು ಹಾಕುವುದು ಸಂಪ್ರದಾಯ. ಮದುಮಗ , ಮದುಮಗಳಿಗೆ ಊರಿನ ಮಹಿಳೆಯರ ಸೋಬಾನೆ ಪದಗಳೊಂದಿಗೆ ಅಲ್ಲಿರುವ ಅಕ್ಕಪಕ್ಕದ ಗಂಡಸರು ಹಾಗೂ ಹೆಂಗಸರು ಸೇರಿ ಅರಿಶಿನ ನೀರನ್ನು ಹಾಕಿ, ಸ್ನಾನ ಮಾಡಿಸಿ, ಒಳ್ಳೆಯ ಭೋಜನ ನೀಡುವರು. ಇದು ಮದುವೆ ಸಮಯಕ್ಕೆ ಗಂಡು ಅಥವಾ ಹೆಣ್ಣು ಮೈಕೈ ತುಂಬಿಕೊಂಡು ಸುಂದರವಾಗಿ ಕಾಣಬೇಕು. ಅದಕ್ಕಾಗಿ ಈ ತಯಾರಿ. ಅರಿಶಿಣದ ನೀರು ಹಾಕಿದ ಮೇಲೆ ಗಂಡಾಗಲಿ ಅಥವಾ ಹೆಣ್ಣಾಗಲಿ ಹೊರಗಡೆ ಹೋಗುವಂತಿಲ್ಲ. ಅರಿಶಿಣದ ಮೈಯಲ್ಲಿ ಹೊರಹೋದರೆ ಹಸಿ ಮೈಯಿಗೆ ಭೂತ ಸೇರುತ್ತದೆ ಎಂಬ ನಂಬಿಕೆಯಿಂದಾಗಿ ಹೊರಗಡೆ ಕಳಿಸುತ್ತಿರಲಿಲ್ಲ.
          ಮದುವೆಯ ಹಿಂದಿನ ದಿನ ಚಪ್ಪರದ ದಿನ ಎಂದು ಕರೆಯುತ್ತೇವೆ. ಹಿಂದೆ ಮದುವೆಗಳು ಇತ್ತೀಚಿನ ರೀತಿಯಂತೆ ಸಮುದಾಯ ಭವನಗಳಲ್ಲಿ ನಡೆಯುತ್ತಿರಲಿಲ್ಲ. ಮನೆಯ ಮುಂದೆ ದೊಡ್ಡ ಚಪ್ಪರ ಹಾಕಿಸಿ ಊರಿನ ಜನರನ್ನು , ಸಂಬಂಧಿಗಳನ್ನು ಮತ್ತು ಗೆಳೆಯರನ್ನು ಕರೆಸಿ ವೈಭವವಾಗಿ ಮದುವೆ ಮಾಡುತ್ತಿದ್ದರು. ಚಪ್ಪರದ ದಿನಕ್ಕೆ ಒಂದು ದಿನ ಮೊದಲು ಊರಿನ ಪ್ರತಿಯೊಂದು ಮನೆಗೂ ಚಪ್ಪರ ಹಾಕುವ ವಿಚಾರ ತಿಳಿಸಲಾಗುತ್ತದೆ. ಚಪ್ಪರದ ದಿನ ಪ್ರತಿ ಮನೆಯಿಂದ ಒಬ್ಬರಂತೆ ಚಪ್ಪರದ ಕೆಲಸಕ್ಕೆ ಹಾಜರಾಗುವರು. ಕೆಲವರು ಹೊಂಗೆ ಸೊಪ್ಪು ತರಲು ಮತ್ತೆ ಕೆಲವರು ಬಿದಿರಿನ ಗಳ ತರಲು , ಕೆಲವರು ಚಪ್ಪರದ ಅಲಂಕಾರಕ್ಕೆ ತೆಂಗಿನ ಗರಿ ತಂದು ಸುಂದರವಾಗಿ ಹೆಣೆಯುವುದು, ಕೆಲವರು ಆ ಸಮಯದಲ್ಲಿ ವಿವಿಧ ಬಣ್ಣದ ಹೂವುಗಳನ್ನು ತರಲು ಹೋಗುವುದು ಮತ್ತೆ ಕೆಲವರು ಬಿದಿರಿನ ಗಳನ್ನಿಟ್ಟು ದಾರ ಕಟ್ಟಿ ದೊಡ್ಡದಾಗಿ ಚಪ್ಪರ ಹಾಕುವರು. ಊರಿನ ಪ್ರತಿ ಮನೆಯಿಂದ ಒಬ್ಬರು ತಮ್ಮ ಸಾಮರ್ಥ್ಯ , ಆಸಕ್ತಿಗೆ ಅನುಗುಣವಾಗಿ ಸಂಭ್ರಮದಿಂದ ಕೆಲಸ ಮಾಡುವರು. ವೈಷಮ್ಯ ವಿರಲಿ , ವಿರೋಧವಿರಲಿ ಎಲ್ಲರೂ ಬಂದು ಕೆಲಸ ಮಾಡುವುದು ಒಂದು ವಾಡಿಕೆ.
         ಇದೇ ರೀತಿ ನನ್ನ ತಂಗಿ ಮದುವೆಯ ಚಪ್ಪರ ಸಿದ್ಧವಾಯಿತು. ಚಪ್ಪರದ ದಿನವೇ , ಗಂಡು , ಗಂಡಿನ ಕಡೆಯವರು ಸಂಜೆ 5.30ಕ್ಕೆ ಊರಿಗೆ ಬಂದರು. ಗಂಡು ಬಂದ ತಕ್ಷಣ ಊರಿನ ಚಾವಡಿಯಲ್ಲಿ ಕೂರಿಸಿ, ಓಲಗ ದೊಂದಿಗೆ , ನೃತ್ಯದೊಂದಿಗೆ ಗಂಡನ್ನು ಮೆರವಣಿಗೆ ಮೂಲಕ ಕರೆತಂದು ಗಂಡಿಗೆ ನಿಗದಿಮಾಡಿದ ಮನೆಗೆ ಬಿಡುವರು. ನಂತರ ಸೇರಿರುವ ಎಲ್ಲರಿಗೂ ರಾತ್ರಿ ಊಟ ಬಡಿಸಲಾಗುತ್ತದೆ. 
       ನನ್ನ ತಂಗಿ ಗಂಡನ ಊರು ನೀರಾವರಿಯಿಂದ ಕೂಡಿದ್ದು ಹಾಗೂ ಮುಂದುವರಿದ ಊರಾಗಿತ್ತು. ನಮ್ಮೂರು ಆಗ ನೀರಾವರಿ ಇಲ್ಲದೆ ಬರಡಾಗಿತ್ತು ಆದರೆ ಮಳೆ ಬಂದರೆ ರಾಗಿ , ಜೋಳ , ತೊಗರಿ , ತಗಣಿ, ಅವರೇ, ಎಳ್ಳು , ಉಚ್ಚೆಳ್ಳು, ನವಣೆ, ಹುರುಳಿ , ಭತ್ತ ಟೊಮೋಟೊ , ಬೀನ್ಸ್ , ಬೆಂಡೆ , ..ಎಲೆಕೋಸು ಮತ್ತು ಸೊಪ್ಪುಗಳು ಸೇರಿದಂತೆ ಬಹುತೇಕ ಎಲ್ಲ ವಿಧದ ಏಕದಳ ದ್ವಿದಳ ದಾನ್ಯಗಳನ್ನು ಬೆಳೆಯುವರು, ನನ್ನ ತಂಗಿ ಗಂಡನ ಊರಿನಲ್ಲಿ ಭತ್ತ ಮತ್ತು ಕಬ್ಬು ಮಾತ್ರ ನೀರಾವರಿ ಜಮೀನಿನಲ್ಲಿ ಬೆಳೆಯುತ್ತಿದ್ದರು.       
        ಗಂಡಿನ ಕಡೆಯವರು ಸಂಜೆ 5.30ಕ್ಕೆ ಬಂದು, ಗಂಡು ಚಾವಡಿಯಲ್ಲಿ ಕೂಡಿಸಲಾಗಿದೆ. ಆಗ ಅಡುಗೆ ತಯಾರು ಮಾಡುವ ಊರಿನ ಜನರು ಗಂಡಿನ ಮನೆಯವರ ಅಪೇಕ್ಷೆಯನ್ನು ತಿಳಿಸಿದರು. ಊಟ ತಯಾರಾಗಲು ಇನ್ನೂ ಸಮಯ ಬೇಕಾದುದರಿಂದ , ನಾನು ಆಲೋಚಿಸಿ , ನಮ್ಮಲ್ಲಿ ನೃತ್ಯ ಮಾಡುವ ಮೂರು ಜನ ತರುಣರಿಗೆ ಮತ್ತು ಓಲಗದವರಿಗೆ ಈ ವಿಚಾರ ತಿಳಿಸಿ, ಚಾವಡಿಯಿಂದ ಗಂಡಿನ ಮನೆಗೆ ಬರಲು ಕೇವಲ ಸ್ವಲ್ಪ ದೂರವೇ ಇದ್ದರೂ , ಚಾವಡಿಯಿಂದ ಗಂಡನ ಮನೆಗೆ ಬರುವ ಸ್ಥಳಕ್ಕೆ ಕನಿಷ್ಠ ಇಪ್ಪತ್ತು ಕಡೆ ನಿಲ್ಲಿಸಿ ವಾದ್ಯಗಳಿಗೆ ನೃತ್ಯ ಮಾಡುತ್ತಾ ಬಂದರು. ಆಗ ಸಮಯ 8.30 ಆಗಿತ್ತು . ಅಷ್ಟೊತ್ತಿಗೆ ಅಡುಗೆ ತಯಾರಾಗಿತ್ತು. ಎಲ್ಲರೂ ಊಟ ಮಾಡಿದರು. 
       ಊಟದ ನಂತರ ಊರಿನ ಯಜಮಾನರು ಸೇರಿ ದೇವರು ತರುವುದು , ದೊಡ್ಡ ವಿಳ್ಳೇ ಶಾಸ್ತ್ರ , ಚಿಕ್ಕ ವಿಳ್ಳೇಶಾಸ್ತ್ರ ಸೇರಿದಂತೆ ವಿಧಿವಿಧಾನಗಳನ್ನು ಪೂರೈಸಿ ನಂತರ ಎಲ್ಲರೂ ಮಲಗಿದರು.
ಮರುದಿನ ಧಾರಾ ಮಹೋತ್ಸವ ಆ ದಿನ ಕೂಡ ಊರಿನ ಪ್ರತಿಯೊಬ್ಬರೂ ಹಾಗೂ ಬಂದಿರುವವರೆಲ್ಲ ಧಾರೆ ಎರೆಯುವರು ಮತ್ತು ಪ್ರತಿ ಮನೆಯಿಂದ ಒಬ್ಬರು ಬಂದು ಅಡುಗೆ ಕಾರ್ಯದಲ್ಲಿ ತೊಡಗುವರು.  
       ಊರಿನಲ್ಲೂ ಕೆಲವು ನಿಯಮಗಳು ಇರುತ್ತಿದ್ದವು. ಮೊದಲು ಹೊರಗಡೆಯಿಂದ ಬಂದವರಿಗೆ ಊಟ. ನಂತರ ಏನು ಉಳಿದಿದೆ ಅದನ್ನು ಊರಿನ ಎಲ್ಲರೂ ಸೇರಿ ಒಟ್ಟಾಗಿ ಭೋಜನ ಮಾಡುವರು. ಹೀಗೆ ಊರಿನ ಜನರೆಲ್ಲ ಸಂಭ್ರಮದಿಂದ ಭಾಗಿಯಾಗಿ ಮದುವೆ ಕಾರ್ಯ ನೆರವೇರಿಸಿದರು.
      ಇದರ ಜೊತೆಗೆ ಮುಯ್ಯಿ ಕೊಡುವ ಪದ್ಧತಿ ಇತ್ತು. ಅಂದರೆ ಗಂಡಿನ ಕಡೆಯವರು ಗಂಡಿಗೆ , ಹೆಣ್ಣಿನ ಕಡೆಯವರು ಹೆಣ್ಣಿಗೆ, ಮುಯ್ಯಿ ಚೀಟಿಯಲ್ಲಿ ಹೆಸರು ಬರೆಸಿ ಮುಯ್ಯಿ ನೀಡುವರು. ಇದು ಇಷ್ಟೇ ನೀಡಬೇಕು ಎಂಬಂತಿಲ್ಲ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ನೀಡುವರು. ಇದು ಮದುವೆ ಮಾಡುವವರಿಗೆ ಊರಿನ ಜನರು ನಾವು ನಿಮ್ಮ ಜೊತೆಗೆ ಕಷ್ಟ ನಷ್ಟದಲ್ಲಿ ಇರುತ್ತೇವೆ ಎನ್ನುವ ಭಾವನೆ ಇರಲಿ ಎಂಬುದಾಗಿತ್ತು. ಗಂಡು ಮತ್ತು ಹೆಣ್ಣಿನ ಕಡೆಯವರು ಮುಯ್ಯಿನ ಚೀಟಿಯನ್ನು ಜೋಪಾನವಾಗಿ ಕಾಪಾಡುತ್ತಿದ್ದರು. ಯಾರು ಮುಯ್ಯಿ ನೀಡಿರುತ್ತಾರೆ ಅವರ ಮತ್ತು ಅವರ ಮಕ್ಕಳ ಮದುವೆ ಕಾರ್ಯದಲ್ಲಿ ಅಷ್ಟೇ ಮುಯ್ಯಿ ನೀಡಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತಿದ್ದರು. ಹೀಗೆ ಮದುವೆ ಕಾರ್ಯದಲ್ಲಿ ಒಬ್ಬರಿಗೊಬ್ಬರು ನೆರವಾಗಿ ಸಂಭ್ರಮ ಪಡುತ್ತಿದ್ದರು. 
           ಆದರೆ ಈಗ ನೋಡಿ ಮಕ್ಕಳೇ , ಮದುವೆಯಾದರೆ ಆ ಮನೆಗೆ ಮಾತ್ರ ಸಂಭ್ರಮ ಸೀಮಿತ. ಊರಿನವರು ನಮ್ಮ ಮದುವೆ ಎಂದು ಸಂಭ್ರಮವಾಗಿ ನೆರವಾಗುತ್ತಿಲ್ಲ. ಈಗ ಮದುವೆ ತೋರಿಕೆಗಾಗಿ ಆಡಂಬರದಿಂದ ಕೂಡಿದೆ. ಕರೆದವರು ಮಾತ್ರ ಹಾಜರಾಗುತ್ತಾರೆ. ಹಾಜರಾದವರು ಮದುವೆ ಸಂಭ್ರಮದ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸದೆ ಊಟ ಮಾಡಿ ಹಾರೈಸುತ್ತಾರೆ. 
      ಆದರೆ ಹಿಂದೆ ಮದುವೆಯಾದಂತೆ ಈಗ ಕಾಣುತ್ತಿಲ್ಲ. ಮದುವೆಯ ಎಲ್ಲಾ ಚಟುವಟಿಕೆಯಲ್ಲಿ ಭಾಗವಹಿಸಿ ನೆರವು ನೀಡಿ ಸಂಭ್ರಮ ಪಡುವುದು ಸಹಜವಾಗಿತ್ತು. ಅದು ಪುನಃ ಮರುಕಳಿಸಿದರೆ ಎಷ್ಟು ಚಂದ ?. ಮಾನವ ಸಮಾಜವು ಸುಖ ದುಃಖದಲ್ಲಿ ಜಾತಿ ಮತ ಧರ್ಮಗಳನ್ನು ಎಣಿಸಿದೆ ಒಬ್ಬರಿಗೊಬ್ಬರು ನೆರವಾಗುವುದು ಎಷ್ಟು ಚಂದ.......?
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article