-->
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ : ಪುಟಾಣಿ ವಿನಂತಿಯ ಸಾಧನೆ

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ : ಪುಟಾಣಿ ವಿನಂತಿಯ ಸಾಧನೆ





    ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ
               ಪುಟಾಣಿ ವಿನಂತಿಯ ಸಾಧನೆ
       ಜಗತ್ತಿನ ಪ್ರತಿ ಮಗುವೂ ಶ್ರೇಷ್ಠ. ಅಗಾಧ ಶಕ್ತಿಯ ಸಾಗರ. ಸಾಧಿಸುವ ಶಕ್ತಿ , ದೃಢ ನಿರ್ಧಾರ , ಗುರಿ ಮುಟ್ಟುವ ಛಲ , ನಿರಂತರ ಪರಿಶ್ರಮ , ಇವುಗಳನ್ನು ಒಂದು ಮಗುವಿನಲ್ಲಿ ಕಾಣಬಹುದಾದರೆ , ಆ ಮಗುವಿನ ಸಾಧನೆಗೆ ಯಾವುದೇ ತೊಡಕಾಗದು. 
         ಹೌದು, ಇನ್ನೂ ಶಾಲೆಯ ಅಂಗಳವನ್ನು ಕಾಣದ ಪುಟಪುಟನೇ ನಡೆಯೋ ಪುಟಾಣಿ ಯೊಂದು ಶ್ರೇಷ್ಠ ಪ್ರಶಸ್ತಿಯೊಂದನ್ನು ತನ್ನ ಮುಡಿಗೇರಿಸಿ ಕೊಳ್ಳುವುದು ಅಸಾಮಾನ್ಯ ವಿಷಯವೆಂದರೆ ತಪ್ಪಾಗಲಾರದು. ಇತ್ತೀಚೆಗೆ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ಪ್ರಶಸ್ತಿ ತನ್ನದಾಗಿಸಿ ಹೆಸರನ್ನು ದಾಖಲಿಸಿದ ಪುಟಾಣಿಯೇ ವಿನಂತಿ ಹರಿಕಾಂತ
       ತನ್ನ ನಾಲ್ಕು ವರ್ಷ 11 ತಿಂಗಳ ವಯಸ್ಸಿಗೆ ಯೋಗಾಸನದ "ಉಷ್ಟ್ರಾಸನ ಭಂಗಿ" ಯಲ್ಲಿ ದೀರ್ಘ ಕಾಲದ ವರೆಗೆ ( 5 ನಿಮಿಷ, 13 ಸೆಕೆಂಡ್) ತಟಸ್ಥವಾಗಿ , ಪ್ರಸ್ತುತಪಡಿಸಿದ ಯೋಗ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಗೌರವದ ಕಿರೀಟ ಪಡೆದಿದ್ದಾರೆ. 
        ಈಕೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದ ನಿವಾಸಿಯಾಗಿದ್ದು ಪ್ರಸ್ತುತ 20 ವರ್ಷ ಗಳಿಂದ ಮಂಗಳೂರಿನ ಅಸೈಗೊಳಿಯ K. S. R. P. 7 ನೇ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಈಶ್ವರ ಹರಿಕಾಂತ ಹಾಗೂ ಆರತಿ ಹರಿಕಾಂತ ದಂಪತಿಗಳ ಪುತ್ರಿ.
       ವಿನಂತಿಗೆ ಸುಮಾರು ಒಂದು - ಒಂದೂವರೆ ವರ್ಷದ ಹರೆಯ. ಅಂಬೆಗಾಲಿಕ್ಕತ್ತಾ ಚುರುಕಿನ 
ಓಡಾಟ , ವಜ್ರಾಸನದಲ್ಲಿ ಕುಳಿತುಕೊಳ್ಳುವ ಭಂಗಿ , ಪ್ರಕೃತಿ ಸಹಜವಾಗಿ ದೇಹದ ಬಾಗುವ ಸ್ಥಿತಿಗಳನ್ನು ಕಂಡು ಯೋಗಾಸನ ದ ಸರಳ ಆಸನಗಳನ್ನು ತಾಯಿ ಆರತಿ ಹರಿಕಾಂತ್ ಅವರೇ ಕಲಿಸಲಾರಂಭಿಸಿದರು. ತುಂಬಾನೆ ಆಸಕ್ತಿ ಬೆಳೆಯಿತು. ಜೊತೆಗೆ ಅಣ್ಣ ವಿಹಾರ್ ಮಾಡುವ ಯೋಗಾಸನಗಳನ್ನು ಏಕಾಗ್ರತೆಯಿಂದ ಗಮನಿಸುತ್ತಿದ್ದ ಪುಟಾಣಿ ಮುಂದೊಂದು ದಿನ ದಾಖಲೆಯತ್ತ ದಾಪುಗಾಲು ಹಾಕುತ್ತಾಳೆಂಬುದು ನಿರೀಕ್ಷಿಸಿರಲಿಲ್ಲ. ತನ್ನ ಏಕಾಗ್ರತೆ ಕೌಶಲ್ಯಗಳಿಂದ ಬಹುಬೇಗನೆ ಯೋಗಾಸನದ ಎಲ್ಲಾ ಭಂಗಿಗಳನ್ನು ಕಲಿತ ಈಕೆಯದು ಅದ್ಭುತ ಸಾಧನೆ. ಸುಮಾರು 100 ರಿಂದ 130 ಯೋಗಾಸನದ ಭಂಗಿಗಳನ್ನು ಸರಾಗವಾಗಿ ಮಾಡುವ ಕಲೆ ಈಕೆಗೆ ಕರಗತವಾಗಿದೆ.
        ವಿನಂತಿ ಇನ್ನೂ ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಕೊರೊನ ಹಾವಳಿಯಿಂದಾಗಿ ಅದೆಷ್ಟೋ ಮಕ್ಕಳು ಕಲಿಕೆಯಿಂದ ದೂರವುಳಿದಿದ್ದಾರೆನ್ನುವುದು ಹಲವರ ವಾದ. ಆದರೆ ಇದ್ಯಾವುದರದೂ ಪರಿವೆಯಿಲ್ಲದೆ , ತಾನಾಯಿತು ತನ್ನ ಅಭ್ಯಾಸವಾಯಿತು ಎನ್ನುವ ಮನೋಬಲದಿಂದ ಇವಳಿಗೆ ಯಶಸ್ಸಿನ ಶಿಖರ ಏರಲು ಸಾಧ್ಯವಾಯಿತು. ಈ ಸಣ್ಣ ಪ್ರಾಯಕ್ಕೆ ಸುಮಾರು 30 ಆನ್ಲೈನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ ತೃಪ್ತಿ ಇವಳದ್ದು.
          ಯೋಗಾಸನ ಮಾತ್ರವಲ್ಲದೆ , ಚಿತ್ರಕಲೆ , ನೃತ್ಯ , ಸಂಗೀತಗಳಲ್ಲೂ ವಿಶೇಷ ಆಸಕ್ತಿಯನ್ನು ಮೈಗೂಡಿಸಿಕೊಂಡಿದ್ದಾರೆ. ವಿನಂತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ತಂದೆ ಮತ್ತು ತಾಯಿಯದೇ ಮುಖ್ಯ ಪಾತ್ರ. ಇವರ ನಿರಂತರ ಪ್ರೋತ್ಸಾಹ , ಕ್ಲಪ್ತ ಮತ್ತು ಸರಿಯಾದ ಮಾರ್ಗದರ್ಶನದಿಂದ ವಿನಂತಿಯ ಪ್ರತಿಭೆ ಅರಳಲು ಸಾಧ್ಯವಾಯಿತು. ಚಿತ್ರಕಲೆಯಲ್ಲಿ - ಸಣ್ಣ ಸಣ್ಣ ಆಕಾರಗಳನ್ನು ಬಿಡಿಸಲು ಪ್ರೋತ್ಸಾಹ ನೀಡಿದ ಫಲವಾಗಿ ನಿರಂತರವಾಗಿ ಚಿತ್ರಕಲೆಯನ್ನು ಸಹ ಬಿಡಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾಳೆ.  ಜಾಮಿತಿ ಆಕಾರದ ಸುಲಭ ಚಿತ್ರಗಳು , ವರ್ಲಿ ಶೈಲಿಯ ಕಲಾಕೃತಿಗಳನ್ನು ರಚಿಸುವ ವಿನಂತಿಯ ಮನೋಸಾಮರ್ಥ್ಯ ಪ್ರಶಂಸನೀಯ.
          ಟಿವಿಯಲ್ಲಿ ಬರುವ ನೃತ್ಯ ಕಾರ್ಯಕ್ರಮಗಳನ್ನು ವೀಕ್ಷಿಸಿ ತಾನೂ ಹೆಜ್ಜೆ ಹಾಕಿ ಕುಣಿಯುವ ವಿನಂತಿಯ ಸಂಭ್ರಮ ಹೇಳತೀರದು. ಹೇಳುವ ಮಾತುಗಳನ್ನು ಗ್ರಹಿಸಿಕೊಂಡು ತದೇಕಚಿತ್ತದಿಂದ ಪಾಲಿಸುವ ಗುಣ ಧಾರಾಳ ಇದೆ. ಇತ್ತೀಚಿನ ದಿನಗಳಿಂದ ಭರತನಾಟ್ಯ ನೃತ್ಯ ಪ್ರಕಾರವನ್ನು ಕಲಿಯುತ್ತಿರುವ ಈಕೆಗೆ ಉಜ್ವಲ ಭವಿಷ್ಯವಿದೆ. ಸಂಗೀತವೂ ಆಸಕ್ತಿಯ ವಿಷಯವಾಗಿದ್ದು ಸಾಧನೆಯ ಹಾದಿಯಲ್ಲಿ ಪಯಣ ಆರಂಭವಾಗಿದೆ. ಭಗವದ್ಗೀತೆಯ ಮೊದಲ ಅಧ್ಯಾಯದ ಹತ್ತು ಶ್ಲೋಕಗಳನ್ನು ನಿರರ್ಗಳವಾಗಿ ಹೇಳುವ ಈಕೆಯ ಕೌಶಲ್ಯ ಗುರುತಿಸುವಂತಹದ್ದು.
      ಇತ್ತೀಚೆಗೆ ನಡೆದ " ಮ್ಯಾಕ್ಸ್ ಟಾಪ್ ಕಿಡ್ಸ್" ಕಾಂಟೆಸ್ಟ್ ನಲ್ಲಿ "ದ ರೈಸಿಂಗ್ ಬೇಬಿ ಸ್ಟಾರ್" ಎಂಬ ಪ್ರಶಸ್ತಿಯೂ ಸಹ ಈಕೆಗೆ ಲಭಿಸಿದೆ. ಹಲವಾರು ಸನ್ಮಾನಗಳು , ಪ್ರಶಸ್ತಿ ಪತ್ರಗಳು , ಗೌರವ ಬೆಂಬಲಗಳು ಇವಳ ಸಾಧನೆಯ ಕಾರ್ಯಕ್ಕೆ ದೊರೆತಿದೆ. ಇನ್ನೂ ಪುಟ್ಟ ಮಗು. ಬೆಳೆಯುವ ಮನಸ್ಸು , ವಿಸ್ತಾರವಾಗುವ ಕನಸು ಹಂಬಲವಾಗಲಿ. ಸಾಧನೆಯ ಹೆಜ್ಜೆಗಳಿಗೆ ಜಗವೇ ತೆರೆದುಕೊಳ್ಳಲಿ. ಕಾಣುವ ಕಣ್ಣುಗಳ ಅಂಚಿನಿಂದ ಮರೆಯಾಗದೆ ಗೋಚರಿಸಲಿ. ಜಗಲಿಯಿಂದ ಬೆಳೆದ ಪ್ರತಿಭೆ ಜಗದಗಲ ಬೆಳೆಯಲಿ. 
...................................ತಾರಾನಾಥ್ ಕೈರಂಗಳ್
                                          Mob : 9844820979
*******************************************




Ads on article

Advertise in articles 1

advertising articles 2

Advertise under the article