-->
ಅಡವಿ ಮಕ್ಕಳಿಗೆ ಬೆಳಕಾದ : ವನಚೇತನ

ಅಡವಿ ಮಕ್ಕಳಿಗೆ ಬೆಳಕಾದ : ವನಚೇತನ        
      ಅಡವಿಯೊಳಗೆ ಹುಟ್ಟಿ ಪ್ರಕೃತಿಯ ಮಡಿಲಲ್ಲಿ ತನ್ನ ಬದುಕನ್ನು ಕಟ್ಟಿಕೊಂಡ ಬುಡಕಟ್ಟು ಜನಾಂಗದವರ  
ಬದುಕೇ ವಿಸ್ಮಯ. ಹೊರಜಗತ್ತಿನ ಸಂಪರ್ಕವಿಲ್ಲದೆ ತಮ್ಮದೇ ಆದ ಸಂಸ್ಕೃತಿಯನ್ನು ಬೆಳೆಸಿಕೊಂಡು ಬದುಕಿನ ಸಂಭ್ರಮವನ್ನು ಗಳಿಸಿಕೊಂಡವರು ಇವರು. ವನ್ಯಮೃಗಗಳನ್ನು ಪ್ರೀತಿಸಿ ಝರಿ ತೊರೆಗಳ ಮಧ್ಯ ನಲಿದಾಡಿ ಸಂತೃಪ್ತಗೊಂಡಿರುವ ಇವರ ಜೀವನವೇ ಕುತೂಹಲ. ಆಧುನಿಕತೆಯಿಂದ ವಂಚಿತರಾಗಿ , ಮೂಲಭೂತ ಸೌಲಭ್ಯಗಳಿಂದಲೂ ದೂರವಾಗಿರುವ ಇವರನ್ನು ದೇಶದ ಮುಖ್ಯವಾಹಿನಿಗೆ ಸೇರಿಸುವ ಪ್ರಯತ್ನ ಯಾಕಾಗಬಾರದು....? ಇವರೂ ನಮ್ಮವರೇ ಎನ್ನುವ ಪ್ರೀತಿ , ಕಾಳಜಿಯನ್ನು ತೋರಿದರೆ ನಮ್ಮವರಲ್ಲೊಬ್ಬರಾಗಿಸುವ ಸಾಧ್ಯತೆ ಯಾಕಾಗಬಾರದು...? ಎಲ್ಲರಂತೆ ಬದುಕು ಇವರದೂ ಆಗಬೇಕು..... ಕಾಡಿನ ಜೀವನದ ಸೊಗಡು ತುಂಬಿರುವ ಪ್ರತಿಭೆಗಳು ನಾಡಿಗೆ ಮಾದರಿ ಯಾಕಾಗಬಾರದು....? ಹೌದು , ಕಾಡಿಗೆ ಹೊಕ್ಕವರಿಗೆ ಕಾಡದಿರಲಾರದು ಈ ಪ್ರಶ್ನೆಗಳು....!! ಕಾಡಿದವರೆಲ್ಲರಿಗೂ ಬಗೆಹರಿಸಲಾಗದ ಪ್ರಶ್ನೆಗಳಾಗಿದ್ದರೂ.... ಪ್ರಯತ್ನ ಪಟ್ಟರೆ ಯಾಕಾಗಬಾರದೆನ್ನುವ ಚಿಂತನೆ ಹುಟ್ಟಿದ್ದು ದಿನೇಶ್ ಹೊಳ್ಳರಿಗೆ .....!!! ಅದ್ಭುತ ಪರಿಕಲ್ಪನೆ. ಅಡವಿ ದೇವಿಯ ಮಕ್ಕಳಿಗೆ ಬೆಳಕಾಗಿ ಬದುಕಿಗೊಂದು ಚೇತನ ತುಂಬಲು ಹೊರಟಿರುವ ಇವರ ಪ್ರಯತ್ನವನ್ನು ವರ್ಣಿಸಲು ಪದಗಳೇ ಸಾಲದು.....!!!    
         ಹೌದು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಪಶ್ಚಿಮ ಘಟ್ಟದ ದಟ್ಟ ಕಾಡು, ಕಣಿವೆ ತನ್ನ ಸೆರಗನ್ನು ಹಾಸಿ ಮೈ ತುಂಬಿದೆ. ಈ ದಟ್ಟ ಅಡವಿಯಲ್ಲಿ ಸಿದ್ಧಿ, ಗೌಳಿ, ಕುಣುಬಿ, ಗೊಂಡ, ಹಾಲಕ್ಕಿ ಮುಂತಾದ ಬುಡಕಟ್ಟು ಸಮುದಾಯದವರು ಅಡವಿಯನ್ನೇ ತಮ್ಮ ಬದುಕಿನ ಪ್ರಧಾನ ಪಾತ್ರವೆಂದು ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈ ಬುಡಕಟ್ಟು ಸಮುದಾಯದ ಮಕ್ಕಳಿಗೆ ಶಿಕ್ಷಣದ ಅಭಿಲಾಷೆ ಇದ್ದರೂ ಮನೆಯ ಆರ್ಥಿಕ ಅವ್ಯವಸ್ಥೆಯಿಂದ ಸರಿಯಾದ ಶಿಕ್ಷಣ ಲಭಿಸದೇ ಬದುಕಿಗೊಂದು ಗುರಿ ಇಟ್ಟುಕೊಳ್ಳಲು ಅಸಾಧ್ಯವಾಗುತ್ತಿತ್ತು. ಕಳೆದ 25 ವರುಷಗಳಿಂದ ಪಶ್ಚಿಮ ಘಟ್ಟದ ಕಾಡು ಸುತ್ತುತ್ತಾ, ಬೆಟ್ಟ ಹತ್ತುತ್ತಾ ಚಾರಣ ಮಾಡುತ್ತಿದ್ದ ದಿನೇಶ್ ಹೊಳ್ಳ ಮತ್ತು ಸಹ್ಯಾದ್ರಿ ಸಂಚಯದ ಬಳಗ ಅಡವಿ ಮಕ್ಕಳ ಸಮಸ್ಯೆಯನ್ನು ಕಣ್ಣಾರೆ ಕಂಡವರು. ಈ ಬಗ್ಗೆ ಉತ್ಸುಕರಾಗಿ ಚಾರಣ ತಂಡದ ಗೆಳೆಯರು ಸೇರಿ ಜೋಯಿಡಾ ಅಡವಿಯ ಮಕ್ಕಳಿಗೆ ಶಿಕ್ಷಣದ ಪರಿಕರಗಳನ್ನು 2006 ರಿಂದ ಪತ್ರಕರ್ತೆ ಕೋಡಿ ಬೆಟ್ಟು ರಾಜಲಕ್ಷ್ಮೀ ಮುಖಾಂತರ ನೀಡಲು ಆರಂಭಿಸಿದರು. ಪ್ರತೀ ವರ್ಷ ಜೂನ್ ತಿಂಗಳಲ್ಲಿ ಶಿಕ್ಷಣ ಪರಿಕರಗಳ ವಿತರಣೆ ಹಾಗೂ ನವೆಂಬರ್ ತಿಂಗಳಲ್ಲಿ ಮಕ್ಕಳಿಗೆ ಶಿಬಿರದ ಮೂಲಕ ಜೀವನೋತ್ಸಾಹ ಮೂಡಿಸಲು ಆಸಕ್ತಿ ವಹಿಸಿದರು
         ಆದರೆ ಜಗತ್ತೇ ಬೆಚ್ಚಿ ಬೀಳುವಂತಹ ಕೋವಿಡ್ ವೈರಸ್ಸಿನ ದುಷ್ಪರಿಣಾಮದಿಂದ ಕಳೆದ ಎರಡು ವರ್ಷಗಳಿಂದ ಎಲ್ಲವೂ ಸ್ತಬ್ಧ ಆದವು. ಮಕ್ಕಳ ಶೈಕ್ಷಣಿಕ ವಿಚಾರಕ್ಕಂತೂ ದೊಡ್ಡ ಹೊಡೆತವೇ ಬಿತ್ತು. ನಗರದ ಮಕ್ಕಳು ಬೇಕಾದ ಸೌಲಭ್ಯಗಳಿಂದ ನಿರಾತಂಕವಾಗಿ ಪಾಠಪ್ರವಚನಗಳನ್ನು ಆನ್ಲೈನ್ ಮೂಲಕ ಪಡೆಯಲು ಸಾಧ್ಯವಾಯಿತು, ಆದರೆ ಅಡವಿ ಮಕ್ಕಳ ಶಿಕ್ಷಣದ ಬಗ್ಗೆ ಚಿಂತಿಸುವವರು ವಿರಳ. ಇದನ್ನರಿತ ದಿನೇಶ್ ಹೊಳ್ಳ ಮತ್ತು ಸಹ್ಯಾದ್ರಿ ಸಂಚಯ ಬಳಗ ಮೊದಲ ಪ್ರಯೋಗವಾಗಿ ಅಡವಿ ಮಕ್ಕಳಿಗೆ ' ವನ ಬೆಳಕು ' ಎಂಬ ಶಿಬಿರವನ್ನು ಕಳೆದ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸಿದರು. ಇದಕ್ಕೆ ದೂರದ ಅಮೆರಿಕದಲ್ಲಿ ಅಡವಿ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಪಣಂಬೂರ್ ವಾಸುದೇವ ಐತಾಳರು ಪ್ರಾಯೋಜಕತ್ವ ನೀಡಿ ಎಲ್ಲಾಪುರ, ಜೋಯಿಡಾ, ಅನಶಿ, ಅಂಕೋಲಾ, ಹಲಿಯಾಳ, ಮುಂಡಗೋಡ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮಕ್ಕಿ ಪೆರ್ಲ, ಬಾಳೂರು, ಮಲೆ ಮನೆ, ಮಾವಿನಕಟ್ಟೆ ಮುಂತಾದ 36 ಕಡೆ ಶಿಬಿರಗಳು ಯಶಸ್ಸು ಕಾಣುವಂತಾಯಿತು. 
      ಇಲ್ಲಿ ಮಕ್ಕಳ ಶೈಕ್ಷಣಿಕ ಬದುಕಿಗೆ ಮಾತ್ರವಲ್ಲದೆ ಅರಣ್ಯದೊಳಗಿನ ಶಾಲೆಯ ಭೌತಿಕ ಅಭಿವೃದ್ಧಿಯಲ್ಲಿಯೂ ಗಮನ ನೀಡಲಾಯಿತು. ಮಂಗಳೂರಿನ ಎಂ.ಸಿ.ಎಫ್ ಕಂಪೆನಿಯು ಅಡವಿ ಮಕ್ಕಳ ಶಾಲೆಗಳಿಗೆ 5 ಲಕ್ಷ ರೂಪಾಯಿಯ ಪೀಠೋಪಕರಣಗಳನ್ನು ನೀಡಿ ದಿನೇಶ್ ಹೊಳ್ಳ ಮತ್ತು ಸಹ್ಯಾದ್ರಿ ಸಂಚಯದ ಪ್ರಾಮುಖ್ಯ ಕಾರ್ಯಕ್ಕೆ ಬೆಂಬಲ ನೀಡಿತು. 
          ಕೋವಿಡ್ ಅಟ್ಟಹಾಸ ಮುಂದುವರಿಯುತ್ತಲೇ ಇತ್ತು. ಸರಕಾರ ಮತ್ತೆ ಲಾಕ್ಡೌನ್ ಫೋಷಿಸಿತು. ಶಾಲೆಗಳು ಮತ್ತೆ ಮುಚ್ಚಿತು. ಮಕ್ಕಳ ಬದುಕಿನಲ್ಲಿ ಮತ್ತೆ ನಿರಾಸೆ ಕರಾಳ ಮೋಡ. ಆದರೆ ಸಹ್ಯಾದ್ರಿ ಸಂಚಯ ಸುಮ್ಮನಿರಲಿಲ್ಲ. ದಿನೇಶ್ ಹೊಳ್ಳರ ಎರಡನೆಯ ಯೋಜನೆ " ವನಚೇತನ" ಅಡವಿಯೊಳಗೆ ಪ್ರವೇಶಿಸಿತು. ಇದರ ಪರಿಕಲ್ಪನೆ , ಬಣ್ಣಬಣ್ಣದ ಕನಸುಗಳನ್ನು ಹೊತ್ತ ಮುಗ್ಧ ಭಾವಗಳಿಗೆ ಚೈತನ್ಯವನ್ನು ತುಂಬುವುದಾಗಿತ್ತು. ಶಿಕ್ಷಣದ ಮೂಲಕ ಬದುಕಿನ ಭರವಸೆಗಳನ್ನು ಗರಿಗೆದರಿಸುವುದಾಗಿತ್ತು. 
       ಶಾಲಾರಂಭವಾಗದೇ.... ಸ್ಥಗಿತಗೊಂಡ ಪಾಠ ಪ್ರವಚನಗಳಿಗೆ ಪರ್ಯಾಯ ಕಲಿಕೆಯು ಈ ಯೋಜನೆಯ ಮುಖ್ಯ ಗುರಿಯಾಗಿತ್ತು. ಎಲ್ಲಾಪುರದ ನಂದೋಲ್ಲಿ ಶಾಲೆಯಲ್ಲಿ ಉದ್ಘಾಟನೆಗೊಂಡ ವನಚೇತನ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಜೋಯಿಡಾ, ಅಣಶಿ, ಅಂಕೋಲಾ ಮುಂತಾದ ಕಡೆ ಸಿದ್ಧಿ, ಕುಣುಬಿ, ಹಾಲಕ್ಕಿ ಬುಡಕಟ್ಟು ಸಮುದಾಯದ ಮಕ್ಕಳಿಗೆ ಸುಮಾರು ಎರಡು ತಿಂಗಳುಗಳ ಕಾಲ ಸಂಭ್ರಮದ ಕಲಿಕೆಯನ್ನು ಸಂಯೋಜಿಸಿದರು. 
          ಜಡವಾಗಿರುವ ಮಕ್ಕಳ ಮನಸ್ಸನ್ನು ಮತ್ತೆ ಅದೇ ಯಥಾ ಸ್ಥಿತಿಗೆ ಹೊಂದಿಸುವುದು ಈ ಯೋಜನೆಯ ಉದ್ದೇಶ. ಶಿಬಿರದಲ್ಲಿ ಮಕ್ಕಳಿಗೆ ಆಟ, ಪಾಠ , ಕ್ರಿಯಾತ್ಮಕ ಚಟುವಟಿಕೆ ಕಲಿಸುವುದರ ಜೊತೆಗೆ... ಬದುಕಿನ ವಿವಿಧ ಆಯಾಮಗಳ ಪರಿಚಯವನ್ನು ಮಾಡುವುದು. ಆತ್ಮವಿಶ್ವಾಸದ ಜೊತೆಗೆ ಸೃಜನಶೀಲ ಅಭಿವ್ಯಕ್ತಿಯನ್ನು ಬೆಳೆಸುವುದು ಕಾರ್ಯ ಯೋಜನೆಯಾಗಿತ್ತು.  
     ಅಡವಿಯ ಮಕ್ಕಳೇ ವಿಶೇಷ. ಆ ಮುಗ್ಧ ಮಕ್ಕಳಿಂದ ಕಲಿಯುವಂತಹದ್ದು ಬೇಕಾದಷ್ಟು ಇದೆ. ಅವರ ವರ್ತನೆ, ಚಲನವಲನ ಗಳನ್ನು ಅಧ್ಯಯನ ಮಾಡುತ್ತಾ ಅವರ ಪ್ರಶ್ನೆಗಳಿಗೆ ಪ್ರೀತಿಯಿಂದ, ಸಮಾಧಾನದಿಂದ ಉತ್ತರ ಕೊಡುತ್ತಾ ಸಾಗಿದಾಗ ಸಹಜವಾಗಿಯೇ ಕಲಿಕೆಯಾಗುತ್ತಿತ್ತು. ಅಡವಿಯ ಒಳಗೆ ಬುಡಕಟ್ಟು ಸಮುದಾಯದ ಹಾಡಿಗಳಿಗೆ ಹೋಗಿ ಅವರ ಮನೆಗಳಲ್ಲಿ ಮಾತುಕತೆಯೂ ಕೂಡಾ ವನ ಚೇತನದ ಚಟುವಟಿಕೆಯಾಗಿತ್ತು. ಮನೆಯಲ್ಲಿ ಪೋಷಕರ ಜೊತೆ ಮಾತಾಡಿ ಅವರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಮಸ್ಯೆ ಅಥವಾ ಇನ್ನಾವುದೇ ಸಮಸ್ಯೆ ಇದ್ದಾಗ ಈ ತಂಡದ ಮೂಲಕ ಪರಿಹಾರ ನೀಡುವ ಪ್ರಯತ್ನ ಮಾಡಲಾಯಿತು. 
      ಜೊತೆ ಜೊತೆಗೆ ಜನರ ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸಲಾಯಿತು. ಎಲ್ಲಾಪುರದ ಶಿರ್ಲೆ ಎಂಬ ಹಳ್ಳಿ ದಟ್ಟ ಅರಣ್ಯದ ನಡುವೆ ಎತ್ತರದಲ್ಲಿದ್ದು ಕೆಳಗೆ ಗಂಗಾವಳಿ ನದಿಯ ಉಪನದಿ ಹರಿಯುತ್ತಿದೆ. ಇತ್ತೀಚೆಗೆ ಗಂಗಾವಳಿ ಪ್ರವಾಹ ಆದಾಗ ಈ ಹಳ್ಳಿಗೆ ಸಂಪರ್ಕ ಇದ್ದ ನದಿಗೆ ಕಟ್ಟಿದ್ದ ತೂಗು ಸೇತುವೆ ಕೊಚ್ಚಿ ಹೋಗಿ ಈ ಹಳ್ಳಿಯ ಜನರಿಗೆ ಎಲ್ಲೂ ಹೋಗದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಸಹ್ಯಾದ್ರಿ ಸಂಚಯ ತಂಡದ ಸಂಜಯ್ ಈ ಸಮಸ್ಯೆಗೆ ತನ್ನ ಗೆಳೆಯರನ್ನು ಸಂಪರ್ಕಿಸಿ ಹಳ್ಳಿಯ ಜನರು ನದಿ ದಾಟುವಂತೆ ವ್ಯವಸ್ಥೆ ಮಾಡಿದರು. ಅದೇ ಪ್ರಕಾರ ವನ ಚೇತನ ತಂಡವು ಕೆಲಾಷೆಯಲ್ಲಿ ಸುರೇಶನ ಮನೆಗೆ ಎರಡು ಬಾಗಿಲನ್ನು ನಿರ್ಮಿಸಿ ಕೊಟ್ಟಿತು. ಇದು ಕೇವಲ ಬಾಗಿಲಿನ ಹೊದಿಕೆ ಅಲ್ಲ ಸುರೇಶನ ಬದುಕಿಗೆ ಒಂದು ಶಾಶ್ವತ ಭದ್ರತೆಯಾಯಿತು.  
       ತಂಡದ ಸಂಪನ್ಮೂಲ ವ್ಯಕ್ತಿಗಳು ಶಿಬಿರದ ಯಶಸ್ಸಿಗೆ ಕಾರಣರಾದರು. ಅತೀ ಹೆಚ್ಚು ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದವರು ಮಮತಾ ಕೆ. ಯಸ್. ಇವರು ಮಂಗಳೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿನಿ. ಅರವಿಂದ ಕುಡ್ಲ , ಭವನ್ , ಸುಧಾ , ನಿಖಿತಾ ,ಗಿರಿಧರ್ ಕಾಮತ್ , ಮಹೇಂದ್ರ ಆಚಾರ್ಯ, ದೀಪಿಕಾ , ರಾಕೇಶ್ ಬೋಳಾರ್, ನಾಗರಾಜ್ ಕೂವೆ, ಸಂಜಯ್, ಸಚಿನ್ ಭಿಡೆ, ಅವಿನಾಶ್ ಭಿಡೆ, ವಿದ್ಯಾ ಕಾಮತ್, ನಿರ್ಮಲಾ, ಪ್ರಸಾದ್ ಶೆಣೈ, ಶಿವರಾಮ ಶಿಶಿಲ, ಗಿರಿ ವಾಲ್ಮೀಕಿ, ರಾಕಿ ಗೌಡ, ಸಹಮತ, ಸಪ್ನಾ ನೋರೊನಃ , ಗಣೇಶ್ ಸೋಮಯಾಜಿ, ಶಿವಪ್ರಕಾಶ್, ದಿವ್ಯಾ, ಅನುರಾಧ, ಶಕ್ತಿ ಪ್ರಸಾದ್. ಅನಂತ ಪದ್ಮನಾಭ , ಧಾರಿಣಿ, ಹರ್ಷ ಡಿಸೋಜ, ಶಕ್ತಿ ಪ್ರಸಾದ್ , ವಿದ್ಯಾ, ಶರತ್ ಬೋಳಾರ್, ಚಂದ್ರಹಾಸ ಕೋಟೆಕಾರ್, ಸಂಜಯ್ ಉಪ್ಪಿನ , ಮಾರುತಿ ಸರ್, ಉಲ್ಲಾಸ್ ಬೆಂಗಳೂರು, ಅನೂಪ್ ಶೆಟ್ಟಿ , Dr. ಗಾಯತ್ರಿ , ಗಿಲ್ಬರ್ಟ್ ಡಿಸೋಜ , ರಘುನಾಥ್ ರಾವ್, ಷೆಯಿ ಯಾರ್ ಡಿಸೋಜ, ಗೋಪಾಡ್ಕರ್, ರಾಜಮಣಿ ರಾಮಕುಂಜ , ಮೇಧಾ , ಧನ್ಯ , ಸುಮಂಗಲಾ, ಆದಿ.. ಹಾಗೂ ವನ ಚೇತನದ ಹಿನ್ನೆಲೆಯಲ್ಲಿ ದೊಡ್ಡ ಸಹಕಾರ ನೀಡಿ ಯಶಸ್ಸಿನ ಪಾತ್ರಧಾರಿಗಳಾದ ರಾಜೇಶ್ವರಿ ಸಿದ್ಧಿ, ಅನಂತ್ ಸಿದ್ಧಿ, ನವೀನ ಸಿದ್ಧಿ, ಶಾಂತಾರಾಮ ಸಿದ್ಧಿ ಎಲ್ಲರೂ ಯಶಸ್ಸಿನ ಹಿರಿಮೆಗೆ ಸಾಕ್ಷಿಗಳಾದರು.
       ವನ ಚೇತನ ಕಾರ್ಯಕ್ರಮವು ಅಡವಿಯ ಮಕ್ಕಳ ಮನ - ಮನೆಗಳಿಗೆ ತಲುಪಲು ಮೂಲ ರೂವಾರಿ ಪಣಂಬೂರು ವಾಸುದೇವ ಐತಾಳ್ ಮತ್ತು ಮೀನಾಕ್ಷಿ ಐತಾಳ್. ಇವರನ್ನು ದಿನೇಶ್ ಹೊಳ್ಳ ಮನಃಪೂರ್ವಕವಾಗಿ ಸ್ಮರಿಸಿಕೊಳ್ಳುತ್ತಾರೆ.   
        2021 ಅಕ್ಟೋಬರ್ 22 ರಿಂದ ಮತ್ತೆ ಜೊಯಿಡಾ ದಲ್ಲಿ ವನ ಚೇತನಾ ಮುಂದುವರಿಯಲಿದೆ. ಹಕ್ಕಿಗಳು ಸ್ವತಂತ್ರವಾಗಿರಲಿ. ಪಂಜರದೊಳಗೆ ಬಂಧಿಸಬೇಡಿ. ಒತ್ತಡದ ಶಿಕ್ಷಣಕ್ಕೆ ವಿರಾಮ ನೀಡಿ ,  ಕಲಿಕೆಯಲ್ಲಿ ಸ್ವಾತಂತ್ರ್ಯವಿರಲಿ. ನಗರ ಮತ್ತು ಅಡವಿ ಮಕ್ಕಳ ಶಿಕ್ಷಣದ ತಕ್ಕಡಿಯಲ್ಲಿ ಭಾರ ಒಂದೇ ರೀತಿ ಇರಲಿ. ಮಕ್ಕಳ ಶಿಕ್ಷಣದಲ್ಲಿ ತಾರತಮ್ಯ ಬೇಡ. ಪ್ರತಿ ಮಗುವು ಜಗತ್ತಿಗೆ ಶ್ರೇಷ್ಠವಾಗಲಿ.
....................................ತಾರಾನಾಥ್ ಕೈರಂಗಳ್
                                                      9844820979
**********************************************

Ads on article

Advertise in articles 1

advertising articles 2

Advertise under the article