ಸಮಯದ ಬೆಲೆ
Sunday, October 3, 2021
Edit
ಸಮಯದ ಬೆಲೆ
--------------------------------
ಒಂದು ಕಾರು ವೇಗವಾಗಿ ದೆಹಲಿ ಕಡೆ ಓಡುತ್ತಿತ್ತು. ಅದರಲ್ಲಿ ಚಾಲಕನ ಜೊತೆ ಇನ್ನೂ ನಾಲ್ಕು ಜನ ಪ್ರಯಾಣಿಸುತ್ತಿದ್ದರು. ಆವರು ದೆಹಲಿಯಲ್ಲಿ ನಡೆಯುತ್ತಿದ್ದ ಒಂದು ಮುಖ್ಯವಾದ ಸಭೆಗೆ ಹಾಜರಾಗಬೇಕಿತ್ತು. ಇಷ್ಟರಲ್ಲಿ ಕಾರಿನ ಒಂದು ಚಕ್ರ ಪಂಕ್ಚರ್ ಆಯಿತು. ಎಲ್ಲರೂ ಕಾರಿನಿಂದ ಇಳಿದರು. ಚಾಲಕ ಚಕ್ರ ಜೊಡಿಸುವ ಪ್ರಯತ್ನ ದಲ್ಲಿ ಮಗ್ನನಾದನು. ಒಬ್ಬ ಸಿಗರೇಟು ಹೊತ್ತಿಸಿಕೊಂಡು ಧೂಮಪಾನದಲ್ಲಿ ನಿರತನಾದ, ಮತ್ತೊಬ್ಬ ಸೆಲ್ ಫೋನ್ ನಲ್ಲಿ ಮಾತನಾಡಲು ತೊಡಗಿದ, ಮೂರನೇಯವನು ತಾನು ತಂದ ಫ್ಲಾಸ್ಕ್ ನಿಂದ ಕಾಫಿ ಕುಡಿಯ ತೊಡಗಿದ. ಆದರೆ ನಾಲ್ಕನೇ ವ್ಯಕ್ತಿ ತನ್ನ ತುಂಬು ತೋಳಿನ ಅಂಗಿಯನ್ನು ಮೇಲೆ ಮಡಚಿ ಕಟ್ಟಿದ. ಟೈಯನ್ನು ಭುಜದಮೇಲೆ ಹಾಕಿಕೊಂಡು ಜಾಕೀ, ಸ್ಪಾನರ್ ಹಿಡಿದು ಚಾಲಕನಿಗೆ ಚಕ್ರ ಬದಲಾಯಿಸಲು ನೆರವಾದರು. ಕೆಲವು ಕ್ಷಣಗಳ ತರುವಾಯ ಉಳಿದವರಿಗೆ ನಾಲ್ಕನೇ ವ್ಯಕ್ತಿಯ ನೆನಪಾಯಿತು. ಎಲ್ಲರ ಗಮನ ಆ ನಾಲ್ಕನೇ ವ್ಯಕ್ತಿಯ ಕಡೆ ಹರಿಯಿತು. ಆಶ್ಚರ್ಯ ಚಕಿತರಾದರು... ಎಲ್ಲರೂ ಅವಾಕ್ಕಾಗಿ... ಸಾರ್... ನೀವು... ಟಯರ್ ಜೋಡಿಸುವುದಾ?... ಅಂದರು. ಏಕೆಂದರೆ ಆ ನಾಲ್ಕನೇ ವ್ಯಕ್ತಿ ಮತ್ತಾರೂ ಅಗಿರದೆ ಶ್ರೇಷ್ಟ ಉದ್ಯಮಿ ರತನ್ ಟಾಟಾ ಆಗಿದ್ದರು. ನಾವು ಸಭೆಯಲ್ಲಿ ಹಾಜರಿರಬೇಕು. ಟಯರ್ ಬದಲಾಯಿಸಲು ಚಾಲಕನಿಗೆ 15 ನಿಮಿಷ ಬೇಕಾಗುತ್ತದೆ... ನಾನು ಸಹಕರಿಸಿದರಿಂದ ಡ್ರೈವರ್ 8 ನಿಮಿಷಗಳಲ್ಲೇ ಕೆಲಸ ಮುಗಿಸಿದ... ನಮಗೆ 7 ನಿಮಿಷಗಳ ಉಳಿತಾಯವಾಯಿತು." ಎಂದರು ಟಾಟಾ. ಸಮಯಕ್ಕೆ ಬೆಲೆ ಕೊಟ್ಟರೆ ಕೆಲಸಕ್ಕೆ ಬೆಲೆ ಕೊಟ್ಟಂತೆ ಎನ್ನುವುದು ಅವರ ಧ್ಯೇಯ. ರತನ್ ಟಾಟಾ ರವರು ಭಾರತದ ಪ್ರಮುಖ ಉದ್ಯಮಿ. ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿರುವ ಅವರು ಸಮಯಕ್ಕೆ ಎಷ್ಟು ಬೆಲೆ ಕೊಡುತ್ತಿದ್ದರು ಎನ್ನುವುದನ್ನು ಮೇಲಿನ ಉದಾಹರಣೆಯಿಂದ ತಿಳಿಯಬಹುದು.
ಮಕ್ಕಳೇ, ನಾವೆಲ್ಲರೂ ಜೀವನದಲ್ಲಿ ಶಿಸ್ತನ್ನು ಅಳವಡಿಸಬೇಕಾದರೆ ಸಮಯ ಪಾಲನೆ ಅಗತ್ಯ. ಮುಂಜಾನೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗಿನ ಸಮಯವನ್ನು ನಾವು ಹೇಗೆ ಸದುಪಯೋಗ ಪಡಿಸಿಕ್ಕೊಳ್ಳುತ್ತೇವೆ - ಎನ್ನುವುದರಲ್ಲಿ ಸಮಯದ ನಿರ್ವಹಣೆ ಅಡಗಿದೆ. ಅಂದರೆ ನಮ್ಮ ಕೆಲಸ ಕಾರ್ಯಗಳನ್ನು ಹೇಗೆ ನಿರ್ವಹಿಸುವುದು, ಯಾವ ಕೆಲಸಕ್ಕೆ ಹೆಚ್ಚು ಅಧ್ಯತೆ ನೀಡಬೇಕು ಎಂಬುದನ್ನು ಕಂಡುಕೊಂಡು ಆಧ್ಯತೆಗೆ ಅನುಗುಣವಾಗಿ ಕೆಲಸ ನಿರ್ವಹಿಸುವುದೇ ಸಮಯದ ನಿರ್ವಹಣೆ.
ಮಕ್ಕಳೇ, ನಾವು ಯಾವುದೇ ಕೆಲಸವನ್ನು ನಿಗದಿತ ಸಮಯದೊಳಗೆ ಮುಗಿಸಲು ಸಾಧ್ಯವಾಗದಿದ್ದರೆ - ಸಮಯ ಸಿಗಲಿಲ್ಲ ಎಂದು ದೂರುತ್ತೇವೆ. ಆದರೆ ಸಮಯ ಎಲ್ಲಿಗೂ ಓಡಿ ಹೋಗುವುದಿಲ್ಲ. ಅದು ತನ್ನದೇ ಗತಿಯಲ್ಲಿ ಚಲಿಸುತ್ತಿರುತ್ತದೆ. ಸಮಯ ಕೆಲವರಿಗೆ ನಿಧಾನವಾಗಿ ಕೆಲವರಿಗೆ ವೇಗವಾಗಿ ಓಡುತ್ತಿರುತ್ತದೆ ಎಂದು ಅನಿಸಿದರೆ ಅದು ಅವರವರ ಮನೋಭಾವ ಹಾಗೂ ಕಾರ್ಯಕ್ಷಮತೆಯನ್ನು ಸೂಚಿಸುತ್ತದೆ.
ಮಕ್ಕಳೇ, ಶಿಕ್ಷಕರು ನಿಮಗೆ ಮನೆಗೆಲಸ ಕೊಟ್ಟಾಗ ಪೂರೈಸಲು ಆಸಕ್ತಿ ಇಲ್ಲದಿದ್ದರೆ ಮಾಡಲು ಪುರುಸೊತ್ತೇ ಸಿಗಲಿಲ್ಲ ಎನ್ನುತ್ತೀರಿ. ಆಸಕ್ತಿ ಇದ್ದಲ್ಲಿ ಅದನ್ನು ನಿಗದಿತ ಸಮಯಕ್ಕೆ ಪೂರೈಸುತ್ತೀರಿ. ಅಲ್ಲವೇ?
ಬೆಳಗಿನಿಂದ ರಾತ್ರಿ ಮಲಗುವ ತನಕ ಎಲ್ಲರಿಗೂ ಸಮಪ್ರಮಾಣದಲ್ಲೇ ಸಮಯ ದೊರೆಯುತ್ತದೆ. ಆದರೆ ಅದರ ಸದುಪಯೋಗ ಪಡಿಸಿಕೊಳ್ಳದೆ ಆಲಸಿಯಾಗಿದ್ದರೆ ಏನನ್ನೂ ಸಾಧಿಸಲಾಗದು. ಆದುದರಿಂದ ಸಮಯದ ವ್ಯರ್ಥ ಕಾಲಹರಣ ಮಾಡಬಾರದು.
ಹಣವನ್ನು ಕಳೆದುಕೊಂಡರೆ ಮತ್ತೆ ಪಡೆಯಬಹುದು. ಆದರೆ ಸಮಯವನ್ನು ಕಳೆದುಕೊಂಡರೆ ಅದು ಮತ್ತೆ ನಮಗೆ ಸಿಗಲಾರದು. ಅದಕ್ಕಾಗಿ ಬೆಳಗಿನಿಂದ ರಾತ್ರಿ ಮಲಗುವ ತನಕ ಯಾವ ಯಾವ ಸಮಯಕ್ಕೆ ಯಾವ ಕೆಲಸಗಳನ್ನು ಆಧ್ಯತೆಗನುಗುಣವಾಗಿ ಮಾಡಬೇಕು ಎಂದು ನಿರ್ಧರಿಸಿ ಅದರಂತೆ ಕಾರ್ಯನಿರ್ವಹಿಸಲು ವಿದ್ಯಾರ್ಥಿಗಳಾದ ನೀವೆಲ್ಲರೂ ವೇಳಾಪಟ್ಟಿಯನ್ನು ರೂಪಿಸಿಕೊಂಡು ಅದರಂತೆ ಕಾರ್ಯನಿರ್ವಹಿಸಿದಲ್ಲಿ ನೀವು ಖಂಡಿತಾ ಯಶಸ್ಸನ್ನು ಪಡೆಯುತ್ತೀರಿ.
" ಕಳೆದ ಕಾಲವ ನೆನೆದು ಕಳವಳಿಸಿ ಫಲವಿಲ್ಲ ಬಿದ್ದ ಹಣ್ಣೆಂದಿಗೂ ಮರಳಿ ಮರಕಿಲ್ಲ". ಎನ್ನುವ ಕವಿವಾಣಿಯಂತೆ ನಾವೆಲ್ಲರೂ ಸಮಯದ ಬೆಲೆ ಹಾಗೂ ಮಹತ್ವವನ್ನು ತಿಳಿದುಕೊಂಡು, ಸಮಯದ ವ್ಯರ್ಥ ಕಾಲಹರಣ ಮಾಡದೆ ಸದುಪಯೋಗ ಪಡಿಸಿಕೊಳ್ಳೊಣ.
..................................... ವಿ ಶ್ರೀ ರಾಮಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
"ಗೌರಿ ಕೃಪಾ"
ವಾಟೆತ್ತಿಲ, ಅಂಚೆ: ಬಾಯಾರು
ಮಂಜೇಶ್ವರ ತಾಲೂಕು,
ಕಾಸರಗೋಡು ಜಿಲ್ಲೆ, ಕೇರಳ.
*********************************************