-->
ಸ್ಪೂರ್ತಿಯ ಮಾತುಗಳು

ಸ್ಪೂರ್ತಿಯ ಮಾತುಗಳು


        ಮನೆ ಮನದೊಳಗಿನ ಮಾತುಗಳು...
   --------------------------------------------
         ಅಮ್ಮಾ! ಇಂದು ತಿಂಡಿ ಏನು?.... ಅಮ್ಮಾ! ನನ್ನ ಪುಸ್ತಕ ಎಲ್ಲಿ ?...ಅಮ್ಮಾ ! ನನ್ನ ಬಟ್ಟೆ ಎಲ್ಲಿ ಮಡಚಿ ಇಟ್ಟಿದ್ದೀಯಾ?... ಅಪ್ಪಾ ಪೇಟೆಯಿಂದ ಬರುವಾಗ ಏನು ತಂದೆ? ನಾಡಿದ್ದು ಶಾಲೆ ಆರಂಭ ನನಗೊಂದು ಹೊಸ ಬ್ಯಾಗ್ ಬೇಕು!..... ಅಪ್ಪಾ ಟಿ.ವಿ Advertisement ನೋಡು... ಅಂತದೇ ನನಗೊಂದು ನಾಳೆ ತರ್ತಿಯಾ !....
       ಹೌದು ಮಕ್ಕಳೇ... ಮನೆಯಲ್ಲಿ ಅಪ್ಪ ಅಮ್ಮನಿಲ್ಲದೆ ಗಡಿಯಾರದ ಮುಳ್ಳುಗಳೇ ಚಲಿಸುವುದಿಲ್ಲ ಎಂಬಂತೆ ಭಾಸವಾಗುತ್ತದೆ.... ಪ್ರತಿಯೊಂದಕ್ಕೂ ನಮ್ಮ ಬಾಯಿಂದ ಬರುವ ನುಡಿಗಳೇ ಅಪ್ಪಾ... ಅಮ್ಮ ! ಕಣ್ಣಿಗೆ ಕಾಣುವ ಎರಡು ಜೀವಂತ ದೇವರುಗಳು ಎಂಬ ಮಾತಿದೆ.
      ಆ ಮನೆಯಲ್ಲಿ 4 ಮಂದಿ ಪೃಥ್ವಿ , ಪ್ರಜ್ವಲ್ , ಅಮ್ಮ , ಅಪ್ಪ. ಒಂದು ದಿನ ಅಪ್ಪ 3 ಬಾಳೆ ಹಣ್ಣುಗಳನ್ನು ತಂದು ಹೆಂಡತಿ ಹಾಗೂ ಎರಡು ಮಕ್ಕಳಿಗೆ ನೀಡಿದರು. ಮಕ್ಕಳು ಅಪ್ಪಾ ನಿಮಗೆಲ್ಲಿ ಬಾಳೆಹಣ್ಣು ? ಅಂದರು ಆಗ ಅಪ್ಪ ನಾನು ಅಂಗಡಿಯಲ್ಲಿ ಬಾಳೆಗೊನೆಯಿಂದ ತೆಗೆಯುವಾಗಲೇ ತಿಂದೆ ಎಂದರು. ಮಕ್ಕಳಿಬ್ಬರಿಗೂ ತಿಳಿದಿತ್ತು ಅಪ್ಪ ತಗೊಂಡ ಬಾಳೆಹಣ್ಣುಗಳು ಮೂರೇ ಮೂರು ಅಂತ. ಮಕ್ಕಳಿಬ್ಬರೂ ತಮ್ಮ ಬಾಳೆಹಣ್ಣುಗಳಿಂದ ಒಂದೊಂದು ತುಂಡು ತಂದೆಯ ಬಾಯಿಗಿಟ್ಟರು. ಗೊನೆ ಬಾಳೆಹಣ್ಣು ತಿಂದಷ್ಟು ಸಂಭ್ರಮ ತಂದೆಯ ಕಣ್ಣಿನಲ್ಲಿ..... ಒಂದು ಬಾರಿ ಅಪ್ಪ ತನ್ನಲ್ಲಿ ಇರುವ ಹಣವನ್ನು ಒಟ್ಟುಗೂಡಿಸಿ ಊರ ಜಾತ್ರೆಗೆ ಪೃಥ್ವಿ , ಪ್ರಜ್ವಲ್ ಗೆ ಎರಡು ಬಟ್ಟೆ ಕೊಂಡು ತಂದರು. ಸಾಧಾರಣ ಬಣ್ಣದ ಬಟ್ಟೆಗಳು... ಆದರೂ ಪೃಥ್ವಿ , ಪ್ರಜ್ವಲ್..... ಅಪ್ಪಾ! ಬಟ್ಟೆ ಎಷ್ಟು ಚೆನ್ನಾಗಿದೆ ನನ್ನ ಇಷ್ಟದ ಬಣ್ಣ ಅಂತ ಬಟ್ಟೆ ಹಿಡಿದುಕೊಂಡು ಖುಷಿಯಿಂದ ತಂದೆಯನ್ನು ಅಪ್ಪಿಕೊಂಡರು. ಅಪ್ಪನಿಗೆ ಸಂತೃಪ್ತ ಭಾವ....! ಒಂದು ಬಾರಿ ಅಮ್ಮ ದೋಸೆ ಮಾಡಿ ಪೃಥ್ವಿ ಪ್ರಜ್ವಲ್ ಇಬ್ಬರನ್ನೂ ಕರೆದು ಬಡಿಸಿದಳು ಮಕ್ಕಳಿಬ್ಬರೂ ದೋಸೆ ತಿಂದು ಎದ್ದು ಬಹಳ ಖುಷಿಯಿಂದ ಅಮ್ಮ ನೀವು ಮಾಡಿದ ದೋಸೆ ಬಹಳ ರುಚಿಯಾಗಿತ್ತು ಎಂದು ಗಟ್ಟಿ ಧ್ವನಿಯಿಂದ ಕೂಗಿ ಹೇಳಿದರು... ಮೆಲು ಧ್ವನಿಯಲ್ಲಿ ಉಪ್ಪು ಸ್ವಲ್ಪ ಸಪ್ಪೆ ಆಗಿದೆ ಅಮ್ಮಾ! ಎಂದರು... ಈ ಮೆಲು ಧ್ವನಿ ಅಮ್ಮನಿಗೆ ಕೇಳಿಸಿತೋ ಇಲ್ಲವೋ ....... ದೋಸೆ ಹಿಟ್ಟಿಗೆ ಉಪ್ಪೇ ಹಾಕಿಲ್ಲ ಎಂದು ಅಮ್ಮನಿಗೆ ಅರಿವಾದದ್ದು ತಾನು ದೋಸೆ ತಿಂದಾಗಲೇ .....
        ಜಗಲಿಯ ಮಕ್ಕಳೇ ನೀವೆಲ್ಲರೂ ಪೃಥ್ವಿ ಪ್ರಜ್ವಲ್ ಎಂಬ ಮುದ್ದಾದ ಮಕ್ಕಳು... ನಮ್ಮ ತಂದೆ ತಾಯಿ ನಮ್ಮ ಒಡನಾಡಿಗಳು.... ಅವರಿಗೂ ಮನಸ್ಸಿದೆ... ಆಯಾಸವಿದೆ...ಆಸೆ ಆಕಾಂಕ್ಷೆಯಿದೆ.... ತಮ್ಮ ಮಕ್ಕಳು ತಮ್ಮನ್ನು ಪ್ರೀತಿಯಿಂದ ಮಾತಾಡಿಸಲಿ... ಗೌರವಿಸಲಿ ... ಮಾಡಿದ ಅಡುಗೆಯನ್ನು ತೃಪ್ತಿಯಿಂದ ಸೇವಿಸಲಿ.... ತಂದ ವಸ್ತುಗಳನ್ನು ಪ್ರೀತಿಯಿಂದ ಸ್ವೀಕರಿಸಿ ಜೋಪಾನವಾಗಿ ಇಟ್ಟುಕೊಳ್ಳಲಿ ಎಂದು ಬಯಸುತ್ತಾರೆ....
      ನಮ್ಮ ಮನೆ ಜಗಲಿಯಲ್ಲಿ ಅಪ್ಪ ಅಮ್ಮನ ಜೊತೆ ಕೂತು ಪ್ರೀತಿಯಿಂದ ಮಾತಾಡೋಣವೇ.... ಮನದ ಭಾವನೆಗಳನ್ನು ಹಂಚಿಕೊಳ್ಳೋಣವೇ.... ಅವರ ಕೆಲಸಗಳನ್ನು ಕೊಂಡಾಡೋಣವೇ... ಪ್ರತೀ ದಿನ ಅಪ್ಪ- ಅಮ್ಮ ಮಾಡಿದ ಕೆಲಸಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳೋಣವೇ..... ಶುಭವಾಗಲಿ
...............................................ತುಳಸಿ ಕೈರಂಗಳ
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************



Ads on article

Advertise in articles 1

advertising articles 2

Advertise under the article